ಧಾರವಾಡ: ಕೆಪಿಎಂಇ ಕಾಯ್ದೆಯಡಿ ನೋಂದಣಿಯಾಗಿರುವ ಖಾಸಗಿ ವೈದ್ಯರು ತಮ್ಮ ಆಸ್ಪತ್ರೆಗಳನ್ನು ತೆರೆದು ಕೋವಿಡ್ ಯೇತರವಾದ ಉಳಿದ ಖಾಯಿಲೆಗಳಿಗೆ ಚಿಕಿತ್ಸೆ ನೀಡಿ ಜನರ ನೆರವಿಗೆ ಬರಬೇಕು. ಇದಕ್ಕೆ ಸಹಕಾರ ನೀಡದಿದ್ದರೆ ಅವರ ವೈದ್ಯಕೀಯ ನೋಂದಣಿ ರದ್ದುಗೊಳಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಎಚ್ಚರಿಕೆ ನೀಡಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಕೋವಿಡ್ ನಿಯಂತ್ರಣ ಚಟುವಟಿಕೆಗಳ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು. ಖಾಸಗಿ ವೈದ್ಯರು ಮೊದಲಿನಂತೆ ತಮ್ಮ ಆಸ್ಪತ್ರೆಗಳನ್ನು ತೆರೆದು ಜನರ ಸಾಮಾನ್ಯ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಇದರಿಂದ ಸರಕಾರಿ ಆಸ್ಪತ್ರೆ ವೈದ್ಯರ ಮೇಲಿನ ಒತ್ತಡ ಕಡಿಮೆಯಾಗಿ, ಕೋವಿಡ್ ಪ್ರಕರಣಗಳಿಗೆ ಆದ್ಯತೆ ನೀಡಲು ಅನುಕೂಲವಾಗುತ್ತದೆ. ಈಗಾಗಲೇ ರಾಜ್ಯ ಸರ್ಕಾರ ಆರೋಗ್ಯ ಇಲಾಖೆ ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಜಿಲ್ಲಾಡಳಿತ ಈ ಕುರಿತು ವೈದ್ಯರಿಗೆ ಸಭೆ ನಡೆಸಿ ಮನವಿ ಮಾಡಿದ್ದರೂ ಎಲ್ಲ ಖಾಸಗಿ ವೈದ್ಯರು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಹೀಗಾಗಿ ಜನರಿಗೆ ಸೇವೆ ನೀಡುತ್ತಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಬರುತ್ತಿವೆ. ಶೀಘ್ರದಲ್ಲಿ ಸಭೆ ನಡೆಸಿ ಸೇವೆ ನೀಡದ ಖಾಸಗಿ ವೈದ್ಯರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕೋವಿಡ್ 19 ವೈರಸ್ ಗ್ರಾಮೀಣ ಭಾಗಕ್ಕೆ ವ್ಯಾಪಿಸಿದರೆ ಅದು ಸಮುದಾಯದಲ್ಲಿ ಹರಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಹಾಟ್‌ಸ್ಪಾಟ್ ಕಂಟೈನ್‌ಮೆಂಟ್ ವಲಯ, ಬಫರ್ ವಲಯಗಳಲ್ಲಿ ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದ ಸಚಿವರು, ಆರೋಗ್ಯ ಇಲಾಖೆಯು ರಕ್ತ ಸಂಗ್ರಹಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ರಕ್ತ ಸಂಗ್ರಹದ ಶಿಬಿರಗಳನ್ನು ಆಯೋಜಿಸುವ ಮೂಲಕ ಹೆಚ್ಚು ರಕ್ತ ಸಂಗ್ರಹ ಮಾಡಿ ಕೊರತೆ ಉಂಟಾಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ಸೂಚಿಸಿದರು.
ಡಿಸಿ ದೀಪಾ ಚೋಳನ್ ಮಾತನಾಡಿ, ಜಿಲ್ಲೆಯಲ್ಲಿ 1.60 ಲಕ್ಷ ದುರ್ಬಲ ಗುಂಪಿನ ಜನಸಂಖ್ಯೆಯಿದೆ. ಆಶಾ ಕಾರ್ಯಕರ್ತೆಯರು ಸಮೀಕ್ಷೆ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಆಸ್ಪತ್ರೆ ಸ್ಥಾಪಿಸಿದ್ದು, ಅಲ್ಲಿ 95 ವೆಂಟಿಲೆಟರ್ ಗಳಿವೆ. ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ 87 ವೆಂಟಿಲೆಟರ್‌ಗಳಿವೆ ಎಂದು ತಿಳಿಸಿದರು. ಮಹಾನಗರ ಪೊಲೀಸ್ ಆಯುಕ್ತ ಆರ್. ದೀಲಿಪ್ ಮಾತನಾಡಿ, ಲಾಕ್ ಡೌನ್ ಸಡಿಲಿಕೆಯಿಂದ ಜನರ ಓಡಾಟ ಹೆಚ್ಚಾಗಿದೆ. ಅವಳಿನಗರದಲ್ಲಿ ಸಂಜೆ 7:00ರಿಂದ ಬೆಳಿಗ್ಗೆ 7:00ರ ವರೆಗೆ ಅನಾವಶ್ಯಕ ಓಡಾಟಕ್ಕೆ ಕಡಿವಾಣ ಹಾಕಿದ್ದು, ಬೈಕ್ ವಶಪಡಿಸಿಕೊಂಡು ದಂಡ ವಸೂಲಿ ಮಾಡಲಾಗಿದೆ. ಸಾರ್ವಜನಿಕರ ಸಂಚಾರ ನಿಯಂತ್ರಣದಲ್ಲಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ ಮಾತನಾಡಿ, ಹಾಟ್ ಸ್ಪಾಟ್, ಕಂಟೇನ್ಮೆಂಟ್ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮಾಸ್ಕ್ ಧರಿಸದ ವ್ಯಕ್ತಿಗಳಿಂದ ಈವರೆಗೆ 80 ಸಾವಿರ ರೂ.ಗಳಿಗೂ ಹೆಚ್ಚು ದಂಡ ವಸೂಲಿ ಮಾಡಲಾಗಿದೆ. ಅಂಗಡಿಗಳು ಸೇರಿದಂತೆ ವಿವಿಧ ವಾಣಿಜ್ಯ ಮಳಿಗೆಗಳಲ್ಲಿ ಸಾಮಾಜಿಕ ಅಂತರ ಕಾಪಾಡಲು, ಮಾಸ್ಕ್, ಸ್ಯಾನಿಟೈಸರ್ ಬಳಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಶಂಕರ ಪಾಟೀಲ್ ಮುನೇನಕೊಪ್ಪ, ಅಮೃತ ದೇಸಾಯಿ, ಎಸ್‌ಪಿ ವರ್ತಿಕಾ ಕಟಿಯಾರ, ಜಿಪಂ ಸಿಇಒ ಡಾ| ಬಿ.ಸಿ. ಸತೀಶ್, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಕಿಮ್ಸ್ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರಠಾಣೆ, ಕಿಮ್ಸ್ ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ಯಶವಂತ ಮದೀನಕರ, ಡಾ| ಶಿವಕುಮಾರ್ ಮಾನಕರ ಇದ್ದರು.