Advertisement

ಆರಂಭದಲ್ಲೇ ಕ್ಯಾನ್ಸರ್‌ ಪತ್ತೆ ಒಳಿತು

12:35 AM Oct 13, 2019 | Lakshmi GovindaRaju |

ಬೆಂಗಳೂರು: ದೇಶದಲ್ಲಿ ಕ್ಯಾನ್ಸರ್‌ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆರಂಭಿಕ ಹಂತದಲ್ಲೇ ಕ್ಯಾನ್ಸರ್‌ ಕುರಿತು ಅರಿವು ಅಗತ್ಯವಿದೆ ಎಂದು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಕುಲಪತಿ ಡಾ.ಎಸ್‌. ಸಚ್ಚಿದಾನಂದ ಹೇಳಿದರು. ಭಾರತೀಯ ಪ್ರಸೂತಿ ಹಾಗೂ ಕ್ಯಾನ್ಸರ್‌ ತಜ್ಞರ ಸಂಘದ ಕರ್ನಾಟಕ ಶಾಖೆಯಿಂದ ಶನಿವಾರ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿವಿಯಲ್ಲಿ ಆಯೋಜಿಸಿದ್ದ 8ನೇ ವಾರ್ಷಿಕ ಸಮ್ಮೇಳನ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

Advertisement

ಪ್ರತಿ ಏಳು ನಿಮಿಷಕ್ಕೆ ಒಬ್ಬ ಕ್ಯಾನ್ಸರ್‌ ಪೀಡಿತ ವ್ಯಕ್ತಿ ಮೃತಪಡುತ್ತಿದ್ದಾರೆ. ದೇಶದಲ್ಲಿ ಕ್ಯಾನ್ಸರ್‌ ಪ್ರಮುಖ ಸಮಸ್ಯೆಯಾಗಿದೆ. ಮಹಿಳೆಯರು ಸ್ತನ, ಬಾಯಿ, ಯೋನಿ ಮೊದಲಾದ ಕ್ಯಾನ್ಸರ್‌ಗೆ ಹೆಚ್ಚಾಗಿ ತುತ್ತಾಗುತ್ತಿದ್ದಾರೆ. ಯಾವುದೇ ಬಗೆಯ ಕ್ಯಾನ್ಸರ್‌, ಆದರೂ ಆರಂಭಿಕ ಹಂತದಲ್ಲಿ ಪತ್ತೆಯಾದರೆ, ಅಗತ್ಯ ಚಿಕಿತ್ಸೆ ಮಾಡಿ ಗುಣಪಡಿಸಲು ಸಾಧ್ಯವಿದೆ ಎಂದರು.

ದೇಶದಲ್ಲಿ ಕ್ಯಾನ್ಸರ್‌ ಪತ್ತೆಗೆ ಅತ್ಯಾಧುನಿಕ ಪರೀಕ್ಷೆ ಉಪಕರಣಗಳು ಬಂದಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಸೌಲಭ್ಯಗಳನ್ನು ನೀಡುತ್ತಿವೆ. ಇವುಗಳನ್ನು ಬಳಸಿಕೊಂಡು ಬೇರು ಮಟ್ಟದಲ್ಲೇ ಕ್ಯಾನ್ಸರ್‌ ನಿರ್ಮೂಲನೆಗೆ ಪಣ ತೊಡುವ ಅಗತ್ಯವಿದೆ ಎಂದು ಸಲಹೆ ನೀಡಿದರು. ಗ್ರಾಮೀಣ ಭಾಗದ ಜನರಿಗೆ ಕ್ಯಾನ್ಸರ್‌ ಹಾಗೂ ಕ್ಯಾನ್ಸರ್‌ ಪತ್ತೆಯ ಬಗ್ಗೆ ಅರಿವು ಮೂಡಿಸಬೇಕು.

ಈ ನಿಟ್ಟಿನಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿವಿಯು ಎನ್‌ಜಿಒಗಳ ಸಹಕಾರದೊಂದಿಗೆ ಚಿಕ್ಕಬಳ್ಳಾಪುರದ ಜಿಲ್ಲೆಯಲ್ಲಿ ಕ್ಯಾನ್ಸರ್‌ ಕುರಿತು ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು. ಸಂಘದ ರಾಷ್ಟ್ರೀಯ ಅಧ್ಯಕ್ಷೆ ಡಾ.ಶಾಲಿನಿ ರಾಜಾರಾಂ ಮಾತನಾಡಿ, ಆರಂಭಿಕ ಹಂತದಲ್ಲೇ ಕ್ಯಾನ್ಸರ್‌ ಪತ್ತೆ ಹಚ್ಚಿ ಚಿಕಿತ್ಸೆ ನೀಡದಿದ್ದರೆ ಮುಂದಿನ ಹತ್ತು ವರ್ಷಗಳಲ್ಲಿ ಕ್ಯಾನ್ಸರ್‌ ರೋಗಿಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಹೀಗಾಗಿ ಎಲ್ಲ ರೀತಿಯ ಕ್ಯಾನ್ಸರ್‌ ಬಗ್ಗೆಯೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು ತುರ್ತಾಗಿ ಆಗಬೇಕು ಎಂದರು. ರಾಜೀವ್‌ ಗಾಂಧಿ ಆರೋಗ್ಯ ವಿವಿಯ ಕುಲಸಚಿವ ಶಿವಾನಂದ ಕಾಪಸಿ, ಅಸೋಸಿಯೇಷನ್‌ನ ಕರ್ನಾಟಕ ಶಾಖೆಯ ಅಧ್ಯಕ್ಷೆ ಡಾ.ಎಸ್‌. ಇಂದುಕಲಾ, ಗೌರವ ಕಾರ್ಯದರ್ಶಿ ಡಾ.ಟಿ.ಎಸ್‌.ಪ್ರೇಮಲತಾ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next