ಕಲಬುರಗಿ: ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ನಗರದಲ್ಲಿ ರವಿವಾರ ಎಚ್ ಸಿಜಿ ಕ್ಯಾನ್ಸರ್ ಆಸ್ಪತ್ರೆ ಹಾಗೂ ಕಲಬುರಗಿ ಸೈಕ್ಲಿಂಗ್ ಕ್ಲಬ್ ಸಹಯೋಗದಲ್ಲಿ ನಡೆದ ಸೈಕ್ಲೋಥಾನ್ ಗಮನ ಸೆಳೆಯಿತು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಸೈಕಲ್ ಜಾಥಾಕ್ಕೆ ಚಾಲನೆ ನೀಡಿದರು. ಅಲ್ಲಿಂದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದ ಮೂಲಕ ಎಚ್‌ಸಿಜಿ ಕ್ಯಾನ್ಸರ್ ಕೇಂದ್ರದವರೆಗೆ ತಲುಪಿ ಜಾಥಾ ಸಮಾರೋಪಗೊಂಡಿತು.
ಸುಮಾರು 50 ಕ್ಯಾನ್ಸರ್ ತಜ್ಞ ವೈದ್ಯರು ಸೇರಿದಂತೆ ಹಲವರು ಸೈಕ್ಲಿಸ್ಟ್‌ಗಳು ಜಾಥಾದಲ್ಲಿ ಭಾಗವಹಿಸಿ, ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ ಮೂಡಿಸಿದರು. ಕ್ಯಾನ್ಸರ್ ತಡೆಗಟ್ಟಲು ಉತ್ತಮವಾದ ಚಿಕಿತ್ಸೆ ಪಡೆಯುವುದು ಅಗತ್ಯವಾಗಿದೆ. ಉತ್ತಮ ಭವಿಷ್ಯಕ್ಕಾಗಿ ಆರೋಗ್ಯಕರ ಜೀವನ ಶೈಲಿ ಅನುಸರಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಶಿವಶರಣಪ್ಪ ಗಣಜಲಖೇಡ್ ಕೇಳಿದರು.
ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯ ರೇಡಿಯೇಷನ್ ಆಂಕೋಲಾಜಿಯ ಹಿರಿಯ ತಜ್ಞ ಡಾ| ಶಾಂತಲಿಂಗ ನಿಗ್ಗುಡಗಿ ಮಾತನಾಡಿ, ಇತ್ತೀಚೆಗೆ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸೈಕ್ಲೋಥಾನ್ ಆಯೋಜಿ ಸಲಾಗಿದೆ ಎಂದರು.
ಸೈಕಲ್ ಜಾಥಾದಲ್ಲಿ ಡಾ| ಶಿವಕುಮಾರ ದೇಶಮುಖ, ಡಾ| ಶರಣ ಹತ್ತಿ, ಡಾ| ನಂದೀಶಕುಮಾರ ಜೀವಂಗಿ, ಸೋಮನಾಥ, ವಿರೇಶ ಕಿರಣಗಿ, ವಿಶಾಲ ಜೆ.ಎಂ., ಕಿರಣಕುಮಾರ ಶೆಟಕಾರ, ವೈದ್ಯಕೀಯ ಸಿಬ್ಬಂದಿ, ಮಕ್ಕಳು ಪಾಲ್ಗೊಂಡಿದ್ದರು.