ಮಲೆನಾಡಿನ ಭೂರಮೆಯ ಸೌಂದರ್ಯವೇ ಬೇರೆ ತೆರನಾದುದು. ಭೂಮಿ ಹುಣ್ಣಿಮೆ ಬರುವಾಗ ಮಲೆನಾಡಿನ ಅಡಕೆ ತೋಟಗಳಲ್ಲಿ ಫಸಲಿನ ಸಮೃದ್ಧಿ. ಬೆಳೆದು ನಿಂತ ಹಸಿರು ಬಾಳೆಗೊನೆಗಳಿಂದ, ಅಡಕೆ ಮರಗಳಲ್ಲಿ ತೊನೆಯುವ ಬೆಳೆದು ತೂಗುವ ಅಡಕೆ ಗೊನೆಗಳು, ಹಾಲು ತುಂಬಿದ ಭತ್ತದ ತೆನೆಗಳು… ಸಮೃದ್ಧ ಭೂದೇವಿಯ ಒಡಲು ಅದು. ದೀಪಾವಳಿಯ ಸಿದ್ಧತೆ ಪ್ರಾರಂಭವಾಯಿತೆಂದರೆ ಕೃಷಿಕರಿಗೆ ಬಿಡುವಿಲ್ಲದ ಚಟುವಟಿಕೆ. ವರ್ಷ ಋತುವಿಗೆ ವಿದಾಯ ಹೇಳಿ ಮಾರ್ಗಶಿಶಿರದ ಚಳಿಗೆ ಅನುವಾಗುವ ಪ್ರಾಕೃತಿಕ ಸಿದ್ಧತೆಗಳು.
ವಾಡಿಕೆಯಂತೆ ಜುಲೈ ಆಗಸ್ಟ್‌ನಲ್ಲಿ ಮಲೆನಾಡಿನ ಮಳೆ ಭರ್ಜರಿ ಹೊಳೆ ತೋಡು ಕೊಳ್ಳಗಳನ್ನು ತುಂಬಿ ಝರಿ ಒರತೆಗಳ ಧಾರೆಗಳನ್ನು ಹರಿಸಿ ಇಡೀ ಭೂಪ್ರದೇಶವನ್ನು ಹಸಿ ಹಸಿ ಹಸಿರಾಗಿಸಿ ತೆರಳುತ್ತದೆ. ಅಕ್ಟೋಬರ್ ಬಂತೆಂದರೆ ಆ ಹಸಿಯ ಪಸೆಗೆ ಕೊನೆ ಬಿದ್ದು ಹೀರಿಕೊಂಡ ನೀರಿನ ತನಿಯನ್ನು ಒಡಲೊಳಗಿಟ್ಟುಕೊಂಡ ವಸುಂಧರೆ ಹಸಿರಾಗಿ “ಹಸಿರುಡುಗೆ ಪೊಸೆದುಟ್ಟು’ ಲಾಸ್ಯವನ್ನು ಪ್ರದರ್ಶಿಸುತ್ತಿರುತ್ತಾಳೆ. ದೀಪಾವಳಿಯ ಸಿದ್ಧತೆಗಳು ನಡೆಯುವುದೆಂದರೆ ಕೊರಕಲು ಬಿದ್ದ ಕೊಟ್ಟಿಗೆಯ ರಸ್ತೆಗಳನ್ನು ಕಲ್ಲು ಮಣ್ಣುಗಳಿಂದ ಮುಚ್ಚಿ ಸಿದ್ಧಪಡಿಸಿ ಕೊಟ್ಟಿಗೆಗೂ ಹೊಸ ಮಣ್ಣು ಹಾಕಿಸಿ ದನಕರುಗಳನ್ನು ಬೆಚ್ಚನೆಯ ವಾಸ್ತವ್ಯಕ್ಕೆ ಸಿದ್ಧಗೊಳಿಸುವುದು ಮಳೆಗಾಲದಿಂದ ಮುಕ್ತಿ ಪಡೆದ ರಾಸುಗಳು ಈಗ ತಿಳಿ ಬಿಸಿಲಿಗೆ ಮೈಯೊಡ್ಡಿ ಹೊರಗೆ ಅಡ್ಡಾಡಿ ಬೆಟ್ಟ ಗುಡ್ಡಗಳನ್ನು ನಿಶ್ಚಿಂತೆಯಿಂದ ಅಲೆದು ಮೇಯ್ದು ಬಂದು ಸಮೃದ್ಧವಾಗಿ ಹಾಲು ಕರೆಯುವ ಕಾಲ. ತೋಟಗಳಲ್ಲಿಯೂ ಅಷ್ಟೇ ಅಡಕೆ ಕೊಯ್ಲಿಗೆ ಇನ್ನೂ ದಿನವಿದೆ. ಮಳೆಗಾಲದಲ್ಲಿ ಬಿದ್ದ ಕೊಳೆ ಅಡಕೆಗಳನ್ನು ಹೆಕ್ಕಿ ತೆಗೆದಾಗಿದೆ. ತೋಟವೂ ಸ್ವತ್ಛವಾಗಿ ಇರುವಂಥ ದಿನಗಳು. ಭೂಮಿ ಹುಣ್ಣಿಮೆಯಂದು ತೋಟದಲ್ಲಿಯೇ ಕೂತು ಊಟ ಮಾಡುವ ಸಂಪ್ರದಾಯವಿದೆ. ಇದು ಹೆಚ್ಚು ಕಡಿಮೆ ವಾರ್ಷಿಕವಾಗಿ ಮಲೆನಾಡು ಕಾಣುವ ವರ್ಷಾಕಾಲದ ವಿದಾಯದ ದಿನಗಳ ನೋಟ.
ಆದರೆ ಈ ಬಾರಿ ಇದೇನಾಗಿ ಹೋಗಿದೆ? ಮಳೆಯಿಂದ ತತ್ತರಿಸಿ ಹೋದ ಮಲೆನಾಡು ತನ್ನ ಪ್ರಾಕೃತಿಕ ಹದವನ್ನು ಕಳೆದುಕೊಂಡು ಬಿಟ್ಟಿದೆ. ತೋಟಕ್ಕೆ ಇಳಿದರೆ ಕೊಳೆತು ನಾರುವ ಕೊಳೆ ಅಡಕೆಯ ರಾಶಿ! ದುರ್ಗಂಧ. ಪ್ರತಿ ವರ್ಷ ಕೊಳೆ ಔಷಧಿ ಹಾಕಿದ ಬಳಿಕ ಎÇÉೋ ಸ್ವಲ್ಪ ಪ್ರಮಾಣದಲ್ಲಿ ಕೊಳೆ ರೋಗ ಬಂದು ವಾಸಿಯಾಗಿ ಅಡಕೆ ಬೆಳೆಯನ್ನು ತೀರಾ ಅಲ್ಪ ಪ್ರಮಾಣದಲ್ಲಿ ನಾಶ ಮಾಡಿರುತ್ತಿತ್ತು. ಅದನ್ನು ತೆಗೆದು ಒಣಗಿಸಿ ಕಚ್ಚಾ ಅಡಕೆಯನ್ನು ಸಿದ್ಧ ಪಡಿಸುವಷ್ಟರಲ್ಲಿ ನಿಜವಾದ ಸದೃಢ ಸುಂದರ ಅಡಕೆ ಗೊನೆಗಳು ಮನೆ ಸೇರಲು ಸಿದ್ಧವಾಗಿರುತ್ತಿದ್ದವು. ಅಡಕೆ ಬೆಳೆಗಾರ ಸಂಭ್ರಮದಿಂದ ಅಡಕೆ ಕೊಯ್ಲು ಮಾಡುತ್ತಿದ್ದ. ಆದರೆ ಈ ಬಾರಿ ಮಲೆನಾಡಿನಲ್ಲಿ ಅಡಕೆ ಕೊಯ್ಲಿನ ಸಂಭ್ರಮವೇ ಇಲ್ಲ.
ನೂರರಲ್ಲಿ ತೊಂಬತ್ತು ಭಾಗ ಕೊಳೆ ರೋಗದಿಂದ ಉದುರಿ ಹೋದ ಅಡಕೆಗಳು. ಇದು ಅಡಕೆ ಭಾಗಾಯ್ತುದಾರರ ಜೀವನಾಧಾರವನ್ನೇ ಉಡುಗಿಸಿ ಬಿಟ್ಟಿದೆ. ವಾಹನ ಬಿಡಿ ಮನುಷ್ಯರು ಸಂಚರಿಸಲೂ ಸಾಧ್ಯವಿಲ್ಲದ ಕೊರಕಲು ಬಿದ್ದ ರಸ್ತೆಗಳು. ಅವುಗಳನ್ನು ರಿಪೇರಿ ಮಾಡಿಸಲು ಯಾರು ಮುಂದಾಗಬೇಕೆಂಬುದೇ ಸಮಸ್ಯೆ. ಹಳ್ಳಿಗರು ತಮ್ಮ ತಮ್ಮ ಮನೆಗಳ ಕೂಡು ರಸ್ತೆಗಳನ್ನು ತಾವೇ ಶ್ರಮವಹಿಸಿ ಕಲ್ಲು ಗೊಚ್ಚು ಹಾಕಿ ಸಿದ್ಧಪಡಿಸಿಕೊಂಡಾರು. ಆದರೆ ವಾಹನಗಳ ಓಡಾಟವೇ ಸಾಧ್ಯವಿಲ್ಲದ ಗ್ರಾಮೀಣ ರಸ್ತೆಗಳನ್ನು ದುರಸ್ತಿಗೊಳಿಸಲು ಗ್ರಾಮ ಪಂಚಾಯಿತಿಗಳ ಬಳಿ ಹಣವಿಲ್ಲ. ಸರಕಾರ ಎಂದಿನಂತೆ ತನಗೆ ಸಂಬಂಧವಿಲ್ಲದ ವಿಷಯವೆಂಬಂತೆ ದಿವ್ಯ ನಿರ್ಲಕ್ಷ್ಯ ತೋರಿದೆ. ಗ್ರಾಮೀಣ ಬದುಕು ಈ ಬಾರಿ ಅತ್ಯಂತ ದುಸ್ತರ.
ತೋಟದಲ್ಲಿ ಉದುರಿ ಬಿದ್ದ ಕೊಳೆ ಅಡಕೆ ರಾಶಿಯನ್ನು ನೋಡಿದ ಅಡಕೆ ಬೆಳೆಗಾರನ ಜಂಘಾಬಲವೇ ಉಡುಗಿ ಹೋಗಿದೆ. ಅದನ್ನು ಹೆಕ್ಕಿ ತಂದು ಅಂಗಳದಲ್ಲಿ ಸುಲಿದು ಬೆಂಕಿಯಲ್ಲಿ ಒಣಗಿಸಿ ಶ್ರಮವಹಿಸಿ ಪರಿಷ್ಕರಿಸಿದರೂ ಅತ್ಯಂತ ಕಳಪೆ ಮಟ್ಟದ ಕೊಳೆಅಡಕೆ ಸಿದ್ಧವಾಗುತ್ತದೆ. ಮಾರುಕಟ್ಟೆಯಲ್ಲಿ ಅದಕ್ಕೆ ಬೆಲೆ ಇಲ್ಲ. ಅನಿವಾರ್ಯವೆಂಬಂತೆ ವಹಿಸಲಾದ ಶ್ರಮದ ಖರ್ಚು ವೆಚ್ಚ ಯಾವುದೂ ಅದರಿಂದ ಬರುವಂತಿಲ್ಲ. ಅಲ್ಲದೆ ಈ ಕಳಪೆ ಕೊಳೆ ಅಡಕೆಯಿಂದಾಗಿ “ಅಡಕೆಯ ಮಾನ’ ಹೋಗುವ ಸಂದರ್ಭವೂ ಎದುರಾಗಿದೆ.
ಮಲೆನಾಡಿನ ಅಡಕೆ ಬೆಳೆಗಾರರ ದುರಂತವೆಂದರೆ ಈ ಕೊಳೆ ಅಡಕೆಯ ನಷ್ಟವನ್ನು ಭರಿಸುವಂತೆ ಪ್ರಾಕೃತಿಕ ವಿಪ್ಲವದಡಿ ಸೇರಿಸಿ ಕೊಡುವ ಪರಿಹಾರಕ್ಕೆ ಇದು ಅರ್ಹವಾಗಿಯೇ ಇಲ್ಲ. ಒಂದಲ್ಲ ಒಂದು ದಿನ ನೆರೆ ಪರಿಹಾರದ ಹಣ ಸಿಗಬಹುದೆಂಬ ದೂರದ ಆಸೆ ಉತ್ತರ ಕರ್ನಾಟಕದ ಮಳೆ ಸಂತ್ರಸ್ತರಿಗೆ ಇರಬಹುದು. ಆದರೆ ಮಲೆನಾಡಿನ ಅಡಕೆ ಬೆಳೆಗಾರರು ಈ ಯಾವುದೇ ಭರವಸೆಯನ್ನು ಹೊಂದಿಲ್ಲ. ಪ್ರಕೃತಿ ಮಾತೆ ತಮಗಿತ್ತ ಶಿಕ್ಷೆಯನ್ನು ಮೂಕವಾಗಿ ಅನುಭವಿಸುವ ಮೌನ ರೋದನ ಮಾತ್ರ ಅವರ ಪಾಲಿಗಿದೆ. ಮರಳಿ ಅರಳುವ ಮಲೆನಾಡಿಗಾಗಿ ಪ್ರಾರ್ಥನೆ.
– ಭುವನೇಶ್ವರಿ ಹೆಗಡೆ