ಕಡಬ: ಬೇಸಗೆ ಶಿಬಿರಗಳು ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗಳು ಹಾಗೂ ಅವರಲ್ಲಿನ ಸೃಜನಶೀಲ ಚಟುವಟಿಕೆಗೆ ಅತ್ಯುತ್ತಮ ವೇದಿಕೆ ಎಂದು ಜೇಸಿ ಪೂರ್ವ ವಲಯಾಧಿಕಾರಿ, ವಲಯ ತರಬೇತುದಾರ ಪಂಜದ ಸವಿತಾರ ಮೂಡೂರು ಅಭಿಪ್ರಾಯಪಟ್ಟರು.
ಅವರು ಸೋಮವಾರ ಕಡಬದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೇಸಿಐ ಕಡಬ ಕದಂಬ ಘಟಕ ಹಾಗೂ ಜೇಸಿಐ ಕಡಬ ಕದಂಬ ಚಾರಿಟೆಬಲ್ ಟ್ರಸ್ಟ್‌ನ ವತಿಯಿಂದ ಆಯೋಜಿಸಲಾಗಿರುವ 3 ದಿನಗಳ ಚಿಣ್ಣರ ವಿಶೇಷ ಬೇಸಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ವರ್ಷಪೂರ್ತಿ ಪಠ್ಯ ಚಟುವಟಿಕೆ, ತರಗತಿ ಕೊಠಡಿಯೊಳಗಿನ ಕಲಿಕೆ ಹಾಗೂ ಪರೀಕ್ಷೆಯ ಒತ್ತಡದಲ್ಲಿರುವ ವಿದ್ಯಾರ್ಥಿ ಗಳಿಗೆ ಈ ರೀತಿಯ ಶಿಬಿರಗಳು ಉತ್ತಮ ಪುನಶ್ಚೇತನದ ಅವಕಾಶ ಗಳಾಗಿವೆ. ಬೇಸಗೆ ಶಿಬಿರ ಗಳು ಇಂದು ದುಡ್ಡು ಮಾಡುವ ದಂಧೆಗಳಾಗುತ್ತಿವೆ ಮತ್ತು ಮಕ್ಕಳ ರಜಾಕಾಲದ ಖುಷಿಯನ್ನು ಕಸಿದು ಕೊಳ್ಳುತ್ತಿವೆ ಎನ್ನುವ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಮಕ್ಕಳ ರಜೆಗೆ ತೊಂದರೆಯಾಗದ ರೀತಿಯಲ್ಲಿ ಯಾವುದೇ ಶುಲ್ಕ ವಿಧಿಸದೆ ಉಚಿತ ವಾಗಿ ಈ ಶಿಬಿರವನ್ನು ಆಯೋಜಿಸಿ ರುವ ಜೇಸಿ ಸಂಸ್ಥೆ ಮತ್ತು ಶಾಲಾ ಶಿಕ್ಷಕ ವೃಂದದ ಪ್ರಯತ್ನ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲಾ ಮುಖ್ಯ ಶಿಕ್ಷಕ ಹಮೀದ್ ಕೋಡಿಂಬಾಳ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅವುಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಸಮುದಾಯದ ಸಹಕಾರವೂ ಅತ್ಯಗತ್ಯ. ಈ ನಿಟ್ಟಿನಲ್ಲಿ ಶಾಲೆಗೆ ಜೇಸಿ ಸಂಘಟನೆಯವರ ಸಹಕಾರ ಉತ್ತಮವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜೇಸಿ ಘಟಕದ ಅಧ್ಯಕ್ಷ ರವಿಚಂದ್ರ ಪಡುಬೆಟ್ಟು, ಶಿಕ್ಷಣ ಎನ್ನುವುದು ತರಗತಿ ಕೊಠಡಿಗೆ ಸೀಮಿತ ವಾಗಿರಬಾರದು. ವಿದ್ಯಾರ್ಥಿಗಳ ಪ್ರತಿಭೆಗಳು ಬೆಳಕಿಗೆ ಬರುವ ಎಲ್ಲ ಅವಕಾಶಗಳನ್ನು ಒದಗಿಸಿಕೊಡುವ ಚಟುವಟಿಕೆ ನಡೆದಾಗ ಮಾತ್ರ ಶಿಕ್ಷಣ ಪರಿಪೂರ್ಣವಾಗಲು ಸಾಧ್ಯ ಎಂದರು. ಶಾಲಾಭಿವೃದ್ಧಿ ಮತ್ತು ಮೇಲುಸ್ತವಾರಿ ಸಮಿತಿಯ ಅಧ್ಯಕ್ಷ ಕೃಷ್ಣ ಬಿ., ಜೇಸಿ ಕಾರ್ಯದರ್ಶಿ ಕಾಶೀನಾಥ ಗೋಗಟೆ, ಪೂರ್ವಾಧ್ಯಕ್ಷರಾದ ಶಿವಪ್ರಸಾದ್ ರೈ ಮೈಲೇರಿ, ಕೆ.ಎಸ್.ದಿನೇಶ್ ಆಚಾರ್ಯ, ಜಯರಾಮ ಗೌಡ ಆರ್ತಿಲ, ತಸ್ಲಿ ಮರ್ದಾಳ, ಉಪಾಧ್ಯಕ್ಷ ಜಫೀರ್ ಮಹಮ್ಮದ್, ಜತೆ ಕಾರ್ಯದರ್ಶಿ ಡಾ| ರಾಮಪ್ರಕಾಶ್ ಉಪಸ್ಥಿತರಿದ್ದರು.
ಜೇಸಿಐ ಕಡಬ ಕದಂಬ ಚಾರಿ ಟೆಬಲ್ ಟ್ರಸ್ಟ್‌ನ ಅಧ್ಯಕ್ಷರು ಸ್ವಾಗತಿಸಿ, ಪ್ರಸ್ತಾವನೆಗೈದರು. ತಿರುಮಲೇಶ್ ಭಟ್ ಹೊಸ್ಮಠ ಜೇಸಿವಾಣಿ ವಾಚಿಸಿ, ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ವಿಜಯಕುಮಾರ್ ವಂದಿಸಿದರು. ನೆಲ್ಯಾಡಿ ಜ್ಞಾನೋದಯ ಬೆಥನಿ ಶಾಲೆಯ ಚಿತ್ರಕಲಾ ಶಿಕ್ಷಕ ಅನಿಲ್ ಬಲ್ಯ (ವರ್ಲಿ ಚಿತ್ರಕಲೆ) ಹಾಗೂ ಡಾ| ರಾಮಪ್ರಕಾಶ್ (ದಂತ ಸಂರಕ್ಷಣೆ) ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಶಿಬಿರ ನಡೆಸಿಕೊಟ್ಟರು. ಎ. 9ರಂದು ಕಡಬದ ಸೈಂಟ್ ಜೋಕಿಮ್ಸ್ ಶಿಕ್ಷಣ ಸಂಸ್ಥೆಯ ಚಿತ್ರಕಲಾ ಶಿಕ್ಷಕ ಸತೀಶ್ ಪಂಜ (ಪೇಪರ್ ಆರ್ಟ್, ಡ್ರಾಯಿಂಗ್) ಹಾಗೂ 10ರಂದು ರಂಗ ನಿರ್ದೇಶಕ ಬಿಳಿನೆಲೆಯ ಜಯಪ್ರಕಾಶ್ ಮೋಂಟಡ್ಕ (ನಾಟಕ ಮತ್ತು ಅಭಿನಯ) ಶಿಬಿರವನ್ನು ನಡೆಸಿಕೊಡಲಿದ್ದಾರೆ.