ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿ ಜಾಮೀನಿಗೆ ಅರ್ಜಿ ಸಲ್ಲಿಸಿರುವ ದರ್ಶನ್ ಅವರ ವಕೀಲ ಪಿವಿ ನಾಗೇಶ್ ತಮ್ಮ ವಾದವನ್ನು ಗುರುವಾರ(ಅ.10ರಂದು) ಮುಂದುವರೆಸಿದ್ದಾರೆ. 57ನೇ ಸಿಸಿಹೆಚ್ ಕೋರ್ಟಿನಲ್ಲಿ ಎಸ್‌ಪಿಸಿ ಪ್ರಸನ್ನ ಕುಮಾರ್ ಅವರ ವಾದಕ್ಕೆ ಪ್ರತಿಯಾಗಿ ನಾಗೇಶ್ ಅವರು ವಾದ ಮಂಡಿಸಿದ್ದಾರೆ.
ನಿನ್ನೆ ಪ್ರಸನ್ನ ಕುಮಾರ್ ಸಾಕ್ಷಿಗಳ ಟವರ್ ಲೊಕೇಶನ್ ಒಂದೇ ಕಡೆಯಲ್ಲಿ ಇತ್ತು ಎಂದು ವಾದ ಮಂಡಿಸಿದ್ದರು. ಇದಕ್ಕೆ ಪ್ರತಿಯಾಗಿ ಕೌಂಟರ್ ವಾದವನ್ನು ಮಾಡಿರುವ ನಾಗೇಶ್, “ಪ್ರಸನ್ನ ಕುಮಾರ್ ಅವರನ್ನು ತನಿಖಾ ಅಧಿಕಾರಿಗಳು ತಪ್ಪು ದಾರಿಗೆ ಎಳೆದಿದ್ದಾರೆ. ಜೂ.9ರಂದು ಗೂಗಲ್ ಅಡ್ರೆಸ್ ಲೊಕೇಷನ್, ಗೂಗಲ್ ಮ್ಯಾಪ್ ಆಧರಿಸಿದ ದಾಖಲೆ ಸಲ್ಲಿಕೆ ಮಾಡಲಾಗಿದೆ. ಈ ಮ್ಯಾಪ್ ಆಧರಿಸಿ ನಾನು ಇಲ್ಲಿ ನಿನ್ನೆ ಕುಳಿತಿದ್ದೆ. ಆದರೆ, ಹೈಕೋರ್ಟ್ನಲ್ಲಿ ಕುಳಿತಿರುವಂತೆ ತೋರಿಸಬಹುದು. ಟವರ್ ಲೊಕೇಷನ್ ಆಧರಿಸಿ ನಡೆಸಿದ ತನಿಖೆಗೆ ಮಹತ್ವವಿಲ್ಲ’ʼ ಎಂದು ನಾಗೇಶ್ ಅವರು ಹೇಳಿದ್ದಾರೆ.
“ಆರೋಪ ಪಟ್ಟಿಯಲ್ಲಿ ಗೂಗಲ್ ಮ್ಯಾಪ್ ಸಿದ್ಧಪಡಿಸಿ ನಕ್ಷೆ ಸಿದ್ಧಪಡಿಸಿಕೊಂಡಿದ್ದಾರೆ. ಈ ನಕ್ಷೆಯಲ್ಲಿ ಆರೋಪಿಗಳ ಫೋಟೋ ತೋರಿಸಿದ್ದಾರೆ. ಇದು ಟವರ್ ಮ್ಯಾಪ್ ಆಧರಿಸಿ ತಯಾರಿಸಿದ ನಕ್ಷೆಯಾಗಿದೆ. ಇದು ಪೊಲೀಸರು ತಮಗೆ ಬೇಕಾದಂತೆ ತಯಾರಿಸಿದ ನಕ್ಷೆ. ಇದು ಸ್ಯಾಟ್ ಲೈಟ್ ಪಿಕ್ಚರ್ ಆಧರಿಸಿದ ಮ್ಯಾಪ್ ಅಲ್ಲ” ಎಂದು ವಾದ ಮಂಡಿಸಿದ್ದಾರೆ.
ದರ್ಶನ್ ಮೊಬೈಲ್ ಹೇಮಂತ್ ಎನ್ನುವವರ ಹೆಸರಿನಲ್ಲಿದೆ. ದರ್ಶನ್ ಫೋಟೋವನ್ನು ಈ ಮ್ಯಾಪ್ ನಲ್ಲಿ ಅಂಟಿಸಲಾಗಿದೆ. ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಅಂಟಿಸಿರುವ ಫೋಟೋ ಇದಾಗಿದೆ ಎಂದು ನಾಗೇಶ್ ಹೇಳಿದ್ದಾರೆ
ಲೊಕೇಷನ್ ಆಧಾರದಲ್ಲಿ ಸಿದ್ದಪಡಿಸಿರುವ ಫೋಟೋವೆಂದು ನಕ್ಷೆಯ ಕೆಳಗೆ ಅದನ್ನು ಪೊಲೀಸರೇ ಬರೆದಿದ್ದಾರೆ ಅಲ್ವಾ ಎಂದು ಜಡ್ಜ್ ಜೈಶಂಕರ್ ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ನಾಗೇಶ್, “‘ಇವರು ಸಿದ್ಧಪಡಿಸಿರುವುದೇ ನಕಲಿ ನಕ್ಷೆ. ಇದನ್ನು ನಾನು ಅವರು ಕೊಟ್ಟಿರುವ ದಾಖಲೆಯಲ್ಲೇ ತೋರಿಸುತ್ತಿದ್ದೇನೆ. ತನಿಖಾಧಿಕಾರಿ ನೀಡಿದ ಮಾಹಿತಿ ಮೇರೆಗೆ ಇದನ್ನು ಸಿದ್ಧಪಡಿಸಲಾಗಿದೆ. ಈ ನಕ್ಷೆಗೆ ಯಾವುದೇ ಮಹತ್ವ ಕೊಡಬಾರದು’ ಎಂದು ಅವರು ಹೇಳಿದ್ದಾರೆ.
‘ʼಪಟ್ಟಣಗೆರೆ ಶೆಡ್ ನಲ್ಲಿ ಕೆಲಸ ಮಾಡುತ್ತಿರುವವರ ವಿವರ ಸಾಕ್ಷಿಯ ಹೇಳಿಕೆಯಲ್ಲಿದೆ. ಇದನ್ನು ಆಧರಿಸಿ ಅವರ ಫೋಟೋ ಬಳಸಿಕೊಂಡು ನಕ್ಷೆ ಸಿದ್ದಪಡಿಸಲಾಗಿದೆ. ಸಾಮಾನ್ಯವಾಗಿ ಆರೋಪಿಗಳನ್ನು ಬಂಧಿಸಿದಾಗ ಅವರ ಮೊಬೈಲ್ ನ್ನು ಸೀಜ್ ಮಾಡಲಾಗುತ್ತದೆ. ಅದರಲ್ಲಿರುವ ಮಾಹಿತಿಯನ್ನು ಆಧರಿಸಿ ಕೃತ್ಯದ ಸಮಯದ ಲೊಕೇಷನ್ ಪಡೆಯಲಾಗುತ್ತದೆ. ಆದರೆ ಇಲ್ಲಿ ಅವರ ಮೊಬೈಲ್ ಸೀಜ್ ಮಾಡದೆಯೇ ಅವರ ಲೊಕೇಷನ್ ಹೇಗೆ ಪಡೆದರು? ಎಂದು ನಾಗೇಶ್ ಪ್ರಶ್ನಿಸಿದ್ದಾರೆ.
ಗೂಗಲ್ ಅಡ್ರೆಸ್ ಪಡೆದಿಲ್ಲ, ಕಾಲ್ ರೆಕಾರ್ಡ್ಸ್ ಮಾಹಿತಿಯನ್ನು ಸಂಗ್ರಹಿಸಿಲ್ಲ. ಇದ್ಯಾವುದು ಇಲ್ಲದೆಯೇ ಕೃತ್ಯ ನಡೆಯುವಾಗ ಸಾಕ್ಷಿಗಳು ಅಲ್ಲಿದ್ದರು ಎನ್ನುವುದನ್ನು ಹೇಳಲು ಹೇಗೆ ಸಾಧ್ಯ? ಕೃತ್ಯ ನಡೆಯುವಾಗ ಅವರೆಲ್ಲರೂ ಅಲ್ಲೇ ಇದ್ದರು ಎಂಬಂತೆ ಬಿಂಬಸಲಾಗಿದೆ. ಪೊಲೀಸರೇ ಸಿದ್ದಪಡಿಸಿರುವ ಈ ನಕ್ಷೆ ವಿಶ್ವಾಸಕ್ಕೆ ಅರ್ಹವಲ್ಲವೆಂದು ನಾಗೇಶ್ ಹೇಳಿದ್ದಾರೆ.
‘ಎ1, 2, 5, 10, 13 ಎಲ್ಲರ ನಿವಾಸಗಳೂ ಈ ಪ್ರದೇಶದಲ್ಲಿಯೇ ಇವೆ. ಆ ಪ್ರದೇಶದಲ್ಲಿರುವವರ ನಿವಾಸಿಗಳೆಲ್ಲರ ಲೊಕೇಷನ್ ಕೃತ್ಯದ ಸ್ಥಳದಲ್ಲೇ ದೊರೆಯುತ್ತದೆ. ಹೀಗಾಗಿ ಟವರ್ ಲೊಕೇಷನ್ ಸಿಕ್ಕಿದೆ ಎಂದು ಹೇಳಿದ ಮಾತ್ರಕ್ಕೆ ಅವರು ಕೃತ್ಯದ ಸ್ಥಳದಲ್ಲಿದ್ದರೆನ್ನಲಾಗುವುದಿಲ್ಲ. ಪಟ್ಟಣಗೆರೆ ಶೆಡ್ನ 5 ಕಿ.ಮೀ ವ್ಯಾಪ್ತಿಯನ್ನು ಈ ಟವರ್ ಲೊಕೇಷನ್ ತೋರಿಸುತ್ತದೆ’ ಎಂದು ನಾಗೇಶ್ ಹೇಳಿದ್ದಾರೆ.
ಟವರ್ ಲೊಕೇಷನ್ , ತಾಂತ್ರಿಕ ಸಾಕ್ಷಿ ತಿರುಚಬಹುದು. ಕೊಲೆಯಾದಾಗ ಸಾಕ್ಷಿಗಳು ಅಲ್ಲೇ ಇದ್ದರೂ ಎನ್ನುವುದು ಹೇಳಲು ಹೇಗೆ ಸಾಧ್ಯ. ಗೂಗಲ್ ಮ್ಯಾಪ್ ನಲ್ಲಿ ಎಡಿಟ್ ಮಾಡಬಹುದು ಎಂದು ಅವರು ವಾದಿಸಿದ್ದಾರೆ.
ನಾನು ಈ ಕೇಸ್ ನಲ್ಲಿ ನಿರ್ದೋಷಿ ಎಂದು ಸಾಬೀತು ಮಾಡಲು ವಾದ ಮಾಡುತ್ತಿದ್ದೇನೆ. ಬೇಲ್ ಗೆ ಪೊಲೀಸರ ತನಿಖೆ ಸರಿಯಾಗಿಲ್ಲವೆಂದು ಹೇಳುತ್ತಿದ್ದೇನೆ ಎಂದು ನಾಗೇಶ್ ಹೇಳಿದ್ದಾರೆ.
ಜೂ.5ರವರೆಗೆ ದರ್ಶನ್‌ಗೆ ರೇಣುಕಾಸ್ವಾಮಿ ಬಗ್ಗೆ ತಿಳಿದಿರಲಿಲ್ಲ:
ಆರೋಪಪಟ್ಟಿಯಲ್ಲಿ ರೇಣುಕಾಸ್ವಾಮಿ ಬಗ್ಗೆ ದರ್ಶನ್‌ಗೆ ಫೆಬ್ರವರಿಯಲ್ಲೇ ತಿಳಿದಿತ್ತು ಎಂದು ಹೇಳಲಾಗಿದೆ. ದರ್ಶನ್ ಜತೆ ಪವಿತ್ರಾ ಗೌಡ ಸಂಬಂಧ ಸರಿಯಾಗಿಲ್ಲ ಎಂದು ಉಲ್ಲೇಖಿಸಲಾಗಿದೆ. ದರ್ಶನ್ ಕಾಶ್ಮೀರಕ್ಕೆ ಹೋಗಿದ್ದರು. ಪತ್ನಿ ಜತೆ ವಿದೇಶಕ್ಕೆ ಹೋದಾಗಲೂ ಪವಿತ್ರಾ ದರ್ಶನ್ ಜತೆ ಮಾತು ಬಿಟ್ಟಿದ್ದರು. ಜೂ.5 ರಂದು ಪವನ್‌ಗೆ ರೇಣುಕಾಸ್ವಾಮಿ ಬಗ್ಗೆ ಗೊತ್ತಾಗಿದೆ. ಅದೇ ಸಮಯದಲ್ಲೇ ದರ್ಶನ್‌ಗೂ ರೇಣುಕಾಸ್ವಾಮಿ ಬಗ್ಗೆ ಗೊತ್ತಾಗಿದೆ. ಹೀಗಾಗಿ ಮೋಹನ್ ರಾಜ್ ಕೊಟ್ಟ ಹಣವನ್ನು ಕೊಲೆಗೆಂದು ಸಂಗ್ರಹಿಸಿ ಇಡಲು ಹೇಗೆ ಸಾಧ್ಯ? ಪವಿತ್ರಾ ದರ್ಶನ್ ಜತೆ ಮಾತು ಬಿಟ್ಟಿರುವಾಗ ದರ್ಶನ್‌ಗೆ ರೇಣುಕಾಸ್ವಾಮಿ ಬಗ್ಗೆ ತಿಳಿದಿರಲು ಸಾಧ್ಯವೇ? ಎಂದು ಎಸ್ ಪಿಪಿ ಅವರ ವಾದಕ್ಕೆ ನಾಗೇಶ್ ಅವರು ಪ್ರತಿವಾದವನ್ನು ಮಂಡಿಸಿದ್ದಾರೆ.
ಪೋಸ್ಟ್ ಮಾರ್ಟಂ ವರದಿ ಉಲ್ಲೇಖಿಸಿದ ವಕೀಲರು:
ದೇಹದ ಬೇರೆ ಬೇರೆ ಗಾಯದ ಬಗ್ಗೆ ಪೋಸ್ಟ್ ಮಾರ್ಟಂ ವೈದ್ಯರು ಹೇಳಿದ್ದಾರೆ. ಆದರೆ ದೇಹದ ಪಂಚನಾಮೆಯಲ್ಲಿ ವೃಷಣದ ಬಳಿ ಗಾಯದ ಬಗ್ಗೆ ಉಲ್ಲೇಖ ಮಾಡಿಲ್ಲ. ಬಲತೊಡೆಯ ಕೆಳಭಾಗದಲ್ಲಿ ಹೆಪ್ಪುಗಟ್ಟಿದ ಗಾಯದ ಬಗ್ಗೆ ಉಲ್ಲೇಖ ಮಾಡಲಾಗಿದೆ. ಬಲತೊಡೆಯ ಕೆಳಭಾಗದಲ್ಲಿ ವೃಷಣ ಇರುತ್ತದೆಯೇ? ನಾಗೇಶ್ ಪ್ರಶ್ನಿಸಿದ್ದಾರೆ.
ಮಣ್ಣು ಮೆತ್ತಿದ ದರ್ಶನ್ ಶೂ ವಶಕ್ಕೆ ಪಡೆಯಲಾಗಿದೆ. ಅದರಲ್ಲಿ ರಕ್ತದ ಕಲೆ ಇರುವುದನ್ನು ಉಲ್ಲೇಖಿಸಿಲ್ಲ. ಶೂನಲ್ಲಿ ಮೆತ್ತಿದ್ದ ಮಣ್ಣಿನ ಬಗ್ಗೆ ಪಂಚನಾಮೆಯಲ್ಲಿ ಉಲ್ಲೇಖಿಸಿಲ್ಲ. ಎಫ್ ಎಸ್ ಎಲ್, ಪಂಚರ ಸಮ್ಮುಖದಲ್ಲಿ ವಶಕ್ಕೆ ಪಡೆಯಲಾಗಿದೆ. ಆಗ ಇಲ್ಲದ ರಕ್ತದ ಕಲೆ ನಂತರ ಹೇಗೆ ಬಂದಿತು. ಎಫ್ ಎಸ್ ಎಲ್ ವರದಿ ವೇಳೆ ರಕ್ತದ ಕಲೆ ಅಂಶ ಹೇಗೆ ಬಂತು? ಮೇಲ್ನೋಟಕ್ಕೆ ಇಲ್ಲಿ ಸಾಕ್ಷ್ಯವನ್ನು ಸೃಷ್ಟಿಸಲಾಗಿದೆ ಎಂದು ನಾಗೇಶ್ ವಾದಿಸಿದ್ದಾರೆ.
ದರ್ಶನ್ ಅವರಿಗೆ ಸಹಸ್ರಾರು ಅಭಿಮಾನಿಗಳಿದ್ದಾರೆ. ಸಿನಿಮಾ ಶೂಟಿಂಗ್ ಗಾಗಿ ನಿರ್ಮಾಪಕರು ಹಣ ಹೂಡಿಕೆ ಮಾಡಿದ್ದಾರೆ. ಪ್ರತಿನಿತ್ಯ 500 ಕುಟುಂಬಗಳಿಗೆ ದರ್ಶನ್ ಸಿನಿಮಾದ ಮೇಲೆ ಕೆಲಸ ಅವಲಂಬಿತವಾಗಿದೆ. ಅವರಿಗೆಲ್ಲಾ ಈಗ ಕೆಲಸ ಇಲ್ಲದಂತಾಗಿದೆ ಎಂದು ಹೇಳಿ ತಮ್ಮ ವಾದವನ್ನು ಮುಗಿಸಿದ್ದಾರೆ.
ಪ್ರಸನ್ನ ಕುಮಾರ್ ಆಕ್ಷೇಪ:
ಇದಕ್ಕೆ ಅಕ್ಷೇಪ ವ್ಯಕ್ತಪಡಿಸಿದ ಪ್ರಸನ್ನ ಕುಮಾರ್, “ಮನೆಯಲ್ಲಿ ಶೂ ಇಟ್ಟ ಬಗ್ಗೆ ದರ್ಶನ್ ಸ್ವ ಇಚ್ಚಾ ಹೇಳಿಕೆಯಿದೆ. ಅದರಂತೆ ಮನೆಯಲ್ಲಿ ಶೂವಿರಲಿಲ್ಲ. ಪತ್ನಿಯ ಮನೆಯಲ್ಲಿ ಶೂ ವಶಕ್ಕೆ ಪಡೆದಿದ್ದಾರೆ. ಮಣ್ಣಷ್ಟೆ ಅಲ್ಲ ರಕ್ತದ ಕಲೆಯೂ ಸಿಕ್ಕಿದೆ” ಎಂದು ಪ್ರಸನ್ನ ಕುಮಾರ್ ಕೌಂಟರ್ ವಾದವನ್ನು ಮಾಡಿದ್ದಾರೆ.
ಎಸ್ ಪಿಪಿ ವಾದ ಮಂಡನೆ: ಇನ್ನು ನಾಗೇಶ್ ಅವರ ವಾದಕ್ಕೆ ಪ್ರತಿಯಾಗಿ ವಾದವನ್ನು ಆರಂಭಿಸಿದ ಪೊಲೀಸರ ಪರ ಎಸ್ ಪಿಪಿ , “ಆರೋಪಿಗಳ, ಸಾಕ್ಷಿಗಳ ಸಿಡಿಆರ್ ದತ್ತಾಂಶವನ್ನು ವಿಶ್ಲೇಷಣೆ ಮಾಡಲಾಗಿದೆ. 10 ಸಾವಿರ ಪುಟಗಳ ಸಿಡಿಆರ್ ದತ್ತಾಂಶ ವಿಶ್ಲೇಷಣೆ ಮಾಡಲಾಗಿದೆ. ಸಿಡಿಆರ್‌ನಲ್ಲಿ ಟವರ್ ನ ಜಿಪಿಎಸ್ ಲಾಂಗಿಟ್ಯೂಡ್, ಲ್ಯಾಟಿಟ್ಯೂಡ್ ಸಂಗ್ರಹಿಸಲಾಗಿದೆ. ಇದು ನಾವು ನಿಂತಿರುವ ಸ್ಥಳದ ನಿಖರತೆ ತೋರಿಸುತ್ತದೆ. ಹೆಚ್ಚೆಂದರೆ 5 ಮೀಟರ್ ವ್ಯತ್ಯಾಸವಿರುತ್ತದೆ. ಇದು ತನಿಖಾಧಿಕಾರಿಗಳ ಕರ್ತವ್ಯವಾಗಿರುವುದರಿಂದ ನಕ್ಷೆ ತಯಾರಿಸಿದ್ದಾರೆ. ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ ಡಿಗ್ರಿ ಸಹಿತ ನಿಖರತೆ ಇದೆ. 10 ಪುಟ ಕೊಡುವ ಬದಲು ನಕ್ಷೆಯನ್ನು ತಯಾರಿಸಿದ್ದಾರೆ. ಎ14 ಗೂಗಲ್ ನಲ್ಲಿ ಸಾಕ್ಷ್ಯ ನಾಶದ ಬಗ್ಗೆ ಸರ್ಚ್ ಮಾಡಿದ್ದಾನೆ. ಲೊಕೇಶಷನ್ ಸಿಗದಂತೆ ಮಾಡುವುದು ಹೇಗೆಂದು ಸರ್ಚ್ ಮಾಡಿದ್ದಾನೆ. ಐಪಿ ಅಡ್ರೆಸ್ ಆಧರಿಸಿ ನಾವು ತನಿಖೆ ನಡೆಸಿಲ್ಲ. ಗೂಗಲ್ ಸರ್ಚ್ ಮೂಲಕ ಲೊಕೇಷನ್ ತೆಗೆಯುವುದು ಹೇಗೆ? ಪೊಲೀಸರು ಹೇಗೆ ಲೊಕೇಷನ್ ಪತ್ತೆ ಹಚ್ಚುತ್ತಾರೆ ಎನ್ನುವುದನ್ನು ಎ14 ಸರ್ಚ್ ಮಾಡಿದ್ದಾನೆ. ಕೃತ್ಯದಲ್ಲಿ ಭಾಗಿಯಾಗದೇ ಇದ್ದರೆ ಇದನ್ನೆಲ್ಲ ಹೇಗೆ ಸರ್ಚ್ ಮಾಡಲು ಸಾಧ್ಯ ಎಂದು ವಾದ ಮಂಡಿಸಿದ್ದಾರೆ.
ದರ್ಶನ್ ಬಳಸಿದ ಮೊಬೈಲ್ ಸಿಮ್ ಹೇಮಂತ್ ಹೆಸರಿನಲ್ಲಿದೆ ಎಂದು ಹೇಳಿದ್ದಾರೆ. ಪವಿತ್ರಾ ಗೌಡ ಆದರೆ ಮಿಸ್ ಯೂ, ಲವ್ ಯೂ ಮುದ್ದು ಎಂದು ಮೆಸೇಜ್ ಮಾಡಿರುವುದು ಹೇಮಂತ್ ಅವರಿಗೆಯೇ? ಎಂದು ಎಸ್ ಪಿಪಿ ಪ್ರಶ್ನಿಸಿದ್ದಾರೆ.
ಬಿಲಿಯನೇರ್ ಬಳಿ ಸಾವಿರಾರು ಉದ್ಯೋಗಿಗಳು ಇದ್ದಾರೆಂದು ಜಾಮೀನು ನೀಡಲಾಗಿಲ್ಲ. ಸುಪ್ರೀಂ ಕೋರ್ಟ್ ಸುಬ್ರತಾ ರಾಯ್‌ಗೆ ಜಾಮೀನು ನೀಡಿರಲಿಲ್ಲ. ಆರ್ಥಿಕ ಅಪರಾಧಕ್ಕೂ ಜಾಮೀನು ನೀಡಿರಲಿಲ್ಲ. ಹೀಗಾಗಿ ದರ್ಶನ್ ಗೂ ಜಾಮೀನು ನೀಡಬಾರದೆಂದು ಎಸ್ ಪಿಪಿ ವಾದಿಸಿದ್ದಾರೆ.
ಎರಡೂ ಕಡೆಯ ವಾದ – ಪ್ರತಿವಾದವನ್ನು ಆಲಿಸಿದ ಜಡ್ಜ್ ಜೈಶಂಕರ್ ಆದೇಶವನ್ನು ಕಾಯ್ದಿರಿಸಿದ್ದಾರೆ. ಅಕ್ಟೋಬರ್ 14ರಂದು ದರ್ಶನ್ ಬೇಲ್ ಭವಿಷ್ಯದ ನಿರ್ಧಾರವಾಗಲಿದೆ.