ಬೆಂಗಳೂರು: ಟಿಪ್ಪು ಜಯಂತಿ ಆಚರಣೆ ರದ್ದುಗೊಳಿಸಿರುವ ರಾಜ್ಯ ಸರ್ಕಾರದ ನಡೆಗೆ ಸಾಹಿತ್ಯ ವಲಯದಿಂದ ಪರ ಮತ್ತು ವಿರೋಧದ ವ್ಯಕ್ತವಾಗಿದೆ. ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ, ಸಾಹಿತಿ ಎಸ್.ಆರ್.ಲೀಲಾ, ರಂಗ ನಿರ್ದೇಶಕ ಟಿ.ಎಸ್.ನಾಗಾಭರಣ ಸೇರಿದಂತೆ ಕೆಲವರು ಸರ್ಕಾರದ ನಡೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾದಂಬರಿಕಾರ ಕುಂ.ವೀರಭದ್ರಪ್ಪ, ಕವಿ ಸಿದ್ದಲಿಂಗಯ್ಯ, ಸಂಶೋಧಕ ಚಂದ್ರಶೇಖರ ಪಾಟೀಲ ಸೇರಿದಂತೆ ಹಲವರು ಸರ್ಕಾರದ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಟಿಪ್ಪು ದೇಶ ಪ್ರೇಮಿ ಅಲ್ಲ: ಟಿಪ್ಪು ಸ್ವಾತಂತ್ರ್ಯ ಪ್ರೇಮಿ ಅಲ್ಲ. ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ದೇಶವನ್ನು ಉಳಿಸಿಕೊಳ್ಳಲು ಹೋರಾಟ ಮಾಡಿದ್ದರೆ ಇತ್ತ ಟಿಪ್ಪು, ನಮ್ಮ ಮೈಸೂರು ರಾಜರ ವಿರುದ್ಧ ಹೋರಾಟ ನಡೆಸಿ, ಅವರನ್ನು ಬದಿಗೊತ್ತಿ, ರಾಜನಾದ. ಈತ ಅನ್ಯ ಧರ್ಮದ ದ್ವೇಷಿ ಎನ್ನುವುದಕ್ಕೆ ನೂರಾರು ಆಧಾರಗಳಿವೆ. ಹೀಗಾಗಿ, ಸರ್ಕಾರದ ನಿರ್ಧಾರ ಸರಿಯಾಗಿದೆ ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಹೇಳಿದ್ದಾರೆ.
“ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, ಟಿಪ್ಪು ಸ್ವತಃ ತಾನೇ ಬರೆದಿರುವ ಪತ್ರದಲ್ಲಿ ಹಿಂದೂಗಳನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲಬೇಕು ಎಂದು ಆದೇಶ ಮಾಡಿದ್ದಾನೆ. ಅವನ ಖಡ್ಗದ ಮೇಲೆ ಮುಸಲ್ಮಾನರಲ್ಲದವರನ್ನು ಕೊಲ್ಲಲು ಗರ್ಜಿಸುತ್ತಿದೆ ಎಂದು ಬರೆಯಲಾಗಿದೆ. ಇಂತಹ ಅನೇಕ ಆಧಾರಗಳನ್ನು ಇರಿಸಿಕೊಂಡು ನಾನು ಕೃತಿ ರಚನೆ ಮಾಡಿದ್ದೆ ಎಂದು ತಿಳಿಸಿದರು.
ಸಾಹಿತಿ ಡಾ.ಎಸ್.ಆರ್.ಲೀಲಾ ಮಾತನಾಡಿ, ಮೊದಲು ಸಣ್ಣ ಪ್ರಮಾಣದಲ್ಲಿ ಜಯಂತಿ ನಡೆಯುತ್ತಿತ್ತು. ಒಂದು ಸಮುದಾಯದವರು ಮಾತ್ರ ಇದನ್ನು ಆಚರಿಸುತ್ತಿದ್ದರು. ಆದರೆ, ಇದನ್ನು ಸರ್ಕಾರದ ವತಿಯಿಂದ ಆಚರಿಸಿದ್ದು ತಪ್ಪು. ಸಿಎಂ ಬಿ.ಎಸ್.ಯಡಿಯೂರಪ್ಪ ಸರ್ಕಾರ ಉತ್ತಮ ನಿರ್ಧಾರ ತೆಗೆದು ಕೊಂಡಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಹಿಂದೂ ದೇವಾಲಯಗಳಿಗೂ ಕೊಡುಗೆ: ಟಿಪ್ಪು ಸುಲ್ತಾನ್ ಜಾತ್ಯಾತೀತ ವ್ಯಕ್ತಿ. ಆತ ಜಾತ್ಯಾತೀತ ಮನುಷ್ಯನಾಗಿದ್ದ ಎಂಬುವುದಕ್ಕೆ ಹಲವಾರು ಉದಾಹರಣೆಗಳಿವೆ. ನಾಡಿನ ಹಲವು ಹಿಂದೂ ದೇವಾಲಗಳ ಅಭಿವೃದ್ಧಿಗೂ ಟಿಪ್ಪು ಕೊಡುಗೆ ನೀಡಿದ್ದಾನೆ ಎಂಬುದನ್ನು ಮರೆಯುವಂತಿಲ್ಲ ಎಂದು ಕಾದಂಬರಿಕಾರ ಕುಂ.ವೀರಭದ್ರಪ್ಪ ಹೇಳಿದ್ದಾರೆ.
ಕರ್ನಾಟಕಕ್ಕೆ ಅದ್ಭುತವಾದ ಸ್ವರೂಪವನ್ನು ಕೊಟ್ಟ ವ್ಯಕ್ತಿ ಟಿಪ್ಪು. ಅಷ್ಟೇ ಅಲ್ಲ, ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಕನ್ನಡದ ವೀರ. ಇದು ಕೆಲವರಿಗೆ ಅರ್ಥವಾಗುವುದಿಲ್ಲ. ಟಿಪ್ಪು ಸುಲ್ತಾನ್‌ನನ್ನು ಒಂದು ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ ಎಂದಿದ್ದಾರೆ. ಕವಿ ಸಿದ್ದಲಿಂಗಯ್ಯ ಪ್ರತಿಕ್ರಿಯಿಸಿ, ಈ ನಾಡಿಗೆ ಟಿಪ್ಪು ಸುಲ್ತಾನ್ ನೀಡಿರುವ ಕೊಡುಗೆ ಅಪಾರ. ಯಾವುದೇ ಸರ್ಕಾರಗಳಾಗಿರಲಿ ಟಿಪ್ಪುವಿನಂತವರಿಗೆ ಅಗೌರವ ತೋರಿಸುವ ಕೆಲಸ ಮಾಡಬಾರದು ಎಂದು ಹೇಳಿದ್ದಾರೆ.
ಟಿಪ್ಪು ಸುಲ್ತಾನ್ ಜಯಂತಿ ಅಷ್ಟೇ ಅಲ್ಲ, ಜಾತಿವಾರು ಎಲ್ಲಾ ಜಯಂತಿಗಳನ್ನು ಸರ್ಕಾರ ರದ್ದುಗೊಳಿಸಬೇಕು.
-ಟಿ.ಎಸ್.ನಾಗಾಭರಣ, ರಂಗ ನಿರ್ದೇಶಕ