ಬೆಂಗಳೂರು: “ದಯವಿಟ್ಟು ನಮ್ಮನೆ ಕಡೆ ಬರಬೇಡಿ. ನೀವು ನಮ್ಮ ಮನಸಿನಲ್ಲಿದ್ದೀರಿ, ನಿಮಗೆ ನಮ್ಮ ಮತ… ಬೇಸರ ಮಾಡಿಕೊಳ್ಳಬೇಡಿ…’ ಇದು ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳಿಗೆ ಮತದಾರರು ಹೇಳುವ ಮಾತು.
ಮೇ 9ರಂದು ಕಸಾಪ ಚುನಾವಣೆ ನಡೆಯಲಿದ್ದು ಅಭ್ಯರ್ಥಿಗಳು ಕೋವಿಡ್ ಸೋಂಕಿನ ನಡುವೆ ಮನೆ ಮನೆ ಪ್ರಚಾರ ಕೈಗೊಂಡಿದ್ದಾರೆ. ಕೆಲವರು ತಮ್ಮ ಆಪ್ತರ ಜತೆಗೂಡಿ ಜಿಲ್ಲಾವಾರು ಪ್ರವಾಸದಲ್ಲಿದ್ದಾರೆ. ಆದರೆ ಕೋವಿಡ್ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಭಯದಿಂದಾಗಿ ಮತದಾರರು ಮಾತ್ರ ದಯವಿಟ್ಟು ನಮ್ಮ ಮನೆಗೆ ಬರಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಹೀಗಾಗಿ ಜಿಲ್ಲಾವಾರು ಮತ್ತು ಪ್ರದೇಶವಾರು ಪ್ರಚಾರದಲ್ಲಿರುವ ಅಭ್ಯರ್ಥಿಗಳಿಗೆ ಇದು ನಿರಾಸೆ ಉಂಟು ಮಾಡಿದೆ. ಈಗಾಗಲೇ ರಾಜ್ಯದ ಹಲವು ಕಡೆ ಚುನಾವಣಾ ಪ್ರಚಾರ ಮಾಡಿರುವ ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಮಹೇಶ್ ಜೋಶಿ ಅವರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಆ ಹಿನ್ನೆಲೆಯಲ್ಲಿ ಅವರು ಆರೈಕೆ ಪಡೆಯುತ್ತಿದ್ದಾರೆ. ಅಲ್ಲದೆ ತಮ್ಮ ಸಂಪರ್ಕಕ್ಕೆ ಬಂದಿದ್ದ ಮತದಾರರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
ಇದರಿಂದಾಗಿ ಎಚ್ಚೆತ್ತುಕೊಂಡಿರುವ ಮತದಾರರು ಮೊಬೈಲ್ ಮೂಲಕ ಸಂಪರ್ಕಿಸಿದ ರಾಜ್ಯಾಧ್ಯಕ್ಷ ಮತ್ತು ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳಿಗೆ ಮನೆಕಡೆ ಬರಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿ ದ್ದಾರೆ. ಈ ಬಗ್ಗೆಪ್ರತಿಕ್ರಿಯೆ ನೀಡಿದ ಹೆಸರು ಹೇಳಲು ಇಚ್ಚಿಸಿದ ಅಭ್ಯರ್ಥಿಯೊಬ್ಬರು ಈಗಾಗಲೇ ಬೆಳಗಾವಿ ಸೇರಿ ಉತ್ತರ ಕರ್ನಾಟಕದ ಪ್ರವಾಸದಲ್ಲಿದ್ದೇನೆ, ಆದರೆ ಯಾರೂ ಕೂಡ ಭೇಟಿಗೆ ಸಿಗುತ್ತಿಲ್ಲ ಎಂದು ಹೇಳಿದರು.
ಚುನಾವಣೆ ಮುಂದೂಡಿಕೆಗೆ ಆಗ್ರಹ: ಕಸಾಪ ಚುನಾವಣೆ ಮುಂದೂಡುವಂ ತೆ ಒತ್ತಾಯ ಕೇಳಿಬಂದಿದೆ. ಈ ಬಗ್ಗೆ ಪರಿಷತ್ತಿನ ಕೇಂದ್ರ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿರುವ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕುವೆಂಪು ಪ್ರಕಾಶ್, ಬೆಂಗಳೂರಿನಲ್ಲಿ ಕೋವಿಡ್ ಸೋಂಕು ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಿಗೆ ಮನೆ ಮನೆಗೆ ಹೋಗಿ ಮತ ಕೇಳಲು ಸಾಧ್ಯವಾಗುತ್ತಿಲ್ಲ. 2-3 ತಿಂಗಳು ಚುನಾವಣೆ ಮುಂದೂಡುವಂತೆ ಒತ್ತಾಯಿಸಿದ್ದಾರೆ. ನಾಡೋಜ ಡಾ.ಮಹೇಶ್ ಜೋಶಿ ಪ್ರತಿಕ್ರಿಯಿಸಿ, ಚುನಾವಣೆಗಿಂತಲೂ ಜನರ ಆರೋಗ್ಯ ಮುಖ್ಯ. ಸದ್ಯದ ಪರಿಸ್ಥಿತಿಯಲ್ಲಿ ಚುನಾವಣಾಧಿಕಾರಿಗಳು ಪರಿಷತ್ತಿನ ಚುನಾವಣೆ ಮುಂದೂಡುವುದು ಒಳ್ಳೆಯದು ಎಂದು ಹೇಳಿದ್ದಾರೆ.
ಜಿಪಂ, ತಾಪಂ ಚುನಾವಣೆಗೆ ಯಾವುದೇ ರೀತಿಯ ಸುತ್ತೋಲೆ ಹೊರಬಿದ್ದಿಲ್ಲ. ಹಾಗಾಗಿ ಆ ಚುನಾವಣೆ ಮುಂದೂಡಬಹುದು. ಆದರೆ ಕಸಾಪ ಚುನಾವಣೆಗೆ ಆಯೋಗ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಸರ್ಕಾರ, ಸಹಕಾರಇಲಾಖೆಯಲ್ಲಿರುವ ಚುನಾವಣಾ ಆಯೋಗದಿಂದ ಯಾವುದೇ ರೀತಿಯ ಸೂಚನೆ ಬಂದಿಲ್ಲ. ಹೀಗಾಗಿ ಚುನಾವಣಾ ಸಿದ್ಧತೆ ಅಂತಿಮ ಹಂತಕ್ಕೆ ಬಂದಿದೆ.
–ಎಸ್.ಟಿ. ಮೋಹನ್‌ರಾಜ್, ವಿಶೇಷ ಚುನಾವಣಾಧಿಕಾರಿ
ಕೋವಿಡ್ ಸೋಂಕಿನ ಪ್ರಮಾಣ ದಿನೇದಿನೆ ಅಧಿಕವಾಗುತ್ತಿದೆ. ಹೀಗಾಗಿ ಚುನಾವಣಾಧಿಕಾರಿಗಳು ಯಾವ ತೀರ್ಮಾನ ಕೈಗೊಳ್ಳುತ್ತಾರೋ ಆ ತೀರ್ಮಾನಕ್ಕೆ ಬದ್ಧ.
–ವ.ಚ.ಚನ್ನೇಗೌಡ, ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ
ಈಗಾಗಲೇ ಕೋವಿಡ್ ನಿಯಮಗಳನ್ನು ಅನುಸರಿಸಿ ರಾಜ್ಯದಲ್ಲಿ ಉಪಚುನಾವಣೆಗಳು ನಡೆದಿದೆ. ಅದೇ ರೀತಿ ಪರಿಷತ್ತಿನ ಚುನಾವಣೆ ನಡೆಯಬೇಕು. ಯಾವುದೇ ಕಾರಣಕ್ಕೂ ಚುನಾವಣೆ ಮುಂದೂಡಬಾರದು.
●ಶೇಖರ್‌ಗೌಡ ಮಾಲಿಪಾಟೀಲ್, ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ
–ದೇವೇಶ ಸೂರಗುಪ್ಪ