ಹೊಸದಿಲ್ಲಿ : 2018ರಲ್ಲಿ ಕೇಂದ್ರ ಮತ್ತು ರಾಜ್ಯಗಳ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಯುವುದನ್ನು ದೇಶವು ಕಾಣಲಿದೆ.
2018ರ ಸೆಪ್ಟಂಬರ್ ಒಳಗಾಗಿ ದೇಶದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭಾ ಚುನವಾಣೆಗಳನ್ನು ಏಕಕಾಲದಲ್ಲಿ ನಡೆಸಲು ತಾನು ಎಲ್ಲ ರೀತಿಯಲ್ಲೂ ಶಕ್ತನಿದ್ದೇನೆ ಎಂದು ಭಾರತದ ಚುನಾವಣಾ ಆಯೋಗ ಹೇಳಿದೆ.
ಮಾಧ್ಯಮದೊಂದಿಗೆ ಮಾತನಾಡಿದ ಚುನಾವಣಾ ಆಯುಕ್ತ ಒ ಪಿ ರಾವತ್ ಅವರು, “ಹೊಸ ಮತಯಂತ್ರಗಳನ್ನು ಪರ್ಯಾಪ್ತ ಸಂಖ್ಯೆಯಲ್ಲಿ ಖರೀದಿಸಲಾಗಿರುವ ಕಾರಣ 2018ರ ಸೆಪ್ಟಂಬರ್ ಒಳಗಾಗಿ ನಾವು ದೇಶದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಬಲ್ಲೆವು; ಆದರೆ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವುದು ಸರಕಾರಕ್ಕೆ ಬಿಟ್ಟ ವಿಷಯವಾಗಿದೆ ಮಾತ್ರವಲ್ಲದೆ ಎಲ್ಲ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾನೂನಿಗೆ ತಿದ್ದುಪಡಿ ತರಬೇಕಾಗುವುದು’ ಎಂದು ಹೇಳಿದರು.
ಇದೇ ವೇಳೆ ಕೇಂದ್ರ ಸರಕಾರ ಕೂಡ 2018ರ ನವೆಂಬರ್ – ಡಿಸೆಂಬರ್‌ನಲ್ಲಿ ನಡೆಯಬೇಕಿರುವ ಚುನಾವಣೆಗಳನ್ನು 2019ರಲ್ಲಿ ನಡೆಯಬೇಕಿರುವ ಲೋಕಸಭಾ ಚುನಾವಣೆಗಳೊಂದಿಗೆ ಏಕಕಾಲದಲ್ಲಿ ನಡೆಸುವ ಬಗ್ಗೆ ಆಲೋಚಿಸುತ್ತಿದೆ.
ಒಂದೊಮ್ಮೆ ಇದು ಅನುಷ್ಠಾನವಾದರೆ 2019ರ ಎಪ್ರಿಲ್‌ನಲ್ಲಿ ನಡೆಯಬೇಕಿರುವ ಮಹಾ ಚುನಾವಣೆಗಳನ್ನು ಸ್ವಲ್ಪ ಮಟ್ಟಿಗೆ ಹಿಂದಕ್ಕೆ ತಂದು ರಾಜ್ಯ ವಿಧಾನಸಭಾ ಚುನಾವಣೆಗಳನ್ನು ಸ್ವಲ್ಪ ಮಟ್ಟಿಗೆ ಮುಂದಕ್ಕೆ ಒಯ್ದು ,ಅವುಗಳನ್ನು ಜತೆಯಾಗಿ ಏಕಕಾಲದಲ್ಲೇ ನಡೆಸಲು ಸಾಧ್ಯವಾಗುವುದೆಂದು ತಿಳಿಯಲಾಗಿದೆ.
ಹೀಗೆ ಮಾಡಿದಲ್ಲಿ ಸರಕಾರದ ಮೇಲಿನ ಚುನಾವಣಾ ಖರ್ಚು ವೆಚ್ಚಗಳು ಗಮನಾರ್ಹವಾಗಿ ಕಡಿಮೆಯಾಗುವುದು ಮಾತ್ರವಲ್ಲದೆ ರಾಜ್ಯಗಳ ಮಟ್ಟದಲ್ಲೂ ಯಾವುದೇ ರೀತಿಯಲ್ಲಿ ಆಡಳಿತೆಗೆ ಅಡಚಣೆ ಉಂಟಾಗದು ಎಂಬ ಅಭಿಪ್ರಾಯವನ್ನು ಪ್ರಧಾನಿ ನರೇಂದ್ರ ಮೋದಿ ಕಾಲಕಾಲಕ್ಕೆ ವ್ಯಕ್ತಪಡಿಸುತ್ತಾ ಬಂದಿದ್ದಾರೆ.