Advertisement

ಕಾಲುವೆ ನವೀಕರಣ ಪ್ರಸ್ತಾವ ಸಿದ್ಧ

11:39 AM Sep 18, 2017 | |

ಬೀದರ: ಶಿಥಿಲಾವಸ್ಥೆಗೆ ಬಂದಿರುವ ಕಾರಂಜಾ ಎಡದಂಡೆ ಮತ್ತು ಬಲದಂಡೆ ಕಾಲುವೆ ನವೀಕರಿಸಲು ಪ್ರಸ್ತಾವನೆ ಸಿದ್ದಪಡಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

Advertisement

ನಗರದ ನೆಹರು ಕ್ರೀಡಾಂಗಣದಲ್ಲಿ ರವಿವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಹೈ.ಕ. ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಜಿಲ್ಲೆಯ ರೈತರು ಆರ್ಥಿಕತೆಯಿಂದ ಸದೃಢರಾಗಲು ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಒತ್ತು ನೀಡಲಾಗಿದೆ. ಸುಮಾರು 131 ಕಿಮೀ ವರೆಗಿನ ಬಲದಂಡೆ ಕಾಲುವೆ ನವೀಕರಿಸಲು 480 ಕೋಟಿ ರೂ. ಗಳಿಗೆ ಸಿಎಂ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಮಾಂಜ್ರಾದಿಂದ ಹೆಚ್ಚುವರಿ ನೀರು ತೆಲಂಗಾಣ ರಾಜ್ಯಕ್ಕೆ ಹೋಗುವುದನ್ನು ನಿಲ್ಲಿಸಿ ನಮ್ಮ ರೈತರೇ ಬಳಕೆ ಮಾಡುವಂತಾಗಬೇಕು. 

ಇದಕ್ಕಾಗಿ ಚಂದಾಪುರ ಬ್ಯಾರೇಜ್‌ ನೀರನ್ನು ಕಾರಂಜಾ ಜಲಾಶಯಕ್ಕೆ ತರುವ 125 ಕೋಟಿ ರೂ.ಗಳ ಯೋಜನೆಗೆ ಸಚಿವ ಸಂಪುಟದಲ್ಲಿ ಮಂಜೂರಾತಿ ದೊರೆತಿದ್ದು, ಟೆಂಡರ್‌ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಹೊಸದಾಗಿ ಹತ್ತು ಪ್ರೌಢ ಶಾಲೆ ಮತ್ತು ಪಿಯು ಕಾಲೇಜು ಪ್ರಾರಂಭಿಸಲು ಅನುಮೋದನೆ ಸಿಕ್ಕಿದೆ. ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಕೂಡ ಒತ್ತು ನೀಡಲಾಗಿದೆ. ಹೋಬಳಿಗೊಂದು ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರ ರಾಣಿ ಚನ್ನಮ್ಮ ವಸತಿಯುತ ಶಾಲೆಗಳ ಸ್ಥಾಪನೆಗೆ ಅಗತ್ಯ ಅನುದಾನ ಒದಗಿಸಲಾಗಿದೆ ಎಂದು ಹೇಳಿದರು.

Advertisement

ಎಚ್‌ಕೆಡಿಬಿಯಿಂದ 2013-14ನೇ ಸಾಲಿನಿಂದ ಈವರೆಗೆ 1048.35 ಕೋಟಿ ರೂ. ಮ್ಯಾಕ್ರೋ ಯೋಜನೆಯಡಿ 2017-18ನೇ ಸಾಲಿಗೆ 481.09 ಕೋಟಿ ರೂ. ಸೇರಿ ಅಂದಾಜು 1500 ಕೋಟಿ ರೂ. ಅನುದಾನ ನೀಡಲಾಗಿದ್ದು, ಈ ಪೈಕಿ ಜಿಲ್ಲೆಗೆ ಅಂದಾಜು 600 ಕೋಟಿ ರೂ. ಅನುದಾನ ಲಭ್ಯವಾಗಿ ಕಾಮಗಾರಿಗಳು ಪ್ರಗತಿಯಲ್ಲಿವೆ. 30 ಸಾವಿರ ಹುದ್ದೆಗಳ ಪೈಕಿ ಈಗಾಗಲೇ 20 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿದ್ದು, 10 ಸಾವಿರ ಹುದ್ದೆಳ ಭರ್ತಿ ಪ್ರಕ್ರಿಯೆ ನಡೆದಿದೆ ಎಂದು ಹೇಳಿದರು. ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ನೂತನ ಅನುಭವ ಮಂಟಪ ನಿರ್ಮಿಸಲು ಈಗಾಗಲೇ ಹಲವಾರು ಸಭೆ ನಡೆಸಲಾಗಿದೆ. ಅದಕ್ಕಾಗಿ ನೇಮಿಸಿದ ಸಮಿತಿ 600 ಕೋಟಿ ರೂ. ವೆಚ್ಚದಲ್ಲಿ ಅನುಭವ ಮಂಟಪದ ನಿರ್ಮಾಣಕ್ಕೆ ವರದಿಯನ್ನು ಮುಖ್ಯಮಂತ್ರಿಗಳವರಿಗೆ ಸಲ್ಲಿಸಿದೆ ಎಂದು ಹೇಳಿದರು.

ತಾವು ಪೌರಾಡಳಿತ ಖಾತೆ ಸಚಿವರಾದ ಬಳಿಕ 15 ತಿಂಗಳ ಅವಧಿಯಲ್ಲಿ ಜಿಲ್ಲೆಗೆ ದಾಖಲೆ ಪ್ರಮಾಣದಲ್ಲಿ ಅನುದಾನ ತರಲಾಗಿದೆ. ನಗರೋತ್ಥಾನ ಮತ್ತು ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಯಡಿ ಸ್ಥಳೀಯ ಸಂಸ್ಥೆಗಳಿಗೆ 250 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಕ್ರಿಯಾಯೋಜನೆ ತಯಾರಿಸಿದ್ದು, ಮಾರ್ಚದೊಳಗೆ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಹೇಳಿದರು. ಶಾಸಕ ರಹೀಮ್‌ ಖಾನ್‌ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಸಂಸದ ಭಗವಂತ ಖೂಬಾ, ಶಾಸಕರಾದ ಅಶೋಕ ಖೇಣಿ, ವಿಜಯಸಿಂಗ್‌, ರಘುನಾಥ ಮಲ್ಕಾಪುರೆ,
ನಗರಸಭೆ ಅಧ್ಯಕ್ಷೆ ಶಾಲಿನಿ ಚಿಂತಾಮಣಿ, ಬುಡಾ ಅಧ್ಯಕ್ಷ ಸಂಜಯ ಜಾಗೀರದಾರ್‌, ಜಿಪಂ ಉಪಾಧ್ಯಕ್ಷ ಡಾ| ಪ್ರಕಾಶ ಪಾಟೀಲ, ಡಿಸಿ ಡಾ| ಮಹಾದೇವ, ಸಿಇಒ ಡಾ| ಆರ್‌. ಸೆಲ್ವಮಣಿ, ಎಸ್‌ಪಿ ಡಿ. ದೇವರಾಜ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next