ಹೊಸಪೇಟೆ: ನೂತನ ಪಿಂಚಣಿ (ಎನ್.ಪಿ.ಎಸ್) ಯೋಜನೆಯನ್ನು ಕೂಡಲೇ ರದ್ದುಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅಖೀಲ ಕರ್ನಾಟಕ ರಾಜ್ಯ ಸರಕಾರ ನೌಕರರ ಒಕ್ಕೂಟದ ನೇತೃತ್ವದಲ್ಲಿ ಶಿಕ್ಷಕರು, ನಗ ರದ ತಹಶೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ತಹಶೀಲ್ದಾರ ಕಚೇರಿ ಆವರಣ ದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ಎನ್‌ಪಿಎಸ್ ಕೂಡಲೇ ರದ್ದು ಮಾಡಬೇಕು ಎಂದು ಆಗ್ರಹಿಸಿದರು. ಕೇಂದ್ರ ಸರಕಾರವು ಸಹ ಕಳೆದ ವರ್ಷ ಎನ್‌ಪಿಎಸ್ ಯೋಜನೆಯಡಿ ಸರಕಾರದವಂತಿಗೆಯನ್ನು ಶೇ. 14ಕ್ಕೆ ಹೆಚ್ಚಿಸಿತ್ತು.
ಇದರಿಂದ ಎನ್‌ಪಿಎಸ್ ನೌಕರರಿಗೆ ಯಾವುದೇ ರೀತಿಯಲ್ಲೂ ಪಿಂಚಣಿ ಗ್ಯಾರಂಟಿ ಸಿಗುತ್ತದೆಂಬ ಖಾತರಿಯಿಲ್ಲ. ಸರಕಾರ ನೀಡುವ ವಂತಿಗೆಯಪಾಲು ಜನರ ತೆರಿಗೆಯ ಹಣ, ಎನ್‌ಪಿಎಸ್ ಫಂಡ್ ಮ್ಯಾನೇಜರುಗಳಿಗೆ ಹೊಸ ಷೇರುಗಳನ್ನು ಖರೀದಿಸಲು ಈ ಹಣ ಉಪಯೋಗವಾಗುತ್ತದೆ.
ಬದಲಿಗೆ ನೌಕರರ ಕಿಸೆಯಿಂದ ಮತ್ತು ಸರಕಾರದ ಬೊಕ್ಕಸದಿಂದ ಹೆಚ್ಚಿನ ಹಣ ಕಟಾವುಗೊಂಡು ಪಿಎಫ್ಆರ್‌ಡಿಯ ಮೂಲಕ ಷೇರುಮಾರುಕಟ್ಟೆ ಹೂಡಿಕೆಗಾಗಿ ಹರಿದು ಹೋಗುತ್ತದೆಯಷ್ಟೆ. ಮುಂದೊಂದು ದಿನ ನೌಕರರ ವಂತಿಗೆ ಪಾಲನ್ನು ಕೂಡ ಶೇ. 14ಕ್ಕೆ ಹೆಚ್ಚಿಸಿ ಷೇರು ಮಾರಕಟ್ಟೆಗೆ ಸೇರಿಸುವ ಹುನ್ನಾರವಿದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೂತನ ಪಿಂಚಣಿ ಯೋಜನೆಯನ್ನು ಪರಿಶೀಲಿಸಲು ರಚಿಸಲಾಗಿರುವ ಅಧಿಕಾರಿಗಳ ಸಮಿತಿ ವರದಿಯನ್ನು ಶೀಘ್ರವಾಗಿ ನೀಡಬೇಕು. ಹಳೆಯ ನಿಶ್ಚಿತ ಪಿಂಚಣಿ ಮರುಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಗ್ರೇಡ್-2 ತಹಶೀಲ್ದಾರ್ ಅಮರನಾಥ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ತಾಲೂಕು ಅಧ್ಯಕ್ಷ ನಾಗರಾಜ ಪತ್ತಾರ, ಮುಖಂಡರಾದ ಜಂಬಯ್ಯನಾಯಕ, ತಾಯಪ್ಪ ನಾಯಕ, ಚಂದ್ರಪ್ಪ ಕಂಪ್ಲಿ, ಪ್ರಭು ಕಿಚಡಿ, ಜಿ.ಹನುಮಂತಪ್ಪ, ವಿಜಯ ಭಾಸ್ಕರ, ಬಿ.ಜೆ.ರಾಘವೇಂದ್ರ, ದಯಾನಂದ ಕಿನ್ನಾಳ್ ಇನ್ನಿತರರಿದ್ದರು.