ಚನ್ನಪಟ್ಟಣ: ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಅವರನ್ನು ಗೆಲ್ಲಿಸುವ ಉದ್ದೇಶದಿಂದ ಸಚಿವ ಅಶ್ವತ್ಥನಾರಾಯಣ್ ಅವರು ಪೊಲೀಸರ ಮೇಲೆ ಒತ್ತಡ ಹೇರಿ, 17 ಮಂದಿ ಶಿಕ್ಷಕರ ಮೇಲೆ ಎಫ್ ಐಆರ್ ದಾಖಲಿಸಿದ್ದರು. ಶಿಕ್ಷಕರ ಪರ ಕಾನೂನು ಹೋರಾಟ ಮಾಡಿದ ಪರಿಣಾಮ, ನ್ಯಾಯಾಲಯ ಎಫ್ಐಆರ್ ವಜಾಮಾಡಿ ಆದೇಶಿಸಿದೆ ಎಂದು ಜೆಡಿಎಸ್ ಪಕ್ಷದ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಪಿ.ರಂಗನಾಥ್ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಸೆ.16ರಂದು ಹೈಕೋರ್ಟ್, ಶಿಕ್ಷಕರ ಮೇಲಿದ್ದ ಎಫ್ಐಆರ್ ವಜಾಮಾಡಿ, ಆದೇಶ ಹೊರಡಿಸಿದ್ದು, ಕಾನೂನಿನ ಹೋರಾಟದಲ್ಲಿ ಶಿಕ್ಷಕರಿಗೆ ನ್ಯಾಯ ಸಿಕ್ಕಿದೆ. ಆದರೆ, ಸಚಿವರು ಶಿಕ್ಷಕರ ಮೇಲೆ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ಸರ್ಕಾರದ ಆಡಳಿತ ಯಂತ್ರವನ್ನು ತಮ್ಮ ಸ್ವ ಪ್ರತಿಷ್ಟೆಗೆ ಬಳಸಿಕೊಳ್ಳುತ್ತಿದ್ದಾರೆ. ಭ್ರಷ್ಟಚಾರದಲ್ಲಿ ಮುಳುಗಿರುವ ಇಲಾಖೆ ಎಂದರೆ ಅದು ಶಿಕ್ಷಣ ಇಲಾಖೆ ಎಂದು ಆರೋಪಿಸಿದರು.
ಅಭಿವೃದ್ಧಿ ಕುಂಠಿತಗೊಳಿಸಲು ಕುಮ್ಮಕ್ಕು: ತಾಲೂಕಿನಲ್ಲೂ ಅಶ್ವತ್ಥ ನಾರಾಯಣ್ ಅವರು ಈ ಕ್ಷೇತ್ರದ ಅಭಿವೃದ್ಧಿಯನ್ನು ಕುಂಠಿತಗೊಳಿಸುವ ಸಲುವಾಗಿ ಕುಮ್ಮಕ್ಕಿನಿಂದ ಯೋಗೇಶ್ವರ್ ಅವರ ಮುಖಾಂತರ ಏನೇನು ಕಾಮಗಾರಿಗಳು ನಡೆಯುತ್ತಿವೆ. ಆ ಕಾಮಗಾರಿಗಳನ್ನು ತಡೆ ಹಿಡಿಯುತ್ತಿದ್ದಾರೆ. ಈಗಾಗಲೇ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರ ಪರ ನಾವು ಕಾನೂನು ಹೋರಾಟ ನಡೆಸಲು ಸಿದ್ಧರಿದ್ದೇವೆ. ಚುನಾವಣೆ ಸಮೀಪ ಇರುವುದರಿಂದ ಕ್ಷೇತ್ರದ ಅಭಿವೃದ್ಧಿಯನ್ನು ಕುಂಠಿತ ಗೊಳಿಸಬೇಕೆನ್ನುವ ದುರುದೇಶದಿಂದ ಈ ರೀತಿಯ ಕುತಂತ್ರದ ರಾಜಕಾರಣ ಮಾಡಿಕೊಂಡು ಬರುತ್ತಿದ್ದಾರೆ ಎಂದು ಆರೋಪ ಮಾಡಿದರು.
ತಾಲೂಕಿನ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರನ್ನು ಅಕಡಮಿಕ್ ಮಧ್ಯದಲ್ಲಿ ವರ್ಗಾವಣೆ ಮಾಡಿದ್ದಾರೆ. ಅಕೆಡಾಮಿಕ್ ಮಧ್ಯದಲ್ಲಿ ವರ್ಗಾವಣೆ ಮಾಡುವ ಕಾನೂನು ಇಲ್ಲ. ಆದರೆ, ಕಾನೂನನ್ನು ಗೌರವಿಸಿದ ಇವರು ಅಧಿಕಾರವನ್ನು ಈ ರೀತಿಯಲ್ಲಿ ದುರ್ಬಳಕೆ ಮಾಡುತ್ತಿದ್ದಾರೆ. ಈ ಎಲ್ಲಾ ವಿಚಾರವಾಗಿ ನಾವು ಕಾನೂನು ಹೋರಾಟದ ಮೂಲಕ ಉತ್ತರ ನೀಡುತ್ತೇವೆ ಎಂದು ಹೇಳಿದರು.
ತಾಲೂಕು ಹಿರಿಯ ಜೆಡಿಎಸ್ ಮುಖಂಡ ಕರಿಯಪ್ಪ, ರೇಖಾ ಉಮಾಶಂಕರ್, ಕಸಬಾ ಪ್ರಾಥಮಿಕ ಕೃಷಿ ಉತ್ಪನ್ನ ಸಹಕಾರ ಸಂಘದ ಅಧ್ಯಕ್ಷ ಆತ್ಮರಾಮು, ಬಿಳಿಯಪ್ಪ, ಕೆಂಗಲ್‌ವುೂರ್ತಿ, ಕೂಡ್ಲೂರು ಸಿದ್ದರಾಮು ಹಾಜರಿದ್ದರು.