ಮಹಾನಗರ: ಪ್ರಗತಿಪರ ಸಮಾಜ ನಿರ್ಮಾಣಕ್ಕಾಗಿ ಕೆನರಾ ಕೆಥೋಲಿಕ್ ಸ್ತ್ರೀಯರ ನಾಯಕತ್ವ ಎಂಬ ಧ್ಯೇಯದೊಂದಿಗೆ ಕೆಥೋಲಿಕ್ ಸಮಾಜದ ಮಹಿಳೆಯರನ್ನು ಒಗ್ಗೂಡಿಸಿ ಸಮಾಜ ಹಾಗೂ ಸಮುದಾಯಕ್ಕೆ ಅವರು ನೀಡಿದ ಅನನ್ಯ ಕೊಡುಗೆಯನ್ನು ಸ್ಮರಿಸಲು ಬೆಂದೂರು ಸೈಂಟ್ ಆ್ಯಗ್ನೆಸ್ ಸ್ಪೆಷಲ್ ಸ್ಕೂಲ್ ಆವರಣದಲ್ಲಿ ರವಿವಾರ ನಡೆದ ಕೆನರಾ ಕೆಥೋಲಿಕ್ ಮಹಿಳಾ ಸಮಾವೇಶದಲ್ಲಿ ಕರಾವಳಿಯ ಕೆಥೋಲಿಕ್ ಮಹಿಳಾ ಸಂಘಟನ ಶಕ್ತಿ ಅನಾವರಣಗೊಂಡಿತು.
ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಆರು ಸಾವಿರಕ್ಕೂ ಮಿಕ್ಕಿ ಕೆಥೋಲಿಕ್ ಮಹಿಳೆಯರ ಭಾಗವಹಿಸುವಿಕೆಯ ಮೂಲಕ ಮಂಗಳೂರು ಮತ್ತು ಉಡುಪಿ ಧರ್ಮ ಪ್ರಾಂತಗಳ ಕೆಥೋಲಿಕ್ ಸಭಾ ಘಟಕಗಳು, ಮಂಗಳೂರು ಧರ್ಮ ಪ್ರಾಂತದ ಮಹಿಳಾ ಮಂಡಳಿಯು ಸಂಯುಕ್ತವಾಗಿ ಈ ಸಮಾವೇಶವನ್ನು ಏರ್ಪಡಿಸಿದ್ದರು.
ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ರೆ| ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶವನ್ನು ಬೆಥನಿ ಸಂಸ್ಥೆಯ ಸಹ ಮುಖ್ಯಸ್ಥರಾದ ಸಿ| ಲಿಲ್ಲಿಸ್ ಅವರು ಉದ್ಘಾಟಿಸಿದರು. ಕರ್ನಾಟಕ ಸಾಬೂನುಗಳು ಮತ್ತು ಮಾರ್ಜಕ ನಿಗಮದ ಮಾಜಿ ಮುಖ್ಯಸ್ಥರಾದ ವೆರೋನಿಕಾ ಕರ್ನೆಲಿಯೊ ಅವರು ದಿಕ್ಸೂಚಿ ಭಾಷಣ ಮಾಡಿದರು.
ಶಾಸಕ ಜೆ. ಆರ್. ಲೋಬೋ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ, ರೊಜಾರಿಯೋ ಕೆಥಡ್ರಲ್‌ನ ಧರ್ಮಗುರು ಫಾ| ಜೆ. ಬಿ. ಕ್ರಾಸ್ತಾ, ಕಸ್ಟಮ್ಸ್ ಆ್ಯಂಡ್ ಸೆಂಟ್ರಲ್ ಎಕ್ಸೈಸ್ ಕಮಿಷನರ್ ಮಿಶಲ್ ಕ್ವೀನಿ ಡಿ’ಕೊಸ್ತಾ, ವಕೀಲ ಎಂ.ಪಿ. ನೊರೋನ್ಹಾ, ಮುಂಬಯಿಯ ಮೋಡೆಲ್ ಕೋ- ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಆಲ್ಬರ್ಟ್ ಡಿ’ಸೋಜಾ ಉಪಸ್ಥಿತರಿದ್ದರು.
ಸ್ಟೀವನ್ ಕ್ವಾಡ್ರಸ್ ಪೆರ್ಮುದೆ ಅವರು ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಸಂಪಾದಿಸಿರುವ ‘ಸ್ತ್ರೀಯರಿಗಾಗಿ ಸರಕಾರ’ ಮತ್ತು ಕ್ರೈಸ್ತ ಸಂತರನ್ನು ಕುರಿತ ಕೃತಿಯನ್ನು ಬಿಡುಗಡೆ ಮಾಡಲಾಯಿತು. ವಿವಿಧ ಕ್ಷೇತ್ರದ ಸಾಧಕ 10 ಮಂದಿ ಮಹಿಳೆಯರನ್ನು ‘ಕೆಥೊಲಿಕ್ ಸಭಾ ಸ್ತ್ರೀ ಸಾಧನ್ ಪ್ರಶಸ್ತಿ - 2018’ ನೀಡಿ ಗೌರವಿಸಲಾಯಿತು.
ಪರಿಸರ ಸಂರಕ್ಷಣೆ ಹಾಗೂ ಶುಚಿತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರ (ಲಾವಾªತೆ ಸೀ) ಸಂದೇಶದಂತೆ ಬೆಳಗ್ಗೆ 8.30 ರಿಂದ ಕದ್ರಿ ಮಲ್ಲಿಕಟ್ಟೆಯಿಂದ ಸೈಂಟ್ ಆಗ್ನೆಸ್ ಸ್ಪೆಷಲ್ ಸ್ಕೂಲ್ ತನಕ ನಡೆದ ಪರಿಸರ ಜಾಗೃತಿ ಜಾಥಾವನ್ನು ಕೆಥೋಲಿಕ್ ಸಭಾದ ಆಧ್ಯಾತ್ಮಿಕ ನಿರ್ದೇಶಕ ಫಾ| ಮ್ಯಾಥ್ಯೂ ವಾಸ್ ಉದ್ಘಾಟಿಸಿದರು. ಕೆಥೋಲಿಕ್ ಸಭಾ ಮಂಗಳೂರು ಮತ್ತು ಉಡುಪಿ ಘಟಕ, ಮಂಗಳೂರು ಧರ್ಮ ಪ್ರಾಂತದ ಮಹಿಳಾ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.