Advertisement

ಆರೆಸ್ಸೆಸ್‌ ಉನ್ನತ ಮಟ್ಟದ ಸಭೆ ರದ್ದು

11:46 PM Mar 14, 2020 | Lakshmi GovindaRaj |

ಬೆಂಗಳೂರು: ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಉನ್ನತ ಮಟ್ಟದ ನೀತಿ ನಿರೂಪಣೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಅಖೀಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್‌) ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.

Advertisement

ಮಾ.15ರಿಂದ 17ರವರೆಗೆ ಬೆಂಗಳೂರಿನ ಚನ್ನೇನಹಳ್ಳಿಯಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಎಬಿಪಿಎಸ್‌ ಉದ್ಘಾಟನೆ ಯನ್ನು ಮಾ.15ರ ಬೆಳಗ್ಗೆ ಆರೆಸ್ಸೆಸ್‌ ಸರಸಂಘಚಾಲಕರಾದ ಮೋಹನ್‌ ಭಾಗವತ್‌ ಅವರು ಮಾಡಬೇಕಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಹಿತವಾಗಿ ವಿಶ್ವ ಹಿಂದೂ ಪರಿಷತ್‌, ಎಬಿವಿಪಿ, ಕಿಸಾನ್‌ ಸಂಘ, ಭಾರತೀಯ ಮಜ್ದೂರ್‌ ಸಂಘ ಸಹಿತವಾಗಿ ಆರೆಸ್ಸೆಸ್‌ನ ಪರಿವಾರ ಸಂಘಟನೆಯ ಪ್ರಮುಖರು ಭಾಗವಹಿಸುವವರಿದ್ದರು.

ಕೊರೊನಾ ಎಲ್ಲೆಡೆ ವ್ಯಾಪಿಸುತ್ತಿರುವುದರ ಜತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸುವ ಉದ್ದೇಶದಿಂದ ಎಬಿಪಿಎಸ್‌ ರದ್ದು ಮಾಡಲಾಗಿದೆ ಎಂದು ಸರಕಾರ್ಯವಾಹ ಸುರೇಶ್‌ ಜೋಶಿ (ಬೈಯ್ನಾಜಿ )ಯವರು ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಕೋವಿದ್‌-19ರ ಗಂಭೀರತೆಯನ್ನು ಪರಿಗಣಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಾರ್ಗಸೂಚಿ ಅನುಸಾರ, ಬೆಂಗಳೂರಿನಲ್ಲಿ ನಡೆಯಬೇಕಿದ್ದ ಎಬಿಪಿಎಸ್‌ ರದ್ದುಗೊಳಿ ಸಲಾಗಿದೆ. ಆರೆಸ್ಸೆಸ್‌ ಸ್ವಯಂಸೇವಕರು ಸರ್ಕಾರಗಳ ಜತೆ ಕೈಜೋಡಿಸಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಚನ್ನೇನಹಳ್ಳಿ ಜನಸೇವಾ ವಿದ್ಯಾಕೇಂದ್ರದಲ್ಲಿ ಎಬಿಪಿಎಸ್‌ ಸಂಬಂಧ ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿತ್ತು. ಜತೆಗೆ, ಸಭೆಗೆ ಬರುವವರನ್ನು ಕೊರೊನಾ ಪರೀಕ್ಷೆ ನಡೆಸಿ ಒಳಗೆ ಬಿಡುವ ಬಗ್ಗೆಯೂ ನಿರ್ಧರಿಸಲಾಗಿತ್ತು. ಸರ್ಕಾರಗಳು ಸಭೆ ಸಮಾರಂಭ ನಡೆಸ ಬಾರದು ಎಂದು ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಆರೆಸ್ಸೆಸ್‌ ಮೂಲಗಳು ತಿಳಿಸಿವೆ.

Advertisement

ಮುನ್ನೆಚ್ಚರಿಕೆ ಬರಹ ಫ‌ಲಕ ಅಳವಡಿಕೆಗೆ ವಿವಿಗಳಿಗೆ ಸೂಚನೆ
ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯ ಹಾಗೂ ಸಂಯೋಜಿತ ಕಾಲೇಜುಗಳ ಸೂಚನಾ ಫ‌ಲಕದಲ್ಲಿ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿವರಣೆ ಹಾಕಬೇಕು ಎಂದು ಉನ್ನತ ಶಿಕ್ಷಣ ಇಲಾಖೆ ಸೂಚಿಸಿದೆ. ರಾಜ್ಯದ ಎಲ್ಲಾ ವಿವಿಗಳು ಈಗಾಗಲೇ ರಜೆ ಘೋಷಣೆ ಮಾಡಿ ಪರೀಕ್ಷೆ ಮುಂದೂಡಿವೆ. ಆದರೆ, ಆಡಳಿತಾತ್ಮಕ ಕಾರ್ಯಗಳು ನಡೆಯುತ್ತಿರುವುದರಿಂದ ಬೋಧಕ, ಬೋಧಕೇತರ ಸಿಬ್ಬಂದಿ ವಿವಿಗಳಿಗೆ ಹಾಜರಾಗುತ್ತಾರೆ.

ಈ ಹಿನ್ನೆಲೆಯಲ್ಲಿ ವಿವಿ ಕ್ಯಾಂಪಸ್‌, ಕ್ಯಾಂಟೀನ್‌, ವಿಭಾಗ ಮತ್ತು ಆಡಳಿತಾತ್ಮಕ ಕಚೇರಿಯಲ್ಲಿ ಸ್ವತ್ಛತೆ ಕಾಪಾಡುವ ಜತೆಗೆ ಕೊರೊನಾ ಕುರಿತಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ. ಕೊರೊನಾ ವೈರಸ್‌ ತಡೆಗೆ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಸೂಕ್ತ ಬರಹ ಸೂಚನಾ ಫ‌ಲಕದಲ್ಲಿ ಅಳವಡಿಸಬೇಕು ಮತ್ತು ಅದನ್ನು ಕಾಲೇಜುಗಳನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಸೂಚನೆ ನೀಡಬೇಕು ಎಂದು ತಿಳಿಸಲಾಗಿದೆ.

ಕೊಲ್ಲೂರು: ಭೇಟಿ ಮುಂದೂಡಿ
ಕೊಲ್ಲೂರು: ಕೊರೊನಾ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಾ.14ರಿಂದ ಮುಂದಿನ 1 ವಾರದ ತನಕ ಭಕ್ತರು ಶ್ರೀ ಮೂಕಾಂಬಿಕಾ ದೇವಿಯ ದರ್ಶನಕ್ಕಾಗಿ ಕೊಲ್ಲೂರಿಗೆ ಭೇಟಿ ನೀಡುವುದನ್ನು ಮುಂದೂಡಬೇಕು ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ. ಕೊಲ್ಲೂರು ಜಾತ್ರೆ ಸಮೀಪಿಸುತ್ತಿರುವಂತೆ ದೇವಿಯ ದರ್ಶನಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಆದರೆ, ಈ ಬಾರಿ ಅನಿವಾರ್ಯತೆ ಸೃಷ್ಟಿಯಾಗಿರುವುದರಿಂದ ರಾಜ್ಯ ಸರಕಾರದ ಆದೇಶದಂತೆ ಭಕ್ತರು ಸೂಚನೆಗಳನ್ನು ಪಾಲಿಸಬೇಕು ಎಂದು ದೇಗುಲದ ಕಾರ್ಯ ನಿರ್ವಹಣಾ ಧಿಕಾರಿ ಅರವಿಂದ ಎ.ಸುತಗುಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next