Advertisement

ಕನಿಷ್ಠ ಹೊರಠಾಣೆಯಿದ್ದರೂ ಈ ಪ್ರಕರಣ ತಡೆಯಬಹುದಿತ್ತೇ?

10:14 AM Nov 28, 2018 | Team Udayavani |

ಮಹಾನಗರ: ಪ್ರೇಕ್ಷಣೀಯ ಸ್ಥಳವಾದ ತಣ್ಣೀರು ಬಾವಿ ಬೀಚ್‌ಗೆ ಹೊಂದಿ ಕೊಂಡ ಪ್ರದೇಶದಲ್ಲಿ ಪ್ರತ್ಯೇಕ ಪೊಲೀಸ್‌ ಠಾಣೆಯಾಗಲೀ ಅಥವಾ ಕನಿಷ್ಠ ಹೊರ ಠಾಣೆಯಾದರೂ ಇದ್ದಿದ್ದರೆ ಅತ್ಯಾಚಾರ ಪ್ರಕರಣ ತಡೆಯಬಹುದಿತ್ತು ಎಂಬ ಅಭಿಪ್ರಾಯ ಸ್ಥಳೀಯವಾಗಿ ಕೇಳಿಬಂದಿದೆ. ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದು, ಮಂಗಳೂರಿನ ಬೀಚ್‌ಗಳಿಗೆ ಬರುವ ಪ್ರವಾಸಿಗರಲ್ಲಿಯೂ ಆತಂಕ ಮೂಡಿಸಿದೆ.

Advertisement

ಹೊರ ಠಾಣೆ ಸ್ಥಾಪನೆ ಸಂಬಂಧ ಪ್ರಸ್ತಾವವನ್ನು ಎರಡು ವರ್ಷಗಳ ಹಿಂದೆ ಮಂಗಳೂರು ಪೊಲೀಸ್‌ ಕಮಿಷನರೆಟ್‌ ವತಿಯಿಂದ ಸರಕಾರಕ್ಕೆ ಕಳುಹಿಸಲಾಗಿದೆ. ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರೂ ಸ್ವಲ್ಪ ಮುತುವರ್ಜಿ ವಹಿಸಿ ಸರಕಾರದ ಮೇಲೆ ಒತ್ತಡ ತಂದಿದ್ದರೆ ಈ ಬೇಡಿಕೆ ಈಡೇರುತ್ತಿತ್ತು. ಆಗ ಇಂಥ ಪ್ರಕರಣಗಳಿಗೆ ಕಡಿವಾಣ ಸಾಧ್ಯವಿತ್ತು ಎಂದು ಹೇಳಲಾಗುತ್ತಿದೆ.

13 ಕಿಮೀ ಸಾಗಬೇಕು
ಈ ಭಾಗದ ಜನರು ದೂರು ನೀಡಲು ಅಥವಾ ಅಪರಾಧ-ಅಕ್ರಮ ಚಟುವಟಿಕೆಗಳು ನಡೆದಾಗ ಸುಮಾರು 13 ಕಿ.ಮೀ. ದೂರದ ಪಣಂಬೂರು ಪೊಲೀಸ್‌ ಠಾಣೆಯಿಂದಲೇ ಪೊಲೀಸರು ಬರಬೇಕು. ಈ ಎಲ್ಲ ಪ್ರದೇಶಗಳು ಭೌಗೋಳಿಕವಾಗಿ ದ್ವೀಪದ ಮಾದರಿಯಲ್ಲಿದ್ದು, ಮಂಗಳೂರು ನಗರದಿಂದ ಅಲ್ಲಿಗೆ ಕ್ರಮಿಸಲು ದೋಣಿ ಅಥವಾ ಬೋಟ್‌ ಅನ್ನು ಅವಲಂಬಿಸಬೇಕು. ಹೀಗಿರುವಾಗ, ತಣ್ಣೀರುಬಾವಿ, ಬೆಂಗ್ರೆ ಹಾಗೂ ತೋಟಬೆಂಗ್ರೆ ಪ್ರದೇಶಕ್ಕೆ ಪ್ರತ್ಯೇಕ ಹೊಸ ಪೊಲೀಸ್‌ ಠಾಣೆ ಸ್ಥಾಪಿಸಬೇಕೆಂಬುದು ಸ್ಥಳೀಯರು ಎಂಟು ವರ್ಷ ಗಳಿಂದ ಬೇಡಿಕೆ ಸಲ್ಲಿಸುತ್ತಲೇ ಇದ್ದಾರೆ. ಈಗಲೂ ಈಡೇರಿಲ್ಲ.

ಸುಮಾರು ಏಳೆಂಟು ವರ್ಷಗಳ ಹಿಂದೆ ಬೆಂಗ್ರೆ ಪ್ರದೇಶವು ಹಳೆ ಬಂದರಿನಲ್ಲಿದ್ದ ಪೋರ್ಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿತ್ತು. ಮಂಗಳೂರು ಪೊಲೀಸ್‌ ಕಮಿಷನರೇಟ್‌ ರಚನೆಯಾದ ಬಳಿಕ ಪೋರ್ಟ್‌ ಪೊಲೀಸ್‌ ಠಾಣೆಯನ್ನು ಬರ್ಖಾಸ್ತು ಮಾಡಿ ಅದರ ವ್ಯಾಪ್ತಿಯಲ್ಲಿದ್ದ ಬೆಂಗ್ರೆಯನ್ನು ಪಣಂಬೂರು ಪೊಲೀಸ್‌ ಠಾಣೆ ವ್ಯಾಪ್ತಿಗೆ ಸೇರಿಸಲಾಯಿತು. ಈ ಹಿನ್ನೆಲೆಯಲ್ಲಿ ಬೆಂಗ್ರೆಯಲ್ಲಿ ಪ್ರತ್ಯೇಕ ಠಾಣೆ ಬೇಕೆಂದು ಸ್ಥಳೀಯರು ಬೇಡಿಕೆ ಇಟ್ಟಿದ್ದರು. 

 ಸುದಿನ ಎಚ್ಚರಿಸಿತ್ತು
ತಣ್ಣೀರುಬಾವಿ ಬೀಚ್‌ನಲ್ಲಿ ಪ್ರವಾಸಿಗರಿಗೆ ಸೂಕ್ತ ಸುರಕ್ಷತೆ ಇಲ್ಲ. ಅದರಲ್ಲೂ ಅತ್ಯಾಚಾರ ನಡೆದ ತೋಟ ಬೆಂಗ್ರೆ ಪ್ರದೇಶದ ಕಡಲಕಿನಾರೆಯು ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ ಎಂಬುದಾಗಿ ‘ಸುದಿನ’ವು ಒಂದು ತಿಂಗಳ ಹಿಂದೆಯಷ್ಟೇ ವಿಸ್ತೃತ ವರದಿ ಪ್ರಕಟಿಸಿತ್ತು. ಇನ್ನೊಂದೆಡೆ ನಗರದಿಂದ ಕೂಗಳತೆ ದೂರದಲ್ಲಿರುವ ತಣ್ಣೀರುಬಾವಿ ಬೀಚ್‌, ಬೆಂಗ್ರೆ, ತೋಟಬೆಂಗ್ರೆ ಪ್ರದೇಶದಲ್ಲಿ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಪ್ರತ್ಯೇಕ ಪೊಲೀಸ್‌ ಠಾಣೆ ಇಲ್ಲ ಎಂಬ ಬಗ್ಗೆಯೂ ವರದಿ ಮಾಡಲಾಗಿತ್ತು.

Advertisement

 ಭದ್ರತೆಗೆ ಆಗ್ರಹಿಸುವೆ
ಸ್ಥಳೀಯ ಕಾರ್ಪೊರೇಟರ್‌ ಮೀರಾ ಕರ್ಕೇರ ಅವರು ಸುದಿನಕ್ಕೆ ಪ್ರತಿಕ್ರಿಯಿಸಿ, ಕೆಲವು ದಿನಗಳ ಹಿಂದೆ ತೋಟ ಬೆಂಗ್ರೆ ಕಡಲ ಕಿನಾರೆಗೆ ನಾನು ತೆರಳಿದ್ದೆ. ಆ ಸಮಯದಲ್ಲಿ ಕೆಲ ಯುವಕರು ಮಾದಕ ದ್ರವ್ಯ ಸೇವಿಸುತ್ತಿದ್ದರು. ಬುದ್ಧಿ ಹೇಳಿದರೆ ಸ್ಥಳ ಬದಲಾಯಿಸಿದರೇ ಹೊರತು ಅಲ್ಲಿಂದ ತೆರಳಲಿಲ್ಲ. ಈ ಬಗ್ಗೆ ಪಣಂಬೂರು ಪೊಲೀಸರಿಗೆ ಮಾಹಿತಿ ನೀಡಿದ್ದೆ. ಈ ಪ್ರದೇಶಗಳಲ್ಲಿ ಭದ್ರತಾ ಸಿಬಂದಿ, ಸಿ.ಸಿ. ಕೆಮರಾ ಅಳವಡಿಸಲು ಹೇಳುವೆ.
ಮೀರಾ ಕರ್ಕೇರಾ,
 ಸ್ಥಳೀಯ ಕಾರ್ಪೊರೇಟರ್‌

ಸಿಸಿ ಕೆಮರಾ ಅಳವಡಿಸಲಿ
ತೋಟ ಬೆಂಗ್ರೆ ಪ್ರದೇಶದಲ್ಲಿ ಭದ್ರತೆಯ ದೃಷ್ಟಿಯಿಂದ ಸಿಸಿ ಕೆಮರಾ ಅಳವಡಿಸಬೇಕು. ಈ ಹಿಂದೆ ಪೊಲೀಸ್‌ ಕಮಿಷನರ್‌ ಸ್ಥಳಕ್ಕೆ ಆಗಮಿಸಿ ಕೆಮರಾ ಅಳವಡಿಸಿಕೆ ಸೂಚಿಸಿದ್ದರೂ ಜಾರಿಯಾಗಿಲ್ಲ.
– ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next