Advertisement

ಕೋವಿಡ್‌ ಮಹಾಮಾರಿಯ ಸಮಯದಲ್ಲಿ ಕ್ಯಾನ್ಸರ್‌ ಶಸ್ತ್ರಚಿಕಿತ್ಸೆಯ ನಿಭಾವಣೆ

07:20 PM May 23, 2020 | Sriram |

ಹೆಚ್ಚಿನ ಬಗೆಯ ಕ್ಯಾನ್ಸರ್‌ಗಳಿಂದ ಮುಕ್ತಿ ಪಡೆಯಲು ಶಸ್ತ್ರಚಿಕಿತ್ಸೆ ಅನಿವಾರ್ಯ ಎಂಬುದು ಬಹುತೇಕ ಸತ್ಯ. ಕ್ಯಾನ್ಸರ್‌ ಎಂಬುದು ಕೋವಿಡ್‌ ಮಹಾಮಾರಿ ಮುಗಿಯುವ ತನಕ ಕಾಯುವಂಥ ಕಾಯಿಲೆಯಲ್ಲ. ಈ ಮಹಾಮಾರಿಯ ಸಮಯದಲ್ಲಿ ಕ್ಯಾನ್ಸರ್‌ ವಿರುದ್ಧ ಹೋರಾಡಲು ಜನರಿಗೆ ಸಹಾಯವಾಗಬಹುದಾದ, ಆಗಾಗ ಕೇಳುವ ಕೆಲವು ಪ್ರಶ್ನೆಗಳನ್ನು ಈ ಲೇಖನದಲ್ಲಿ ಉತ್ತರಿಸಲಾಗಿದೆ. 

Advertisement

ನನಗೆ ಕೆಲವು ಕ್ಯಾನ್ಸರ್‌ ರೋಗಲಕ್ಷಣಗಳಿರುವ ಹಾಗೆ ಅನಿಸುತ್ತದೆ! ನಾನೇನು ಮಾಡಬೇಕು?
ಮೊದಲ ಹಂತದ ಕ್ಯಾನ್ಸರ್‌ಗಳನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಹಾಗಾಗಿ ನಿರ್ದಿಷ್ಟ ಸಮಯದೊಳಗೆ ಚಿಕಿತ್ಸೆ ಅತ್ಯಗತ್ಯ. ಆದಷ್ಟು ಬೇಗ ನಿಮ್ಮ ವೈದ್ಯರನ್ನು ಭೇಟಿ ಮಾಡಿ. ಪರಿಪೂರ್ಣ ತಪಾಸಣೆಯ ಬಳಿಕ, ಸಾಮಾನ್ಯವಾಗಿ ಬಯಾಪ್ಸಿ ಮತ್ತು ಸಿಟಿ ಸ್ಕ್ಯಾನ್‌ನಂಥ ಕೆಲವೊಂದು ಪರೀಕ್ಷೆಗಳನ್ನು ಮಾಡಲಾಗುತ್ತದೆ. ಕಾಯಿಲೆ ದೃಢಪಟ್ಟ ಬಳಿಕ ಹೆಚ್ಚಿನ ನಿರ್ವಹಣೆಗಾಗಿ ರೋಗಿಗಳನ್ನು ಕ್ಯಾನ್ಸರ್‌ ಕೇಂದ್ರಕ್ಕೆ ಕಳುಹಿಸಲಾಗುವುದು.

ಕ್ಯಾನ್ಸರ್‌ ಕೇಂದ್ರದಲ್ಲಿ ವೈದ್ಯರ ಭೇಟಿಗೆ ಹೇಗೆ ಸಿದ್ಧತೆ ಮಾಡಬೇಕು?
ಕ್ಯಾನ್ಸರ್‌ ಕೇಂದ್ರಕ್ಕೆ ಭೇಟಿ ನೀಡುವ ಮೊದಲು ವೈದ್ಯರ ಸಂದರ್ಶನದ ಅಪಾಯಿಂಟ್‌ಮೆಂಟ್‌ಗಳನ್ನು ಖಚಿತಪಡಿಸಿಕೊಳ್ಳಿ. ಎಲ್ಲ ವೈದ್ಯಕೀಯ ವರದಿಗಳನ್ನು ಮತ್ತು ನಿಮ್ಮ ವೈದ್ಯರಿಂದ ಶಿಫಾರಸು ಪತ್ರವನ್ನು ಒಯ್ಯಿರಿ. ಸ್ಲೆ„ಡ್‌ ಮತ್ತು ಬ್ಲಾಕ್‌ಗಳ ಜತೆಗೆ ಬಯಾಪ್ಸಿ ವರದಿಯನ್ನು ತೆಗೆದುಕೊಳ್ಳಬೇಕು. ನಿಮ್ಮ ಸ್ಕ್ಯಾನ್‌ಗಳ ಸಾಫ್ಟ್ ಕಾಪಿಯನ್ನು ಸಿಡಿ ರೂಪದಲ್ಲಿ ತೆಗೆದುಕೊಳ್ಳುವುದು ಉತ್ತಮ. ಎಲ್ಲ ಖಾಸಗಿ ಮತ್ತು ಸರಕಾರಿ ಸ್ಕ್ಯಾನಿಂಗ್‌ ಕೇಂದ್ರಗಳಲ್ಲಿ ಇದು ಲಭ್ಯವಿದ್ದು ನೀವಿದನ್ನು ಕೇಳಿ ಪಡೆದುಕೊಳ್ಳಬಹುದು.

ಕಸ್ತೂರ್ಬಾ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತದೆಯೇ?
ಮಹಾಮಾರಿಯ ಹೊರತಾಗಿಯೂ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ “ಸರ್ಜಿಕಲ್‌ ಆಂಕಾಲಜಿ’ ವಿಭಾಗವು ಸಂಪೂರ್ಣವಾಗಿ ಕಾರ್ಯಾಚರಿಸುತ್ತಿದ್ದು, ಕ್ಯಾನ್ಸರಿನ ಹಂತ ಮತ್ತು ಆದ್ಯತೆಯ ಮೇಲೆ ಶಸ್ತ್ರಚಿಕಿತ್ಸೆಯನ್ನು ಯೋಜಿಸಲಾಗುತ್ತದೆ. ಕಸ್ತೂರ್ಬಾ ಆಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿನ ಪರೀಕ್ಷೆಗೆ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಅಳವಡಿಸಲಾಗಿದೆ. ಕಾಲಕಾಲಕ್ಕೆ ಎಲ್ಲ ರಾಷ್ಟ್ರೀಯ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಲಾಗುತ್ತದೆ.

ವ್ಯಾಪಕ ಸೋಂಕಿನ ಈ ಸಮಯದಲ್ಲಿ ಆಸ್ಪತ್ರೆಗೆ ಭೇಟಿ ನೀಡುವುದು ಸುರಕ್ಷಿತವೇ?
ನಿರರ್ಥಕ ಭೇಟಿಗಳನ್ನು ತಪ್ಪಿಸಲು ನೀವು ಆಸ್ಪತ್ರೆಗೆ ನೀಡುವ ಭೇಟಿಗಳನ್ನು ಸಮರ್ಥವಾಗಿ ಯೋಜಿಸಿಕೊಳ್ಳಬೇಕು. ಸೋಂಕಿನ ಈ ಸಂದರ್ಭದಲ್ಲಿ ಅನವಶ್ಯಕ ಆಸ್ಪತ್ರೆ ಭೇಟಿಗಳು ಮತ್ತು ಆಸ್ಪತ್ರೆಗೆ ದಾಖಲಾಗುವುದನ್ನು ಶಿಫಾರಸು ಮಾಡಲಾಗುವುದಿಲ್ಲ. ಅನುಮಾನವಿದ್ದಾಗಲೆಲ್ಲ ಟೆಲಿಮೆಡಿಸಿನ್‌ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಿ. ಆಸ್ಪತ್ರೆಗಳಲ್ಲಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮಗಳಿರುವುದರಿಂದ ಸ್ವಲ್ಪ ವಿಳಂಬವಾಗಬಹುದು. ನಿಮ್ಮೊಡನೆ ಮಗುವನ್ನು, ಗರ್ಭಿಣಿಯರನ್ನು ಅಥವಾ ವಯಸ್ಸಾಗಿರುವ ಕುಟುಂಬ ಸದಸ್ಯರನ್ನು ಕರೆದುಕೊಂಡು ಬರಬೇಡಿ.

Advertisement

ನನ್ನ ಭೇಟಿಯ ಸಂದರ್ಭದಲ್ಲಿ ವೈದ್ಯರು ಸಾಮಾನ್ಯವಾಗಿ ಏನು ಮಾಡುತ್ತಾರೆ?
ನಿಮ್ಮ ಪ್ರಥಮ ಭೇಟಿಯ ಸಂದರ್ಭದಲ್ಲಿ ನಿಮ್ಮನ್ನು ಪರೀಕ್ಷಿಸಿದ ಬಳಿಕ ಮತ್ತು ನಿಮ್ಮ ಮೆಡಿಕಲ್‌ ರೆಕಾರ್ಡ್‌ಗಳನ್ನು ಪರಿಶೀಲಿಸಿದ ಬಳಿಕ ಮುಂದಿನ ರೋಗನಿರ್ವಹಣೆಯ ಬಗ್ಗೆ ವೈದ್ಯರು ನಿಮ್ಮೊಂದಿಗೆ ಚರ್ಚಿಸುತ್ತಾರೆ. ಅಗತ್ಯವಿದ್ದಲ್ಲಿ ಹೆಚ್ಚುವರಿ ತಪಾಸಣೆಗಳಿಗೆ ಒಳಗಾಗುವಂತೆ ಸಲಹೆ ನೀಡಬಹುದು. ಕೆಲವು ಕ್ಯಾನ್ಸರ್‌ಗಳಿಗೆ ಶಸ್ತ್ರಚಿಕಿತ್ಸೆಯ ಮೊದಲು ಕಿಮೋಥೆರಪಿ ಅಥವಾ ರೇಡಿಯೋಥೆರಪಿಯ ಅಗತ್ಯವಿರುವುದರಿಂದ ನಿರ್ದಿಷ್ಟ ವೈದ್ಯರ ಬಳಿ ಕಳುಹಿಸಲಾಗುವುದು. ಶಸ್ತ್ರಚಿಕಿತ್ಸೆಯ ಅಗತ್ಯವಿದ್ದಲ್ಲಿ ರೋಗಿಯ ಫಿಟ್‌ನೆಸ್‌ ಮತ್ತು ರಕ್ತದ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಅದನ್ನು ನಿಗದಿಪಡಿಸಲಾಗುವುದು. ನಿಮ್ಮಲ್ಲಿ ಪ್ರಶ್ನೆಗಳಿದ್ದಲ್ಲಿ ಕ್ಯಾನ್ಸರ್‌ ಶಸ್ತ್ರಚಿಕಿತ್ಸಕರಲ್ಲಿ ಮುಕ್ತವಾಗಿ ಕೇಳಿ, ಏಕೆಂದರೆ ಶಸ್ತ್ರಚಿಕಿತ್ಸೆಯ ಬಗ್ಗೆ ನಿಮ್ಮೆಲ್ಲ ಸಂಶಯಗಳಿಗೆ ಅವರು ತಕ್ಕುದಾಗಿ ಉತ್ತರಿಸಬಲ್ಲರು.

ಲಾಕ್‌ಡೌನ್‌ ಇರುವಾಗ, ಆಸ್ಪತ್ರೆ ಭೇಟಿಗಳು ಸಾಧ್ಯವೇ?
ಕ್ಯಾನ್ಸರ್‌ ರೋಗಿಗಳು ಆಸ್ಪತ್ರೆಗೆ ಭೇಟಿ ನೀಡಲು ಸಾಧ್ಯವಾಗುವಂತೆ, ಪ್ರಯಾಣಕ್ಕೆ ಅನುಕೂಲತೆ ಕಲ್ಪಿಸಲು ಶಿಫಾರಸು ಪತ್ರವನ್ನು ಆಸ್ಪತ್ರೆಯ ಕಡೆಯಿಂದ ಕೊಡಲಾಗುವುದು.

ಕ್ಯಾನ್ಸರ್‌ ಶಸ್ತ್ರಚಿಕಿತ್ಸೆಗಾಗಿ ನಾವು ಎಷ್ಟು ಸಮಯ ಆಸ್ಪತ್ರೆಯಲ್ಲಿರಬೇಕಾಗುತ್ತದೆ?
ದೇಹದ ಯಾವ ಅಂಗಕ್ಕೆ ರೋಗ ಬಾಧಿಸಿದೆ ಮತ್ತು ಕಾಯಿಲೆ ಯಾವ ಹಂತದಲ್ಲಿದೆ ಎಂಬುದನ್ನು ಅವಲಂಬಿಸಿ ಕ್ಯಾನ್ಸರ್‌ ಶಸ್ತ್ರಚಿಕಿತ್ಸೆಗಳ ಪ್ರಮಾಣ ಬದಲಾಗುತ್ತದೆ. ಶಸ್ತ್ರಚಿಕಿತ್ಸೆಗೆ ಒಂದು ಗಂಟೆಯಿಂದ ಹಿಡಿದು ಒಂದು ಇಡೀ ದಿನದ ಸಮಯ ಸಹ ತಗಲಬಹುದು. ಹೆಚ್ಚಿನ ರೋಗಿಗಳು ಎರಡು ದಿನದಿಂದ ಹಿಡಿದು ಒಂದು ವಾರದವರೆಗೆ ಆಸ್ಪತ್ರೆಯಲ್ಲಿರಬೇಕಾಗಬಹುದು. ಆಸ್ಪತ್ರೆಯಿಂದ ಬಿಡುಗಡೆಯಾಗುವ ರೋಗಿಗಳಿಗೆ ಆಹಾರ, ವ್ಯಾಯಾಮ, ಮನೆಯಲ್ಲಿನ ಆರೈಕೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಸ್ಪಷ್ಟ ಸಲಹೆ ಸೂಚನೆಗಳನ್ನು ನೀಡಲಾಗುತ್ತದೆ. ರೋಗಿಯೊಂದಿಗೆ ಮಧ್ಯವಯಸ್ಸಿನ ಒಬ್ಬ ಕುಟುಂಬ ಸದಸ್ಯನಿಗೆ ಆಸ್ಪತ್ರೆಯಲ್ಲಿ ನಿಲ್ಲಲು ಅವಕಾಶ ಕೊಡಲಾಗುವುದು. ಆಸ್ಪತ್ರೆಯ ಆವರಣದಲ್ಲಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುವುದು.

ಶಸ್ತ್ರಚಿಕಿತ್ಸೆಯ ಬಳಿಕ ನಾವು ಯಾವಾಗ ಆಸ್ಪತ್ರೆಗೆ ಭೇಟಿ ನೀಡಬೇಕು?
ಪುನರ್ವಿಮರ್ಶೆಯ ದಿನಾಂಕಗಳನ್ನು ಮೊದಲೇ ನಿಗದಿಪಡಿಸಿರಲಾಗುತ್ತದೆ ಮತ್ತು ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆಯ ಹೊಲಿಗೆ ಇದ್ದಲ್ಲಿ ಅದನ್ನು ತೆಗೆಯಲಾಗುತ್ತದೆ. ಹೆಚ್ಚುವರಿ ಚಿಕಿತ್ಸೆಯ ಅಗತ್ಯವಿದ್ದಲ್ಲಿ ಆ ಭೇಟಿಯಲ್ಲಿ ಚರ್ಚಿಸಲಾಗುತ್ತದೆ. ಅಗತ್ಯವಿದ್ದಲ್ಲಿ ಗಾಯದ ಹೊಲಿಗೆ ತೆಗೆಯುವಿಕೆ ಮತ್ತು ಗಾಯದ ಆರೈಕೆಯನ್ನು ಸ್ಥಳೀಯ ಆಸ್ಪತ್ರೆಗಳಲ್ಲಿ ಮಾಡಬಹುದು.

ಚೇತರಿಸಿಕೊಳ್ಳುತ್ತಿರುವ ಸಮಯದಲ್ಲಿ ಯಾವ ಮುಂಜಾಗ್ರತೆಗಳನ್ನು ಕೈಗೊಳ್ಳಬೇಕಾಗುತ್ತದೆ?
ಈ ಸೋಂಕಿನ ಸಮಯದಲ್ಲಿ ಶಸ್ತ್ರಚಿಕಿತ್ಸೆಗೊಳಗಾದ ರೋಗಿಗಳು ಕಡ್ಡಾಯವಾಗಿ ಮನೆಯಲ್ಲೇ ಉಳಿದುಕೊಳ್ಳಬೇಕು. ಸಲಹೆ ಮಾಡಿರುವ ಪ್ರಕಾರ ಅವರು ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಸಲಹೆ ಮಾಡಿರುವ ವ್ಯಾಯಾಮ ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವೈಯಕ್ತಿಕ ಸ್ವತ್ಛತೆಗೆ ಹೆಚ್ಚು ಮಹತ್ವ ನೀಡಬೇಕು. ಪ್ರತಿದಿನ ಸ್ನಾನ ಮಾಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಕೈಗಳ ಸ್ವತ್ಛತೆ ಇವು ಅತ್ಯಂತ ಪ್ರಮುಖ ಮುಂಜಾಗ್ರತಾ ಕ್ರಮಗಳಾಗಿವೆ.

ಮನೆಯಲ್ಲಿ ನಮಗೇನಾದರೂ ಸಮಸ್ಯೆಗಳಾದಲ್ಲಿ ನಾವೇನು ಮಾಡಬೇಕು?
ಶಸ್ತ್ರಚಿಕಿತ್ಸೆಗೆ ಸಂಬಂಧಪಟ್ಟಂತೆ, ಯಾವುದೇ ಸಮಸ್ಯೆ ಗಳಿದ್ದಲ್ಲಿ, ನೀವು ನಿಮಗೆ ಕೊಟ್ಟಿರುವ ವಿಭಾಗದ ಅಥವಾ ಒಪಿಡಿಯ ದೂರವಾಣಿಗೆ ತುರ್ತು ಕರೆಯನ್ನು ಮಾಡಿ ನಿಮ್ಮ ವೈದ್ಯರಿಂದ ಸಲಹೆಯನ್ನು ಪಡೆದುಕೊಳ್ಳಬಹುದು. ಅಗತ್ಯವಿದ್ದಲ್ಲಿ ನಮ್ಮ ವೈದ್ಯರ ಸಲಹೆಯ ಮೇರೆಗೆ ಸ್ಥಳೀಯ ವೈದ್ಯರನ್ನು ಸಂಪರ್ಕಿಸಬಹುದು. ಸಮಸ್ಯೆಯು ಉಲ್ಬಣಿಸಿದಲ್ಲಿ ದಿನದ ಯಾವುದೇ ಅವಧಿಯಲ್ಲೂ ಕಸ್ತೂರ್ಬಾ ಆಸ್ಪತ್ರೆಯನ್ನು ಸಂದರ್ಶಿಸಬಹುದು.

ಕ್ಯಾನ್ಸರ್‌ ಚಿಕಿತ್ಸೆ ಮುಗಿದ ಅನಂತರ, ಚೆಕಪ್‌ಗ್ಳಿಗೆ ಬರಲು ಏನು ಮಾಡಬೇಕು?
 ನಿಯಮಿತ ಚೆಕಪ್‌ಗ್ಳಿಗೆ ಆಸ್ಪತ್ರೆಗೆ ಬರುವ ಕ್ಯಾನ್ಸರ್‌ ರೋಗಿಗಳು ಲಾಕ್‌ಡೌನ್‌ ಮುಗಿಯುವ ತನಕ ಕಾಯಬೇಕಾಗುತ್ತದೆ. ನಿಗದಿತ ಭೇಟಿಗಿಂತ ಇದು ತುಂಬಾ ಮುಂದೆ ಹೋದಲ್ಲಿ ಅವರು ಸ್ಥಳೀಯ ವೈದ್ಯರನ್ನು ಭೇಟಿಯಾಗಬಹುದು. ಈ ಸಮಯದಲ್ಲಿ ಯಾವುದೇ ಹೊಸ ರೋಗಲಕ್ಷಣಗಳು ಕಾಣಿಸಿಕೊಂಡಲ್ಲಿ, ಹೆಚ್ಚಿನ ಸಹಾಯಕ್ಕಾಗಿ ಆಸ್ಪತ್ರೆಗೆ ಭೇಟಿ ನೀಡಿ.

ಕ್ಯಾನ್ಸರ್‌ ರೋಗಿಗಳು ಯಾವ ಹೆಚ್ಚುವರಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು?
ಎಲ್ಲ ಕ್ಯಾನ್ಸರ್‌ ರೋಗಿಗಳು ಮನೆಯೊಳಗಡೆಯೇ ಇರಬೇಕು, ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಕಾಯ್ದುಕೊಳ್ಳಬೇಕು ಎಂದು ನಾವು ಶಿಫಾರಸು ಮಾಡುತ್ತೇವೆ.

-ಡಾ| ನವೀನ್‌ ಕುಮಾರ್‌ ಎ. ಎನ್‌.
ಸಹ ಪ್ರಾಧ್ಯಾಪಕರು ಮತ್ತು ವಿಭಾಗ ಮುಖ್ಯಸ್ಥರು

-ಡಾ| ಕೇಶವರಾಜನ್‌ ಜಿ.
ಸಹಾಯಕ ಪ್ರಾಧ್ಯಾಪಕರು ,
ಕ್ಯಾನ್ಸರ್‌ ಶಸ್ತ್ರಚಿಕಿತ್ಸಾ ವಿಭಾಗ,
ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next