Advertisement

ಜೀವ ಹಾನಿಯಾದರೆ ಮರಳಿ ತರಲು ಸಾಧ್ಯವೇ?

11:55 AM Apr 08, 2022 | Team Udayavani |

ಉಡುಪಿ: ರಾ. ಹೆದ್ದಾರಿ 66 ಮತ್ತು 169ಎರಲ್ಲಿ ಇರುವ ಬ್ಲಾಕ್‌ಸ್ಪಾಟ್‌ಗಳಿಂದ ಅಪಘಾತ ಉಂಟಾಗಿ ಜೀವ ಹಾನಿಯಾಗುತ್ತಿವೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ. ಕಳವಳ ವ್ಯಕ್ತಪಡಿಸಿದ್ದಾರೆ.

Advertisement

ಜಿಲ್ಲಾ ರಸ್ತೆ ಸುರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಪಘಾತಗಳು ಸಂಭವಿಸಿ ಜೀವ ಹಾನಿಯಾದರೆ, ಮರಳಿ ವ್ಯಕ್ತಿಯ ಜೀವ ತರಲು ಸಾಧ್ಯವೇ ಎಂದು ಪ್ರಶ್ನಿಸಿದ ಜಿಲ್ಲಾಧಿಕಾರಿ, ಇತ್ತೀಚೆಗೆ ಸಂತೆಕಟ್ಟೆ ಬಳಿ ಸಂಭವಿಸಿದ ಅಪಘಾತದಲ್ಲಿ ಬಲಿಯಾದ ಪೊಲೀಸ್‌ ಅಧಿಕಾರಿ ಮತ್ತು ಮಗಳ ಸಾವಿನ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದರು.

ಪ್ರಕರಣ ದಾಖಲಿಸಲು ಸೂಚನೆ

ಈ ಬ್ಲ್ಯಾಕ್‌ಸ್ಪಾಟ್‌ ಸ್ಥಳಗಳಲ್ಲಿ ಸುರಕ್ಷಿತ ಸಂಚಾರಕ್ಕೆ ಕ್ರಮ ಕೈಗೊಳ್ಳಿ ಎಂದು ತಿಳಿಸಿದ್ದರೂ ಕ್ರಮ ಕೈಗೊಂಡಿಲ್ಲ. ಇನ್ನು 15 ದಿನಗಳಲ್ಲಿ ದುರಸ್ತಿ ಮಾಡದೆ ಅಪಘಾತ ಸಂಭವಿಸಿ ಜೀವಹಾನಿಯಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ, ಸಾವಿಗೆ ಕಾರಣವಾದ ಕುರಿತು ಪ್ರಕರಣ ದಾಖಲಿಸುವಂತೆ ಪೊಲೀಸ್‌ ಇಲಾಖೆಗೆ ಸೂಚನೆ ನೀಡಿದರು.

Advertisement

ಬ್ಲಾಕ್‌ಸ್ಪಾಟ್‌ ದುರಸ್ತಿ ಮಾಡುವ ಕುರಿತಂತೆ ರಾ. ಹೆದ್ದಾರಿ ಯೋಜನಾ ನಿರ್ದೇಶಕರಿಗೆ ಮತ್ತು ಪ್ರಾದೇಶಿಕ ನಿರ್ದೇಶಕರಿಗೂ ಸಹ ಪತ್ರ ಬರೆಯುವಂತೆ ತಿಳಿಸಿದರು.

ಮಣಿಪಾಲ ಸರ್ಕಲ್‌ ತೊಂದರೆ

ಮಣಿಪಾಲದ ಟೈಗರ್‌ ಸರ್ಕಲ್‌ ಬಳಿ ಅಳವಡಿಸಿರುವ ಸಿಗ್ನಲ್‌ನಿಂದ ರಸ್ತೆಯ ಬಲಎಡ ಬದಿಯ ಕ್ರಾಸ್‌ಗಳಿಂದ ಬರುವ ವಾಹನ ಸವಾರರಿಗೆ ಸಿಗ್ನಲ್‌ ಇಲ್ಲದೇ ಇರುವುದರಿಂದ ತೀವ್ರ ತೊಂದರೆಯಾಗುತ್ತಿದ್ದು, ಈ ಬಗ್ಗೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು. ಜಂಟಿ ಪರಿಶೀಲನೆ ನಡೆಸಿ ವರದಿ ನೀಡಿ ಮಣಿಪಾಲದ ಈಶ್ವರ ನಗರದಲ್ಲಿ ರಾ.ಹೆದ್ದಾರಿಗೆ ಮೀಸಲಿಟ್ಟ ಪ್ರದೇಶದಲ್ಲಿರುವ ರಿಕ್ಷಾ ನಿಲ್ದಾಣ ತೆರವುಗೊಳಿಸುವ ಬಗ್ಗೆ ಬಂದಿರುವ ದೂರಿನ ಕುರಿತಂತೆ ನಗರಸಭೆ, ಆರ್‌. ಟಿ.ಒ., ಪೋಲೀಸ್‌ ಮತ್ತು ರಾ. ಹೆದ್ದಾರಿಯ ಅಧಿಕಾರಿಗಳು ಜಂಟಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ತಿಳಿಸಿದರು.

ಲಕ್ಷ್ಮೀಂದ್ರ ನಗರ : ಯು ಟರ್ನ್

ಲಕ್ಷ್ಮೀಂದ್ರ ನಗರದ ಬಳಿ ಯು ಟರ್ನ್ ನಿರ್ಮಾಣದ ಅಗತ್ಯತೆ ಬಗ್ಗೆ ಎಸ್ಪಿ ವಿಷ್ಣುವರ್ಧನ್‌ ತಿಳಿಸಿದರು. ಕೂಡಲೇ ಇಲ್ಲಿ ಯು ಟರ್ನ್ ನಿರ್ಮಿಸುವಂತೆ ರಾ. ಹೆದ್ದಾರಿಯ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು.

ರಾ. ಹೆದ್ದಾರಿಯ ಹೆಜಮಾಡಿಯಿಂದ ಶಿರೂರು ವರೆಗೆ ಅಗತ್ಯವಿರುವೆಡೆಗಳಲ್ಲಿ ಸೂಚನ ಫ‌ಲಕಗಳನ್ನು ಅಳವಡಿಸುವಂತೆ ಎಸ್ಪಿ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ವೀಣಾ, ರಾ. ಹೆದ್ದಾರಿ ಹಾಗೂ ಲೋಕೋಪಯೋಗಿ ಇಲಾಖೆ, ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವಾಹನ ತಪಾಸಣೆ: 1.85 ಕೋ.ರೂ. ವಸೂಲಿ

ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿ ವತಿಯಿಂದ 2021-22 ನೇ ಸಾಲಿನಲ್ಲಿ 18,754 ವಾಹನ ತಪಾಸಣೆ ಮಾಡಲಾಗಿದೆ. 2,731 ಪ್ರಕರಣ ದಾಖಲಿಸಿ, 192 ವಾಹನಗಳನ್ನು ಮುಟ್ಟುಗೂಲು ಹಾಕಲಾಗಿದೆ. ತೆರಿಗೆ 79,81,250 ರೂ. ಹಾಗೂ ದಂಡ 1,05,77,020 ರೂ. ಸೇರಿದಂತೆ ಒಟ್ಟು 1,85,58,270 ರೂ. ವಸೂಲು ಮಾಡಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರ್‌ ಅವರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next