Advertisement

ಲೆಕ್ಕಕೊಡಿ ಬೆಂಗಳೂರು ಜನರಿಗೆ ಅಭಿಯಾನ

12:00 PM Mar 02, 2018 | |

ಬೆಂಗಳೂರು: ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ವಿರುದ್ಧ “ಲೆಕ್ಕ ಕೊಡಿ ಬೆಂಗಳೂರಿನ ಜನರಿಗೆ’ ಅಭಿಯಾನ ಆರಂಭಿಸುತ್ತಿರುವ ಬೆಂಗಳೂರು ಮಹಾನಗರ ಬಿಜೆಪಿ, ಈ ಕುರಿತಂತೆ ಗುರುವಾರ ಆರೋಪಗಳ ಪಟ್ಟಿ ಬಿಡುಗಡೆ ಮಾಡಿದೆ.

Advertisement

ಶುಕ್ರವಾರದಿಂದ ಕಾಂಗ್ರೆಸ್‌ನಿಂದ ಬೆಂಗಳೂರು ರಕ್ಷಿಸಿ ಎಂಬ ಘೋಷವಾಕ್ಯದಡಿ ಹಮ್ಮಿಕೊಂಡಿರುವ ಪಾದಯಾತ್ರೆ ವೇಳೆ ಈ ಆರೋಪಗಳ ಪಟ್ಟಿಯನ್ನು ಜನರಿಗೆ ತಿಳಿಸಿ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ನಗರದಲ್ಲಿ ಮಾಡಿರುವ ಕೆಲಸಗಳ ಬಗ್ಗೆ ಲೆಕ್ಕ ಕೊಡಿ ಎಂಬ ಅಭಿಯಾನ ಮುಂದುವರಿಸಲಿದೆ.

ಗುರುವಾರ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ಕಾಂಗ್ರೆಸ್‌ ಸರ್ಕಾರ ಮತ್ತು ಬಿಬಿಎಂಪಿ ಆಡಳಿತದ ವಿರುದ್ಧ ಆರೋಪಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಹಾಗೂ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌, ರಾಷ್ಟ್ರದಲ್ಲೇ ಅತ್ಯಂತ ಸುಂದರ ಮತ್ತು ಜನಸ್ನೇಹಿ ನಗರವಾಗಿದ್ದ ಬೆಂಗಳೂರನ್ನು ಭ್ರಷ್ಟಾಚಾರದ ಮೂಲಕ ಹಾಳು ಮಾಡಿರುವ ಕಾಂಗ್ರೆಸ್‌ ಆಡಳಿತದ ಬಗ್ಗೆ ಜನಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಆರೋಪಗಳ ಪಟ್ಟಿಯಲ್ಲಿ ಏನೇನಿದೆ?: ಬೆಂಗಳೂರಿನ ರಸ್ತೆಗಳ ಪರಿಸ್ಥಿತಿ, ವೈಟ್‌ ಟ್ಯಾಪಿಂಗ್‌ ಹೆಸರಿನಲ್ಲಿ ನಡೆಯುತ್ತಿರುವ ದಂಧೆ, ಸಂಚಾರ ಅವ್ಯವಸ್ಥೆ, ಅನಿಯಂತ್ರಿತ ಕಾಂಕ್ರಿಟೀಕರಣ, ಕೆರೆ ಮತ್ತಿತರ ಜಲಸಂಗ್ರಹಣಾ ಮೂಲಗಳ ಅತಿಕ್ರಮಕ್ಕೆ ಅವಕಾಶ ಮಾಡಿಕೊಟ್ಟಿರುವುದು, ಜಲ ಮಂಡಳಿಯಲ್ಲಿ ನೀರಿನ ಸೋರಿಕೆ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಕೈಗೊಂಡ ಪರಿಸರಕ್ಕೆ ಹಾನಿಕಾರಕವಾಗುವ ಕ್ರಮಗಳು ಮುಂತಾದ ಅಂಶಗಳನ್ನು ಆರೋಪಗಳ ಪಟ್ಟಿಯಲ್ಲಿ ಪ್ರಸ್ತಾಪಿಸಲಾಗಿದೆ. 

ವಿವಿಧ ಕಾರ್ಯಕ್ರಮಗಳಿಗೆ ಸರ್ಕಾರ ಮಾಡಿರುವ ವೆಚ್ಚ ಮತ್ತು ಅದರಿಂದ ಜನರಿಗೆ ಆಗಿರುವ ಪ್ರಯೋಜನಗಳನ್ನು ತಾಳೆ ಹಾಕುವ ಮೂಲಕ ಯೋಜನೆಗಳ ಅನುಷ್ಠಾನದಲ್ಲಿ ವ್ಯಾಪಕ ಭ್ರಷ್ಟಾಚಾರವಾಗಿದೆ. ಸರ್ಕಾರದ ಕಿರುಕುಳದಿಂದ ಕೈಗಾರಿಕೆಗಳು ಓಡಿ ಹೋಗುತ್ತಿವೆ. ಆಸ್ತಿ ತೆರಿಗೆ ಹೆಚ್ಚಿಸುತ್ತಿದ್ದರೂ ಕನಿಷ್ಟ ಮೂಲ ಸೌಕರ್ಯ ಕೊಡದೆ ಜನರನ್ನು ವಂಚಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.

Advertisement

ವಿದ್ವತ್‌ ಮೇಲೆ ಶಾಸಕ ಎನ್‌.ಎ.ಹ್ಯಾರಿಸ್‌ ಪುತ್ರ ಮೊಹಮ್ಮದ್‌ ನಲಪಾಡ್‌ ಹ್ಯಾರಿಸ್‌ ಮತ್ತು ತಂಡ ನಡೆಸಿದ ಮಾರಣಾಂತಿಕ ಹಲ್ಲೆ, ಕೆ.ಆರ್‌.ಪುರ ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ ಬಿಬಿಎಂಪಿ ಕಚೇರಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚುವ ಬೆದರಿಕೆ ಹಾಕಿದ ಪ್ರಕರಣ, ಯಶವಂತಪುರ ಶಾಸಕ ಎಸ್‌.ಟಿ.ಸೋಮಶೇಖರ್‌ ಬೆಂಬಲಿಗರು ಭೂಮಾಲೀಕನ ಮೇಲೆ ನಡೆಸಿದ ಹಲ್ಲೆ ಪ್ರಕರಣ ಮುಂತಾದ ವಿಚಾರಗಳನ್ನು ಪ್ರಸ್ತಾಪಿಸಿರುವ ಬಿಜೆಪಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫ‌ಲವಾಗಿರುವ ಸರ್ಕಾರ ಬೆಂಗಳೂರನ್ನು ಕ್ರೈಂ ಸಿಟಿ ಮಾಡುತ್ತಿದೆ ಎಂದೂ ಆಪಾದಿಸಿದೆ.

ಈ ಎಲ್ಲಾ ಅಂಶಗಳ ಜತೆಗೆ ಬೆಂಗಳೂರು ನಗರದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ವೆಚ್ಚ ಮಾಡಿದ ಹಣ ಮತ್ತು ಅದರಲ್ಲಿ ನಿಜವಾಗಿಯೂ ಆಗಿರುವ ಕೆಲಸಗಳ ಕುರಿತು ಪ್ರಸ್ತಾಪಿಸುವ ಮೂಲಕ ಜನರ ತೆರಿಗೆ ಹಣ ವೆಚ್ಚ ಮಾಡಿದ್ದ ಬಗ್ಗೆ ಲೆಕ್ಕ ಕೊಡಿ ಬೆಂಗಳೂರು ಜನರಿಗೆ ಎಂಬ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಪ್ರಕಾಶ್‌ ಜಾವಡೇಕರ್‌ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ಶಾಸಕರಾದ ಎಸ್‌.ಸುರೇಶ್‌ಕುಮಾರ್‌, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ವೈ.ಎ.ನಾರಾಯಣಸ್ವಾಮಿ ಮತ್ತಿತರರು ಇದ್ದರು.

ಪಾದಯಾತ್ರೆ ರಥಕ್ಕೆ ಚಾಲನೆ: ರಾಜ್ಯ ಕಾಂಗ್ರೆಸ್‌ ಸರ್ಕಾರದ ಗೂಂಡಾಗಿರಿ, ಭ್ರಷ್ಟಾಚಾರದಿಂದ ಬೆಂಗಳೂರು ರಕ್ಷಿಸಿ ಎಂದು ಘೋಷವಾಕ್ಯದೊಂದಿಗೆ ಬಿಜೆಪಿ ನಗರದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಶುಕ್ರವಾರದಿಂದ ಮಾ. 15ರವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಗುರುವಾರ ಪಾದಯಾತ್ರೆ ರಥ ಬಿಡುಗಡೆ ಮಾಡಲಾಯಿತು. ಮಲ್ಲೇಶ್ವರದ ಬಿಜೆಪಿ ಕಚೇರಿ ಆವರಣದಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಮತ್ತಿತರರು ರಥಕ್ಕೆ ಚಾಲನೆ ನೀಡಿದರು.

ಶುಕ್ರವಾರ ಬೆಳಗ್ಗೆ 9.30ಕ್ಕೆ ಬಸವನಗುಡಿಯ ಗವಿ ಗಂಗಾಧರೇಶ್ವರ ದೇವಸ್ಥಾನದ ಬಳಿ ಪಾದಯಾತ್ರೆ ಉದ್ಘಾಟಿಸಲಾಗುತ್ತದೆ. ಕೇಂದ್ರ ಸಚಿವರಾದ ಅನಂತಕುಮಾರ್‌, ಪ್ರಕಾಶ್‌ ಜಾವಡೇಕರ್‌, ಡಿ.ವಿ.ಸದಾನಂದಗೌಡ, ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ಸಂಸದ ಪಿ.ಸಿ.ಮೋಹನ್‌, ಶಾಸಕರಾದ ಅರವಿಂದ ಲಿಂಬಾವಳಿ, ರವಿ ಸುಬ್ರಮಣ್ಯ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಶುಕ್ರವಾರದಿಂದ ಆರಂಭವಾಗುವ ಪಾದಯಾತ್ರೆ ಪ್ರತಿ ದಿನ ಎರಡು ವಿಧಾನಸಭಾ ಕ್ಷೇತ್ರಗಳಂತೆ 14 ದಿನಗಳ ಕಾಲ 28 ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಲಿದ್ದು, ಮಾ. 15ರಂದು ಮುಕ್ತಾಯಗೊಳ್ಳಲಿದೆ. ಸಮಾರೋಪಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next