Advertisement

ಕ್ಯಾಂಪ್ಕೋ ಲಿಮಿಟೆಡ್; ರೈತರ, ಅಡಿಕೆ ಬೆಳೆಗಾರರ ಹಿತಾಸಕ್ತಿ ಕಾಪಾಡುವ ಸಹಕಾರಿ ಸಂಸ್ಥೆ…

05:09 PM Feb 09, 2023 | Team Udayavani |

ಕ್ಯಾಂಪ್ಕೋ 1973ರಲ್ಲಿ ಪುತ್ತೂರಿನಲ್ಲಿ ಸ್ಥಾಪನೆಯಾದ ಪ್ರತಿಷ್ಠಿತ ಬಹುರಾಜ್ಯ ಸಹಕಾರಿ ಸಂಸ್ಥೆಯಾಗಿದೆ. ವಾರಣಾಸಿ ಸುಬ್ರಾಯ ಭಟ್ ಅವರು ಕ್ಯಾಂಪ್ಕೋ ಸಂಸ್ಥಾಪಕರಾಗಿದ್ದಾರೆ. ಕ್ಯಾಂಪ್ಕೋ ಬ್ರಹ್ಮ ಎಂದೇ ಚಿರಪರಿಚಿತರಾದ ವಾರಣಾಸಿ ಸುಬ್ರಾಯ ಭಟ್ಟರು ಅಸ್ಥಿರ ಕಾಲಘಟ್ಟದಲ್ಲಿ ಅಡಿಕೆ ಬೆಳೆಗಾರರ ಪಾಲಿಗೆ ಆಶಾಕಿರಣವಾಗಿ ನಿಂತು ಕ್ಯಾಂಪ್ಕೋ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದರು.

Advertisement

ಕ್ಯಾಂಪ್ಕೋ ಜನರಿಂದ, ಜನರಿಗಾಗಿ, ಜನರಿಗೋಸ್ಕರವಾಗಿರುವ ಸಹಕಾರಿ ಸಂಸ್ಥೆಯಾಗಿದೆ. ಭಾರತದಾದ್ಯಂತ ಸಂಗ್ರಹಣೆ ಮತ್ತು ಮಾರುಕಟ್ಟೆ ಜಾಲವನ್ನು ಹೊಂದಿದೆ. ಇದು ಅಡಿಕೆ, ಕೊಕ್ಕೊ, ರಬ್ಬರ್ ಮತ್ತು ಕಾಳುಮೆಣಸು ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ನಿಯಮಿತವಾಗಿದೆ. ಅಷ್ಟೇ ಅಲ್ಲ ಕೊಕ್ಕೊ ಚಾಕೋಲೇಟ್ ಮತ್ತು ಇತರ ಕೊಕ್ಕೊ ಉತ್ಪನ್ನಗಳನ್ನು ತಯಾರಿಸುತ್ತದೆ.

ಪ್ರಾರಂಭದ ಹಂತದಲ್ಲಿ 3,756 ರೈತ ಸದಸ್ಯರಿದ್ದು, ಅದು ಈಗ 1,38,000ಕ್ಕೂ ಅಧಿಕ ರೈತ ಸದಸ್ಯರನ್ನು ಹೊಂದಿದೆ. ದಿ ಕ್ಯಾಂಪ್ಕೋ ಲಿಮಿಟೆಡ್ 70ರ ದಶಕದಲ್ಲಿ ಅಡಿಕೆ ಬೆಳೆಗಾರರನ್ನು ಸಂಕಷ್ಟದಿಂದ ಮೇಲೆತ್ತುವ ಮುಖ್ಯ ಉದ್ದೇಶದೊಂದಿಗೆ ಸ್ಥಾಪನೆಯಾಗಿತ್ತು.

1986ರಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬಿಕ್ಕಟ್ಟಿನಿಂದಾಗಿ, ಕೊಕ್ಕೊ ಬೀನ್ಸ್ ಖರೀದಿಸುವವರ ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಕ್ಯಾಂಪ್ಕೋ ಮಹತ್ತರವಾದ ಜವಾಬ್ದಾರಿಯನ್ನು ಹೊತ್ತುಕೊಂಡಿತ್ತು. ಆ ನಿಟ್ಟಿನಲ್ಲಿ ಕೊಕ್ಕೊ ಬೆಳೆಗಾರರನ್ನು ಪ್ರೋತ್ಸಾಹಿಸಲು ಆಗ್ನೇಯ ಏಷ್ಯಾದ ಎರಡನೇ ಅತಿದೊಡ್ಡ ಚಾಕೋಲೇಟ್ ಉತ್ಪಾದನಾ ಘಟಕವನ್ನು ಸ್ಥಾಪಿಸಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ವಾರ್ಷಿಕವಾಗಿ 23,000 ಮೆಟ್ರಿಕನ್ ಟನ್ ಸಾಮರ್ಥ್ಯದ ಕ್ಯಾಂಪ್ಕೋ ಚಾಕೋಲೇಟ್ ಫ್ಯಾಕ್ಟರಿ ಆರಂಭಗೊಂಡಿತ್ತು. ಸಂಪೂರ್ಣ ಸ್ವಯಂಚಾಲಿತ ಮತ್ತು ಅತ್ಯಾಧುನಿಕ ಯಂತ್ರೋಪಕರಣ ಹೊಂದಿದ್ದ ಕಾರ್ಖಾನೆಯನ್ನು ಅಂದಿನ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್ ಅವರು ಕ್ಯಾಂಪ್ಕೋ ಚಾಕೋಲೇಟ್ ಫ್ಯಾಕ್ಟರಿ ಉದ್ಘಾಟನೆ ನೆರವೇರಿಸಿದ್ದರು. ಇದರೊಂದಿಗೆ ಗ್ರೀನ್ ಎನರ್ಜಿಗೆ ಒತ್ತು ನೀಡಿದ ಕ್ಯಾಂಪ್ಕೋ ಮೂರು ವಿಂಡ್ ಮಿಲ್ ಘಟಕ ಹಾಗೂ 500 ಮೆಗಾ ವ್ಯಾಟ್ ಸಾಮರ್ಥ್ಯದ ಸೌರ ಫಲಕಗಳನ್ನು ಸ್ಥಾಪಿಸಿತ್ತು. ಕ್ಯಾಂಪ್ಕೋ ವ್ಯಾಮ್ ಯಂತ್ರ(ಆವಿ ಹೀರಿಕೊಳ್ಳುವ ಯಂತ್ರ)ವನ್ನು ಕೂಡಾ ಸ್ಥಾಪಿಸಿದೆ.

ದೇಶಾದ್ಯಂತ ಕ್ಯಾಂಪ್ಕೋ 160ಕ್ಕೂ ಅಧಿಕ ಶಾಖೆಗಳನ್ನು ಹೊಂದಿದೆ. 2000ಕ್ಕೂ ಹೆಚ್ಚು ಮಂದಿ ಉದ್ಯೋಗಿಗಳನ್ನು ಹೊಂದಿದ್ದು, ವಾರ್ಷಿಕ 2,778 ಕೋಟಿಗೂ ಅಧಿಕ ವಹಿವಾಟು ಹೊಂದಿರುವ ಕ್ಯಾಂಪ್ಕೋ ವೃತ್ತಿಪರತೆಯ ನಿರ್ವಹಣಾ ಮಂಡಳಿಯ ಎ.ಕಿಶೋರ್ ಕುಮಾರ್ ಕೊಡ್ಗಿ, ಸಮರ್ಥ ಆಡಳಿತಾಧಿಕಾರಿ, ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ.ಕೃಷ್ಣಕುಮಾರ್ ಹಾಗೂ ಸದಸ್ಯರ ಮುಖಂಡತ್ವದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.

Advertisement

ಕ್ಯಾಂಪ್ಕೋ ಬದಲಾಗುತ್ತಿರುವ ಮಾರುಕಟ್ಟೆ ಟ್ರೆಂಡ್ಸ್, ಆರ್ಥಿಕ ಹಿಂಜರಿತ ಮತ್ತು ಅಡಿಕೆ ಮಾರುಕಟ್ಟೆಯಲ್ಲಿನ ಏರಿಳಿತವನ್ನು ಸಮರ್ಥವಾಗಿ ನಿಭಾಯಿಸಿದೆ. ವಿವೇಚನಾಶೀಲ ಮಾರುಕಟ್ಟೆ ಕೌಶಲ್ಯದ ಮೂಲಕ ಕ್ಯಾಂಪ್ಕೋ ಬೆಳೆಗಾರ ಸದಸ್ಯರ ವಿಶ್ವಾಸವನ್ನು ಗಳಿಸಿದೆ ಮತ್ತು ಭವಿಷ್ಯದಲ್ಲಿಯೂ ಕೂಡಾ ಬೆಳೆಗಾರ ಸದಸ್ಯರ ಹಿತಾಸಕ್ತಿ ಕಾಪಾಡುವ ಉದ್ದೇಶಕ್ಕೆ ಕ್ಯಾಂಪ್ಕೋವನ್ನು ಮುಖ್ಯ ಉದ್ದೇಶಕ್ಕೆ ಬದ್ಧವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next