ಬೆಂಗಳೂರು: ಕೋಡಿಹಳ್ಳಿಯ ಮಣಿಪಾಲ್ ಆಸ್ಪತ್ರೆ ವತಿಯಿಂದ ಕ್ಯಾನ್ಸರ್ ರೋಗಿಗಳಿಗೆ “ವಿ ಕ್ಯಾನ್’ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ಕ್ಯಾನ್ಸರ್ ರೋಗ ವಿಭಾಗದ ಮುಖ್ಯಸ್ಥ ಡಾ.ಸೋಮಶೇಖರ್.ಎಸ್.ಪಿ ತಿಳಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವ ಜತೆಗೆ, ಅವರಲ್ಲಿ ಆತ್ಮಸ್ಥೈರ್ಯ ತುಂಬುವುದು ಕೂಡ ಮುಖ್ಯವಾಗುತ್ತದೆ. ಕ್ಯಾನ್ಸರ್ ರೋಗ ಗುಣವಾದ ನಂತರ ಅವರನ್ನು ಹೆಚ್ಚು ಕಾಳಜಿಯಿಂದ ನೋಡಿಕೊಳ್ಳಬೇಕಾಗುತ್ತದೆ. ಕೆಲವರಿಗೆ ಕ್ಯಾನ್ಸರ್ ರೋಗ ವಾಸಿಯಾದ ನಂತರವೂ ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದರು.
ಈ ಸಮಸ್ಯೆಗಳನ್ನು ತಪ್ಪಿಸುವ ಉದ್ದೇಶದಿಂದ ನಗರದಲ್ಲಿ “ವಿ ಕ್ಯಾನ್’ ಎಂಬ ಕಾರ್ಯಕ್ರಮ ಆರಂಭಿಸುತ್ತಿದ್ದು, ಇದರಲ್ಲಿ ಕ್ಯಾನ್ಸರ್ ಅಪಾಯದಿಂದ ಪಾರಾದವರು ಸುಗಮವಾಗಿ ಜೀವನ ನಡೆಸುವಂತೆ ಮಾಡುವುದು ಮತ್ತು ರೋಗಿಗಳಲ್ಲಿ ಚೇತರಿಸಿಕೊಳ್ಳುವ ಭರವಸೆಯನ್ನು ಮೂಡಿಸಲು ಮುಂದಾಗಿದ್ದೇವೆ. ರೋಗದ ವಿರುದ್ಧ ಹೋರಾಡಲು ಮಾನಸಿಕಸ್ಥೈರ್ಯ ಅತ್ಯಂತ ಮುಖ್ಯ ಎಂದು ಹೇಳಿದರು.
ಕ್ಯಾನ್ಸರ್‌ನಿಂದ ಬಳಲುತ್ತಿರುವವರ ಚಿಕಿತ್ಸೆ ಮತ್ತು ಚಿಕಿತ್ಸೆ ನಂತರ ರೋಗಿಗಳ ಆರೋಗ್ಯ ಮತ್ತು ಮಾನಸಿಕ ಸ್ಥೈರ್ಯವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ಚಿಕಿತ್ಸೆಯ ನಂತರ ರೋಗ ಮರುಕಳಿಸದಂತೆ ತಡೆಯುವುದಕ್ಕೆ “ವಿ ಕ್ಯಾನ್’ ಕಾರ್ಯಕ್ರಮ ನೆರವಾಗಲಿದೆ ಎಂದರು.
ಕಾರ್ಯಕ್ರಮವನ್ನು ಮೂರು ಹಂತದಲ್ಲಿ ವಿನ್ಯಾಸಗೊಳಿಸಲಾಗಿದ್ದು, ರೋಗ ಪತ್ತೆಯಾದಾಗ-ರೋಗ ನಿರ್ಣಯ, ಚಿಕಿತ್ಸಾ ಆಯ್ಕೆಗಳು, ಮತ್ತು ರೋಗಿಯ ಅಭಿಪ್ರಾಯ ಸಂಗ್ರಹಿಸುವುದು, ಚಿಕಿತ್ಸೆ ಜತೆಗೆ ಫಲಿತಾಂಶ ಹಾಗೂ ರೋಗಿಯ ಕುಟುಂಬದಲ್ಲಿನ ಆತಂಕಗಳನ್ನು ನಿಭಾಯಿಸಲು ಸಹಕಾರಿಯಾಗಲಿದೆ ಎಂದು ಮಾಹಿತಿ ನೀಡಿದರು.