Advertisement

ಕ್ಯಾನ್ಸರ್‌ಗೆ ಮದ್ದು ಸದಾಪುಷ್ಪ

05:41 AM Nov 09, 2018 | Karthik A |

ಹೊಸದಿಲ್ಲಿ: ಕರಾವಳಿಯಲ್ಲಿ ಸದಾಪುಷ್ಪ, ನಿತ್ಯಪುಷ್ಪ ಎನ್ನಲಾಗುವ ಬಟ್ಟಲು ಹೂವಿನ ಗಿಡದಲ್ಲಿ ಕ್ಯಾನ್ಸರ್‌ ಹಾರಕ ಗುಣಗಳಿವೆ ಎಂಬ ಅಂಶ ಈಗ ಬಯಲಾಗಿದೆ. ಕ್ಯಾನ್ಸರ್‌ ಜೀವಾಣು ಪತ್ತೆ ಹಾಗೂ ನಾಶ ಕಾರ್ಯವನ್ನು ಏಕಕಾಲದಲ್ಲಿ ನಿರ್ವಹಿಸಬಲ್ಲ ಚಿಕಿತ್ಸಾ ವಿಧಾನವನ್ನು ರೂರ್ಕಿ ಐಐಟಿಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದು, ಇದರಲ್ಲಿ ನಿತ್ಯಪುಷ್ಪ ಗಿಡದ ಕಾರ್ಬನ್‌ ಬಳಕೆಯಾಗುತ್ತದೆ. ಇದಕ್ಕೆ ಕಾರ್ಬನ್‌ ನ್ಯಾನೋಡಾಟ್ಸ್‌ ವಿಧಾನ ಎಂದು ಹೆಸರಿಡಲಾಗಿದೆ. ರೋಸಿ ಪೆರಿವಿಂಕಲ್‌ ಅಥವಾ ಸದಾಪುಷ್ಪದ ಗಿಡದ ಎಲೆಗಳ ಇಂಗಾಲದಿಂದ ಈ ತಂತ್ರಜ್ಞಾನ ಅಭಿವೃದ್ಧಿಗೊಂಡಿರುವುದು ವಿಶೇಷ. ಈ ಅಣುಗಳನ್ನು ನ್ಯಾನೋ ರೂಪಕ್ಕೆ ಇಳಿಸಿದಾಗ ಅವು ಕ್ಯಾನ್ಸರ್‌ ಪತ್ತೆ ಹಾಗೂ ಚಿಕಿತ್ಸೆಯ ಗುಣ ಪಡೆಯುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Advertisement

ವಿಜ್ಞಾನ ಮತ್ತು ಸಂಶೋಧನ ಮಂಡಳಿ (ಎಸ್‌ಇಆರ್‌ಬಿ) ಹಾಗೂ ಬಯೋ ಟೆಕ್ನಾಲಜಿ (ಡಿಬಿಟಿ), ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯಗಳ ನೆರವಿನಿಂದ ಕೈಗೊಳ್ಳಲಾಗಿದ್ದ ಸಂಶೋಧನೆಯಿಂದ ಸದ್ಯಕ್ಕೆ ಈ ಹೊಸ ಇಂಗಾಲದ ಅಣು ಪತ್ತೆ ಆಗಿದೆಯಷ್ಟೆ. ಈ ಹೊಸ ವಿಧಾನ ಕ್ಯಾನ್ಸರ್‌ ಚಿಕಿತ್ಸಾ ಕ್ಷೇತ್ರದಲ್ಲಿ ಹೊಸ ಅಧ್ಯಾಯ ತೆರೆಯಲಿದೆ ಎಂದು ವಿಜ್ಞಾನಿಗಳು ಆಶಿಸಿದ್ದಾರೆ.

ಏನಿದು ರೋಸಿ ಪೆರಿವಿಂಕೆಲ್‌?
ಅದರ ನಿಜವಾದ ವೈಜ್ಞಾನಿಕ ಹೆಸರು ಕ್ಯಾಥರಂಥಸ್‌ ರೋಸಿಯಸ್‌. ಇದಕ್ಕೆ ಮಡಗಾಸ್ಕರ್‌ ಪೆರಿವಿಂಕಲ್‌ ಅಥವಾ ರೋಸಿ ಪೆರಿವಿಂಕಲ್‌ ಎಂಬ ಇನ್ನೆರಡು ಹೆಸರುಗಳಿವೆ. ಇದು ಅಪೊಸಿನಾಕೆ ಎಂಬ ಪ್ರಭೇದಕ್ಕೆ ಸೇರಿದ ಸಸ್ಯ. ಉತ್ತರ ಕರ್ನಾಟಕದಲ್ಲಿ ಆಡುಭಾಷೆಯಲ್ಲಿ ಇದನ್ನು ಬಟ್ಟಲು ಹೂವಿನ ಗಿಡ ಎಂದೂ ಬಯಲು ಸೀಮೆಯ ಕಡೆ ಕಾಶಿ ಕಣಗಲೆ ಅಥವಾ ಬಸವನ ಪಾದದ ಹೂವಿನ ಗಿಡ ಎಂದೂ ಕರಾವಳಿ ಹಾಗೂ ಮಲೆನಾಡು ಕಡೆ ನಿತ್ಯ ಪುಷ್ಪ, ಸದಾ ಪುಷ್ಟ ಎಂದೂ ಕರೆಯಲಾಗುತ್ತದೆ. 

ತುಮಕೂರು, ಚಿತ್ರದುರ್ಗ, ದಾವಣಗೆರೆ, ಧಾರವಾಡ ಸಹಿತ ಬಯಲು ಸೀಮೆಯಲ್ಲಿ  ಶಿವನ ಪೂಜೆಗೆ ಶ್ರೇಷ್ಠವಾದ ಹೂವು ಎಂಬ ಪ್ರತೀತಿ ಇರುವುದರಿಂದ ಈ ಹೂವಿಗೆ ಮಹತ್ವವಿದೆ. ಅಲ್ಲದೆ ಕೆಲವು ಕಡೆ ಇದನ್ನು ಔಷಧಿಯ ಕಾರಣಕ್ಕಾಗಿಯೂ ಬಳಸುವುದುಂಟು. ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಅದನ್ನು ಮನೆಯ ಬಾಗಿಲುಗಳಿಗೆ ಪೂಜನೀಯ ಭಾವದಿಂದ ಅರ್ಪಿಸುತ್ತಾರೆ.

ಸಾಮಾನ್ಯವಾಗಿ ನಾಲ್ಕರಿಂದ ಐದು ದಳದ ತೀರಾ ಕೋಮಲವಾದ ಹೂವುಗಳನ್ನು ಬಿಡುವ ಇದು, ನಿತ್ಯಹರಿದ್ವರ್ಣ ಹಾಗೂ ಔಷಧೀಯ ಸಸ್ಯವೆಂದು ಪರಿಗಣಿಸಲ್ಪಟ್ಟಿದ್ದು, ಭಾರತ ಮಾತ್ರವಲ್ಲದೆ ಆಸ್ಟ್ರೇಲಿಯಾ, ಮಲೇಷ್ಯಾ, ಪಾಕಿಸ್ಥಾನ, ಬಾಂಗ್ಲಾದೇಶಗಳಲ್ಲೂ ಕಂಡು ಬರುತ್ತದೆ. ಆಸ್ಟ್ರೇಲಿಯಾ ಹಾಗೂ ಕ್ವೀನ್ಸ್‌ಲ್ಯಾಂಡ್‌ಗಳಲ್ಲಿ ಇದರ ಕೃಷಿಯ ಮೂಲಕ ಇವನ್ನು ಅಗಾಧವಾಗಿ ಬೆಳೆಯಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next