Advertisement

ಗಾಳಿಯಿಂದಲೇ ಬೆಳೆಯಬಹುದು ಸೊಪ್ಪು,ತರಕಾರಿ, ಹೂ!

10:02 AM May 05, 2017 | Team Udayavani |

ಹುಬ್ಬಳ್ಳಿ: ಮಣ್ಣು ಇಲ್ಲದೆ ಕೇವಲ ನೀರಿನಿಂದಲೇ ಬೆಳೆ ಬೆಳೆಯುವ(ಹೈಡ್ರೋಫೋನಿಕ್‌ ಪದ್ಧತಿ)ವಿಧಾನ ಹಲವರಿಗೆ ಅಚ್ಚರಿ ಮೂಡಿಸಿತ್ತು. ಇದೀಗ ಬಹುತೇಕ ಗಾಳಿಯಿಂದಲೇ(ಏರೋಫೋನಿಕ್ಸ್‌ ಪದ್ಧತಿ) ಬೆಳೆ ಬೆಳೆಯುವ ಯಂತ್ರ ಬಂದಿದೆ. 

Advertisement

ಕೃಷಿ ವಿಶ್ವದ್ಯಾಲಯಗಳಲ್ಲಿ ದೇಶದಲ್ಲೇ ಮೊದಲು ಎನ್ನುವ ಏರೋಫೋನಿಕ್‌ ಯಂತ್ರವನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯ ತರಿಸಿದ್ದು, ರೈತರಿಗೆ ಇದರ ಪ್ರಯೋಜನ ಪಡೆಯುವ ಬಗ್ಗೆ ಪ್ರಾಯೋಗಿಕ ಪ್ರದರ್ಶನ ನೀಡಲು ಮುಂದಾಗಿದೆ.
1942ರ ವೇಳೆಗೆ ಚಿಗುರೊಡೆದಿದ್ದ ಏರೋ ಕಲ್ಚರ್‌ ಪದ್ಧತಿ ಹಲವು ಪ್ರಯೋಗ, ಸುಧಾರಣೆಗಳೊಂದಿಗೆ ಕಳೆದೊಂದು ದಶಕದಿಂದ ವಿಶ್ವಾದ್ಯಂತ ಕೃಷಿ ಕಾಯಕದಲ್ಲಿ ಬಳಕೆ ಆಗುತ್ತಿದೆ. ನಾಸಾದ ಪ್ರೋತ್ಸಾಹ ಹಾಗೂ ನೆರವಿನೊಂದಿಗೆ ಈ ಪದ್ಧತಿಯಲ್ಲಿ ಅನೇಕ ಸುಧಾರಣಾ ಕ್ರಮ ಕೈಗೊಳ್ಳಲಾಗಿದೆ. ಸುಧಾರಿತ ಸಲಕರಣೆಗಳು ಸಿದ್ಧಗೊಂಡಿವೆ. ಈಗ ಧಾರವಾಡ ಕೃಷಿ ವಿವಿ ಏರೋಫೋನಿಕ್ಸ್‌ ಕೃಷಿ ಪದ್ಧತಿ ಅನುಷ್ಠಾನ ನಿಟ್ಟಿನಲ್ಲಿ ಸುಮಾರು 14 ಲಕ್ಷ ರೂ.ವೆಚ್ಚದಲ್ಲಿ ಏರೋಫೋನಿಕ್ಸ್‌ನ 2 ಯಂತ್ರಗಳನ್ನು ಅಮೆರಿಕದ ಅಗ್ರಿಹೌಸ್‌ ಕಂಪನಿಯಿಂದ ತರಿಸಿದ್ದು, ತನ್ನ ಹೈಟೆಕ್‌ ತೋಟಗಾರಿಕಾ ವಿಭಾಗದಲ್ಲಿ ಇರಿಸಿದೆ.

ಸಂರಕ್ಷಿತ ಬೇಸಾಯದ ಭಾಗ:
ಏರೋಫೋನಿಕ್ಸ್‌ ಪದ್ಧತಿ ಸಂರಕ್ಷಿತ ಬೇಸಾಯದ ಭಾಗವಾಗಿದೆ. 2006ರಿಂದ ಜಗತ್ತಿನ ಅನೇಕ ದೇಶಗಳು ಈ ವಿಧಾನದಡಿ ಕೃಷಿಗೆ ಮುಂದಾಗಿವೆ. ಆದರೆ, ಭಾರತಕ್ಕೆ ಇದು ಹೊಸತು. ಕಳೆದೊಂದು ದಶಕದಿಂದ ಮಣ್ಣು ರಹಿತವಾದ ಜಲ-ಗಾಳಿಯಾಧಾರಿತ ಸಂರಕ್ಷಿತ ಬೇಸಾಯ ಪದ್ಧತಿ ಹೆಚ್ಚು ಜನಪ್ರಿಯವಾಗುತ್ತಿದೆ. 1944ರಲ್ಲಿ ಎಲ್‌.ಜೆ.ಕೋಲ್ಟ್ಜ್ ಎನ್ನುವವರು ಮಂಜುಗಡ್ಡೆ ಆವಿಯಾಧಾರದಲ್ಲಿ ನಿಂಬೆ-ಚಕ್ಕೋತಾ ಜಾತಿ ಸಸಿಗಳನ್ನು ಬೆಳೆಸುವ ಪ್ರಯೋಗ ಕೈಗೊಂಡಿದ್ದರು. 1952ರಲ್ಲಿ ಜಿ.ಎಫ್.ಟ್ರೋವೆಲ್‌ ಸೇಬಿನ ಸಸಿಯನ್ನು ಸ್ಪ್ರೆà ಕಲ್ಚರ್‌ನಲ್ಲಿ ಬೆಳೆಯುವ ಪ್ರಯೋಗ ನಡೆಸಿದ್ದರು. 

ಎಫ್.ಡಬ್ಲ್ಯು.ವೆಂಟ್‌ ಎನ್ನುವವರು 1957ರಲ್ಲಿ ಕಾಫಿ ಮತ್ತು ಟೊಮೆಟೊ ಸಸಿಗಳನ್ನು ಏರೋಫೋನಿಕ್ಸ್‌ ವಿಧಾನದಲ್ಲಿ ಬೆಳೆಯುವ ನಿಟ್ಟಿನಲ್ಲಿ ಸಸಿಗಳ ಬೇರುಗಳಿಗೆ ಪೋಷಕಾಂಶ ಆವಿ ನೀಡುವ ಯತ್ನ ಕೈಗೊಂಡಿದ್ದರು. 1983ರಲ್ಲಿ ಜೆನಿಸಿಸ್‌ ರೂಟಿಂಗ್‌ ಸಿಸ್ಟಮ್‌ ಕಂಪನಿ ಜೆನೆಸಿಸ್‌ ಯಂತ್ರವನ್ನು ವಾಣಿಜ್ಯ ರೂಪದಲ್ಲಿ ಮಾರುಕಟ್ಟೆಗೆ ಪರಿಚಯಿಸಿತ್ತು.

ನಾಸಾದಿಂದ ನೆರವು:
ನಾಸಾ, ಏರೋಫೋನಿಕ್ಸ್‌ ಸುಧಾರಣೆಗೆ ಅಗತ್ಯ ಹೊಸ-ಅತ್ಯಾಧುನಿಕ ಸಲಕರಣೆಗಳ ಸಂಶೋಧನೆ ಹಾಗೂ ಅಭಿವೃದ್ಧಿಗೆ ಆರ್ಥಿಕ ನೆರವು ನೀಡಿತ್ತು. 1996ರಲ್ಲಿ ರಿಚರ್ಡ್‌ ಸ್ಟೋನ್‌ ನಾಸಾದ ನೆರವಿನೊಂದಿಗೆ  ಏರೋಫೋನಿಕ್ಸ್‌ಗೆ ಅಗತ್ಯವಾದ ಪೋಷಕಾಂಶ ದ್ರವ ಸಂಶೋಧಿಸಿದ್ದರು. ಸಾವಯವ ರೋಗ ನಿಯಂತ್ರಣ (ಆಗೇìನಿಕ್‌ ಡಿಸಿಸ್‌ ಕಂಟ್ರೋಲ್‌- ಒಡಿಸಿ)ಪದ್ಧತಿಯಡಿ 1997ರಲ್ಲಿ ನಾಸಾದಲ್ಲಿ ಸ್ಟೋನ್‌ ಪ್ರಯೋಗ ಪ್ರದರ್ಶಿಸಿದ್ದರು. ಅಲ್ಲಿಂದ ಇಲ್ಲಿವರೆಗೆ ಸ್ಟೋನ್‌ ಏರೋಫೋನಿಕ್ಸ್‌ ವಿಧಾನದಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದು, ಧಾರವಾಡ ಕೃವಿವಿಯಲ್ಲಿ ಏರೋಫೋನಿಕ್ಸ್‌ ಯಂತ್ರದ ಅನುಷ್ಠಾನ ಸ್ಟೋನ್‌ ನೇತೃತ್ವದಲ್ಲೇ ಆಗಿದೆ.

Advertisement

ಕಾಂಡ ನೆಟ್ಟರೂ ಸಾಕು ಸಸಿ ಸಿದ್ಧ:
ಧಾರವಾಡ ಕೃವಿವಿ ಹೈಟೆಕ್‌ ತೋಟಗಾರಿಕೆ ವಿಭಾಗದ ಹವಾ ನಿಯಂತ್ರಣ ಕೋಣೆಯಲ್ಲಿ ಏರೋಫೋನಿಕ್ಸ್‌ನ ಎರಡು ಯಂತ್ರಗಳನ್ನು ಸ್ಥಾಪಿಸಲಾಗಿದೆ. ಒಂದು ಯಂತ್ರದಲ್ಲಿ ಕೇವಲ ಕಾಂಡ ನೆಟ್ಟರೆ ಸಾಕು ಸಸಿಗಳು ಬೆಳೆದರೆ, ಇನ್ನೊಂದರಲ್ಲಿ ಬೀಜಗಳನ್ನು ಹಾಕಿದರೆ ಅದು ಸಸಿಯಾಗಿ ಮುಂದೆ ಫ‌ಸಲಾಗಿ ಪರಿವರ್ತನೆಗೊಳಿಸುತ್ತದೆ. ಕೃವಿವಿಗೆ ಬಂದ ಏರೋಫೋನಿಕ್ಸ್‌ ಯಂತ್ರಗಳಲ್ಲಿ ಸೊಪ್ಪಿನ ತರಕಾರಿಗಳಾದ ಪಾಲಕ್‌, ಮೆಂತ್ಯೆ, ರಾಜಗಿರಿ, ಕೊತ್ತಂಬರಿ, ವಿದೇಶಗಳಲ್ಲಿ ಬಳಕೆಯಾಗುವ ವಿವಿಧ ಪಲೆÂಗಳನ್ನು ಬೆಳೆಯಬಹುದಾಗಿದೆ. ಅದೇ ರೀತಿ ಟೊಮೆಟೊ, ವಿವಿಧ ಹೂಗಳ ಕಾಂಡದಿಂದ ಸಸಿ ಮಾಡಬಹುದಾಗಿದೆ.

ಗುಲಾಬಿ ಸೇರಿದಂತೆ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇರುವ ಆಧುನಿಕ ಹೂಗಳ ಕಾಂಡ, ವಿವಿಧ ಸೊಪ್ಪಿನ ತರಕಾರಿ, ಟೊಮೊಟೋ ಇನ್ನಿತರ ಕಾಂಡಗಳನ್ನು ಕತ್ತರಿಸಿ ಏರೋಫೋನಿಕ್ಸ್‌ ಯಂತ್ರದಲ್ಲಿ ಇರಿಸಿದರೆ ಸಾಕು, 15-20 ದಿನಗಳಲ್ಲಿ ಅದಕ್ಕೆ ಬೇರುಗಳು ಕಾಣಿಸಿಕೊಂಡು ಸಸಿಗಳಾಗಿ ಪರಿವರ್ತನೆಗೊಳ್ಳುತ್ತವೆ. ಒಂದೇ ಬಾರಿಗೆ ಸುಮಾರು 500ಕ್ಕೂ ಹೆಚ್ಚು ಸಸಿಗಳನ್ನು ಬೆಳೆಸಬಹುದಾಗಿದೆ.

ಇನ್ನೊಂದು ಯಂತ್ರದಲ್ಲಿ 24 ಗಂಟೆ ನೀರಲ್ಲಿ ನೆನೆಸಿದ ಬೀಜಗಳನ್ನು ಹಾಕಿದರೆ ಮೂರು ದಿನಗಳಲ್ಲಿ ಮೊಳಕೆಯೊಡೆಯುತ್ತವೆ. 15-20 ದಿನಗಳಲ್ಲಿ ಸಸಿಗಳು ರೂಪ ಪಡೆಯುತ್ತವೆ. ಅವುಗಳನ್ನು ತೆಗೆದು ಯಂತ್ರದ ಹೊರ ಕವಚದಲ್ಲಿ ಇರಿಸಿದರೆ 2 ತಿಂಗಳಲ್ಲಿ ಫ‌ಸಲು ಕೊಡಲು ಆರಂಭಿಸುತ್ತವೆ. 3 ದಿನಗಳ ಹಿಂದೆ ಈ ಯಂತ್ರದಲ್ಲಿ ಉಳ್ಳಾಗಡ್ಡಿ, ರಾಜಗಿರಿ, ಪಾಲಕ್‌ ಇನ್ನಿತರ ಬೀಜಗಳನ್ನು ಹಾಕಲಾಗಿದ್ದು, ಅವು ಮೊಳಕೆ ಬಂದಿವೆ.

ವಾರಕ್ಕೆ 4ಲೀಟರ್‌ ನೀರು ಸಾಕು:
ಏರೋಫೋನಿಕ್ಸ್‌ ಯಂತ್ರದ ಕೃಷಿಗೆ ವಾರಕ್ಕೆ ಕೇವಲ 4 ಲೀಟರ್‌ ನೀರು ಮಾತ್ರ ಸಾಕು. ಸಸಿಗಳ ಕಾಂಡ, ಬೇರು, ಮೊಳಕೆ ಹಾಗೂ ಫ‌ಸಲಿಗೆ ಅರ್ಧ ಗಂಟೆಗೊಮ್ಮೆ ಸೆನ್ಸರ್‌ ಆಧಾರಿತವಾಗಿ ಐದು ಸೆಕೆಂಡ್‌ ಪೋಷಕಾಂಶಯುಕ್ತ ನೀರು ಸಿಂಪರಣೆ  ಆಗುತ್ತದೆ. ಏರೋಫೋನಿಕ್ಸ್‌ ವಿಧಾನದಲ್ಲಿ ಬೆಳೆಯುವ ಬೆಳೆ ಬಹುತೇಕ ರೋಗಮುಕ್ತವಾಗಿದ್ದು, ಹೆಚ್ಚು ಪೋಷಕಾಂಶ ಹಾಗೂ ತಾಜಾತನ ಹೊಂದಿರುತ್ತದೆ. ಅಲ್ಲದೆ ಕ್ರಿಮಿನಾಶಕ ಮುಕ್ತ ಫ‌ಸಲಾಗಿರುತ್ತದೆ ಎಂಬುದು ಹೈಟೆಕ್‌ ತೋಟಗಾರಿಕೆ ವಿಭಾಗದ ತೋಟಗಾರಿಕಾ ವಿಜ್ಞಾನಿ ಡಾ| ಎಂ.ಎಸ್‌.ಬಿರಾದಾರ ಅವರ ಅನಿಸಿಕೆ.

ಹೊಸ ಪ್ರಯೋಗ..
ಏರೋಫೋನಿಕ್ಸ್‌ ಕೃಷಿ ವಿಧಾನ ನಮಗೆ ಹೊಸದು. ಇದರ ಪ್ರಯೋಜನ ಕುರಿತಾಗಿ ನಮ್ಮ ರೈತರಿಗೆ ತಿಳಿಯಪಡಿಸಲು ಧಾರವಾಡ ಕೃಷಿವಿವಿ ಎರಡು ಯಂತ್ರಗಳನ್ನು ತರಿಸಿದೆ. ದೇಶದಲ್ಲೇ ಇಂತಹ ಯತ್ನ ಕೈಗೊಂಡ ಮೊದಲ ಕೃಷಿ ವಿವಿ ನಮ್ಮದಾಗಿದೆ. ವಿಶೇಷವಾಗಿ ರಫ್ತು ಆಧಾರಿತ ಹೂ-ಸೊಪ್ಪಿನ ತರಕಾರಿ ಬೆಳೆಯುವ ನಿಟ್ಟಿನಲ್ಲಿ ಇದು ಪ್ರಯೋಜನಕಾರಿಯಾಗಿದೆ. ವಿದೇಶಗಳಲ್ಲಿ ಇವುಗಳಿಗೆ ಉತ್ತಮ ಬೇಡಿಕೆಯೂ ಇದೆ.
-ಡಾ| ಡಿ.ಪಿ.ಬಿರಾದಾರ, ಕುಲಪತಿ, ಧಾರವಾಡ ಕೃಷಿ ವಿವಿ

– ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next