ಭೂಮಿ ಮೇಲಿನ ಎಲ್ಲ ಜೀವಿಗಳಿಗೂ ಒಬ್ಬ ರಾಜ ಇದ್ದಾನೆ. ಆದರೆ, ಪಕ್ಷಿಗಳಿಗೆ ಒಬ್ಬ ರಾಜ ಅಂತ ಯಾರೂ ಇಲ್ಲ. ದೊರೆ ಇಲ್ಲದ ಈ ಕೊರಗನ್ನು ದೂರ ಮಾಡಲು ಒಮ್ಮೆ ಎಲ್ಲ ಪಕ್ಷಿಗಳೂ ಸಭೆ ಸೇರಿದವು.
“ನಮ್ಮಲ್ಲಿ ಯಾರು ಅರಸನಾಗಬಹುದು?’ ಎಂದು ಪರಸ್ಪರ ಅಲ್ಲಿ ಕೇಳಿಕೊಂಡವು. ಮೈನಾ ಹಕ್ಕಿ ಹೇಳಿತು; “ಯಾರು ಆಕಾಶದಲ್ಲಿ ಅತಿ ಎತ್ತರಕ್ಕೆ ಹಾರುತ್ತಾರೋ, ಅವರಿಗೆ ಅರಸನ ಪಟ್ಟ ನೀಡಬಹುದು’ ಎಂದು ಸಲಹೆ ನೀಡಿತು. ಇದನ್ನು ಕೇಳಿದ ಹದ್ದಿಗೆ ಬಹಳ ಖುಷಿಯಿತು. “ನಿಜಕ್ಕೂ ಇದೊಂದು ಸರಳ ನಿರ್ಧಾರ. ಎಲ್ಲ ಪಕ್ಷಿಗಳಿಗೂ ಗೊತ್ತು, ಬೇರೆಲ್ಲರಿಗಿಂತ ನಾನೇ ಅತಿ ಎತ್ತರದಲ್ಲಿ ಹಾರುವುದು ಎಂದು. ಹಾಗಾದರೆ, ನಾನೇ ಪಕ್ಷಿ ಸಂಕುಲಕ್ಕೆ ರಾಜ’ ಎಂದು ಹದ್ದು ಅಹಕಾರದಿಂದ ಹೇಳಿತು.
ಇದನ್ನು ಕೇಳಿದ ಗುಬ್ಬಿ, ಸಣ್ಣ ದನಿಯಲ್ಲಿ, “ನೀನು ಗೆಲ್ಲಲು ಸಾಧ್ಯವೇ ಇಲ್ಲ’ ಎಂದು ಉಲಿಯಿತು. ಹದ್ದು ಕೆಂಗಣ್ಣು ಬೀರುತ್ತಾ, “ಹೌದಾ? ಹಾಗಾದ್ರೆ, ನೀನೇ ಗೆಲ್ಲುತ್ತೀಯ ಅಂತ ತಿಳ್ಕೊಂಡಿದ್ದೀಯಾ? ಗೊತ್ತಾ, ನೀನು ಬಹಳ ಚಿಕ್ಕ ಪಕ್ಷಿ. ನಿನ್ನಿಂದ ಎತ್ತರಕ್ಕೆ ಹಾರುವುದು ಕನಸಿನ ಮಾತು’ ಎಂದು ದರ್ಪದಿಂದಲೇ ಹೇಳಿತು. “ಹಾಗಾದರೆ, ನೋಡೋಣ’ ಎಂದು ಮೈನಾ ಪಕ್ಷಿ ಇವರದಕ್ಕೆ ದನಿಗೂಡಿಸಿತು.
ಕೊನೆಗೂ ಒಂದು ದಿನ ಸ್ಪರ್ಧೆ ಆಯೋಜನೆಗೊಂಡಿತು. ಸಣ್ಣ, ಮಧ್ಯಮ ಮತ್ತು ದೊಡ್ಡ ಗಾತ್ರದ ಪಕ್ಷಿಗಳು ನಭಕ್ಕೆ ಜಿಗಿಯಲು ಉತ್ಸಾಹದಿಂದ ಬಂದಿದ್ದವು. “ವೂವೂ’ ಎಂಬ ಶಬ್ದ ಎಲ್ಲೆಲ್ಲೂ ಕೇಳ ತೊಡಗಿತು. ಈ ಪಕ್ಷಿಗಳ ಹಾರಾಟ ನೋಡಲು, ವಿವಿಧ ಪ್ರಾಣಿಗಳು, ಮನುಷ್ಯರೂ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದರು. ಶಿಳ್ಳೆ ಹಾಕಿದ ಕೂಡಲೇ ಎಲ್ಲ ಪಕ್ಷಿಗಳೂ ಆಕಾಶಕ್ಕೆ ಜಿಗಿದವು. ನೀಲಿ ನಭದ ತುಂಬಾ ಆ ಪಕ್ಷಿಗಳ ರುಜುವನ್ನು ನೋಡುವುದೇ ಒಂದು ಚೆಂದವಾಗಿತ್ತು.
ಕೆಲ ಸಮಯದ ನಂತರ, ಹಲವು ಪಕ್ಷಿಗಳ ರೆಕ್ಕೆ ಸೋತು, ಕೆಳಕ್ಕೆ ಇಳಿದವು. ಹದ್ದು ಮಾತ್ರ ತನ್ನ ಬಲಿಷ್ಠ ರೆಕ್ಕೆಗಳನ್ನು ಬೀಸುತ್ತಾ, ಆಗಸದಲ್ಲಿ ಇನ್ನೂ ಹಾರುತ್ತಲೇ ಇತ್ತು. ನೋಡುತ್ತಾ, ನೋಡುತ್ತಾ ಎಲ್ಲ ಪಕ್ಷಿಗಳೂ ನೆಲಕ್ಕೆ ಬಂದು ಇಳಿದವು. ಆದರೆ, ಹದ್ದು ಮಾತ್ರ ಮೇಲೆ ಹಾರತ್ತಲೇ ಇತ್ತು. ಬಹುತೇಕ ಪಕ್ಷಿಗಳು ಅದಾಗಲೇ, “ಹದ್ದೇ ಪಕ್ಷಿ ಸಂಕುಲದ ರಾಜ’ ಎಂಬ ತೀರ್ಮಾನಕ್ಕೆ ಬಂದವು. ಆದರೆ, ಕೆಳಗಿದ್ದ ಪಾರಿವಾಳ, ಹದ್ದಿನ ರೆಕ್ಕೆಯ ಕೆಳಗೆ ನೋಡುವಂತೆ ಎಲ್ಲ ಪಕ್ಷಿಗಳಿಗೂ ಹೇಳಿತು. ಅಲ್ಲಿ ನೋಡಿದರೆ, ಹದ್ದಿನ ರೆಕ್ಕೆಯ ಕೆಳಗೆ ಗುಬ್ಬಿ ಮುದುಡಿ ಕುಳಿತಿತ್ತು!
ಹದ್ದು ಇನ್ನೂ ಕೆಳಕ್ಕೆ ಇಳಿದಿರಲಿಲ್ಲ. ತನ್ನ ಪೌರುಷ ಸಾಬೀತು ಪಡಿಸಲು ಎರಡು ತಾಸುಗಳಿಂದ ಆಗಸದಲ್ಲಿ ಹಾರುತ್ತಲೇ ಇತ್ತು. ಹದ್ದಿಗೆ ಇನ್ನೇನು ಸುಸ್ತಾಯಿತು, ಎಂದು ಅದರ ನಿಧಾನಗತಿಯ ಹಾರಾಟವನ್ನು ಗಮನಿಸಿದ ಗುಬ್ಬಿ, ಹದ್ದಿನ ರೆಕ್ಕೆ ಅಡಿಯಿಂದ ಪುಸಕ್ಕನೆ ಹಾರಿತು. ಹದ್ದು ಕೆಳಗೆ ಇಳಿಯುತ್ತಿದ್ದಂತೆ, ಮೇಲೆ ಹಾರುತ್ತಾ ಹೋದ ಗುಬ್ಬಿ, “ಓ ಹದ್ದೇ, ಇಷ್ಟೆಯಾ ನಿನ್ನ ಸಾಮರ್ಥಯ? ನೋಡು ನಾನು ನಿನಗಿಂತ ಎಷ್ಟು ಮೇಲಿದ್ದೀನಂತ?’ ಎಂದು ಸಾಧ್ಯವಾದಷ್ಟು ಗಟ್ಟಿ ದನಿಯಲ್ಲಿ ಕೂಗಿತು. ಕೆಳಗಿದ್ದ ಪಕ್ಷಿಗಳೆಲ್ಲ ಗುಬ್ಬಿಯ ಸಾಹಸಕ್ಕೆ ಚಪ್ಪಾಳೆ ಹೊಡೆಯುತ್ತಿದ್ದವು.
ಈಗಾಗಲೇ ಸಾಕಷ್ಟು ದಣಿದಿದ್ದ ಹದ್ದಿಗೆ, ಮೇಲೆ ಹಾರುವ ಷ್ಟು ಶಕ್ತಿಯಿರಲಿಲ್ಲ. ನಿಧಾನ ಕ್ಕೆ ಕೆಳಗೆ ಬಂದು ಇಳಿಯಿತು. ಕೊನೆಗೆ, ಎಲ್ಲ ಪಕ್ಷಿಗಳೂ ಸೇರಿ ಗುಬ್ಬಿಗೆ ಅರಸನ ಪಟ್ಟವನ್ನು ಕಟ್ಟಿದವು. ಅಹಂಕಾರದಿಂದ ಮೆರೆದಿದ್ದ ಹದ್ದು ಅನಿವಾರ್ಯವಾಗಿ ತನ್ನ ಸೋಲನ್ನು ಒಪ್ಪಿಕೊಂಡಿತು.
ಬಿಂದುಸಾರ