Advertisement

ಧ್ವನಿಪೆಟ್ಟಿಗೆ ಕ್ಯಾನ್ಸರ್‌;ಆರಂಭಿಕ ಹಂತದಲ್ಲಿ ಪತ್ತೆ ಮಾಡಿದರೆ ಗುಣಪಡಿಸುವ ಸಾಧ್ಯತೆ ಹೆಚ್ಚು

02:16 PM Apr 09, 2023 | Team Udayavani |

ಲಾರಿಂಜಿಯಲ್‌ ಕ್ಯಾನ್ಸರ್‌ ಎಂದರೇನು ಮತ್ತು ಅದು ಎಷ್ಟು ಸಾಮಾನ್ಯವಾಗಿದೆ? ಲಾರೆಂಕ್ಸ್ (ಧ್ವನಿಪೆಟ್ಟಿಗೆ, ಕಂಠ ಕುಹರ) ಮಾನವರಲ್ಲಿ ಒಂದು ಪ್ರಮುಖ ಅಂಗವಾಗಿದೆ, ಕಾರಣ ಅದರ ಬಹುಮುಖೀ ಕ್ರಿಯಾತ್ಮಕ ಸಾಮರ್ಥ್ಯ. ಈ ಅಂಗದಲ್ಲಿ ಯಾವುದೇ ಗಾಯ ಕ್ಷಿಪ್ರ ಮತ್ತು ಸ್ವಾಯತ್ತ ಕೋಶ ವಿಭಜನೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಾಗ, ಅದನ್ನು ಧ್ವನಿಪೆಟ್ಟಿಗೆಯ ಕ್ಯಾನ್ಸರ್‌ ಎಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ಇದು ಅಸಾಮಾನ್ಯವೇನಲ್ಲ. ಬಹುಶಃ ಬಾಯಿಯ ಕುಹರ (Oral cavity) ಮತ್ತು ಗಂಟಲಕುಳಿ (Pharynx) ಕ್ಯಾನ್ಸರ್‌ನ ಅನಂತರ ಮೂರನೇ ಸಾಮಾನ್ಯ ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್‌ ಧ್ವನಿಪೆಟ್ಟಿಗೆ ಕ್ಯಾನ್ಸರ್‌ ಆಗಿದೆ.

Advertisement

ಲಾರಿಂಜಿಯಲ್‌ ಕ್ಯಾನ್ಸರ್‌ಗೆ ಕಾರಣವಾಗಬಹುದಾದ ಅಪಾಯಕಾರಿ ಅಂಶಗಳು (Risk factors) ಯಾವುವು?

ಧೂಮಪಾನವು ಧ್ವನಿಪೆಟ್ಟಿಗೆಯ ಕ್ಯಾನ್ಸರ್‌ ಗೆ ಒಂದು ಪ್ರಮುಖ ಕಾರಣವಾಗಿದೆ. ಇತರ ಧೂಮಪಾನ-ಸಂಬಂಧಿತ ಕಾಯಿಲೆಗಳಂತೆ, ಧೂಮಪಾನದ ಅವಧಿಯೊಂದಿಗೆ ಲಾರಿಂಜಿಯಲ್‌ ಕ್ಯಾನ್ಸರ್‌ನ ಅಪಾಯವೂ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಈ ರೋಗಕ್ಕೆ ಕಾರಣವಾಗಬಹುದಾದ ಇತರ ಅಪಾಯಕಾರಿ ಅಂಶಗಳೆಂದರೆ ಮದ್ಯ ಸೇವನೆ, ಹ್ಯೂಮನ್‌ ಪ್ಯಾಪಿಲೋಮ ವೈರಸ್‌ ಎಂಬ ಆಂಕೊಜೆನಿಕ್‌ ವೈರಸ್‌ ಸೋಂಕು ಹಾಗೂ ಹಾನಿಕಾರಕ ರಾಸಾಯನಿಕಗಳು, ಬಣ್ಣಗಳು ಮತ್ತು ಹೊಗೆಗಳಿಗೆ ಒಡ್ಡುವಿಕೆ. ಅಲ್ಲದೆ, ಪೌಷ್ಟಿಕಾಂಶದ ಕೊರತೆಯ ಆಹಾರ ಮತ್ತು ಉಪ್ಪುಸಹಿತ ಮಾಂಸದಂತಹ ಇತರ ಆಹಾರಗಳ ಹೆಚ್ಚಿನ ಸೇವನೆಯಂತಹ ಅಂಶಗಳನ್ನು ಕಾರಣಗಳಾಗಿ ಪರಿಗಣಿಸಲಾಗಿದೆ. ಅಪರೂಪವಾಗಿ ಆನುವಂಶಿಕ ಅಂಶಗಳಿಂದಲೂ ಲಾರಿಂಜಿಯಲ್‌ ಕ್ಯಾನ್ಸರ್‌ ಉಂಟಾಗಬಹುದು.

ಧ್ವನಿಪೆಟ್ಟಿಗೆಯ ಕ್ಯಾನ್ಸರ್‌ನ ಲಕ್ಷಣಗಳು ಯಾವುವು?

ಆರಂಭಿಕ ಹಂತದ ರೋಗಲಕ್ಷಣಗಳು, ರೋಗದ ಮೂಲ ಸ್ಥಳವನ್ನು ಅವಲಂಬಿಸಿ ರೋಗಿಯಿಂದ ರೋಗಿಗೆ ಭಿನ್ನವಾಗಿರಬಹುದು. ಕ್ಯಾನ್ಸರ್‌ ಗಾಯವು ಧ್ವನಿ ತಂತುಗಳಿಂದ ಪ್ರಾರಂಭವಾದರೆ, ಧ್ವನಿ ಬದಲಾವಣೆಯು ಮೊದಲ ಮತ್ತು ಪ್ರಮುಖ ಲಕ್ಷಣವಾಗಿದೆ. ಆದರೆ ಧ್ವನಿ ತಂತುಗಳನ್ನು ಹೊರತುಪಡಿಸಿ ಇತರ ಸ್ಥಳಗಳಿಂದ ಉಂಟಾಗುವ ಗಾಯಗಳಿಗೆ ಗಂಟಲು ಕಿರಿಕಿರಿ, ನುಂಗಲು ತೊಂದರೆ ಅಥವಾ ಗದ್ದಲದ ಉಸಿರಾಟ ಧ್ವನಿಪೆಟ್ಟಿಗೆಯ ಕ್ಯಾನ್ಸರ್‌ನ ಲಕ್ಷಣಗಳು ಆಗಿರಬಹುದು. ಆದಾಗ್ಯೂ ಕ್ಯಾನ್ಸರ್‌ ಗಾಯ ಹೆಚ್ಚಾದಂತೆ/ ಮುಂದುವರಿದಂತೆ ರೋಗಿಗಳು ಒಂದಕ್ಕಿಂತ ಹೆಚ್ಚು ಅಥವಾ ಈ ಎಲ್ಲ ರೋಗಲಕ್ಷಣಗಳನ್ನು ವ್ಯಕ್ತಪಡಿಸುತ್ತಾರೆ. ಕೊನೆಯದಾಗಿ ಈ ರೋಗದ ಕೆಲವು ರೋಗಿಗಳು ರಕ್ತದ ಕಲೆಯಿರುವ ಕಫ, ನುಂಗಲು ತೊಂದರೆ ಮತ್ತು ಕುತ್ತಿಗೆ ಭಾಗದಲ್ಲಿ ಊತವನ್ನು ಹೊಂದಿರಬಹುದು.

Advertisement

ಧ್ವನಿಪೆಟ್ಟಿಗೆಯ ಕ್ಯಾನ್ಸರ್‌ನ್ನು ಹೇಗೆ ನಿರ್ವಹಿಸಲಾಗುತ್ತದೆ? ಇದರ ಚಿಕಿತ್ಸೆಯ ವಿಧಾನದ ಬಗ್ಗೆ ಮಾಹಿತಿಯನ್ನು ನೀಡಬಹುದೇ?

ರೋಗಿಯು ಆಸ್ಪತ್ರೆಗೆ ವರದಿ ಮಾಡಿದ ಅನಂತರ ನಾವು ರೋಗಿಯನ್ನು ವಿವರವಾಗಿ ಪರೀಕ್ಷಿಸುತ್ತೇವೆ. ಇದರಿಂದ ರೋಗನಿರ್ಣಯವನ್ನು ದೃಢೀಕರಿಸುವುದರ ಜತೆಗೆ ರೋಗದ ವ್ಯಾಪ್ತಿಯನ್ನು ಅಂದಾಜು ಮಾಡುತ್ತೇವೆ ಮತ್ತು ಸೂಕ್ತವಾದ ಚಿಕಿತ್ಸೆಯನ್ನು ಯೋಜಿಸುತ್ತೇವೆ. ರೋಗನಿರ್ಣಯಕ್ಕಾಗಿ ರೋಗಿಯನ್ನು ಹೊರರೋಗಿ ವಿಭಾಗದಲ್ಲಿಯೇ ಸರಳವಾದ ಲಾರಿಂಗೋಸ್ಕೋಪಿಕ್‌ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಮತ್ತು ಸಾಧ್ಯವಾದರೆ, ಅಲ್ಲಿಯೇ ಬಯಾಪ್ಸಿಯನ್ನು ತೆಗೆದುಕೊಳ್ಳಲಾಗುತ್ತದೆ. ಆದಾಗ್ಯೂ ಕಾರ್ಯವಿಧಾನವು ಅಪಾಯಕಾರಿ ಎಂದು ಪರಿಗಣಿಸಿದರೆ ಅಥವಾ ರೋಗಿಯು ತೊಂದರೆಯಲ್ಲಿದ್ದರೆ ಬಯಾಪ್ಸಿಯನ್ನು ಸಾಮಾನ್ಯವಾಗಿ ಅರಿವಳಿಕೆ ಅಡಿಯಲ್ಲಿ ಆಪರೇಷನ್‌ ಥಿಯೇಟರ್‌ನಲ್ಲಿ ತೆಗೆದುಕೊಳ್ಳಲಾಗುತ್ತದೆ. ಈ ಮಧ್ಯೆ ರೋಗದ ಸ್ಥಳೀಯ ವ್ಯಾಪ್ತಿ ಮತ್ತು ಕುತ್ತಿಗೆಯಲ್ಲಿ ದುಗ್ಧರಸ ಗ್ರಂಥಿಗಳ ಸ್ಥಿತಿ (lymph node status) ಮತ್ತು ದೂರದ ಹರಡುವಿಕೆಯ ಮಾಹಿತಿಗಾಗಿ ಸೂಕ್ತವಾದ ವಿಕಿರಣಶಾಸ್ತ್ರದ ತನಿಖೆಗಳನ್ನು ನಡೆಸಲಾಗುತ್ತದೆ.

ಅನಂತರ ರೋಗಿಯ ಮತ್ತು ರೋಗಕ್ಕೆ ಸಂಬಂಧಿಸಿದ ಕೆಲವು ನಿರ್ಣಾಯಕ ಅಂಶಗಳನ್ನು ಪರಿಗಣಿಸುವ ಮೂಲಕ ಸೂಕ್ತ, ಪರಿಣಾಮಕಾರಿ ಮತ್ತು ಸುರಕ್ಷಿತವಾದ ಚಿಕಿತ್ಸಕ ಯೋಜನೆಯನ್ನು ರೂಪಿಸಲಾಗುವುದು. ರೋಗಿಯ ವಯಸ್ಸು ಮತ್ತು ಕಾರ್ಯಕ್ಷಮತೆ, ಸಹ-ಅಸ್ವಾಸ್ಥ್ಯಗಳು ಮತ್ತು ಅವನ ಅಥವಾ ಅವಳ ಹೃದಯ, ಶ್ವಾಸಕೋಶ ಮತ್ತು ಮೂತ್ರಪಿಂಡಗಳ ಕಾರ್ಯಸ್ಥಿತಿಗತಿ, ಇವು ರೋಗಿಗೆ ಸಂಬಂಧಿಸಿದ ಗಮನಿಸಬೇಕಾದ ಅಂಶಗಳಾಗಿವೆ. ಹಾಗೆಯೇ ರೋಗದ ಹಂತ ಮತ್ತು ಮುಖ್ಯವಾಗಿ, ಧ್ವನಿಪೆಟ್ಟಿಗೆಯ ಕ್ರಿಯಾತ್ಮಕ ಸಾಮರ್ಥ್ಯ ಚಿಕಿತ್ಸಕ ಯೋಜನೆಯನ್ನು ರೂಪಿಸಲು ಅಗತ್ಯವಿರುವ ರೋಗ-ಸಂಬಂಧಿತ ಅಂಶಗಳಾಗಿವೆ. ಸಾಮಾನ್ಯವಾಗಿ ಧ್ವನಿಪೆಟ್ಟಿಗೆಯಿಂದ ಹೊರಬಂದ ರೋಗ ಅಥವಾ ಧ್ವನಿಪೆಟ್ಟಿಗೆಯನ್ನು ನಿಷ್ಕ್ರಿಯಗೊಳಿಸಿದ ರೋಗ ಹೊಂದಿರುವ ರೋಗಿಗೆ, ಶಸ್ತ್ರಚಿಕಿತ್ಸೆಯ ಮೂಲಕ ರೋಗಗ್ರಸ್ತ ಧ್ವನಿಪೆಟ್ಟಿಗೆಯನ್ನು ತೆಗೆದುಹಾಕುವುದು ಮತ್ತು ಒಂದು ತಿಂಗಳ ಅನಂತರ ರೇಡಿಯೊಥೆರಪಿ ನೀಡುವುದು ಹೆಚ್ಚು ಪರಿಣಾಮಕಾರಿ ಹಾಗೂ ಆದ್ಯತೆಯ ಚಿಕಿತ್ಸೆಯಾಗಿದೆ. ಮತ್ತೂಂದೆಡೆ, ಸಣ್ಣ ಹಂತದ ಕಾಯಿಲೆಗಳು ಹಾಗೂ ಧ್ವನಿಪೆಟ್ಟಿಗೆಯ ಕ್ರಿಯಾತ್ಮಕ ಸಾಮರ್ಥ್ಯ ಇನ್ನೂ ಸಂರಕ್ಷಿಸಿದ್ದರೆ, ಧ್ವನಿಪೆಟ್ಟಿಗೆ ಸಂರಕ್ಷಣೆ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು. ಅದು ರೇಡಿಯೊಥೆರಪಿಯ ಜತೆಗೆ ಕಿಮೊಥೆರಪಿ ಇರಬಹುದು, ಇಲ್ಲದೆಯೇ ಸಣ್ಣ ಎಂಡೋಸ್ಕೋಪಿಕ್‌ ಶಸ್ತ್ರಚಿಕಿತ್ಸೆ ಒಳಗೊಂಡಿರಬಹುದು. ರೋಗಿಯ, ಅಥವಾ ಕೆಲವೊಮ್ಮೆ ಆರೈಕೆ ನೀಡುವವರ ಆದ್ಯತೆಗಳು ಚಿಕಿತ್ಸೆಯ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ಅವಿಭಾಜ್ಯ ಅಂಶಗಳಾಗಿವೆ. ಇದರಲ್ಲಿ ವೈದ್ಯರು ಪ್ರತೀ ವಿಧಾನದ ಅನುಕೂಲಗಳು ಮತ್ತು ಅನಾನುಕೂಲಗಳನ್ನು ವಿವರಿಸುತ್ತಾರೆ ಮತ್ತು ರೋಗಿಯ ಮತ್ತು ಕುಟುಂಬಕ್ಕೆ ಅನುಗುಣವಾಗಿ ಅಂತಿಮ ಚಿಕಿತ್ಸಾ ಯೋಜನೆಯನ್ನು ನಿರ್ಧರಿಸುತ್ತಾರೆ.

ಅಪರೂಪವಾಗಿ ರೋಗನಿರ್ಣಯ ಮತ್ತು ಚಿಕಿತ್ಸೆಯ ನಿರ್ಧಾರ ಸಮಯದಲ್ಲಿ, ಕ್ಯಾನ್ಸರ್‌ ದೇಹದ ವಿವಿಧ ಅಂಗಗಳಿಗೆ ವಿಸ್ತರಿಸಿರಬಹುದು. ಈ ಸಂದರ್ಭದಲ್ಲಿ ರೋಗವನ್ನು ಗುಣಪಡಿಸಲು ಸಾಧ್ಯವಾಗದಿದ್ದಲ್ಲಿ ರೋಗಿಗಳನ್ನು ಉಪಶಾಮಕ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಇದರ ಉದ್ದೇಶವು ಸಂಕಟವನ್ನು ನಿವಾರಿಸುವುದು ಮತ್ತು ಜೀವನದ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಅಗತ್ಯವಾದ ಬೆಂಬಲ ಆರೈಕೆಯನ್ನು ಒದಗಿಸುವುದು.

ಧ್ವನಿಪೆಟ್ಟಿಗೆಯನ್ನು ತೆಗೆದ ಅನಂತರ ವ್ಯಕ್ತಿಯು ಮಾತನಾಡಬಹುದೇ?

ಹೌದು. ಧ್ವನಿಪೆಟ್ಟಿಗೆಯನ್ನು ತೆಗೆದ ಅನಂತರವೂ ವ್ಯಕ್ತಿಯು ಮೌಖೀಕ ಸಂವಹನ ಮಾಡುವ ಸಾಮರ್ಥ್ಯವನ್ನು ಮರಳಿ ಪಡೆಯಬಹುದು. ಪ್ರೇರಿತ ವ್ಯಕ್ತಿ ಮತ್ತು ಧ್ವನಿ ಪುನರ್ವಸತಿ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವವರು ಯಶಸ್ವಿಯಾಗಿ ಮಾತನಾಡಲು ಕಲಿಯಬಹುದು. ಸಣ್ಣ ಶಸ್ತ್ರಚಿಕಿತ್ಸೆಯ ಮೂಲಕ ಅಥವಾ ಎಲೆಕ್ಟ್ರೋ- ಲಾರಿಂಕ್ಸ್‌ ಎಂಬ ಕೈಯಲ್ಲಿ ಹಿಡಿಯುವ ಸಾಧನದ ಸಹಾಯದಿಂದ ಧ್ವನಿಯ ಮರುಸ್ಥಾಪನೆಯನ್ನು ಸಾಧ್ಯ. ಕೆಲವೊಮ್ಮೆ ಧ್ವನಿಪೆಟ್ಟಿಗೆಯನ್ನು ತೆಗೆದ ಅನಂತರವೂ, ರೋಗಿಯು ಬಾಯಿಯಲ್ಲಿ ಮತ್ತು ಗಂಟಲಕುಳಿಯಲ್ಲಿ ಉಳಿದಿರುವ ಗಾಳಿಯನ್ನು ಬಳಸಿಕೊಂಡು ಮಾತನಾಡಬಹುದು.

ಧ್ವನಿಪೆಟ್ಟಿಗೆಯ ಕ್ಯಾನ್ಸರ್‌ ಅನ್ನು ತಡೆಯುವುದು ಹೇಗೆ?

ಧೂಮಪಾನ, ಅತಿಯಾದ ಮದ್ಯಸೇವನೆಯಂತಹ ಅಪಾಯಕಾರಿ ಅಂಶಗಳಿಂದ ದೂರವಿರುವುದರಿಂದ ಹಾಗೂ ಉತ್ತಮ ಆಹಾರ ಪದ್ಧತಿಗಳಿಂದ (ಪೌಷ್ಠಿಕಾಂಶ ಭರಿತ ಆಹಾರವನ್ನು ಸೇವಿಸುವುದರೊಂದಿಗೆ) ಧ್ವನಿಪೆಟ್ಟಿಗೆಯ ಕ್ಯಾನ್ಸರ್‌ ಮತ್ತು ಇದೇ ರೀತಿಯ ಇತರ ಕ್ಯಾನ್ಸರ್‌ಗಳ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು.

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಈ ರೀತಿಯ ರೋಗವನ್ನು ನಿರ್ವಹಿಸಲು ಲಭ್ಯವಿರುವ ಸೌಲಭ್ಯಗಳು ಯಾವುವು?

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ಹಲವಾರು ದಶಕಗಳಿಂದ ಕ್ಯಾನ್ಸರ್‌ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಅಪಾರ ಅನುಭವವನ್ನು ಹೊಂದಿದೆ. ಇಲ್ಲಿ ಬಹು ಆಯಾಮದ ಪರಿಣತಿಯ ತಂಡದಲ್ಲಿ ಅನುಭವಿ ಮತ್ತು ಸುಶಿಕ್ಷಿತ ಶಸ್ತ್ರಚಿಕಿತ್ಸಕರು, ವಿಕಿರಣ ಓಂಕಾಲಾಜಿಸ್ಟ್‌ಗಳು, ವೈದ್ಯಕೀಯ ಓಂಕಾಲಾಜಿಸ್ಟ್‌ ಗಳು (radiation oncologists), ಉಪಶಾಮಕ ಆರೈಕೆ ವೈದ್ಯರು (palliative care physicians), ರೋಗಶಾಸ್ತ್ರಜ್ಞರು (pathologists), ರೇಡಿಯಾಲಜಿಸ್ಟ್‌ ಗಳು ಮತ್ತು ಅರಿವಳಿಕೆ ಶಾಸ್ತ್ರಜ್ಞರು ಭಾಗವಹಿಸುತ್ತಾರೆ. ಒಟ್ಟಾಗಿ ಬಹುಶಿಸ್ತೀಯ ತಂಡವಾಗಿ ಈ ಪ್ರದೇಶಗಳ ಎಲ್ಲ ತಜ್ಞರು ರೋಗಿಗಳ ಆರೈಕೆಯ ಪ್ರತೀ ಹಂತದಲ್ಲಿ ಚಿಕಿತ್ಸೆಯನ್ನು ಯೋಜಿಸುವುದರಿಂದ ಅದನ್ನು ಕಾರ್ಯಗತಗೊಳಿಸುವ ತನಕ ರೋಗಿ ಮತ್ತು ಆರೈಕೆದಾರರನ್ನು ಬೆಂಬಲಿಸುತ್ತಾರೆ. ನಮ್ಮ ವಿಭಾಗ, Division of Head and Neck Surgery, ಅನುಭವಿ ಶಸ್ತ್ರಚಿಕಿತ್ಸಕರ ತಂಡವನ್ನು ಹೊಂದಿದ್ದು, ತಮ್ಮ ಶಸ್ತ್ರಚಿಕಿತ್ಸಾ ಮತ್ತು ಪುನರ್ನಿರ್ಮಾಣ (reconstruction) ಸಾಮರ್ಥ್ಯಗಳಿಗೆ ಪ್ರಸಿದ್ಧಿ ಪಡೆದಿದ್ದಾರೆ.

ಕೊನೆಯದಾಗಿ, ರೋಗ ಮರುಕಳಿಸುವಿಕೆಯ ಯಾವುದೇ ಪುರಾವೆಗಳಿಗಾಗಿ ಅವರನ್ನು ನಿಯಮಿತವಾಗಿ ಪರೀಕ್ಷಿಸುವ ಮೂಲಕ ಮತ್ತು ರೋಗ ಅಥವಾ ಸಂಬಂಧಿತ ಚಿಕಿತ್ಸೆಯಿಂದ ಉಂಟಾಗುವ ಯಾವುದೇ ಸಮಸ್ಯೆಗೆ ಸಹಾಯ ಮಾಡಲು ಚಿಕಿತ್ಸೆಯ ಅನಂತರವೂ ನಾವು ರೋಗಿಗಳೊಂದಿಗೆ ವೃತ್ತಿಪರ ಸಂಬಂಧವನ್ನು ಕಾಪಾಡಿಕೊಳ್ಳುತ್ತೇವೆ.

ಓದುಗರಿಗೆ ನಮ್ಮ ಸಂದೇಶವೇನು?

ಧ್ವನಿಪೆಟ್ಟಿಗೆಯ ಕ್ಯಾನ್ಸರ್‌ ಚಿಕಿತ್ಸೆ ನೀಡಬಹುದಾದ ಸ್ಥಿತಿಯಾಗಿದೆ ಮತ್ತು ರೋಗದ ಆರಂಭಿಕ ಹಂತಗಳಲ್ಲಿ ಚಿಕಿತ್ಸೆ ಫಲಪ್ರದವಾಗುವ ಅವಕಾಶಗಳು ಹೆಚ್ಚು. ರೋಗದ ಆರಂಭಿಕ ಹಂತದಲ್ಲಿ ಚಿಕಿತ್ಸೆಯನ್ನು ಪಡೆಯುವುದರಿಂದ ಮಾತು ಮತ್ತು ಆಹಾರ ನುಂಗುವಿಕೆಗೆ ಸಂಬಂಧಿಸಿದಂತೆ ಜೀವನದ ಗುಣಮಟ್ಟದಲ್ಲಿ ಹೆಚ್ಚು ಪರಿಣಾಮ ಬೀರುವುದಿಲ್ಲ. ಆದ್ದರಿಂದ ಎರಡರಿಂದ ಮೂರು ವಾರಗಳಿಗಿಂತ ಹೆಚ್ಚು ಕಾಲ ಧ್ವನಿ ಬದಲಾವಣೆಯನ್ನು ಹೊಂದಿರುವ ಯಾವುದೇ ವ್ಯಕ್ತಿಯು ತಜ್ಞರಿಂದ ತಪಾಸಣೆಗೆ ಒಳಗಾಗಬೇಕು. ನಿರ್ದಿಷ್ಟವಾಗಿ ಧೂಮಪಾನಿಗಳು ಅಥವಾ ನುಂಗಲು ಅಥವಾ ಉಸಿರಾಟದ ಸಂಬಂಧಿತ ಸಮಸ್ಯೆಗಳಿರುವ ಜನರು ಆದಷ್ಟು ಬೇಗ ಆಸ್ಪತ್ರೆಗೆ ಭೇಟಿ ನೀಡಬೇಕು ಮತ್ತು ತಜ್ಞರ ಅಭಿಪ್ರಾಯವನ್ನು ಪಡೆಯಬೇಕು. ನೆನಪಿಡಿ, ಧ್ವನಿ ಬದಲಾವಣೆಯು ಸಾರ್ವಕಾಲಿಕ ಕ್ಯಾನ್ಸರ್‌ ಅನ್ನು ಸೂಚಿಸುವುದಿಲ್ಲ. ಆದರೆ ಸಂಬಂಧಪಟ್ಟ ತಜ್ಞ ವೈದ್ಯರು ದೃಢೀಕರಿಸದ ವಿನಾ ಖಚಿತವಾಗಿರಲು ಯಾವುದೇ ಮಾರ್ಗವಿಲ್ಲ. ಅಲ್ಲದೆ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವ ಮೂಲಕ ಲಾರಿಂಜಿಯಲ್‌ ಕ್ಯಾನ್ಸರ್‌ ಅನ್ನು ತಡೆಯಬಹುದು.

-ಡಾ| ದೇವರಾಜ ಕೆ.,

ಅಸೋಸಿಯೇಟ್‌ ಪ್ರೊಫೆಸರ್‌,

ತಲೆ ಮತ್ತು ಕುತ್ತಿಗೆ ಶಸ್ತ್ರಚಿಕಿತ್ಸೆಯ ವಿಭಾಗ,

ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ತಲೆ ಮತ್ತು ಕುತ್ತಿಗೆ ಶಸ್ತ್ರಚಿಕಿತ್ಸೆಯ ವಿಭಾಗ , ಕೆಎಂಸಿ, ಮಾಹೆ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next