ಹೊಸದಿಲ್ಲಿ: ದೇಶದಲ್ಲಿ ಕೋವಿಡ್ ಲಸಿಕೆ ಜನರಿಗೆ ನೀಡಲಾಗುತ್ತಿದೆ, ಸದ್ಯ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದ್ದು, ಮೇ 1ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರದ ಬಳಿಕ ಹಲವು ಮಹಿಳೆಯರಿಗೆ ಒಂದು ಅನುಮಾನ ಕಾಡುತ್ತಿದೆ. ಮಹಿಳೆಯರು ಋತುಮತಿಯಾದ ಸಮಯದಲ್ಲಿ ಕೋವಿಡ್ ಲಸಿಕೆ ಪಡೆಯಬಹುದೇ ಎಂಬ ಅನುಮಾನ ಹಲವರಿಗೆ ಕಾಡಿದೆ. ಅದಲ್ಲದೆ ಋತುಮತಿಯಾಗುವ ಐದು ದಿನ ಮೊದಲು ಮತ್ತು ಐದು ದಿನಗಳ ನಂತರ ಲಸಿಕೆ ಪಡೆಯಬಾರದು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಚಾರ ಪಡೆಯುತ್ತಿದೆ.
ಇದನ್ನೂ ಓದಿ:ಮಿತಿ ಮೀರುತ್ತಿದೆ ಸೋಂಕು: ದೇಶದಲ್ಲಿ 24 ಗಂಟೆಯಲ್ಲಿ 3.49 ಲಕ್ಷ ಸೋಂಕಿತರು ಪತ್ತೆ
ಸಾಮಾಜಿಕ ಜಾಲತಣಗಳಲ್ಲಿ ಈ ಬಗ್ಗೆ ಸುದ್ದಿ ಹರಿದಾಡುತ್ತಿರುವ ಕಾರಣ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಋತು ಚಕ್ರದ ಐದು ದಿನ ಮೊದಲು ಮತ್ತು ಐದು ದಿನ ನಂತರ ಕೋವಿಡ್ ಲಸಿಕೆ ಪಡೆಯಬಾರದು ಎಂಬ ಸುದ್ದಿ ಹರಿದಾಡುತ್ತಿದ್ದು, ಇದು ಸುಳ್ಳು ಸುದ್ದಿ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ರೀತಿಯ ಯಾವುದೇ ಸುಳ್ಳು ಮಾಹಿತಿಯನ್ನು ನಂಬಬೇಡಿ, 18 ವರ್ಷಕ್ಕಿಂತ ಮೇಲ್ಪಟ್ಟವರು ಮೇ 1ರ ನಂತರ ಕೋವಿಡ್ ಲಸಿಕೆಯನ್ನು ಪಡೆಯಬೇಕು ಎಂದು ಸರ್ಕಾರ ತಿಳಿಸಿದೆ.
ವೈದ್ಯರು ಕೂಡಾ ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಕೋವಿಡ್ ಲಸಿಕೆಗೂ, ಋತು ಚಕ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
ಇದನ್ನೂ ಓದಿ:ಆಕ್ಸಿಜನ್ ಕೊರತೆಯಿಂದ ಪ್ರಾಣ ಬಿಟ್ಟ ನವಜಾತ ಅವಳಿ ಶಿಶುಗಳು
ಲಸಿಕೆಯ ಕಾರಣದಿಂದ ಮಹಿಳೆಯರ ಋತುಚಕ್ರಕ್ಕೆ ಏನೂ ತೊಂದರೆ ಉಂಟಾಗುವುದಿಲ್ಲ. ಹಾಗಾಗಿ ಮಹಿಳೆಯರು ನಿರಾತಂಕವಾಗಿ ಕೋವಿಡ್ ಲಸಿಕೆ ಪಡೆಯಬಹುದು ಎಂದು ಸ್ತ್ರೀರೋಗ ತಜ್ಞೆ ಡಾ. ಮುಂಜಾಲ್ ವಿ ಕಪಡಿಯಾ ಹೇಳಿದ್ದಾರೆ.