ಉಡುಪಿ: ಕ್ಯಾನ್ಸರ್ ಚಿಕಿತ್ಸೆಯಲ್ಲಿ ಪ್ರಸ್ತುತ ಅಂಗ ಆಧಾರಿತ ಅಥವಾ ರೋಗ ಆಧಾರಿತ ವಿಧಾನವನ್ನು ಅನುಸರಿಸುತ್ತೇವೆ. ಆದರೆ ಔಷಧ ಮತ್ತು ಶಸ್ತ್ರ ಚಿಕಿತ್ಸೆಯನ್ನು ಒಳಗೊಂಡಂತೆ ಸಮಗ್ರ ರೋಗ ಆಧಾರಿತ ವಿಧಾನವನ್ನು ಅನುಸರಿಸುವುದು ಸರಿಯಾದ ಮಾರ್ಗ ಎಂದು ಮಣಿಪಾಲ ಮಾಹೆ ಸಹ ಕುಲಪತಿ ಡಾ| ಪೂರ್ಣಿಮಾ ಬಾಳಿಗಾ ಹೇಳಿದರು.
ಮಣಿಪಾಲದಲ್ಲಿ ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿ ಎರಡು ದಿನಗಳ ರಾಷ್ಟ್ರೀಯ ಸಮಾವೇಶ “ಬ್ರೆಸ್ಟ್‌ಕಾನ್ 18’ಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ವಿಕಿರಣ ಚಿಕಿತ್ಸೆ ಮತ್ತು ಕ್ಯಾನ್ಸರ್ ವಿಭಾಗದ ಉಪಶಮನ ಆರೈಕೆ ಹಾಗೂ ಆಪ್ತ ಸಮಾಲೋಚನೆ ಜತೆಯಾಗಿ ಇರು ತ್ತವೆ. ಇದು ರೋಗಿಗೆ ಉತ್ತಮ ಆರೈಕೆ ಯನ್ನು ಒದಗಿಸುತ್ತದೆ. ಮಣಿಪಾಲ ಆಸ್ಪತ್ರೆಯು ಶೀಘ್ರದಲ್ಲೇ ಕ್ಯಾನ್ಸರ್ ರೋಗಿಗಳಿಗೆ ಗೃಹ ಆರೈಕೆಯ ಸೇವಾ ಸೌಲಭ್ಯ ವನ್ನು ಪರಿಚಯಿಸಲಿದೆ ಎಂದರು.
ಕೆಎಂಸಿ ಡೀನ್ ಡಾ| ಪ್ರಜ್ಞಾ ರಾವ್ ಅವರು ಮಾತನಾಡಿ, ವೈಜ್ಞಾನಿಕ ಪ್ರಗತಿ ಮತ್ತು ತಂತ್ರಜ್ಞಾನಕ್ಕಿಂತಲೂ ಕ್ಯಾನ್ಸರ್ ತಜ್ಞರು ಅನುಸರಿಸುವ ಸಹಾನುಭೂತಿಯ ಚಿಕಿತ್ಸಾ ವಿಧಾನವು ರೋಗಿಯ ಮೇಲೆ ಹೆಚ್ಚು ಪ್ರಭಾವವನ್ನು ಬೀರುತ್ತದೆ, ಇದರಿಂದಾಗಿ ಉತ್ತಮ ಫಲಿತಾಂಶ ಉಂಟು ಮಾಡುತ್ತದೆ ಎಂದು ಹೇಳಿದರು.
ಭಾರತಾದ್ಯಂತದ ಕ್ಯಾನ್ಸರ್ ಔಷಧ, ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಮತ್ತು ಕ್ಯಾನ್ಸರ್ ವಿಕಿರಣ ಚಿಕಿತ್ಸೆ ಹಾಗೂ ಕ್ಯಾನ್ಸರ್ ವಿಭಾಗ ಕ್ಷೇತ್ರದಿಂದ ಸುಮಾರು 150 ತಜ್ಞರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ ಶೆಟ್ಟಿ, ಕರ್ನಾಟಕ ವೈದ್ಯಕೀಯ ಕೌನ್ಸಿಲ್ ಪ್ರತಿನಿಧಿ ಡಾ| ಪ್ರಶಾಂತ ಶೆಟ್ಟಿ, ಸಂಯೋಜಕ ಮುಖ್ಯಸ್ಥ, ಶಿರಡಿ ಸಾಯಿಬಾಬಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ವಿಕಿರಣ ಚಿಕಿತ್ಸೆ ಮತ್ತು ಕ್ಯಾನ್ಸರ್ ವಿಭಾಗದ ಮುಖ್ಯಸ್ಥ ಡಾ| ಕೃಷ್ಣ ಶರಣ್, ವೈದ್ಯಕೀಯ ಕ್ಯಾನ್ಸರ್ ವಿಭಾಗದ ಮುಖ್ಯಸ್ಥ ಡಾ| ಕಾರ್ತಿಕ್ ಉಡುಪ, ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ| ಶತಾದ್ರು ರೇ ಉಪಸ್ಥಿತರಿದ್ದರು.