ಗಜೇಂದ್ರಗಡ: ಐತಿಹಾಸಿಕ ಹಿನ್ನೆಲೆಯ ಜೊತೆಗೆ ಲಕ್ಷಾಂತರ ಭಕ್ತಸಮೂಹದ ಆರಾಧ್ಯ ದೈವರಾದ ಸ್ವಯಂಭು ಲಿಂಗಸ್ವರೂಪಿ ಶ್ರೀ ಕಾಲಕಾಲೇಶ್ವರ ಜಾತ್ರಾ ಮಹೋತ್ಸವಕ್ಕೆ ಕೋವಿಡ್ 2ನೇ ಅಲೆ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ.
ಹಲವು ವಿಸ್ಮಯ, ವೈಶಿಷ್ಟತೆಗಳನ್ನು ಸೃಷ್ಟಿಸುವ ಮೂಲಕ ಭಕ್ತ ಸಮೂಹದ ಆರಾಧ್ಯ ದೈವರೆನಿಸಿರುವ ದಕ್ಷಿಣ ಕಾಶಿ ಪ್ರಸಿದ್ಧಿಯ ಶ್ರೀ ಕಾಲಕಾಲೇಶ್ವರರ ಮಹಾ ರಥೋತ್ಸವ ಏ. 27 ದವನದ ಹುಣ್ಣಿಮೆಯಂದು ನಡೆಯಬೇಕಿತ್ತು. ಇಡೀ ದೇಶದಲ್ಲಿ ಮಹಾಮಾರಿ ಕೋವಿಡ್ ಎರಡನೇ ಅಲೆ ತಾಂಡವಾಡುತ್ತಿರುವ ಹಿನ್ನಲ್ಲೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿಗೊಳಿಸಿದ್ದು, ಕೊರೊನಾ ವೈರಸ್ ಈ ಬಾರಿಯೂ ಜಾತ್ರೆಗೆ ಬ್ರೇಕ್ ಹಾಕಿದಂತಾಗಿದೆ.
ಜಾತ್ರಾ ವಿಧಿ ವಿಧಾನ: ಪ್ರತಿವರ್ಷ ಯುಗಾದಿ ಪಾಡ್ಯದಂದು ಸೂರ್ಯೋದಯಕ್ಕೂ ಮುನ್ನ ಆಲಯದಿಂದ ರಥವನ್ನು ಹೊರ ತಂದು ಪೂಜೆ ಸಲ್ಲಿಸಲಾಗಿದೆ. ಬಳಿಕ ವೃಷಭ ಧ್ವಜವನ್ನು ಮತ್ತು ಗರ್ಭ ಗುಡಿಯ ಮುಂದೆ ಭೋರಾದೇವಿಯನ್ನು ಸ್ಥಾಪಿಸಿದ ನಂತರ ರಂಗ ಮಂಟಪದ ಪೀಠದ ಮೇಲೆ ಶ್ರೀ ಕಾಲಕಾಲೇಶ್ವರ ಮತ್ತು ಭೋರಾದೇವಿಯ ಉತ್ಸವ ಮುರ್ತಿಗಳನ್ನಿರಿಸಿ ವಿವಾಹ ನೆರವೇರಿಸುತ್ತಾರೆ. ಅಲ್ಲಿಂದ ಆರಂಭವಾಗಿ ದವನದ ಹುಣ್ಣಿಮೆ ದಿನ ಸಂಜೆ ನೀಲಾಕಾಶದಲ್ಲಿ ನಕ್ಷತ್ರ ಗೋಚರ ಖಚಿತಗೊಂಡ ಕೂಡಲೇ ಧರ್ಮದರ್ಶಿ ಘೋರ್ಪಡೆ ವಂಶಜರು ಬಾನೆತ್ತರಕ್ಕೆ ತುಪಾಕಿ ಹಾರಿಸುತ್ತಲೆ ಹರ ಹರ ಮಹಾದೇವ ಎಂಬ ಸಹಸ್ರಾರು ಭಕ್ತರ ಹರ್ಷೋದ್ಘಾರದ ಕೂಗು ಮಾರ್ಧನಿಸುತ್ತಿದ್ದಂತೆ ಮಹಾ ರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಆದರೆ ಈ ಬಾರಿಯ ರಥೋತ್ಸವವನ್ನು ಸಂಪ್ರದಾಯ ಕಷ್ಟೆ ಪೂಜೆ ಸಲ್ಲಿಸಲಾಗುತ್ತದೆ.
ಕಾಲಕಾಲೇಶ್ವರ ಜಾತ್ರೆ ರದ್ದು: ಮಹಾಮಾರಿ ಕೊರೊನಾದಿಂದಾಗಿ ಈಗಾಗಾಲೇ ಧಾರ್ಮಿಕ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಲಾಗಿದೆ. ಇದೀಗ ಮಹಾ ರಥೋತ್ಸವವನ್ನು ನಡೆಸದಂತೆ ದೇಗುಲದ ಧರ್ಮದರ್ಶಿಗಳು ಮತ್ತು ತಾಲೂಕಾಡಳಿತ ನಿರ್ಧರಿಸಿದೆ. ಹೀಗಾಗಿ ಈ ಬಾರಿ ಜಾತ್ರಾ ವೈಭವಕ್ಕೆ ಕೊರೊನಾ ವೈರಸ್ ಕರಾಳತೆ ಆವರಿಸಿದಂತಾಗಿದೆ. ಬಿಕೋ ಎನ್ನುತ್ತಿರುವ ಕಾಲಕಾಲೇಶ್ವರ ಗ್ರಾಮ: ಪ್ರತಿ ವರ್ಷ ಯುಗಾದಿ ಪಾಡ್ಯದಿಂದ ಹಿಡಿದು ದವನದ ಹುಣ್ಣಿಮೆಯ ವರೆಗೂ ಕಾಲಕಾಲೇಶ್ವರ ಗ್ರಾಮ ಜನಜಂಗುಳಿಯಿಂದ ತುಂಬಿರುತ್ತಿತ್ತು. ಜಾತ್ರಾ ಮಹೋತ್ಸವದ ತಯಾರಿ ಮತ್ತು ಜಾತ್ರೆಯ ಭರಾಟೆ ನೋಡಲು ಕಣ್ಣೆರೆಡು ಸಾಲದು. ಆದರೆ ಈ ಬಾರಿ ಲಾಕ್‌ಡೌನ್ ಜಾರಿಯಿಂದಾಗಿ ಗ್ರಾಮದಲ್ಲಿ ಜಾತ್ರೆಯ ತಯಾರಿ ಕಳೆಗುಂದಿದೆ. ಗ್ರಾಮದಲ್ಲಿ ಯಾವೊಂದು ಅಂಗಡಿಗಳು ತೆರೆಯದೇ ಬಿಕೋ ಎನ್ನುತ್ತಿದೆ.