Advertisement

ಜಯನಗರ ಕ್ಷೇತ್ರದಲ್ಲಿ ಪ್ರಚಾರ ಭರಾಟೆ

11:47 AM Jun 07, 2018 | |

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಅಭ್ಯರ್ಥಿಗಳು ಬಿರುಸಿನ ಪ್ರಚಾರದೊಂದಿಗೆ, ರ್ಯಾಲಿ, ಪಾದಯಾತ್ರೆ ಮೂಲಕ ಮತದಾರರನ್ನು ಸೆಳೆಯಲು ಕಸರತ್ತು ನಡೆಸುತ್ತಿದ್ದಾರೆ.

Advertisement

ಬಿಜೆಪಿ ಅಭ್ಯರ್ಥಿ ಬಿ.ಎನ್‌.ಪ್ರಹ್ಲಾದ್‌ ಬಾಬು ಪರವಾಗಿ ಬುಧವಾರ ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌, ಸಂಸದ ಪಿ.ಸಿ.ಮೋಹನ್‌, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿ ಹಲವು ಮುಖಂಡರು ಬಿರುಸಿನ ಪ್ರಚಾರ ನಡೆಸಿದರು.

ಈ ವೇಳೆ ಸಿ.ಟಿ.ರವಿ ಮಾತನಾಡಿ, ರಾಜ್ಯದ ಅಪವಿತ್ರ ಮೈತ್ರಿ ಸರ್ಕಾರ ವಿರೋಧಿಸಿ ಪ್ರಹ್ಲಾದ್‌ ಬಾಬು ಅವರನ್ನು ಜನ ಭಾರಿ ಮತಗಳ ಅಂತರದಿಂದ ಆಯ್ಕೆ ಮಾಡಬೇಕು. ಬಿ.ಎನ್‌.ವಿಜಯಕುಮಾರ್‌ ಅವರು ಆರಂಭಿಸಿದ್ದ ಜನಪರ, ಸಮಾಜಮುಖೀ ಕೆಲಸ ಮುಂದುವರಿಸಿಕೊಂಡು ಹೋಗಲು ಪ್ರಹ್ಲಾದ್‌ ಬಾಬು ಅವರಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ಪಾಲಿಕೆ ಸದಸ್ಯರಾದ ಆರ್‌.ಗೋವಿಂದ ನಾಯ್ಡು, ಸಂಗಾತಿ ವೆಂಕಟೇಶ್‌ ಕಾರ್ಯಕರ್ತರೊಂದಿಗೆ ಎನ್‌ಎಎಲ್‌ ಬಡಾವಣೆ, ಜಯನಗರ 9ನೇ ಬ್ಲಾಕ್‌ನ ಹಲವೆಡೆ ಪಾದಯಾತ್ರೆ ನಡೆಸಿ ಮತ ಯಾಚನೆ ಮಾಡಿದರು.

ಇನ್ನೊಂದೆಡೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ತಮ್ಮ ಪುತ್ರಿ, ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರೊಂದಿಗೆ ಪ್ರಚಾರ ನಡೆಸಿದರು. ಕ್ಷೇತ್ರದ ನಾನಾ ಪ್ರದೇಶಗಳಲ್ಲಿ ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸಿ ಸೌಮ್ಯಾ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷವು ಕಾಂಗ್ರೆಸ್‌ ಬೆಂಬಲಿಸಿರುವುದ ರಿಂದ ಜೆಡಿಎಸ್‌ ಅಭ್ಯರ್ಥಿಯ ಪ್ರಚಾರ ಇರಲಿಲ್ಲ.

ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಅವರು ಇಡೀ ದಿನ ಭರ್ಜರಿ ಪ್ರಚಾರ ನಡೆಸಿದರು. ಬೆಳಗ್ಗೆ ಜೆ.ಪಿ.ನಗರದ ನಟರಾಜ ಉದ್ಯಾನ, ಧನ್ವಂತರಿ ಉದ್ಯಾನ, ಮಿನಿ ಫಾರೆಸ್ಟ್‌ ಉದ್ಯಾನದಲ್ಲಿ ನಡಿಗೆದಾರರನ್ನು ಭೇಟಿ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ರೂಪಿಸಿರುವ ಪ್ರಣಾಳಿಕೆ ವಿತರಿಸಿ ಬೆಂಬಲಿಸುವಂತೆ ಮನವಿ ಮಾಡಿದರು. ಮಾರೇನಹಳ್ಳಿ, ಅರಸು ಕಾಲೋನಿ, ತಿಲಕ್‌ನಗರ, ಜಯನಗರ 5ನೇ ಬ್ಲಾಕ್‌ನಲ್ಲಿ ರೋಡ್‌ ಶೋ ಮೂಲಕ ಮತ ಯಾಚಿಸಿದರು.

Advertisement

ಕ್ಷೇತ್ರದಲ್ಲಿ ಪೊಲೀಸರು ನಿಷ್ಕ್ರಿಯರಾಗಿದ್ದು, ಪಕ್ಷಪಾತದಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಜಯನಗರ ಠಾಣೆಯ ಎದುರು ಮಧ್ಯಾಹ್ನ 1 ಗಂಟೆ ಹೊತ್ತಿಗೆ ರವಿಕೃಷ್ಣಾರೆಡ್ಡಿ ಪ್ರತಿಭಟನೆ ನಡೆಸಲು ಮುಂದಾದರು. ಇದಕ್ಕೆ ಪೊಲೀಸರು ಅವಕಾಶ ನೀಡದ ಕಾರಣ ರಸ್ತೆಯಲ್ಲೇ ಭಾಷಣ ಮಾಡಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಒಟ್ಟಾರೆ ಜಯನಗರ ಕ್ಷೇತ್ರದ ಚುನಾವಣಾ ಕಣ ರಂಗೇರುತ್ತಿದ್ದು, ಕುತೂಹಲ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next