Advertisement

ಒಕ್ಕಲು ಮಗನಿಗೆ ಹೆಣ್ಣು ಕೊಡುವಿರಾ?

09:42 AM Sep 21, 2017 | |

ತನ್ನ ಗಂಡ ಅಥವಾ ತಮ್ಮ ಮಗಳ ಗಂಡ ಎಂಥವನಿರಬೇಕೆಂದು ಬಯಸುತ್ತಾರೆ? ಅವನು ಕೂಡುಗರಾಣೆಯ ಸದಸ್ಯನಾಗಿರಬಾರದು. ಅವನಿಗೆ ತಂದೆ ತಾಯಿ ಇರಬಾರದು. ಕಮತಾ ಮಾಡುವವನಾಗಿರಬಾರದು. ದನಕರುಗಳ ಸೆಗಣಿ ಗಂಜಳ ತೆಗೆಯುವ, ಹೊಲಕ್ಕೆ ಹೋಗಿ ಬಿಸಿಲು, ಮಳೆ ಮತ್ತು ಚಳಿಯಲ್ಲಿ ಹೊಲಗೆಲಸ ಮಾಡಲು ಹಚ್ಚಬಾರದು, ಕೊನೆಯ ಪಕ್ಷ ಸಿಪಾಯಿ ನೌಕರಿ ಮಾಡುತ್ತಿರಬೇಕು!

Advertisement

“ನಿಮ್ಮ ಮನ್ಯಾಗ ಕನ್ಯಾ ಐತೆಂತ… ‘
“ಯಾರಿಗೆ?’
“ನನ್ನ ಮಗನಿಗೆ.’
“ಮಗಾ ಏನ್ಮಾಡ್ತಾನು?’
“ಕಮತಾ ಮಾಡ್ತಾನು.’
“ಹುಡಿಗಿ ಕಮತಾ ಮಾಡಾವನ್ನ ಮದಿವಿ ಆಗಾಕ ಒಲ್ಲೆ ಅಂತೈತಿ. ಮತ್ತ ಹುಡಿಗಿ ಮನ್ಯಾಗ ಇಲ್ಲಾ… ಅವರಮ್ಮನ ಮನಿಗಿ ಹೋಗೇತಿ’.

 ಇದು ನನ್ನ ಸಂಬಂಧಿಕನೊಬ್ಬ ತನ್ನ ಮಗನಿಗೆ ಹೆಣ್ಣು ನೋಡಲು ಹೋದಾಗ ನಡೆದ ಸಂಭಾಷಣೆ. ಹೆಣ್ಣು ಕೊಡುವುದೊತ್ತಟ್ಟಿಗಿರಲಿ, ಮನ್ಯಾಗ ಹುಡುಗಿ ಇದ್ದೂ ಒಳಗೆ ಕರೆದು ಹುಡುಗಿ ತೋರಿಸದೆ; ಮನೆಯೊಳಗೆ ಕರೆಯದೆ; ಹೊರಗೆ ಕಟ್ಟೆಯ ಮೇಲೆ ಕೂಡ್ರಿಸಿ; ನೀರು ಸಹಿತ ಕೊಡದೆ; ಮಾರಿ ಮ್ಯಾಲ ಹೊಡದಂಗ ಮಾತಾಡಿ; ಒಕ್ಕಲುತನದ ವೃತ್ತಿಗೆ ಅಪಮಾನ ಮಾಡಿ ಕಳಿಸಿದ ಸಂಗತಿ ಒಬ್ಬಿಬ್ಬರಿಗಾದದ್ದಲ್ಲ. ಬಹುತೇಕ ಒಕ್ಕಲಿಗರಿಗೆ ಅದರಲ್ಲೂ ತಮ್ಮ ಮಕ್ಕಳು ಒಕ್ಕಲುತನ ಮಾಡುತ್ತಿರುವ ಸಮುದಾಯಕ್ಕೆ ಮಾಡಿದ ಮತ್ತು ಮಾಡುತ್ತಿರುವ ಅಪಮಾನ ಇದಾಗಿದೆ.

ಟಿವಿ ಬಂದಾಗಿನಿಂದ ಹಳ್ಳಿಗಳು ಬದಲಾದದ್ದನ್ನು ಅಲ್ಲಗಳೆಯಲಾಗದು. ಅದೇ ರೀತಿ ಪಂಚಾಯತಿ ಮಟ್ಟದ ಗ್ರಾಮಗಳಲ್ಲಿ ಪ್ರೌಢಶಾಲೆಗಳು ಕಾಲೇಜುಗಳು ಸ್ಥಾಪನೆಯಾಗಿರುವುದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗುತ್ತಿರುವುದು, ಹಳ್ಳಿಯ ಹುಡುಗಿಯರೂ ಕಾಲೇಜು ಶಿಕ್ಷಣ ಪಡೆಯಲು ಸಾಧ್ಯವಾಗಿರುವುದು, ಬಸ್‌ ಪಾಸ್‌ ಕೊಟ್ಟು ತಾಲೂಕು ಮತ್ತು ಜಿಲ್ಲಾ ಸ್ಥಳಗಳಿಗೆ ಹೋಗಿ ಶಿಕ್ಷಣ ಪಡೆಯಲು ಸೌಲಭ್ಯ ಒದಗಿಸಿರುವುದು ಇವೆಲ್ಲವೂ ಮದುವೆಯಾಗ ಬಯಸಿರುವ ಯುವತಿಯರ ಮನೋಭಾವ ಬದಲಾಗಲು ಕಾರಣ ಎಂದು ಸರಳವಾಗಿ ಹೇಳಬಹುದು. 

ಕೂಡುಗರಾಣೆಗಳು ಮತ್ತು ಅವಿಭಕ್ತ ಕುಟುಂಬಗಳು ಪಾಲು ಪಡೆದು ಸಣ್ಣ ಕುಟುಂಬಗಳಾಗುತ್ತಿರುವುದು, ಎಲ್ಲರೂ ಗಂಡು ಮಕ್ಕಳಾಗಬೇಕೆಂದು ಗಂಡು ಮೋಹಿಗಳಾಗುತ್ತಿರುವುದು, ಹೆಣ್ಣಿನ ಜನನ ಪ್ರಮಾಣ ಗಂಡಿನ ಜನನ ಪ್ರಮಾಣಕ್ಕಿಂತ ಕಡಿಮೆ ಆಗುತ್ತಿರುವುದು…ಹೀಗೆ ಇನ್ನೂ ಹಲವಾರು ಕಾರಣಗಳಿದ್ದಾವು.

Advertisement

ತನ್ನ ಗಂಡ ಅಥವಾ ತಮ್ಮ ಮಗಳ ಗಂಡ ಎಂಥವನಿರ ಬೇಕೆಂದು ಬಯಸುತ್ತಾರೆ? ಅವನು ಕೂಡುಗರಾಣೆಯ ಸದಸ್ಯನಾಗಿರಬಾರದು. ಅವನಿಗೆ ತಂದೆ ತಾಯಿ ಇರಬಾರದು. ಕಮತಾ ಮಾಡುವವನಾಗಿರಬಾರದು. ದನಕರುಗಳ ಸೆಗಣಿ ಗಂಜಳ ತೆಗೆಯುವ, ಹೊಲಕ್ಕೆ ಹೋಗಿ ಬಿಸಿಲು, ಮಳೆ ಮತ್ತು ಚಳಿಯಲ್ಲಿ ಹೊಲಗೆಲಸ ಮಾಡಲು ಹಚ್ಚಬಾರದು, ಕೊನೆಯ ಪಕ್ಷ ಸಿಪಾಯಿ ನೌಕರಿ ಮಾಡುತ್ತಿರಬೇಕು!

ಒಕ್ಕಲುತನದ ವೃತ್ತಿಗೆ ಗೌರವವಿಲ್ಲವೇ?
ಕೆಲವು ದಶಕಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಆಗ ನೌಕರಿ ಮಾಡುವ ಗಂಡಸರು ಕಡಿಮೆ ಇದ್ದರು. ಸುಶಿಕ್ಷಿತ ಹೆಣ್ಣುಮಕ್ಕಳೂ ಕಡಿಮೆ ಇದ್ದರು. ಒಕ್ಕಲುತನ ಶ್ರೇಷ್ಠ ಎನಿಸಿತ್ತು. ಆದರೆ ಅದೀಗ ಕನಿಷ್ಠ ವೃತ್ತಿಯ ಸ್ಥಾನಮಾನವನ್ನೂ ಹೊಂದಿಲ್ಲ. ಕೃಷಿ ಉತ್ಪನ್ನಗಳ ಬೆಲೆ ಕುಸಿತ, ಬರಗಾಲದ ಬವಣೆಯಿಂದ ನಿಶ್ಚಿತ ಆದಾಯ ಇಲ್ಲದಿರುವುದು. ಹಳ್ಳಿಯಲ್ಲಿ ಪಟ್ಟಣದ ಥಳಕು ಬಳಕು ಇಲ್ಲದಿರುವುದು. ಕೃಷಿ ಕೃತ್ಯಗಳೆಂದರೆ ಕೀಳರಿಮೆ. ದೃಶ್ಯಮಾಧ್ಯಮಗಳು ಬಿತ್ತುತ್ತಿರುವ ಕನಸಿನ ಬೀಜಗಳು ನಾಟಲು ಅಸಾಧ್ಯವಾಗಿರುವುದು. ರೈತರು ಸಾಲದ ಬಲೆಯಲ್ಲಿ ಸಿಲುಕಿ ಸಾಯುವ ಸ್ಥಿತಿ ಬಂದಿರುವುದು. ಕೃಷಿಕರಾಗಿರುವ ಹಲವಾರು ರೈತರು ಅಭಿಮಾನದಿಂದ ನಾನು ಒಕ್ಕಲುತನ ಮಾಡುತ್ತಿ¤ರುವೆನೆಂದು ಹೇಳಿಕೊಳ್ಳಲಾರದ ವಾತಾವರಣ ಇಂದಿನದಾಗಿದೆ. ಕೃಷಿ ಅನಿವಾರ್ಯ ವೃತ್ತಿ ಆಗಿಲ್ಲ. ಕೃಷಿ ಮಾಡದಿದ್ದರೆ ಭವಿಷ್ಯ ಇಲ್ಲ ಎಂಬ ಪರಿಸ್ಥಿತಿ ಇಂದಿನದಲ್ಲ. ಕೃಷಿಕರೂ ಕೃಷಿಯ ಬಗ್ಗೆ ಹೆಮ್ಮೆಯಿಂದ ಹೇಳಲಾಗದೆ ಯಾಕಾದರೂ ಕೃಷಿಕನಾಗಿರುವೆನೆಂಬ ಬೇಸರದಲ್ಲಿ ಬದುಕುವಂತಾಗಿರುವುದು ದುರಂತ. ದೇಶದ ಜೀವಾಳವಾಗಿರುವ ವೃತ್ತಿಯಲ್ಲಿ ತೊಡಗಿದ್ದರೂ ರೈತರಿಗೆ ಸಮಾಜದಲ್ಲಿ ಕಟ್ಟ ಕಡೆಯ ಸ್ಥಾನ! ಸರಕಾರ ಮತ್ತು ಸಮುದಾಯಗಳಿಂದಲೂ ಕೃಷಿ ವೃತ್ತಿ ತಿರಸ್ಕಾರಕ್ಕೊಳಗಾಗಿರುವ ಸಂಗತಿ ರೈತರನ್ನು ಚಿಂತೆಗೀಡು ಮಾಡಿದೆ.

ಕೃಷಿಕನ ಮಗನ ಬಗ್ಗೆ ಯಾಕೀ ತಾತ್ಸಾರ? ಎಂಜಿನಿಯರ್‌, ಡಾಕ್ಟರ್‌, ಶಿಕ್ಷಕ, ಪ್ರೊಫೆಸರ್‌, ಸಾಫ್ಟ್ವೇರ್‌ ಎಂಜಿನಿಯರ್‌, ವಕೀಲ, ರಾಜಕಾರಣಿ, ಸರಕಾರದ ಬೇರೆ ಬೇರೆ ಇಲಾಖೆಗಳಲ್ಲಿ ನೌಕರಿ ಮಾಡುವವರು ಆಯಾ ವೃತ್ತಿ ಶಿಕ್ಷಣ ಪಡೆದ ಮತ್ತು ಆಯಾ ನೌಕರಿ ಮಾಡುವವರನ್ನ ಮದುವೆಯಾಗುವುದು ಸಲೀಸಾಗಿದೆ. ಹಾಗಾದರೆ ಕೃಷಿ ಮಾಡುವವರನ್ನು ಮದುವೆ ಆಗುವವರ್ಯಾರು? ಇದು ಪ್ರಶ್ನೆ ಆಗಿ ಉಳಿದಿದೆ. ಈ ಸಮಸ್ಯೆಗೆ ಪರಿಹಾರ ಕಾನೂನುಗಳಿಂದಾಗಲಿ ಆಯೋಗಗಳಿಂದಾಗಲಿ ಸಿಗಲಾರದು. ಆ ಮಾತು ಬೇರೆ. ಸತ್ಯವೇನೆಂದರೆ ಕೃಷಿಕರ ಹೆಣ್ಣು ಮಕ್ಕಳೂ ಕೃಷಿಕ ಗಂಡು ಮಕ್ಕಳನ್ನು ಮದುವೆಯಾಗುವ ಸಾಧ್ಯತೆ ಕಡಿಮೆಯಾಗುತ್ತಿರುವುದು ಗಂಭೀರ ಸಮಸ್ಯೆ ಯಾಗಿದೆ. ಇದಕ್ಕೆ ಯಾರನ್ನು ದೂರುವುದೋ  ತಿಳಿಯದಾಗಿದೆ.

ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ಪತ್ರಿಕೆಗಳಲ್ಲಿ “ನನಗೊಂದು ಕನ್ಯೆ(ಹೆಣ್ಣು)  ಹುಡುಕಿ ಕೊಡಿ’ ಎಂಬ ಶೀರ್ಷಿಕೆಯಡಿ ಕೃಷಿ ಕುಟುಂಬದಿಂದ ಬಂದಿರುವ ಲಕ್ಷ್ಮೇಶ್ವರದ ಸಮೀಪದ ರಾಮ ಗಿರಿಯ ಯುವಕನೊಬ್ಬ ಮಾಡಿಕೊಂಡ ಮನವಿ ಮನಕಲಕು ವಂತಿದೆ. ಆತನಿಗೆ 29 ವರ್ಷ. ಮಳೆಯಾಶ್ರಿತ ಐದೆಕರೆ ಜಮೀನಿಗೆ ಹಾವೇರಿ ಕೊಪ್ಪಳ ಮತ್ತು ಗದಗ ಜಿಲ್ಲೆಗಳ 30 ಊರುಗಳಲ್ಲಿ ಕನ್ಯೆ ಕೇಳಿ ಅನ್ವೇಷಣೆ ಮಾಡಿದರೂ ಯಾರೂ ಹೆಣ್ಣು ಕೊಡಲು ಮುಂದೆ ಬಂದಿಲ್ಲ. ಹೀಗಾದರೆ ಕೃಷಿಕರ ಬಾಳು ಹೇಗೆಂದು ಪ್ರಶ್ನೆ ಮಾಡಿದ್ದಾನೆ. ಜೀವನೋಪಾಯಕ್ಕಾಗಿ ಕೃಷಿಯನ್ನೇ ಅವಲಂಬಿಸಿದ್ದರಿಂದ ಆ ಯುವಕನಿಗೆ ಕನ್ಯೆ ಸಿಗುವುದು ಅಸಾಧ್ಯ ಸಂಗತಿಯಾಗಿದೆ. “ನನಗೊಂದು ಕನ್ಯೆ (ಹೆಣ್ಣು) ಹುಡುಕಿಕೊಡಿ’ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಮತ್ತು ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದ. ಆದರೆ ಅವನಿಗೆ ಹೆಣ್ಣು ಹುಡುಕಿಕೊಟ್ಟ ಸುದ್ದಿ ಮಾತ್ರ ಪ್ರಕಟವಾಗಿಲ್ಲ. ಈ ಕಥೆ ಏನನ್ನು ಹೇಳುತ್ತದೆ? ಇದು ಆ ಯುವಕನೊಬ್ಬನದೇ ನಿದರ್ಶನವಲ್ಲ. ಮೇಟಿ ವಿದ್ಯೆ ಕಲಿತು ಕೃಷಿ ಮಾಡುತ್ತಿರುವ ಕೋಟಿ ಕೋಟಿ ಜನರ ಕಥೆ ಆಗಿದೆ. ಈ ಕೂಗಿಗೆ ಓಗೊಡು ವವರ್ಯಾರು? ಇಂಥ ಯುವಕರಿಗೆ ಕನ್ಯೆ ಹುಡುಕಿಕೊಡುವವರು ಯಾರಾದರೂ ಇದ್ದೀರಾ?

ಈರಯ್ಯ ಕಿಲ್ಲೇದಾರ 

Advertisement

Udayavani is now on Telegram. Click here to join our channel and stay updated with the latest news.

Next