Advertisement
ಶಿಕ್ಷಣ ಕ್ಷೇತ್ರದಲ್ಲಿ ಅವಶ್ಯಕ ಸುಧಾರಣೆ ಕುರಿತು ವರದಿ ನೀಡಲು ನೇಮಿಸಿದ್ದ ಡಾ| ಕಸ್ತೂರಿರಂಗನ್ ನೇತೃತ್ವದ ಸಮಿತಿ ತನ್ನ ಶಿಫಾರಸನ್ನು ಇದೀಗ ತಾನೇ ಅಧಿಕಾರ ವಹಿಸಿಕೊಂಡಿರುವ ನರೇಂದ್ರ ಮೋದಿ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖರಿಯಾಲ್ ನಿಶಾಂಕ್ ಅವರಿಗೆ ಸಲ್ಲಿಸಿದೆ. ಮೋದಿ ಸರಕಾರದ ಕಾರ್ಯಕಾಲದಲ್ಲಿ ನಿರುದ್ಯೋಗ ಹೆಚ್ಚಿದೆ ಎನ್ನುವ ವಿರೋಧ ಪಕ್ಷಗಳ ಆರೋಪದ ನಡುವೆ ಹೊಸ ಸರಕಾರ ಈಗಾಗಲೇ ಚಾಲ್ತಿಯಲ್ಲಿರುವ ಕೌಶಲ್ಯಾಭಿವೃದ್ಧಿಗೆ ಮತ್ತಷ್ಟು ಒತ್ತು ನೀಡುವ ಹಾಗೂ ಅದಕ್ಕೆ ಪೂರಕವಾಗಬಲ್ಲ ಶಿಕ್ಷಣ ವ್ಯವಸ್ಥೆ ಸ್ಥಾಪಿಸುವ ಕುರಿತು ಗಂಭೀರವಾಗಿ ಚಿಂತಿಸುತ್ತಿದೆ ಎನ್ನಲಾಗಿದೆ. ಯುವ ಮತದಾರರ ಭಾರೀ ಒಲವನ್ನು ಗಳಿಸಿ ಚುನಾವಣಾ ವಿಜಯ ಸಾಧಿಸಿದ ಹೊಸ ಸರಕಾರದಲ್ಲಿ ಆರ್ಥಿಕತೆಗೆ ವೇಗ ನೀಡಬೇಕಾದ ವಿತ್ತ ಮಂತ್ರಿಯಷ್ಟೇ ಮಹತ್ವದ ಜವಾಬ್ದಾರಿ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಿಯ ಮೇಲೂ ಇದೆ.
Related Articles
Advertisement
ಕಸ್ತೂರಿ ರಂಗನ್ ಸಮಿತಿ ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣದಲ್ಲಿ ಈಗ ಇರುವ ನಿಯಂತ್ರಕ ವ್ಯವಸ್ಥೆ (Regulatory regime) ಹಾಗೂ ಮೌಲ್ಯಮಾಪನ ಪದ್ಧತಿಯನ್ನೂ ಪುನರಚಿಸುವ ಕುರಿತು ಸಲಹೆ ನೀಡಿದೆ. ಪ್ರಸ್ತುತ ಅಸ್ತಿತ್ವದಲ್ಲಿರುವ 10+2+3 ಬದಲಾಗಿ 5+3+3+3+4 ಶಿಕ್ಷಣ ವ್ಯವಸ್ಥೆಗೆ ಸಮಿತಿ ಒಲವು ತೋರಿದೆ. ಇದರಲ್ಲಿ ಪೂರ್ವ ಪ್ರಾಥಮಿಕ ಮತ್ತು ಒಂದು ಎರಡನೇ ತರಗತಿಯನ್ನೊಳಗೊಂಡ ಮೊದಲ ಐದು ವರ್ಷದ ಫೌಂಡೇಶನಲ್ ಸ್ಟೇಜ್, ನಂತರ ಮೂರು ಮೂರು ವರ್ಷದ ಪ್ರಿಪರೇಟರಿ ಹಾಗೂ ಮಿಡ್ಲ್ಸ್ಕೂಲ್ ಹಂತ, ಆ ನಂತರ ನಾಲ್ಕು ವರ್ಷದ ಸೆಕೆಂಡರಿ ಹಂತ ಎಂದು ವಿಂಗಡಿಸಲಾಗಿದೆ. ಸಮಿತಿ ಪ್ರಾಚೀನ ನಲಂದಾ ಮತ್ತು ತಕ್ಷಶಿಲಾ ಶಿಕ್ಷಣ ವ್ಯವಸ್ಥೆಯ ವೈಭವವನ್ನು ಮರಳಿ ಸ್ಥಾಪಿಸಲು ಶಿಕ್ಷಣ ವ್ಯವಸ್ಥೆಯಲ್ಲಿನ ನಿಯಮಗಳನ್ನು ಉದಾರಗೊಳಿಸಲು ಶಿಫಾರಸು ಮಾಡಿದೆ. ಉಚ್ಚ ಶಿಕ್ಷಣವನ್ನು ವಿಶ್ವದರ್ಜೆಯ ಹಾಗೂ ಭಾರತೀಯ ಕಲೆ-ಕುಶಲತೆಗೆ ಒತ್ತು ನೀಡುವ ಶಿಕ್ಷಣ ವ್ಯವಸ್ಥೆಯನ್ನಾಗಿಸಲು ಸಲಹೆ ನೀಡಲಾಗಿದೆ. ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ನೈತಿಕ ಮೌಲ್ಯಗಳನ್ನೊಳಗೊಂಡ ಶಿಕ್ಷಣ ವ್ಯವಸ್ಥೆಗೆ ಸಮಿತಿ ಒಲವು ತೋರಿದೆ. ಸಂವಿಧಾನದ ಮೌಲ್ಯಗಳ ಅರಿವನ್ನು ಹೆಚ್ಚಿಸುವ, ಸೇವಾ ಭಾವನೆ ಮೂಡಿಸುವ ಶಿಕ್ಷಣ ಖಂಡಿತಾ ಮೋದಿ ಮಹತ್ವಾಕಾಂಕ್ಷೆಯ ನವಭಾರತದ ರಚನೆಗೆ ಸಹಾಯಕವಾಗಬಲ್ಲದು.
ನಮ್ಮ ಶಿಕ್ಷಣ ವ್ಯವಸ್ಥೆಯನ್ನು ವಿಶಾಲ ತಳಹದಿಯ ಹಾಗೂ ವಿದ್ಯಾರ್ಥಿಗಳಿಗೆ ತಮ್ಮ ಅಭಿರುಚಿಗೆ ತಕ್ಕಂತೆ ಭವಿಷ್ಯ ಕಂಡು ಕೊಳ್ಳುವಂತಹ ಮಾದರಿ ಶಿಕ್ಷಣ ವ್ಯವಸ್ಥೆಯಾಗಿಸುವ ಯತ್ನ ಸರ್ಕಾರದ ಕಡೆಯಿಂದ ನಡೆಯಬೇಕಿದೆ. ಹಿಂದಿ ಹೇರಲಾಗುತ್ತಿದೆ ಎಂದು ಈಗಾಗಲೇ ತಮಿಳುನಾಡಿನಲ್ಲಿ ಹೊಸ ಶಿಕ್ಷಣ ನೀತಿಗೆ ವಿರೋಧ ವ್ಯಕ್ತವಾಗುತ್ತಿದೆ. ಕಸ್ತೂರಿರಂಗನ್ ವರದಿಯಲ್ಲಿ ಸಂಸ್ಕೃತಕ್ಕೆ ನೀಡಿದ ಪ್ರಾಮುಖ್ಯತೆ ಅನೇಕರಿಗೆ ಪಥ್ಯವಾಗಲಿಕ್ಕಿಲ್ಲ. ಭಾಷೆಯ ಮತ್ತು ಸೆಕ್ಯುಲರ್ ಹೆಸರಿನಲ್ಲಿ ರಾಜಕಾರಣ ಮಾಡುವವರು ಬೀದಿ ರಂಪಾಟ ಮಾಡುವುದಂತೂ ನಿಶ್ಚಿತ. ಸುಧಾರಣಾ ವಿರೋಧಿಗಳನ್ನು ಎದುರಿಸಬೇಕಾದ ಸವಾಲು ಸರಕಾರದ ಮುಂದಿದೆ. ಶಾಲಾ ಶಿಕ್ಷಣ ಮತ್ತು ಬದುಕಿಗೆ ಆಧಾರವಾಗಬಲ್ಲ ವೃತ್ತಿ ಒಂದಕ್ಕೊಂದು ಪೂರಕವಾಗಿರಬೇಕೆನ್ನುವುದು ಶಿಕ್ಷಣ ತಜ್ಞನಲ್ಲದ ಸಾಮಾನ್ಯ ಪೋಷಕರ ಅಭಿಪ್ರಾಯಕ್ಕೆ ಅನುಗುಣವಾದ ಸರಕಾರದ ನಿರ್ಣಯ ರಾಜಕೀಯದ ವಿರೋಧದ ನಡುವೆಯೂ ಜನಮನ್ನಣೆ ಗಳಿಸುವುದರಲ್ಲಿ ಸಂದೇಹವಿಲ್ಲ. ನೋಟ್ಬ್ಯಾನ್, GST ವಿಷಯದಲ್ಲಾದಂತೆ ಜನಹಿತದ ಕಠಿಣ ನಿರ್ಧಾರಗಳನ್ನು ಕೇವಲ ವಿರೋಧಕ್ಕಾಗಿ ವಿರೋಧ ಮಾಡುವ ಬೀದಿ ರಂಪಾಟಗಳು ಜನತಾ ನ್ಯಾಯಾಲಯದಲ್ಲಿ ಬಿದ್ದುಹೋಗುವುದು ನಿಶ್ಚಿತ. ಈ ಕುರಿತು ಪ್ರಸ್ತುತ ಸರಕಾರ ತನ್ನ ಹಿಂದಿನ ಕಾರ್ಯಕಾಲದ ಅನುಭವದ ಮೇಲೆ ನವಭಾರತದ ನಿರ್ಮಾಣಕ್ಕಾಗಿ ಸುದೀರ್ಘ ಕಾಲದಿಂದ ನನೆಗುದಿಗೆ ಬಿದ್ದಿರುವ ಶಿಕ್ಷಣ ಕ್ಷೇತ್ರ ಕಾಯಕಲ್ಪದ ವಿಷಯದಲ್ಲಿ ಮಹತ್ವದ್ದನ್ನು ಸಾಧಿಸುತ್ತದೆನ್ನುವ ಅಪಾರ ನಿರೀಕ್ಷೆ ಜನತೆಗಿದೆ.