ಸಿದ್ದಾಪುರ: ಹೆಣ್ಣು ಭ್ರೂಣ ಹತ್ಯೆ ತಡೆಯುವಲ್ಲಿ ಭಾಗ್ಯಲಕ್ಷ್ಮೀ ಯೋಜನೆ ಪರಿಣಾಮಕಾರಿಯಾಗಿದೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಪಟ್ಟಣದ ರಾಘವೇಂದ್ರ ಮಠದಲ್ಲಿ ಜಿಪಂ ತಾಲೂಕು ಆಡಳಿತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಿ ಮಾತನಾಡಿದರು.
ಹೆಣ್ಣು ಮಗು ಹುಟ್ಟಿದಾಗ ಆ ಮಗುವಿನ ಹೆಸರಿನಲ್ಲಿ 19,300 ರೂ. ಗಳನ್ನು ವೀಮಾ ಕಂಪನಿಯಲ್ಲಿ ಇಡಲಾಗುವುದು. 18 ವರ್ಷದ ನಂತರದಲ್ಲಿ 1 ಲಕ್ಷ ರೂ. ಆ ಮಗುವಿಗೆ ದೊರೆಯುತ್ತದೆ. ಹಾಗೆಯೇ ಮಾತೃಪೂಜಾ ಮತ್ತು ಮಾತೃವಂದನಾ ಕಾರ್ಯಕ್ರಮಗಳು ಮಹಿಳೆಯರಿಗೆ ಹೆಚ್ಚಿನ ಅನುಕೂಲ ದೊರಕಿಸಿಕೊಡುತ್ತದೆ. ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸುವುದು ಪಾಲಕರ ಜವಬ್ದಾರಿ ಎಂದರು. ತಾಲೂಕಿನಲ್ಲಿ ಈವರೆಗೆ 4595 ಹೆಣ್ಣು ಮಕ್ಕಳಿಗೆ ಬಾಂಡ್ ಕೊಟ್ಟಾಗಿದೆ. ಈ ಬಾರಿ 28 ಫಲಾನುಭವಿಗಳಿಗೆ ಬಾಂಡ್ ವಿತರಿಸಲಾಗಿದೆ. ಇನ್ನೂ 558 ಫಲಾನುಭವಿಗಳಿಗೆ ಬಾಂಡ್ ನಿಡಬೇಕಿದ್ದು ರಾಜ್ಯ ಸರ್ಕಾರದ ವಿಳಂಬವಾಗುತ್ತಿದೆ. ಯಾವುದೇ ಕಾರಣಕ್ಕೂ ಫಲಾನುಭವಿಗಳಿಗೆ ಬಾಂಡ್ ದೊರೆಯುವಲ್ಲಿ ಪ್ರಯತ್ನ ಪಡುತ್ತೇನೆ ಎಂದರು. ತಾಪಂ ಅಧ್ಯಕ್ಷ ಸುಧೀರ ಗೌಡರ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯರಾದ ಎಂ.ಜಿ ಹೆಗಡೆ, ನಾಗರಾಜ ನಾಯ್ಕ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ಪಪಂ ಸದಸ್ಯರಾದ ವಿನಯ ಹೊನ್ನೆಗುಂಡಿ, ವೆಂಕೋಬ ಜಿ.ಎಂ, ಚಂದ್ರಕಲಾ ನಾಯ್ಕ, ತಾಪಂ ಇಒ ದಿನೇಶ ಉಪಸ್ಥಿತರಿದ್ದರು.