Advertisement

ರೈತರ ಅನಿರ್ದಿಷ್ಟಾವಧಿ ಧರಣಿಗೆ ಬ್ರೇಕ್‌

06:22 PM Jul 25, 2022 | Team Udayavani |

ಬಳ್ಳಾರಿ: ನಗರದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಕೇಂದ್ರ ಕಚೇರಿ ಎದುರು ರಾಜ್ಯ ರೈತ ಸಂಘ-ಹಸಿರುಸೇನೆಯಿಂದ ಕಳೆದ 27 ದಿನಗಳಿಂದ ನಡೆದ ಅನಿರ್ದಿಷ್ಟಾವಧಿ ಧರಣಿಯನ್ನು ಭಾನುವಾರ ತಾತ್ಕಾಲಿಕವಾಗಿ ಕೈಬಿಡಲಾಯಿತು. ಸಾಲಮನ್ನಾ ಸೇರಿ ರೈತರ ಬೇಡಿಕೆಗಳನ್ನು ಈಡೇರಿಸಲು ಬ್ಯಾಂಕ್‌ ಅಧಿಕಾರಿಗಳು ಒಂದು ತಿಂಗಳು ಗಡುವು ಕೇಳಿದ ಹಿನ್ನೆಲೆಯಲ್ಲಿ ಧರಣಿನಿರತ ರೈತ ಮುಖಂಡರು ಧರಣಿ ಕೈಬಿಟ್ಟಿದ್ದು, ಬೇಡಿಕೆ ಈಡೇರದಿದ್ದಲ್ಲಿ ಮತ್ತಷ್ಟು
ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡ, ಹಿರಿಯ ವಕೀಲ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಸಾರ್ವಜನಿಕರ ಠೇವಣಿ ಹಣದಿಂದ ನಡೆಯುವ ಬ್ಯಾಂಕ್‌ಗಳನ್ನು ಸಾರ್ವಜನಿಕರಿಗೆ ಮುಖ್ಯವಾಗಿ ಕೃಷಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ 1969ರಲ್ಲಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಲಾಯಿತು. ನಂತರ ಕೆನರಾ ಬ್ಯಾಂಕ್‌ ಪ್ರಾಯೋಜಕತ್ವದಲ್ಲಿ ಗ್ರಾಮೀಣ ಹೆಸರಲ್ಲಿ ರೈತರಿಗಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಸ್ಥಾಪನೆಗೊಂಡಿತು. ಆದರೆ, ಈವರೆಗೆ ಈ ಬ್ಯಾಂಕ್‌ನಲ್ಲಿ ರೈತರೇ ಹೆಚ್ಚು ಠೇವಣಿ ಇಟ್ಟಿದ್ದಾರೆ ಹೊರತು, ರೈತರಿಗಾಗಿ, ರೈತರ ಪರವಾಗಿ ಕೆಲಸ ಮಾಡಿಲ್ಲ ಎಂದು ದೂರಿದರು.

ರೈತರಿಗೆ ಕಳೆದ ಮೂರು ವರ್ಷಗಳಿಂದ ಸಮರ್ಪಕ ಬೆಳೆಯಿಲ್ಲ. ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಕ್ಕಿಲ್ಲ. ಹೀಗೆ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವ ರೈತರಿಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಸಾಲ ಮರುಪಾವತಿ ಮಾಡುವಂತೆ ನೋಟಿಸ್‌ ನೀಡಿದೆ. ಕೆಲ ತಿಂಗಳ ಹಿಂದೆ ಸಾಲಮನ್ನಾ ಮಾಡುವಂತೆ ರೈತರಿಂದ ಸುಮಾರು ಒಂದು ಸಾವಿರ ಅರ್ಜಿಗಳನ್ನು ಬ್ಯಾಂಕ್‌ಗೆ ಸಲ್ಲಿಸಲಾಗಿದೆ.

ಈ ಬಗ್ಗೆ ಬ್ಯಾಂಕ್‌ನವರು ಯಾವುದೇ ಕ್ರಮಕೈಗೊಂಡಿಲ್ಲ. ಬೆಳೆನಷ್ಟಕ್ಕೆ ಸಿಕ್ಕ ಅಲ್ಪಸ್ವಲ್ಪ ಪರಿಹಾರದ ಹಣ, ಕೇಂದ್ರ, ರಾಜ್ಯ ಸರ್ಕಾರಗಳ ಸಾಮಾಜಿಕ ಭದ್ರತಾ ಯೋಜನೆಗಳ ಮಾಸಾಶನದ ಹಣವನ್ನು ಸಹ ಬ್ಯಾಂಕ್‌ನವರು ಸಾಲಕ್ಕೆ ಜಮಾ ಮಾಡಿಕೊಂಡಿದ್ದಾರೆ. ಅಲ್ಲದೇ, ಇದೀಗ ಕೃಷಿ ಚಟುವಟಿಕೆಗಳು ಆರಂಭವಾಗುತ್ತಿದ್ದು, ಹೊಸ ಬೆಳೆ ಸಾಲ ನೀಡುವಂತೆ ಕೋರಿದರೂ ಬ್ಯಾಂಕ್‌ನವರು ನೀಡುತ್ತಿಲ್ಲ. ಹೀಗಾಗಿ ಕಳೆದ ಜೂನ್‌ 27 ರಿಂದ ಬ್ಯಾಂಕ್‌ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದೇವೆ ಎಂದವರು ತಿಳಿಸಿದರು.

ಎಸ್‌ಬಿಐ ಬ್ಯಾಂಕ್‌ ಮಾದರಿಯಲ್ಲಿ ಸಾಲದ ಶೇ.10 ರಷ್ಟನ್ನು ಉಳಿಸಿಕೊಂಡು ಉಳಿದ ಸಾಲವನ್ನು ಮನ್ನಾ ಮಾಡಬೇಕು. ರೈತರ ಸಾಲಕ್ಕೆ ಬಡ್ಡಿಗೆ ಬಡ್ಡಿ ವಿಧಿಸುವುದನ್ನು ಕೈಬಿಡಬೇಕು. ಕೃಷಿ ಚಟುವಟಿಕೆಗಾಗಿ ರೈತರಿಗೆ ಹೊಸ ಸಾಲ ನೀಡಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ನೀಡಿದ್ದ ಒಂದುತಿಂಗಳ ಗಡುವಿನಲ್ಲಿ ಬೇಡಿಕೆ ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರವಾಗಿ ಹೋರಾಟ ರೂಪಿಸಲಾಗುವುದು ಎಂದವರು ಎಚ್ಚರಿಸಿದರು.

Advertisement

ಬ್ಯಾಂಕ್‌ನವರೇ ಕಾರಣ: ಯಾವುದೇ ಬ್ಯಾಂಕ್‌ ನಿಯಮಗಳ ಪ್ರಕಾರ ಮೂರು ವರ್ಷಗಳೊಳಗೆ ಸಾಲ ಮರುಪಾವತಿಯಾಗಿಲ್ಲ ಎಂದರೆ ನ್ಯಾಯಾಲಯದ ಮೊರೆ ಹೋಗಬೇಕು. ಆದರೆ, ಬ್ಯಾಂಕ್‌ನವರು ಇದನ್ನು ಮಾಡದೆ, ಪ್ರತಿ ಮೂರು ವರ್ಷಕ್ಕೆ ಸಾಲ ಪಡೆದ ರೈತರಿಗೆ ಎಂಡೋಸೆ¾ಂಟ್‌ ಪಡೆದು, ಆ ಸಾಲವನ್ನು ವಿಸ್ತರಿಸಿಕೊಂಡು, ಇಂದು ರೈತರ ಸಾಲ ಲಕ್ಷಾಂತರೂ ಹೆಚ್ಚಳವಾಗಲು ಕಾರಣವಾಗಿದೆ.

ಅಲ್ಲದೇ, ರೈತರಿಗೆ ಕಳುಹಿಸುವ ನೋಟಿಸ್‌ ಶುಲ್ಕ 2 ಸಾವಿರ ರೂ.ಗಳನ್ನು ಸಹ ರೈತರ ಮೇಲೆಯೇ ವಿಧಿಸುತ್ತಾರೆ. ನಮ್ಮಂಥವರಿಗೆ ನೀಡಿದಲ್ಲಿ ಕೇವಲ 100 ರೂ.ಗಳಿಗೆ ನೋಟಿಸ್‌ ಕೊಡಿಸುತ್ತೇನೆ. ಆದರೆ, ಅವರು ನಮ್ಮಂತಹವರಿಗೆ ನೀಡಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಂಘದ ಕಾರ್ಯಾಧ್ಯಕ್ಷ ಆರ್‌.ಮಾಧವರೆಡ್ಡಿ ಮಾತನಾಡಿ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ರೈತರ ಸಾಲಕ್ಕೆ ಬಡ್ಡಿಗೆ ಬಡ್ಡಿ ವಿಧಿಸಲಾಗುತ್ತಿದೆ.

ತಾಲೂಕಿನ ಗೋಡೆಹಾಳ್‌ ಶಾಖೆಯಲ್ಲಿ 15 ವರ್ಷಗಳ ಹಿಂದೆ ಪಡೆದಿದ್ದ 1 ಲಕ್ಷಕ್ಕೆ 15 ಲಕ್ಷ ರೂ. ಬಡ್ಡಿ, 3.5 ಲಕ್ಷಕ್ಕೆ 36 ಲಕ್ಷ ರೂ. ಬಡ್ಡಿ ವಿಧಿಸಿ, ಪಾವತಿಸುವಂತೆ ರೈತರಿಗೆ ನೋಟಿಸ್‌ ನೀಡಲಾಗಿದೆ. ಈ ಮೊತ್ತವನ್ನು ಗಮನಿಸಿದಲ್ಲಿ ಬಡ್ಡಿಗೆ ಬಡ್ಡಿ ವಿಧಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದನ್ನು ಕೈಬಿಡಬೇಕು. ಅಲ್ಲದೇ, ನಿರ್ವಹಣಾ ವೆಚ್ಚವೆಂದು ಪ್ರತಿ ಮೂರು ತಿಂಗಳಿಗೊಮ್ಮೆ 800 ರೂ. ಗಳನ್ನು ಪಾವತಿಸಿಕೊಳ್ಳಲಾಗಿದೆ. ಇವೆಲ್ಲವುಗಳನ್ನು ಕೈಬಿಡಬೇಕು ಎಂದವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಅಸುಂಡಿ ಲೇಪಾಕ್ಷಿ, ರಾಧಾ ಧರಪ್ಪ ನಾಯಕ, ಮೀನಾಕ್ಷಿ, ಕಾಳಿದಾಸ್‌, ತಿಮ್ಮನಗೌಡ, ಬಸವರಾಜಸ್ವಾಮಿ, ನಾಗವೇಣಿ ಸೇರಿದಂತೆ ಹಲವರು ಇದ್ದರು.

ನೆರೆಯ ಕೊಪ್ಪಳ ಜಿಲ್ಲೆಯ ಕೇಸಲಾಪುರದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಶಾಖೆ ವ್ಯವಸ್ಥಾಪಕ ನೀಡಿದ್ದ ಸಲಹೆ, 21 ಲಕ್ಷ ರೂ. ಸಾಲದಿಂದ 21 ಎಕರೆ ಜಮೀನಿನಲ್ಲಿ ರೈತ ಮಲ್ಲಿಕಾರ್ಜುನ ಸ್ವಾಮಿ ಎನ್ನುವವರು 2009ರಲ್ಲಿ ದಾಳಿಂಬೆ ಬೆಳೆಯನ್ನು ನಾಟಿ ಮಾಡಲಾಗಿತ್ತು. ಆದರೆ, ಈ ಬೆಳೆಗೆ ದುಂಡಾಣು ರೋಗ ಬಂದು ಬೆಳೆ ಸಂಪೂರ್ಣ ನಾಶವಾಯಿತು. ಆದರೆ, ಬ್ಯಾಂಕ್‌ನವರು ಸಾಲ ಮರುಪಾವತಿಸುವಂತೆ ನೋಟಿಸ್‌ ನೀಡಿದ್ದು, 21 ಲಕ್ಷಕ್ಕೆ ಬಡ್ಡಿ ಸಮೇತ 43
ಲಕ್ಷ ರೂ. ಪಾವತಿಸಲಾಯಿತು. ಆದರೂ, ಸಾಲ ತೀರದೆ, ಇದೀಗ ಜಮೀನು ಹರಾಜು ಹಾಕಿ ಇನ್ನು 1.20 ಕೋಟಿ ರೂ. ಸಾಲವನ್ನು ಪಾವತಿಸುವಂತೆ ನೋಟಿಸ್‌ ನೀಡಲಾಗಿದೆ. ಆದರೆ, ಈ ಹೋರಾಟದಿಂದ ಆ ಹರಾಜಿಗೂ ಬ್ರೇಕ್‌ ಬಿದ್ದಿದೆ.
ಚಾ. ಮಲ್ಲಿಕಾರ್ಜುನ ರೆಡ್ಡಿ

Advertisement

Udayavani is now on Telegram. Click here to join our channel and stay updated with the latest news.

Next