Advertisement

ಅನುದಾನ ವಾಪಸಾದ ಹಿನ್ನೆಲೆ ಸಭೆ ರದ್ದು

07:10 AM Jul 09, 2019 | Team Udayavani |

ಚಾಮರಾಜನಗರ: ತಾಲೂಕು ಪಂಚಾಯಿತಿಗೆ ಬಂದಿದ್ದ ಕೋಟಿ ರೂ. ಅನುದಾನದಲ್ಲಿ 56 ಲಕ್ಷ ರೂ. ಅನುದಾನ ವಾಪಸಾದ ಬಗ್ಗೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಹೊರ ನಡೆದ ಕಾರಣ ತಾಪಂ ಸಾಮಾನ್ಯ ಸಭೆ ರದ್ದಾದ ಘಟನೆ ಸೋಮವಾರ ನಡೆಯಿತು.

Advertisement

ಅಧ್ಯಕ್ಷೆ ದೊಡ್ಡಮ್ಮ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆ ಆರಂಭವಾಗುತ್ತಿದ್ದಂತೆಯೇ ಸದಸ್ಯರಾದ ಹೊಂಗನೂರು ಚಂದ್ರು,ನಂದೀಶ್‌, ದಯಾನಿಧಿ, ನಾಗಸುಂದರಮ್ಮ ಸೇರಿದಂತೆ ಎಲ್ಲಾ ಸದಸ್ಯರು 56 ಲಕ್ಷ ಅನುದಾನ ಸರ್ಕಾರಕ್ಕೆ ವಾಪಸ್‌ ಹೋದ ಬಗ್ಗೆ ಅಕ್ಷೇಪ ವ್ಯಕ್ತಪಡಿಸಿ, ಇದಕ್ಕೆ ಸಂಬಂಧಪಟ್ಟವರನ್ನು ಅಮಾನತುಗೊಳಿಸಿ, ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಸಭೆಯನ್ನು ಬಹಿಷ್ಕರಿಸುತ್ತೇವೆ ಎಂದರು.

ಹೊಂಗನೂರು ಚಂದ್ರು, ನಂದೀಶ್‌ ಮಾತನಾಡಿ. ಸಾಮಾನ್ಯ ಸಭೆಗಳು ನೆಪಮಾತ್ರಕ್ಕೆ ನಡೆಯುವಂತಾಗಿದೆ, ಚರ್ಚೆ ಮಾಡಿದ ವಿಷಯಕ್ಕೆ ಅನುಪಾಲನಾ ವರದಿ ಸಲ್ಲಿಸುವುದಿಲ್ಲ ಸಭೆಗಳಲ್ಲಿ ಭಾಗವಹಿಸಿ ಮಂದಿನ ಸಭೆಗೆ ತರುತ್ತೇವೆ, ಕ್ರಮ ಕೈಗೊಳ್ಳುತ್ತೇವೆ ಎಂಬ ಸಬೂಬು ಹೇಳಿ, ಜನಪ್ರತಿನಿಧಿಗಳ ಮಾತಿಗೆ ಬೆಲೆಯನ್ನೇ ಇಲ್ಲದಂತೆ ಮಾಡಿದ್ದಾರೆ ಯಾತಕ್ಕಾಗಿ ಸಾಮಾನ್ಯ ಸಭೆಗಳು ನಡೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಸಾಮಾನ್ಯ ಸಭೆಯಲ್ಲಿ ತಾಪಂ ಅನುದಾನದ ಬಗ್ಗೆ ಚರ್ಚೆ ನಡೆಸಿ ಅನುದಾನದಲ್ಲಿ ಇವರೆಗೆ ಶೇ. 40ರಷ್ಟು ಮಾತ್ರ ಕಾಮಗಾರಿ ನಡೆದು, ಬಿಲ್‌ ಪಾವತಿಸಲಾಗಿದೆ. ಉಳಿದ ಶೇ. 60ರ ಅನುದಾನದ ಬಗ್ಗೆ ಯಾವಾಗ ಕ್ರಮ ಕೈಗೊಳ್ಳುವುದು, ಮಾರ್ಚಿ 15ರರೊಳಗೆ ಹಣಕಾಸು ಲೆಕ್ಕ ಮುಗಿಸಬೇಕು. ಇಲ್ಲದಿದ್ದರೆ ಅನುದಾನ ವಾಪಸ್‌ ಹೋಗುತ್ತದೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದುಸಭೆಯಲ್ಲಿ ಚರ್ಚಿಸಲಾಗಿತ್ತು.

ಈ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಅವರು ಸಕಾಲಕ್ಕೆ ಎಲ್ಲವನ್ನು ಸಲ್ಲಿಸಲಾಗುವುದು ಯಾವುದೇ ಕಾರಣಕ್ಕೆ ಅಪವ್ಯಯವಾಗುವುದಕ್ಕೆ ಬಿಡುವುದಿಲ್ಲ, ಇದಕ್ಕೆ ನಾವೇ ಹೊಣೆಗಾರರು ಎಂದು ಹೇಳಿದ್ದರು.

Advertisement

ಆದರೆ ಈಗ ಸರಿಯಾದ ವೇಳೆಗೆ ಬಿಲ್‌ ನೀಡದ ಕಾರಣ ಅನುದಾನ ವಾಪಸ್ಸಾಗಿದೆ, ಇದಕ್ಕೆ ಯಾರು ಹೊಣೆ? ಚಾಮರಾಜನಗರ ತಾಪಂ ಇತಿಹಾಸದಲ್ಲೇ ಇಷ್ಟು ಹಣ ವಾಪಸ್ಸಾಗಿಲ್ಲ, ಆದ್ದರಿಂದ ಇದಕ್ಕೆ ಸಂಬಂಧಪಟ್ಟವರೆಲ್ಲನ್ನು ಹೊಣೆಗಾರರನ್ನಾಗಿ ಮಾಡಿ, ಅವರ ವಿರುದ್ದ ಜಿ.ಪಂ. ಹಾಗೂ ಸರ್ಕಾರಕ್ಕೆ ದೂರು ನೀಡಬೇಕು. ಪರಿಶಿಷ್ಟ ಜಾತಿ, ವರ್ಗದ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು ಅಲ್ಲಿಯವರೆಗೂ ಸಭೆಯನ್ನು ಬಹಿಷ್ಕರಿಸುತ್ತೇವೆ ಎಂದು ಎದ್ದು ನಿಂತರು.

ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್‌, ಉಪಾಧ್ಯಕ್ಷ ಜಿ.ಬಸವಣ್ಣ ಸಂಬಂಧಪಟ್ಟ ಎಂಜಿಯರ್‌ರಿಂದ ಏಕೆ ಅನುದಾನ ವಾಪಸ್ಸಾಯಿತು ಎಂಬ ಬಗ್ಗೆ ಉತ್ತರ ಕೊಡಿಸುತ್ತೇವೆ‌ ಆನಂತರ ಚರ್ಚೆ ಮಾಡಿ ಮುಂದಿನ ಕ್ರಮ ಕೈಗೊಳ್ಳೋಣ ಸಭೆ ನಡೆಯಲು ಅನುವು ಮಾಡಿಕೊಡಿ ಎಂದು ಮನವಿಮಾಡಿದರು.

ಇದಕ್ಕೆ ಒಪ್ಪದ ಸದಸ್ಯರು ಅಧಿಕಾರಿಗಳು ಹೇಳಿದಂತೆ ಅವರನ್ನೇ ಹೊಣೆಗಾರರನ್ನಾಗಿ ಮಾಡಿ, ಅವರ ಮೇಲೆ ಕ್ರಮಕೈಗೊಳ್ಳಬೇಕು,ಅಲ್ಲಿಯವರೆಗೂ ಸಭೆ ಬೇಡವೇ ಬೇಡ ಎಂದು ಎಲ್ಲರೂ ಹೊರನಡೆದರು.

ಈ ಸಂದರ್ಭದಲ್ಲಿ ಅಧ್ಯಕ್ಷೆ ದೊಡ್ಡಮ್ಮ, ಉಪಾಧ್ಯಕ್ಷ ಜಿ.ಬಸವಣ್ಣ ಅಧಿಕಾರಿಗಳ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದರು. ಶೇ. 50 ಕ್ಕೂ ಹೆಚ್ಚು ಅಧಿಕಾರಿಗಳು 7 ದಿನ ಮುಂಚಿತವಾಗಿ ಸಾಮಾನ್ಯ ಸಭೆಗಳಿಗೆ ಅನುಪಾಲನಾ ವರದಿ ಸಲ್ಲಿಸಬೇಕು ಎಂಬ ನಿಯಮವಿದ್ದರೂ ಸಲ್ಲಿಸುವುದಿಲ್ಲ. ಇವರ ನಿರ್ಲಕ್ಷ್ಯ ಧೋರಣೆಯಿಂದಾಗಿ ಅನುದಾನ ವಾಪಸ್ಸು ಹೋಗಿ ಜನಪ್ರತಿನಿಧಿಗಳು ತಲೆತಗ್ಗಿಸುವಂತಾಗಿದೆ ಎಂದರು.

ಹೊರ ನಡೆದ ಸದಸ್ಯರನ್ನು ಹಿಂಬಾಲಿಸಿದ ಅಧ್ಯಕ್ಷೆ ದೊಡ್ಡಮ್ಮ, ಉಪಾಧ್ಯಕ್ಷ ಜಿ.ಬಸವಣ್ಣ ಸಭೆಯಿಂದ ಹೊರ ಹೋಗದಂತೆ ಮನವೊಲಿಸಲು ಯತ್ನಿಸಿದರು. ಬಜೆಟ್‌ಗೆ ಅನುಮೋದನೆ ಪಡೆಯಬೇಕಾಗಿದೆ. ಬರ ನಿರ್ವಹಣೆ ಬಗ್ಗೆ ಚರ್ಚಿಸಬೇಕಾಗಿದೆ ದಯವಿಟ್ಟು ಸಭೆ ನಡೆಸಲು ಅನುವು ಮಾಡಿಕೊಡಿ ಎಂದರು. ಇದಕ್ಕೆ ಒಪ್ಪದ ಸದಸ್ಯರು ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳುವವರೆಗೂ ಸಭೆಗೆ ಬರುವುದಿಲ್ಲ ಎಂದು ಪಟ್ಟು ಹಿಡಿದರು. ಇದರಿಂದ ಸಭೆ ರದ್ದಾಯಿತು.

Advertisement

Udayavani is now on Telegram. Click here to join our channel and stay updated with the latest news.

Next