Advertisement

ನೇಣಿಗೆ ಪರ್ಯಾಯ ಉಪಾಯ ಇದೆಯೇ: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

03:58 PM Oct 06, 2017 | udayavani editorial |

ಹೊಸದಿಲ್ಲಿ : ಮರಣದಂಡನೆ ಶಿಕ್ಷೆ ವಿಧಿಸಲ್ಪಟ್ಟಿರುವ ಕೈದಿಯನ್ನು ನೇಣಿಗೇರಿಸಿ ಸಾಯಿಸುವ ಬದಲು ಕಡಿಮೆ ನೋವಿನ ಸಾವನ್ನು ಕರುಣಿಸುವ ಕ್ರಮವನ್ನು ಅನುಸರಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗೆ ಸಂಬಂಧಪಟ್ಟು  ಸುಪ್ರೀಂ ಕೋರ್ಟ್‌ ಮೂರು ತಿಂಗಳ ಒಳಗೆ ಉತ್ತರಿಸುವಂತೆ ಕೇಂದ್ರ ಸರಕಾರಕ್ಕೆ ನೊಟೀಸ್‌ ಜಾರಿ ಮಾಡಿದೆ. 

Advertisement

ಮರಣ ದಂಡನೆ ವಿಧಿಸಲ್ಪಟ್ಟಿರುವ ಕೈದಿಗೆ ನೇಣಲ್ಲದೆ ಅನ್ಯ ಕ್ರಮದ ಮೂಲಕ ಸಾಯಿಸುವ ಉಪಾಯವನ್ನು ಶಾಸಕಾಂಗ ಚಿಂತಿಸಬೇಕೆಂದು ಸುಪ್ರೀಂ ಕೋರ್ಟ್‌ ಹೇಳಿದೆ. 

”ನಮ್ಮ ಸಂವಿಧಾನವು ಬದುಕಿನ ಪಾವಿತ್ರ್ಯವನ್ನು ಗೌರವಿಸುವ ತತ್ವವನ್ನು ಹೊಂದಿದ್ದು ಅದು ಮನುಕುಲದ ಬಗ್ಗೆ  ಅತ್ಯಂತ ಸಹಾನುಭೂತಿಯನ್ನು ಹೊಂದಿದೆ. ಆಧುನಿಕ ಜಗತ್ತಿನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೈದಿಗೆ ನೇಣಲ್ಲದೆ ಕಡಿಮೆ ನೋವಿನ ಅನ್ಯ ವಿನೂತನ ಕ್ರಮಗಳ ಮೂಲಕ ಸಾಯಿಸುವ ವಿಧಾನದ ಬಗ್ಗೆ ಶಾಸಕಾಂಗ ಸೂಕ್ತ ಚಿಂತನೆ ನಡೆಸಬಹುದಾಗಿದೆ” ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. 

‘ವಿಜ್ಞಾನ ಕ್ಷೇತ್ರದಲ್ಲಿ ಆಗಿರುವ ಅತ್ಯದ್ಭುತ ಪ್ರಗತಿಯನ್ನು ಲೆಕ್ಕಿಸಿ ಮರಣದಂಡನೆ ವಿಧಿಸುವುದಕ್ಕೆ ನೇಣಲ್ಲದೆ ಅನ್ಯ ಉಪಾಯಗಳನ್ನು ಚಿಂತಿಸುವುದಕ್ಕೆ ಇದು ಸಕಾಲವಾಗಿದೆ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. 

ಸುಪ್ರೀಂ ಕೋರ್ಟಿಗೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಲ್ಲಿ “ದೇಶದ ಸಂವಿಧಾನದಲ್ಲಿ ಘನತೆಯಿಂದ ಬದುಕುವ 21ನೇ ವಿಧಿಯು ಮರಣದಂಡನೆಗೆ ಗುರಿಯಾಗಿರುವ ಕೈದಿಗೆ ಕಡಿಮೆ ನೋವಿನ ಸಾವನ್ನು ಪಡೆಯುವ ಮತ್ತು ಘನತೆಯಿಂದ ಸಾಯುವ ಹಕ್ಕನ್ನು ಕೂಡ ದಯಪಾಲಿಸುತ್ತದೆ ಎಂದು ವಾದಿಸಲಾಗಿದೆ. 

Advertisement

ಸುಪ್ರೀಂ ಕೋರ್ಟ್‌ ವರಿಷ್ಠ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಮತ್ತು ಜಸ್ಟಿಸ್‌ ಎ ಎಂ ಖಾನ್‌ವಿಲ್ಕರ್‌ ಹಾಗೂ ಜಸ್ಟಿಸ್‌ ಡಿ ವೈ ಚಂದ್ರಚೂಡ್‌ ಅವರನ್ನು ಒಳಗೊಂಡ ಪೀಠವು, ಈ ಸಂಬಂಧ 3 ತಿಂಗಳ ಒಳಗೆ ಉತ್ತರಿಸುವ ನೊಟೀಸ್‌ನ್ನು ಕೇಂದ್ರ ಸರಕಾರಕ್ಕೆ ಜಾರಿಗೊಳಿಸಿತು. 

Advertisement

Udayavani is now on Telegram. Click here to join our channel and stay updated with the latest news.

Next