Advertisement

ಮೇಯರ್‌ ಕುರ್ಚಿಗೆ ಆಕಾಂಕ್ಷಿಗಳ ಭರಾಟೆ

01:26 AM Sep 15, 2019 | Lakshmi GovindaRaju |

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್‌ ಹಾಗೂ ಉಪಮೇಯರ್‌ ಚುನಾವಣೆ ದಿನಾಂಕ ನಿಗದಿಯಾಗಿದ್ದು ಬಿಜೆಪಿ ಅಧಿಕಾರ ಹಿಡಿಯುವ ಪ್ರಯತ್ನದಲ್ಲಿದ್ದು, ಪಕ್ಷೇತರರು ಯಾರಿಗೆ ಬೆಂಬಲ ನೀಡುತ್ತಾರೆ. ಅನರ್ಹತೆಗೊಂಡಿರುವ ಶಾಸಕರ ಬೆಂಬಲಿಗ ಪಾಲಿಕೆ ಸದಸ್ಯರು ಯಾರ ಪರ ಎಂಬುದು ಕುತೂಹಲ ಮೂಡಿಸಿದೆ.

Advertisement

ಈಗಾಗಲೇ ಅನರ್ಹವಾಗಿರುವ ಕಾಂಗ್ರೆಸ್‌ನ ನಾಲ್ವರು ಮತ್ತು ಜೆಡಿಎಸ್‌ನ ಒಬ್ಬರು ಸದಸ್ಯರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದರಿಂದ ಮತದಾರರ ಸಂಖ್ಯೆ 257ಕ್ಕೆ ಇಳಿದಿದೆ. ಹೀಗಾಗಿ, ಮ್ಯಾಜಿಕ್‌ ಸಂಖ್ಯೆ 129ಕ್ಕೆ ಇಳಿದಿದೆ.  ಹಾಲಿ ಮೇಯರ್‌ ಗಂಗಾಬಿಕೆ ಮಲ್ಲಿಕಾರ್ಜುನ್‌ ಹಾಗೂ ಉಪಮೇಯರ್‌ ಭದ್ರೇಗೌಡ ಅವರ ಅಧಿಕಾರ ಅವಧಿ ಇದೇ ತಿಂಗಳು 28ಕ್ಕೆ ಮುಗಿಯಲಿದೆ. ಮೇಯರ್‌ ಸ್ಥಾನ ಸಾಮಾನ್ಯ ವರ್ಗ, ಉಪ ಮೇಯರ್‌ ಸ್ಥಾನ ಮಹಿಳೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿದೆ.

ಮೇಯರ್‌ ಆಯ್ಕೆ ಚುನಾವಣೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸೆ.27ರಂದು ಬೆಳಗ್ಗೆ 11.30ಕ್ಕೆ ನಡೆಯಲಿದೆ ಎಂದು ಪ್ರದೇಶಿಕ ಆಯುಕ್ತ ಹರ್ಷಗುಪ್ತ ಅವರು ತಿಳಿಸಿದ್ದಾರೆ. ನಗರದ ಐದು ವಿಧಾನಸಭೆ ಕ್ಷೇತ್ರಗಳಲ್ಲಿ ಉಪಚುನಾವಣೆ ಮತ್ತು ಮುಂದಿನ ವರ್ಷ ಬಿಬಿಎಂಪಿ ಚುನಾವಣೆ ನಡೆಯುವುದರಿಂದ ಅಧಿಕಾರ ಹಿಡಿಯುವ ಅವಕಾಶ ಸಿಕ್ಕರೆ ನಗರದಲ್ಲಿ ವರ್ಚಸ್ಸು ಹೊಂದಿರುವ ಹಾಗೂ ಉತ್ತಮ ಆಡಳಿತ ನೀಡುವ ಸಾಮರ್ಥ್ಯ ಇರುವವರಿಗೆ ಮೇಯರ್‌ ಸ್ಥಾನ ನೀಡಲು ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ.

ಬಿಜೆಪಿಯಲ್ಲಿ ಪ್ರಬಲ ಆಕಾಂಕ್ಷಿಗಳು: ಬಿಜೆಪಿಯಲ್ಲಿ ಮೇಯರ್‌ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಹಾಲಿ ಪ್ರತಿಪಕ್ಷ ನಾಯಕ ಹಾಗೂ ಬಿಬಿಎಂಪಿ ಆಡಳಿತದ ಬಗ್ಗೆ ಅನುಭವ ಇರುವ ಕಾಚರಕನಹಳ್ಳಿ ವಾರ್ಡ್‌ನ ಪದ್ಮನಾಭ ರೆಡ್ಡಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕುಮಾರಸ್ವಾಮಿ ಬಡಾವಣೆ ಎಲ್‌ ಶ್ರೀನಿವಾಸ್‌, ಗೋವಿಂದರಾಜ ನಗರ ವಾರ್ಡ್‌ನ ಉಮೇಶ್‌ ಶೆಟ್ಟಿ, ಕಾಡು ಮಲ್ಲೇಶ್ವರ ವಾರ್ಡ್‌ನ ಮಂಜುನಾಥ ರಾಜು ಜಿ. ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.

ಜಕ್ಕೂರು ವಾರ್ಡ್‌ನ ಮುನೀಂದ್ರ ಕುಮಾರ್‌, ನಾಗರಬಾವಿ ವಾರ್ಡ್‌ನ ಮೋಹನ್‌ ಕುಮಾರ್‌, ಕತ್ರಿಗುಪ್ಪೆಯ ವೆಂಕಟೇಶ್‌ (ಸಂಗಾತಿ), ಜೋಗುಪಾಳ್ಯದ ಗೌತಮ್‌ ಕುಮಾರ್‌ ಅವರೂ ರೇಸ್‌ನಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಮೇಯರ್‌ ಸ್ಪರ್ಧೆಯಲ್ಲಿ ಶಂಕರ ಮಠ ವಾರ್ಡ್‌ನ ಎಂ.ಶಿವರಾಜು, ಗುರಪ್ಪನ ಪಾಳ್ಯದ ಮಹಮದ್‌ ರಿಜ್ವಾನ್‌ ನವಾಬ್‌ ಹಾಗೂ ದತ್ತಾತ್ರೇಯ ವಾರ್ಡ್‌ನ ಸತ್ಯನಾರಾಯಣ ಆಕಾಂಕ್ಷಿಗಳಾಗಿದ್ದಾರೆ. ಇವರೆಲ್ಲರೂ ಆಡಳಿತ ಪಕ್ಷದ ಮಾಜಿ ನಾಯಕರು ಎಂಬುದು ವಿಶೇಷ.

Advertisement

ನಮ್ಮದೇ ಆಡಳಿತ – ಕಾಂಗ್ರೆಸ್‌ ವಿಶ್ವಾಸ: ಬಿಬಿಎಂಪಿಯಲ್ಲಿ ಈ ಬಾರಿಯೂ ನಾವೇ ಆಡಳಿತ ನಡೆಸಲಿದ್ದೇವೆ ಎಂದು ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಜೀದ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಏಳರಿಂದ ಎಂಟು ಸದಸ್ಯರು ಕೆಲವು ವಿಚಾರಗಳಲ್ಲಿ ಅಸಮಾಧಾನಗೊಂಡಿದ್ದು, ನಮ್ಮ ಸಂಪರ್ಕದಲ್ಲಿದ್ದಾರೆ. ಪಕ್ಷೇತರರು ಹಾಗೂ ಜೆಡಿಎಸ್‌ ಸದಸ್ಯರೂ ನಮ್ಮೊಂದಿಗಿರುವುದರಿಂದ ನಮ್ಮ ಪಕ್ಷದವರೇ ಮೇಯರ್‌ ಹಾಗೂ ಉಪಮೇಯರ್‌ ಆಗಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಪಕ್ಷಗಳಿಂದ ವಿಪ್‌ ಅಸ್ತ್ರ: ಬಿಬಿಎಂಪಿ ಚುನಾವಣೆಯಲ್ಲಿ ಕಳೆದ ಬಾರಿಯ ಮೇಯರ್‌ ಚುನಾವಣೆಯಲ್ಲಿ ತಟಸ್ಥವಾಗಿರುವ ಮೂಲಕ ತಮ್ಮ ಅಸಮಾಧಾನ ತೋರಿಸಿದ್ದರು. ಹೀಗಾಗಿ, ಈ ಬಾರಿ ವಿಪ್‌ ಉಲ್ಲಂಘನೆ ಮಾಡಿದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲು ಪಕ್ಷಗಳು ಮುಂದಾಗಿವೆ. ಪಾಲಿಕೆಯ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ನ ಸದಸ್ಯರು ಆಯಾ ಪಕ್ಷಗಳ ಚಿಹ್ನೆಯಡಿಯಲ್ಲಿ ಗೆದ್ದಿದ್ದು ಈಗ ಬೇರೆ ಪಕ್ಷದ ಸದಸ್ಯರ ಪರವಾಗಿ ಮತ ಚಲಾಯಿಸಿದರೆ ಅನರ್ಹರಾಗಲಿದ್ದಾರೆ. ತಟಸ್ಥವಾಗಿ ಉಳಿಯುವ ಉಪಾಯವೂ ವಿಪ್‌ ಅಸ್ತ್ರದ ಮುಂದೆ ವಿಫ‌ಲವಾಗಲಿದೆ.

ಅರ್ನಹರು ಯೂಟರ್ನ್?: ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಅರ್ನಹ ಶಾಸಕರಿಗೆ ಬಿಜೆಪಿಯಿಂದ ಸೂಕ್ತ ಸ್ಪಂದನೆ ಸಿಗದೆ ಇರುವುದರಿಂದ ಕಾಂಗ್ರೆಸ್‌ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ತಮ್ಮ ಬೆಂಬಲಿಗರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಇದು ಬಿಜೆಪಿಯ ಮೇಲೆ ಒತ್ತಡ ಹಾಕಲು ಬಳಸಿದ ಅಸ್ತ್ರ ಎಂದೂ ವಿಶ್ಲೇಷಿಸಲಾಗುತ್ತಿದೆ.

ಮತದಾರರ ವಿವರ:-
ಬಿಬಿಎಂಪಿ ಸದಸ್ಯರು
ಬಿಜೆಪಿ: 101
ಕಾಂಗ್ರೆಸ್‌: 76
ಜೆಡಿಎಸ್‌: 14
ಪಕ್ಷೇತರರು: 6 (*1)
ಒಟ್ಟು: 198

ಶಾಸಕರು
ಬಿಜೆಪಿ: 11
ಕಾಂಗ್ರೆಸ್‌: 11
ಜೆಡಿಎಸ್‌: 1
ಒಟ್ಟು: 23

ವಿಧಾನಪರಿಷತ್‌ ಸದಸ್ಯರು
ಬಿಜೆಪಿ: 7
ಕಾಂಗ್ರೆಸ್‌: 10
ಜೆಡಿಎಸ್‌: 5
ಒಟ್ಟು: 22

ಸಂಸದರು
ಬಿಜೆಪಿ: 4
ಕಾಂಗ್ರೆಸ್‌: 1
ಒಟ್ಟು: 5

ರಾಜ್ಯಸಭಾ ಸದಸ್ಯರು
ಬಿಜೆಪಿ: 02
ಕಾಂಗ್ರೆಸ್‌: 06
ಜೆಡಿಎಸ್‌: 01
ಒಟ್ಟು: 09

ಪಕ್ಷವಾರು ಮತದಾರರ ವಿವರ
ಬಿಜೆಪಿ: 125
ಕಾಂಗ್ರೆಸ್‌: 104
ಜೆಡಿಎಸ್‌: 21
ಪಕ್ಷೇತರರು: 7
ಒಟ್ಟು: 257
ಮ್ಯಾಜಿಕ್‌ ಸಂಖ್ಯೆ: 129

Advertisement

Udayavani is now on Telegram. Click here to join our channel and stay updated with the latest news.

Next