Advertisement

ಪ್ಲೆಕ್ಸ್‌ ಮುಕ್ತ ನಗರ ನಿಮ್ಮಿಂದ ಸಾಧ್ಯವಾ?

11:30 AM Aug 11, 2018 | Team Udayavani |

ಬೆಂಗಳೂರು: “ನಗರವನ್ನು ಆರು ತಿಂಗಳಲ್ಲಿ ಫ್ಲೆಕ್ಸ್‌ ಮುಕ್ತ ಮಾಡಲು ನಿಮ್ಮಿಂದ ಆಗುತ್ತಾ? ಆಗುವುದಿಲ್ಲ ಎಂದಾದರೆ ಹೇಳಿ ನಾವೇ ಕ್ರಮ ಕೈಗೊಳ್ಳುತ್ತೇವೆ’ ಹೀಗೆಂದು ಸರ್ಕಾರ ಹಾಗೂ ಬಿಬಿಎಂಪಿಯನ್ನು ಹೈಕೋರ್ಟ್‌ ಶುಕ್ರವಾರ ತೀಕ್ಷ್ಣವಾಗಿ ಪ್ರಶ್ನಿಸಿದೆ.

Advertisement

ಫ್ಲೆಕ್ಸ್‌, ಹೋರ್ಡಿಂಗ್ಸ್‌ ತೆರವುಗೊಳಿಸುವುದು ಬಿಬಿಎಂಪಿಯ ಜವಾಬ್ದಾರಿ. ತೆರವು ಕಾರ್ಯಾಚರಣೆ ವಿಳಂಬವಾಯಿತು ಕ್ಷಮಿಸಿ ಎಂದು ಪದೇ ಪದೆ ಹೇಳಬೇಡಿ. ನೆಪಗಳನ್ನು ಬಿಟ್ಟು ಮೊದಲು ತೆರವು ಕಾರ್ಯಚರಣೆಯಲ್ಲಿ ಕಾರ್ಯಪ್ರವೃತ್ತರಾಗಿ. ನೀವು ಕೆಲಸ ಮಾಡದಿದ್ದರೆ ನ್ಯಾಯಾಲಯವೇ ಮಧ್ಯಪ್ರವೇಶಿಸಬೇಕಾಗುತ್ತದೆ ಎಂದು ಹೈಕೋರ್ಟ್‌ ಹೇಳಿತು.

ಪ್ರಕರಣಕ್ಕೆ ಸಂಬಂಧಿಸಿಂದತೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಹಾಗೂ ನ್ಯಾ. ಆರ್‌. ದೇವದಾಸ್‌ ಅವರಿದ್ದ ವಿಭಾಗೀಯ ಪೀಠ, ಬಿಬಿಎಂಪಿ ವಿರುದ್ದ ಚಾಟಿ ಮುಂದುವರಿಸಿತು.

ಶುಕ್ರವಾರದ ವಿಚಾರಣೆ ವೇಳೆ ಅಡ್ವೋಕೇಟ್‌ ಜನರಲ್‌ ಉದಯ ಹೊಳ್ಳ ವಾದಿಸಿ, ಫ್ಲೆಕ್ಸ್‌ ಕಾರ್ಯಾಚರಣೆ ವೇಳೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 8 ಮಂದಿಯನ್ನು ಬಂಧಿಸಲಾಗಿದ್ದು, ನಗರದ 10ನೇ ಎಸಿಎಂಎಂ ನ್ಯಾಯಾಲಯದಲ್ಲಿ ದೋಷಾರೂಪಣಾ ಪಟ್ಟಿ ಸಹ ದಾಖಲಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ನಗರದಲ್ಲಿ ಅನಧಿಕೃತವಾಗಿ ಹಾಕಿರುವ ಫ್ಲೆಕ್ಸ್‌, ಹೋರ್ಡಿಂಗ್ಸ್‌, ಬ್ಯಾನರ್ಸ್‌ಗಳನ್ನು ನ್ಯಾಯಾಲಯದ ಆದೇಶ ಬಂದ 48 ಗಂಟೆಯಲ್ಲೇ ಸಾಕಷ್ಟು ಸಂಖ್ಯೆಯ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗಿದೆ. ಉಳಿದ ಫ್ಲೆಕ್ಸ್‌ಗಳನ್ನು ತ್ವರಿತಗತಿಯಲ್ಲಿ ತೆರವುಗೊಳಸಿಲಾಗುವುದು ಎಂದು ಬಿಬಿಎಂಪಿ ಪರ ವಕೀಲರು ತಿಳಿಸಿದರು. ಮುಂದಿನ ವಿಚಾರಣೆ ವೇಳೆಗೆ ಎಲ್ಲ ಫ್ಲೆಕ್ಸ್‌ಗಳನ್ನು ತೆರವುಗೊಳಿಸಬೇಕು ಎಂದು ನ್ಯಾಯಪೀಠ ಬಿಬಿಎಂಪಿಗೆ ಖಡಕ್‌ ಎಚ್ಚರಿಕೆ ನೀಡಿದರು.

Advertisement

ಫ್ಲೆಕ್ಸ್‌ ತೆರವಿಗೆ ಆ್ಯಪ್‌: ಶುಕ್ರವಾರದ ವಿಚಾರಣೆ ವೇಳೆ ಖುದ್ದು ಹಾಜರಿದ್ದ ಬಿಬಿಎಂಪಿ ಆಯುಕ್ತ, ಪಾಲಿಕೆಯ ವ್ಯಾಪ್ತಿಯಲ್ಲಿ ಫ್ಲೆಕ್ಸ್‌, ಹೋರ್ಡಿಂಗ್ಸ್‌ ಹಾಗೂ ಬ್ಯಾನರ್‌ಗಳ ತೆರವಿಗೆ ನೂತನ ಆ್ಯಪ್‌ ಜಾರಿಗೆ ತರಲಾಗಿದೆ. ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ನಗರದಲ್ಲಿ ಫ್ಲೆಕ್ಸ್‌, ಬ್ಯಾನರ್‌ಗಳು ಕಂಡು ಬಂದರೆ ಅವುಗಳನ್ನು ಫೋಟೋ ತೆಗೆದು ಆ್ಯಪ್‌ಗೆ ಹಾಕಿದರೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳುತ್ತಾರೆ. ಕಳೆದು ಎರಡು ವರ್ಷಗಳಿಂದ ಪಾಲಿಕೆ ಫ್ಲೆಕ್ಸ್‌, ತೆರವು ಕಾರ್ಯಾಚರಣೆ ನಡೆಸುತ್ತಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಸಿಎಸ್‌ ಅಫಿಡವಿಟ್‌ಗೆ ಗರಂ: ಇದೇ ವೇಳೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಫ್ಲೆಕ್ಸ್‌ ಹಾಗೂ ಬ್ಯಾನರ್‌ ತೆರವು ಬಗ್ಗೆ ಸಲ್ಲಿಸಿದ ಅಫಿಡವಿಟ್‌ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಹೈಕೋರ್ಟ್‌, ಆ.14ರೊಳಗೆ ನಿಖರ ಹಾಗೂ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next