Advertisement

ನದಿಗೆ ಕೊಳಚೆ ನೀರು ಬಿಡುವ ಹೊಟೇಲ್‌ ಪರವಾನಿಗೆ ರದ್ದು

10:37 PM Jun 12, 2019 | Team Udayavani |

ಅರಂತೋಡು: ಸಂಪಾಜೆ ಗ್ರಾ.ಪಂ.ನ ಸಾಮಾನ್ಯ ಸಭೆ ಗ್ರಾ.ಪಂ. ಅಧ್ಯಕ್ಷೆ ಸುಂದರಿ ಮುಂಡಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕೊಳಚೆ ನೀರನ್ನು ನದಿಗೆ ಬಿಡುವ ಹೊಟೇಲ್‌ಗ‌ಳ ಪರವಾನಿಗೆಯನ್ನು ರದ್ದು ಮಾಡುವ ನಿರ್ಣಯವನ್ನು ಕೈಗೊಳ್ಳಲಾಯಿತು.

Advertisement

ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಛ ಮೇವ ಜಯತೇ ಕಾರ್ಯಕ್ರಮ ಹಮ್ಮಿಕೊಳ್ಳಲು, ಪೇಟೆಯಲ್ಲಿ ಹೆಚ್ಚು ಕಸ ಉತ್ಪತ್ತಿಯಾಗುವ ಹೊಟೇಲ್‌, ಕೋಳಿ ಹಾಗೂ ಮಾಂಸದ ಅಂಗಡಿಗಳ ಮೇಲೆ ನಿಗಾ ಇಡುವುದು, ನದಿಗೆ ನೀರು ಬಿಡುವ ಹೊಟೇಲ್‌ ಪರವಾನಿಗೆ ರದ್ದು, ವಾಣಿಜ್ಯ ಕಟ್ಟಡದಲ್ಲಿ ಶೌಚಾಲಯ ಕಡ್ಡಾಯ ಇಲ್ಲದಿದ್ದರೆ ತೆರಿಗೆ ವಿಧಿಸದಿರುವುದು, ವಿದ್ಯುತ್‌ ಎನ್‌ಒಸಿ ನೀಡದೆ ಇರಲು ತೀರ್ಮಾನಿಸಲಾಯಿತು.

ಚಟ್ಟೆಕಲ್ಲು ಹಾಗೂ ಆಲಡ್ಕ ರಸ್ತೆಯಲ್ಲಿ ಇರುವ ಅಪಾಯಕಾರಿ ಮರ ತೆರವುಗೊಳಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲು ಹಾಗೂ ಅನಧಿಕೃತ ಕಟ್ಟಡದ ಮೇಲೆ ಸರಕಾರದ ಸುತ್ತೋಲೆಯಂತೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು. ಕುಡಿಯುವ ನೀರಿನ ಬಿಲ್‌ ಪಾವತಿಗೆ ಬಾಕಿ ಇರುವವರ ವಸೂಲಾತಿ, ವಸೂಲಾತಿಗೆ ಕಮಿಷನ್‌ ಆಧಾರದಲ್ಲಿ ನೇಮಕಾತಿ, ಅನಧಿಕೃತ ಸಂಪರ್ಕ ಕಡಿತ ಹಾಗೂ ಪಂಚಾಯತ್‌ನ ಅಧಿಕೃತ ಪೈಪು ರಿಪೇರಿಯವರ ಮೂಲಕವೇ ಪೈಪು ದುರಸ್ತಿಪಡಿಸುವುದೆಂದು ನಿರ್ಣಯಿಸಲಾಯಿತು.

ಮೇಲಧಿಕಾರಿಗಳಿಗೆ ಪತ್ರ
ಕಲ್ಲುಗುಂಡಿ ಆರ್‌.ಎಂ.ಎಸ್‌.ಎ. ಪ್ರೌಢಶಾಲೆ ಖಾಯಂ ಮುಖ್ಯೋಪಾಧ್ಯಾಯರ ನೇಮಕ್ಕೆ ಡಿಡಿಪಿಐಗೆ ಬರೆದುಕೊಳ್ಳುವುದಾಗಿ ತೀರ್ಮಾನಿ ಸಲಾಯಿತು. ಸುಳ್ಯ ದಿಂದ ಸಂಪಾಜೆ ಭಾಗಕ್ಕೆ ಪೂರೈಕೆಯಾಗುತ್ತಿ ರುವ 11 ಕೆ.ವಿ. ಲೈನ್‌ ವ್ಯಾಪ್ತಿಯಲ್ಲಿ ಪದೇ ಪದೇ ವಿದ್ಯುತ್‌ ಕೈಕೊಡುವುದು, 33 ಕೆ.ವಿ. ಸಬ್‌ಸ್ಟೇಶನ್‌ ಸ್ಥಳಕ್ಕೆ ಇನ್ನೂ ಕೂಡ ಪಹಣಿ ದಾಖಲಾತಿ ಆಗದಿರುವುದನ್ನು ಸರಿಪಡಿಸಲು ಕಾರ್ಯ ಪಾಲಕ ಎಂಜಿನಿಯರ್‌ ಪುತ್ತೂರು ಹಾಗೂ ಮೇಲಾಧಿಕಾರಿಗಳ ಗಮನಕ್ಕೆ ಪತ್ರ ಮುಖೇನ ತಿಳಿಸಲು ನಿರ್ಣಯಿಸಲಾಯಿತು.

ಬಿಎಸ್ಸೆನ್ನೆಎಲ್‌ ಟವರ್‌ ಹಾಗೂ ಸ್ಥಿರ ದೂರವಾಣಿ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಸಂಸದರ, ಇಲಾಖೆಯ ಗಮನಕ್ಕೆ ತರುವುದು ಹಾಗೂ ಕಲ್ಲುಗುಂಡಿ ಮೊಬೈಲ್‌ ಟವರ್‌ನಲ್ಲಿ ದಿನಪೂರ್ತಿ ನೋ ಸಿಗ್ನಲ್‌ನಿಂದಾಗಿ ಆಗುತ್ತಿರುವ ತೊಂದರೆ ಬಗ್ಗೆ ನಿಗಮದ ಅಧಿಕಾರಿಗಳಿಗೆ ಪತ್ರ ಮುಖೇನ ತಿಳಿಸಲು ನಿರ್ಣಯಿಸಲಾಯಿತು.

Advertisement

ಕಲ್ಲುಗುಂಡಿ ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರಿಗೆ ಇರುವ ಏಕೈಕ ರಾಷ್ಟೀಕೃತ ಬ್ಯಾಂಕಿನಲ್ಲಿ ಸಾರ್ವಜನಿಕರು ಹೋದಾಗ ಸಿಬಂದಿ ಹಾಗೂ ಮ್ಯಾನೇಜರ್‌ ಸ್ಪಂದಿಸುತ್ತಿಲ್ಲ, ಎಟಿಎಂ ಸರಿ ಇಲ್ಲ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ನೀಡುತ್ತಿಲ್ಲ. ಮುದ್ರಾ ಯೋಜನೆಯ ಸೇವೆ ಇಲ್ಲ. ಈ ಕುರಿತು ಪತ್ರ ಮುಖೇನ ಮಂಗಳೂರಿನ ಎ.ಜಿ.ಎಂ. ಅವರಿಗೆ ತಿಳಿಸಲು ನಿರ್ಣಯಿಸಲಾಯಿತು.

ಸದಸ್ಯರಾದ ಸೋಮಶೇಖರ್‌ ಕೊಯಿಂಗಾಜೆ, ಜಿ.ಕೆ. ಹಮೀದ್‌ ಲುಕಾಸ್‌, ಅಬುಶಾಲಿ, ನಾಗೇಶ್‌ ಪಿ.ಆರ್‌., ಷಣ್ಮುಗಂ, ಸುಂದರ, ಉಷಾ, ಯಶೋದಾ ಕೆ.ಕೆ., ಆಶಾ ಎಂ.ಕೆ., ಪಿಡಿಒ ನಾಗರಾಜ್‌ ಉಪಸ್ಥಿತರಿದ್ದರು. ಲೆಕ್ಕ ಸಹಾಯಕಿ ಅನಿತಾ ವರದಿ ಮಂಡಿಸಿದರು.

ನಳ್ಳಿ ಸಂಪರ್ಕ ಕಟ್‌!
ಬೋರ್‌ವೆಲ್‌ ಸಂಪರ್ಕ ಹೊಂದಿರುವವರಿಗೆ ಪಂಚಾಯತ್‌ನಿಂದ ನೀಡಲಾಗುವ ನಳ್ಳಿ ಸಂಪರ್ಕ ಕಡಿತಗೊಳಿಸುವುದು. ದೀರ್ಘ‌ ಸಮಯದಿಂದ ಹಣ ಪಾವತಿ ಬಾಕಿ ಇರುವ ಸಂಪರ್ಕ ಕಡಿತಗೊಳಿಸುವುದರ ಬಗ್ಗೆ ಚರ್ಚಿಸಲಾಯಿತು. ಸಭಾಭವನವನ್ನು ಸಾರ್ವಜನಿಕ ಕಾರ್ಯಕ್ರಮಗಳಿಗೆ ವಾರ್ಷಿಕ ಗುತ್ತಿಗೆ ಆಧಾರದ ಮೇಲೆ ನೀಡಲು ನಿರ್ಧರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next