Advertisement

ಧಾರವಾಡದಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಘಟಕ: ಹೆಗ್ಗಡೆ

01:46 AM Oct 25, 2021 | Team Udayavani |

ಬೆಳ್ತಂಗಡಿ: ತೃಪ್ತಿಯ ಜೀವನ ಯಶಸ್ಸಿನ ಜೀವನಕ್ಕಿಂತ ಶ್ರೇಷ್ಠವಾದುದು. 800 ವರ್ಷಗಳ ಪರಂಪರೆಯಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯು ನನಗೆ ದಶಾವತಾರಗಳಲ್ಲಿ ಯೋಜನೆ ರೂಪಿಸಿ ತೃಪ್ತಿಕರ ಜೀವನ ಅನುಗ್ರಹಿಸಿದ್ದಾನೆ. ಶೀಘ್ರವೇ ಧಾರವಾ ಡದ ಎಸ್‌ಡಿಎಂ ವೈದ್ಯಕೀಯ ವಿದ್ಯಾಲಯದಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಘಟಕ ಸ್ಥಾಪಿಸುವುದಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಪ್ರಕಟಿಸಿದರು.

Advertisement

ಚತುರ್ದಾನ ಶ್ರೇಷ್ಠ ಪರಂಪರೆಯ ಶ್ರೀ ಕ್ಷೇತ್ರ ಧರ್ಮಸ್ಥಳದ 21ನೇ ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾದ 54ನೇ ವರ್ಷದ ವರ್ಧಂತಿ ಸಂದರ್ಭ ಅ. 24ರಂದು ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ಯೋಜನೆಯನ್ನು ಪ್ರಸ್ತಾವಿಸಿದರು. ಫೆಬ್ರವರಿಯೊಳಗೆ ಯೋಜನೆ ಅನುಷ್ಠಾನಗೊಳಿಸಿ 2 ವರ್ಷದೊಳಗೆ ಕ್ಯಾನ್ಸರ್‌ ಘಟಕ ಸ್ಥಾಪಿಸಲಾಗುವುದು ಎಂದರು.

ಶತಾವತಾರವಾಗಿ ಯೋಜನೆ ಅನುಷ್ಠಾನ
ಪೂಜ್ಯರಾದ ರತ್ನವರ್ಮ ಹೆಗ್ಗಡೆ ಅವರು ಯೋಜಿಸಿದ ಹಾದಿಯಲ್ಲಿ ಪರಂಪರೆಯ ಶ್ರೇಷ್ಠತೆ ಯನ್ನು ಮುಂದುವರಿಸಿದ್ದೇವೆ. ನನಗೆ ದೇವರು ನೀಡಿದ ಯುಕ್ತಿ ಹಾಗೂ ಮಾರ್ಗದರ್ಶನ ಕಾರ್ಯ ಗತಗೊಳ್ಳುವಲ್ಲಿ ನನ್ನ ಸಿಬಂದಿ, ಕುಟುಂಬ ವರ್ಗದ ಸಹಕಾರ ಅಪೂರ್ವ. ದಶಾವತಾರವಾಗಿದ್ದ ನಮ್ಮ ಯೋಜನೆಗಳು ಶತಾವತಾರವಾಗಿ ಬೆಳಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿವಿಧ ಯೋಜನೆ
ಗ್ರಾಮಾಭಿವೃದ್ಧಿ ಯೋಜನೆ ಮೂಲಕ 365 ಕೆರೆಗಳ ಹೂಳೆತ್ತಲಾಗಿದೆ. ಈ ವರ್ಷ 120 ಕೆರೆಗಳ ಹೂಳೆತ್ತಿ, ಮಣ್ಣನ್ನು ಕೃಷಿ ಬಳಕೆಗೆ ವಿತರಿಸಲಾಗು ವುದು. 843 ದೇಗುಲಗಳ ಜೀರ್ಣೋದ್ಧಾರಕ್ಕೆ ನೆರವು ನೀಡಲಾಗಿದ್ದು, ಧರ್ಮೋತ್ಥಾನ ಟ್ರಸ್ಟ್‌ ಆಶ್ರಯದಲ್ಲಿ 250ಕ್ಕೂ ಮಿಕ್ಕಿ ದೇಗುಲಗಳ ಜೀರ್ಣೋದ್ಧಾರ ನಡೆದಿದೆ. ಈ ವರ್ಷ 12 ದೇಗುಲಗಳ ಜೀರ್ಣೋದ್ಧಾರ ಹಮ್ಮಿಕೊಳ್ಳಲಾಗಿದೆ. 3 ತಿಂಗಳಲ್ಲಿ ಬೆಂಗಳೂರಿನಲ್ಲಿ 300 ಹಾಸಿಗೆಯ ಪ್ರಕೃತಿ ಚಿಕಿತ್ಸಾ ಕೇಂದ್ರ ಆರಂಭ ಗೊಳ್ಳಲಿದೆ. ತಲಾ 1.30 ಕೋ.ರೂ. ವೆಚ್ಚದಲ್ಲಿ 4 ಆಸ್ಪತ್ರೆಗಳಿಗೆ ಸಿಟಿ ಸ್ಕ್ಯಾನ್‌ ಒದಗಿಸಲಾಗಿದೆ ಎಂದರು.

ಧರ್ಮಸ್ಥಳದಿಂದ ಜಗದ ಕಲ್ಯಾಣ
ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಿ. ಸೋಮಶೇಖರ್‌ ಮಾತನಾಡಿ, ಸರ್ವ ಧರ್ಮಗಳ ನೆಲೆವೀಡಾಗಿರುವ ಧರ್ಮಸ್ಥಳವನ್ನು ವಿಶ್ವಕ್ಕೆ ಮಾದರಿಯಾಗಿಸಿದವರು ಡಾ| ಹೆಗ್ಗಡೆ ಯವರು, ಧರ್ಮ ಪರಂಪರೆಗೆ ಹೊಸ ವ್ಯಾಖ್ಯಾನ ಬರೆದು ಧರ್ಮಸ್ಥಳದಿಂದ ಜಗದ ಕಲ್ಯಾಣವಾದರೆ ಡಾ| ಹೆಗ್ಗಡೆ ಅವರ ಮನಸ್ಸು, ಕನಸು ಮತ್ತು ತೇಜಸ್ಸಿನ ತ್ರಿವೇಣಿ ಸಂಗಮದಿಂದ ಮಾನವ ಕಲ್ಯಾಣವಾಗಿದೆ ಎಂದರು.

Advertisement

ಇದನ್ನೂ ಓದಿ:ಕೇಂದ್ರಾಡಳಿತ ಪ್ರದೇಶದಲ್ಲಿ ಅಭಿವೃದ್ಧಿಯ ಸರಣಿ – ನೆಮ್ಮದಿಯನ್ನು ಯಾರಿಂದಲೂ ಕಸಿಯಲಾಗದು : ಶಾ

ವಿಶೇಷ ಚೇತನರಿಗೆ ಸಲಕರಣೆ ವಿತರಣೆ
ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಮಾತನಾಡಿ, ರಾಜ್ಯದಲ್ಲಿ ಒಟ್ಟು 11,124 ಮಂದಿ ವಿಶೇಷ ಚೇತನರಿಗೆ 2.46 ಲಕ್ಷ ರೂ. ವೆಚ್ಚದಲ್ಲಿ ವಿಶೇಷ ವರೆಗೆ ಸಲಕರಣೆ ವಿತರಿಸಲಾಗಿದೆ ಎಂದರು.
ವಿಶೇಷ ಚೇತನರಾದ ಧರ್ಮಸ್ಥಳದ ಮುತ್ತಪ್ಪ ಮಡಿವಾಳ, ಬೆಳಾಲು ಲಕ್ಷ್ಮಣ ಗೌಡ, ನಾವರ ಗ್ರಾಮದ ಮಂಜಪ್ಪ ಮತ್ತು ಶಿಶಿಲದ ಗಣೇಶ ಕೃಷ್ಣ ವೆಲಂಕಾರ್‌ ಅವರಿಗೆ ಸಲಕರಣೆ ವಿತರಿಸಲಾಯಿತು.

ಕೃಷಿ ವಿಭಾಗದಲ್ಲಿ 40 ವರ್ಷ ಸೇವೆ ಸಲ್ಲಿಸಿದ ಬಾಲಕೃಷ್ಣ ಪೂಜಾರಿ ಮತ್ತು ದೇವಸ್ಥಾನದ ಕಚೇರಿಯಲ್ಲಿ 40 ವರ್ಷ ಸೇವೆ ಸಲ್ಲಿಸಿದ ಶುಭ ಚಂದ್ರರಾಜ ಅವರನ್ನು ಗೌರವಿಸಲಾಯಿತು. ಶ್ರೀ ಕ್ಷೇ.ಧ.ಗ್ರಾ.ಯೋ. ಆಶ್ರಯದಲ್ಲಿ 4 ಆಸ್ಪತ್ರೆಗಳಿಗೆ ಸಿ.ಟಿ. ಸ್ಕ್ಯಾನ್‌ ಮಂಜೂರಾತಿ ಪತ್ರವನ್ನು ಡಾ| ಹೆಗ್ಗಡೆ ಹಸ್ತಾಂತರಿಸಿದರು.

ಡಾ| ಎಸ್‌.ಆರ್‌. ವಿಘ್ನರಾಜ ಸಂಪಾದಿಸಿದ ಜೈನ ಗ್ರಂಥಸ್ಥ ಜನಪದ ಹಾಡುಗಳು ಮತ್ತು ಸ್ವ-ಸಹಾಯ ಸಂಘಗಳ ಚಳವಳಿಯ ಜಾಗತಿಕ ವಿಚಾರ ಸಂಕಿರಣದ ಬಗೆಗೆ ಶ್ರೀ ಕ್ಷೇ.ಧ.ಗ್ರಾ. ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌. ಮಂಜುನಾಥ್‌ ಪ್ರಕಟಿತ, ಡಾ| ಪ್ರಕಾಶ್‌ ಭಟ್‌ ಬರೆದ ಕೃತಿಯನ್ನು ಹೇಮಾವತಿ ವೀ.ಹೆಗ್ಗಡೆ ಬಿಡುಗಡೆಗೊಳಿಸಿದರು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾದ ಪ್ರೊ| ಎಸ್‌. ಪ್ರಭಾಕರ್‌ ಮತ್ತು ಡಿ.ಸುರೇಂದ್ರ ಕುಮಾರ್‌, ಡಿ. ಹರ್ಷೇಂದ್ರ ಕುಮಾರ್‌, ಸುಪ್ರಿಯಾ ಹರ್ಷೇಂದ್ರ ಕುಮಾರ್‌ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಪ್ರಸಾದ್‌ ಸ್ವಾಗತಿಸಿದರು. ದೇವಸ್ಥಾನದ ಪಾರುಪತ್ಯಗಾರ ಲಕ್ಷ್ಮೀನಾರಾಯಣ ರಾವ್‌ ವಂದಿಸಿದರು. ಉಜಿರೆ ಎಸ್‌ಡಿಎಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ರವಿಶಂಕರ್‌ ಜಿ.ಕೆ. ನಿರ್ವಹಿಸಿದರು.

ದಶಾವತಾರ ಯೋಜನೆಗಳು
– ಧಾರವಾಡದಲ್ಲಿ ಎಸ್‌ಡಿಎಂ ವೈದ್ಯಕೀಯ ವಿದ್ಯಾಲಯದಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಘಟಕ
– 6 ಕೋಟಿ ರೂ. ವೆಚ್ಚದಲ್ಲಿ 4 ಆಸ್ಪತ್ರೆಗಳಿಗೆ ಸಿ.ಟಿ. ಸ್ಕ್ಯಾನ್‌ ಕೊಡುಗೆ
– ಮಂಗಳೂರಿನಲ್ಲಿ ವೆನ್ಲಾಕ್ ಆಸ್ಪತ್ರೆಗೆ 2 ಡಯಾಲಿಸಿಸ್‌ ಘಟಕ
– ಗ್ರಾಮಾಭಿವೃದ್ಧಿ ಯೋಜನೆಯಡಿ 120 ಕೆರೆಗಳ ಪುನಶ್ಚೇತನ
– ಶುದ್ಧಗಂಗಾ ಯೋಜನೆಯಡಿ 50 ಶುದ್ಧಗಂಗಾ ಘಟಕ ಸ್ಥಾಪನೆ
– 12 ದೇವಸ್ಥಾನಗಳ ಅಭಿವೃದ್ಧಿ
– ಬೆಂಗಳೂರಿನಲ್ಲಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ
– ಮಾರ್ಚ್‌ ಒಳಗಾಗಿ ಧರ್ಮಸ್ಥಳ ಅನ್ನಪೂರ್ಣ ಛತ್ರ ವಿಸ್ತೃತ ಕಟ್ಟಡ
– ಕ್ಯೂ ಕಾಂಪ್ಲೆಕ್ಸ್‌ ಮುಂದಿನ ಪಟ್ಟಾಭಿಷೆೇಕ ವರ್ಧಂತ್ಸುವಕ್ಕೆ ಮೊದಲು ಪೂರ್ಣ
– ವಾತ್ಸಲ್ಯ ಯೋಜನೆಯಡಿ ಅನಾಥರ ಶುಶ್ರೂಷೆ ಜತೆಗೆ ಮನೆ ನಿರ್ಮಾಣ

Advertisement

Udayavani is now on Telegram. Click here to join our channel and stay updated with the latest news.

Next