ಹೊಸದಿಲ್ಲಿ : ಇಸ್ಲಾಮಿಕ್ ವಿವಾಹ ಒಪ್ಪಂದ ‘ನಿಕಾಹ್‌ನಾಮಾ’ ಏರ್ಪಡುವ ಸಂದರ್ಭದಲ್ಲಿ ‘ತ್ರಿವಳಿ ತಲಾಕ್ ಗೆ ನನ್ನ ಸಮ್ಮತಿ ಇರುವುದಿಲ್ಲ’ ಎಂದು ಹೇಳುವ ಆಯ್ಕೆಯು ಮುಸ್ಲಿಂ ಮಹಿಳೆಗೆ ಇದೆಯೇ ? ಎಂಬ ಪ್ರಶ್ನೆಯನ್ನು ಇಂದು ಬುಧವಾರ ಸುಪ್ರೀಂ ಕೋರ್ಟ್ ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಗೆ ಕೇಳಿತು.
“ಇಂತಹ ಒಂದು ಶರತ್ತನ್ನು ನಿಕಾಹ್‌ನಾಮಾದಲ್ಲಿ ಸೇರಿಸುವಂತೆ ಎಲ್ಲ ಕಾಝಿಗಳಿಗೆ ಕೇಳಿಕೊಳ್ಳಲು ಸಾಧ್ಯವೇ?’ ಎಂದು ವರಿಷ್ಠ ನ್ಯಾಯಮೂರ್ತಿ ಜೆ ಎಸ್ ಖೇಹರ್ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠವು ಪ್ರಶ್ನಿಸಿತು.
ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ನ್ಯಾಯವಾದಿಯಾಗಿದ್ದು ತ್ರಿವಳಿ ತಲಾಕ್ ವಿಚಾರಣೆಯಲ್ಲಿ ಎಐಎಂಪಿಎಲ್‌ಬಿ ಅನ್ನು ಪ್ರತಿನಿಧಿಸುತ್ತಿರುವ ಕಪಿಲ್ ಸಿಬಲ್ ಅವರಿಂದ ಈ ಪ್ರಶ್ನೆಗಳಿಗೆ ಉತ್ತರ ಕೇಳಿದ ನ್ಯಾಯ ಪೀಠ “ನಮ್ಮ ಕಡೆಯಿಂದ ಈ ವಿಷಯದಲ್ಲಿ ಯಾವುದೇ ಊಹನಾತ್ಮಕ ಉತ್ತರವನ್ನು ನಿರೀಕ್ಷಿಸಬೇಡಿ’ ಎಂದು ಸ್ಪಷ್ಟಪಡಿಸಿತು.
ತ್ರಿವಳಿ ತಲಾಕ್ ವಿಚಾರಣೆಯು ಇಂದು ಐದನೇಯ ದಿನ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ. ತ್ರಿವಳಿ ತಲಾಕ್ ಮಾತ್ರವಲ್ಲದೆ, ಮುಸ್ಲಿಮರಲ್ಲಿನ ಬಹುಪತ್ನಿತ್ವ, ನಿಕಾಹ್ ಹಲಾಲ ಮುಂತಾದ ಪದ್ಧತಿಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಲಾದ ಅರ್ಜಿಗಳು ಕೂಡ ಸುಪ್ರೀಂ ಕೋರ್ಟ್ ಮುಂದೆ ಇದೆ; ಆದರೆ ಕಾಲಾವಕಾಶದ ಕೊರತೆಯಿಂದಾಗಿ ತಾನೀಗ ತ್ರಿವಳಿ ತಲಾಕ್‌ನ ಸಾಂವಿಧಾನಿಕ ಸಿಂಧುತ್ವದ ಪ್ರಶ್ನೆಯನ್ನು ಮಾತ್ರವೇ ಕೈಗೆತ್ತಿಕೊಳ್ಳುತ್ತಿರುವುದಾಗಿ ಸುಪ್ರೀಂ ಕೋರ್ಟ್ ಈಗಾಗಲೇ ಸ್ಪಷ್ಟಪಡಿಸಿದೆ.