Advertisement

ಹೊಣೆಯಿಂದ ಜಾರಿಕೊಳ್ಳುವಂತಿಲ್ಲ

01:42 PM Feb 16, 2018 | Team Udayavani |

ದೇಶದ ಎರಡನೇ ದೊಡ್ಡ ಬ್ಯಾಂಕ್‌ ಎಂಬ ಹಿರಿಮೆಯಿರುವ ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ನಲ್ಲಿ ನಡೆದಿರುವ ಬಹುಕೋಟಿ ರೂಪಾಯಿ ವಂಚನೆಯಿಂದ ಬ್ಯಾಂಕುಗಳ ಜತೆಗೆ ಕೇಂದ್ರ ಸರಕಾರದ ವಿಶ್ವಾಸಾರ್ಹತೆಗೂ ದೊಡ್ಡ ಹೊಡೆತ ಬಿದ್ದಿದೆ. 2011ರಿಂದಲೇ ನಡೆಯುತ್ತಿದ್ದ ವಂಚನೆಯನ್ನು ಸ್ವತಃ ಬ್ಯಾಂಕ್‌ ಬಹಿರಂಗಗೊಳಿಸಿದೆ.

Advertisement

ನೀರವ್‌ ಮೋದಿ ಎಂಬ ವಜ್ರ ಮತ್ತು ಚಿನ್ನಾಭರಣಗಳ ಉದ್ಯಮಿ ಬ್ಯಾಂಕಿಂಗ್‌ ವ್ಯವಸ್ಥೆಯ ಲೋಪಗಳನ್ನೇ ಬಳಸಿಕೊಂಡು ಬ್ಯಾಂಕಿಗೆ ನಾಮ ಹಾಕಿದ್ದಾರೆ ಎನ್ನಲಾಗುತ್ತಿದೆ. ಆದರೆ ಸಂಭವಿಸಿರುವ 11,400 ಕೋ. ರೂ. ವಂಚನೆಯಲ್ಲಿ ನೀರವ್‌ ಮೋದಿ ಪಾಲೆಷ್ಟು, ಇನ್ನೆಷ್ಟು ಮಂದಿ ಶಾಮೀಲಾಗಿದ್ದಾರೆ/ಅವರು ನೇರವಾಗಿ ಶಾಮೀಲಾಗಿಲ್ಲವೇ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾಗಿದೆ. ಆದರೆ ಸದ್ಯಕ್ಕೆ ಮೋದಿ ಕುಟುಂಬ ಸಮೇತ ಪಲಾಯನ ಮಾಡಿರುವುದರಿಂದ ಅನುಮಾನವೆಲ್ಲ ಅವರ ಮೇಲೆಯೇ ಇದೆ. ವಿಜಯ್‌ ಮಲ್ಯ ಬ್ಯಾಂಕುಗಳಿಂದ ನಯವಾಗಿ 9000 ಕೋ.ರೂಪಾಯಿಗೂ ಅಧಿಕ ಮೊತ್ತದ ಸಾಲ ಪಡೆದು ತೀರಿಸದೆ ಪಲಾಯನ ಮಾಡಿದ್ದಾರೆ. ಅಂದಿನ ಯುಪಿಎ ಸರಕಾರವೇ ಮಲ್ಯರಿಗೆ ಸಾಲ ನೀಡುವ ಸಲುವಾಗಿ 17 ರಾಷ್ಟ್ರೀಕೃತ ಬ್ಯಾಂಕ್‌ಗಳ ಪೂಲ್‌ ರಚಿಸಿತ್ತು ಎನ್ನುವುದು ಗಮನಾರ್ಹ ಅಂಶ. ಮಲ್ಯಗೆ ಕೂಡ ಬ್ಯಾಂಕುಗಳಿಗೆ ಪಂಗನಾಮ ಹಾಕಲು ನೆರವಾಗಿರುವುದು ಅವುಗಳ ನಿಯಮಗಳಲ್ಲಿರುವ ಲೋಪಗಳೇ. ನೀರವ್‌ ಮೋದಿ ಬ್ಯಾಂಕ್‌ಗಳು ನೀಡುವ ಲೆಟರ್ಸ್‌ ಆಫ್ ಅಂಡರ್‌ಸ್ಟಾಂಡಿಂಗ್‌ ಮತ್ತು ಬೈಯರ್ ಕ್ರೆಡಿಟ್‌ ಎಂಬ ಸೌಲಭ್ಯಗಳನ್ನು ಬಳಸಿಕೊಂಡಿದ್ದಾರೆ.

ಬ್ಯಾಂಕಿನ ಕೆಲವು ಅಧಿಕಾರಿಗಳೇ ಅವರಿಗೆ ವಂಚನೆ ಎಸಗಲು ಸಹಕರಿಸಿರುವ ಗುಮಾನಿಯಿದೆ. ಹಾಗೆ ನೋಡುವುದಾದರೆ ದೇಶದಲ್ಲಿ ಕಾರ್ಪೋರೇಟ್‌ ಕಂಪೆನಿಗಳ ವಂಚನೆಯ ದೀರ್ಘ‌ ಪರಂಪರೆಯೇ ಇದೆ. 1991ರಲ್ಲಿ ಬೆಳಕಿಗೆ ಬಂದ ಹರ್ಷದ್‌ ಮೆಹಶೇರು ಹಗರಣ ಬಹಳ ಗಮನ ಸೆಳೆದ ಪ್ರಕರಣ. ಅನಂತರ ಕೇತನ್‌ ಪಾರೇಖ್‌ ಹಗರಣ, ಸತ್ಯಂ ಹಗರಣ, ಸಹಾರ ಹಗರಣ, ಶಾರದಾ ಚಿಟ್‌ ಫ‌ಂಡ್‌ ಹಗರಣ ಎಂದು ಹತ್ತಾರು ಹಗರಣಗಳಿಗೆ ದೇಶ ಸಾಕ್ಷಿಯಾಗಿದೆ.

ವಿಶೇಷವೆಂದರೆ ಇಷ್ಟೆಲ್ಲ ಹಗರಣಗಳನ್ನು ಜೀರ್ಣಿಸಿಕೊಂಡು ಕೂಡ ದೇಶದ ಆರ್ಥಿಕತೆ ಮುಂದುವರಿದಿದೆ. ಕೆಲ ವರ್ಷಗಳ ಹಿಂದೆ ನಡೆಸಿದ ಒಂದು ಅಧ್ಯಯನದ ಪ್ರಕಾರ 1947ರ ಬಳಿಕ ದೇಶದಲ್ಲಿ 250ಕ್ಕೂ ಅಧಿಕ ದೊಡ್ಡ ಮಟ್ಟದ ಹಣಕಾಸು ಹಗರಣಗಳು ಸಂಭವಿಸಿದೆಯಂತೆ. ಇದರಲ್ಲಿ ದೇಶಕ್ಕಾಗಿರುವ ನಷ್ಟವೆಷ್ಟು ಗೊತ್ತೇ? 910603234300000 ರೂಪಾಯಿ. ಈ ಮೊತ್ತದಲ್ಲಿ ಇಡೀ ದೇಶದ ಆರ್ಥಿಕತೆಯನ್ನೇ ಪುನರ್‌ ನಿರ್ಮಾಣ ಮಾಡಬಹುದಿತ್ತು. ಇಷ್ಟು ಹಣ ಕಳಕೊಂಡ ಅನಂತರವೂ ದೇಶದ ಆರ್ಥಿಕತೆ ಸದೃಢವಾಗಿಯೇ ಇದೆ ಎನ್ನುವುದು ಅಚ್ಚರಿ ಹುಟ್ಟಿಸುವ ಅಂಶ.

ರೈತರಿಗೆ, ಚಿಕ್ಕಪುಟ್ಟ ವ್ಯಾಪಾರಿಗಳಿಗೆ ಕೆಲವೇ ಸಾವಿರ ರೂಪಾಯಿಗಳ ಸಾಲ ನೀಡಲು ಆ ದಾಖಲೆ ತನ್ನಿ, ಈ ದಾಖಲೆ ತನ್ನಿ ಎಂದು ಸತಾಯಿಸುವ ಬ್ಯಾಂಕುಗಳು ದೊಡ್ಡ ಕುಳಗಳಿಗೆ ಅದ್ಯಾವ ಖಾತರಿಯ ಮೇಲೆ ಕೋಟಿಗಟ್ಟಲೆ ಸಾಲ ನೀಡುತ್ತಿವೆ? ದೇಶದ ಬ್ಯಾಂಕುಗಳಿಗೆ ಅತಿ ಹೆಚ್ಚು ಸಾಲ ಬಾಕಿಯಿಟ್ಟಿರುವುದು ರೈತರೂ ಅಲ್ಲ, ವ್ಯಾಪಾರಿಗಳೂ ಅಲ್ಲ ಬದಲಾಗಿ ಕಾರ್ಪೋರೇಟ್‌ ಕುಳಗಳು. ಅವುಗಳ ಸುಸ್ತಿ ಸಾಲದ ಮೊತ್ತ 9 ಲಕ್ಷ ಕೋ. ರೂ.ಯಷ್ಟಿದೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಸಂಸತ್ತಿನಲ್ಲಿ ಬ್ಯಾಂಕ್‌ಗಳು ವಸೂಲಾಗದ ಸಾಲವೇ ಅತಿ ದೊಡ್ಡ ಹಗರಣ ಎಂದಿದ್ದರು. ಆದರೆ ಇದಾದ ಕೆಲವೇ ದಿನಗಳಲ್ಲಿ ಅವರದ್ದೇ ಸರಕಾರದ ಮೂಗಿನಡಿಯಲ್ಲಿ ಬೃಹತ್‌ ಹಗರಣವೊಂದು ಬಯಲಿಗೆ ಬಂದಿದೆ. ಇಷ್ಟು ಮಾತ್ರವಲ್ಲದೆ ಮುಖ್ಯ ಸಂಶಯಿತ ಆರೋಪಿ ದೇಶದಿಂದ ಪಲಾಯನ ಮಾಡಿದ್ದಾರೆ.

Advertisement

ಇನ್ನು ಇವರನ್ನು ವಾಪಸು ಕರೆತರಲು ಎಷ್ಟೆಲ್ಲ ಕಸರತ್ತು ಮಾಡಬೇಕಾಗುತ್ತದೆ ಎನ್ನುವುದು ಮಲ್ಯ, ಲಲಿತ್‌ ಮೋದಿ ಮುಂತಾದವರ ಪ್ರಕರಣಗಳಿಂದ ಅನುಭವಕ್ಕೆ ಬಂದಿದೆ. 2011ರಿಂದಲೇ ಹೆಡೆ ಬಿಚ್ಚಲಾರಂಭಿಸಿದ್ದ ಹಗರಣವೊಂದನ್ನು ತಡೆಯಲು ವಿಫ‌ಲವಾಗಿರುವ ಹೊಣೆ ಯನ್ನು ಬ್ಯಾಂಕ್‌ ಮಾತ್ರವಲ್ಲದೆ ಸರಕಾರವೂ ಹೊರಲೇಬೇಕಾಗುತ್ತದೆ. ಏನೇಸಬೂಬು ಹೇಳಿದರೂ ಸರಕಾರ ತನ್ನ ದಾಯಿತ್ವದಿಂದ ಜಾರಿಕೊಳ್ಳುವಂತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next