ಕಾರವಾರ: ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಜೊತೆಗೆ ಸ್ಥಳೀಯರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನರೇಗಾ ಯೋಜನೆ ಜಾರಿಗೊಳಿಸಿದ್ದು, ದುಡಿಯುವ ಕೈಗಳಿಗೆ ಕಾಲ ಕಾಲಕ್ಕೆ ನರೇಗಾದಡಿ ಕೆಲಸ ನೀಡೋದು ಗ್ರಾಪಂಗಳ ಆದ್ಯ ಕರ್ತವ್ಯವಾಗಿದೆ ಎಂದು ಹಟ್ಟಿಕೇರಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಲೀಲಾ ಆಗೇರ ಅಭಿಪ್ರಾಯಪಟ್ಟರು.
ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಪಂ ವ್ಯಾಪ್ತಿಯ ಸಕಲಬೇಣ ಗ್ರಾಮ ಅರಣ್ಯ ಪ್ರದೇಶದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡಿರುವ ಕೆರೆ ಅಭಿವೃದ್ಧಿ ಕಾಮಗಾರಿ ಸ್ಥಳದಲ್ಲಿ ರೋಜಗಾರ್ ದಿವಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಜನರ ಸರ್ವಾಂಗಿಣ ಅಭಿವೃದ್ಧಿಗೆ ನರೇಗಾ ಯೋಜನೆ ಪೂರಕವಾಗಿದೆ. ವೈಯಕ್ತಿಕ ಹಾಗೂ ಸಮುದಾಯ ಸೇರಿದಂತೆ ಅನೇಕ ಕಾಮಗಾರಿಗಳನ್ನು ಪಡೆದುಕೊಳ್ಳಲು ನರೇಗಾದಲ್ಲಿ ಅವಕಾಶವಿದೆ. ಹೀಗಾಗಿ ಗ್ರಾಪಂ ವ್ಯಾಪ್ತಿಯ ಅರ್ಹ ಫಲಾನುಭವಿಗಳು ಪಂಚಾಯತಿಗೆ ಅರ್ಜಿ ನೀಡುವ ಮೂಲಕ ಯೋಜನೆಯಡಿ ಸಿಗುವ ಸೌಲಭ್ಯ ಹಾಗೂ ಕಾಮಗಾರಿಗಳನ್ನು ಪಡೆದುಕೊಂಡು ಸಬಲರಾಗಬೇಕು ಎಂದರು.
ತಾಲೂಕು ಐಇಸಿ ಸಂಯೋಜಕ ಫಕ್ಕೀರಪ್ಪ ತುಮ್ಮಣ್ಣನವರ ಮಾತನಾಡಿ, ನರೇಗಾದಲ್ಲಿ ಹಿರಿಯ ನಾಗರಿಕರು, ವಿಕಲಚೇತನರು, ವೃದ್ಧರು, ಮಂಗಳಮುಖೀಯರಿಗೆ ಕೆಲಸದಲ್ಲಿ ಶೇ. 50ರಷ್ಟು ವಿನಾಯಿತಿಯೊಂದಿಗೆ ಪೂರ್ಣ ಪ್ರಮಾಣದ ಕೂಲಿ ಒದಗಿಸಲಾಗುತ್ತದೆ. ನರೇಗಾ ಕಾಮಗಾರಿ ಕೆಲಸದಲ್ಲಿ ತೊಡುಗುವವರಿಗೆ ಯಾವುದೇ ತಾರತಮ್ಯವಿಲ್ಲದೇ ಸಮಾನ ಕೂಲಿ, ಸಮಾನ ವೇತನ ನೀಡಲಾಗುತ್ತದೆ. ಅಲ್ಲದೇ ಕೆಲಸದ ವೇಳೆ ಸಂಭವಿಸುವ ಆಕಸ್ಮಿಕ ಅವಘಡದಲ್ಲಿ ಶಾಶ್ವತ ಅಂಗವಿಕಲತೆ ಉಂಟಾದರೆ ಅಥವಾ ಕೂಲಿಕಾರರು ಮೃತರಾದರೆ ಅಂತಹವರಿಗೆ 2 ಲಕ್ಷ ರೂ. ಪರಿಹಾರ ಸಿಗಲಿದೆ. ಗಾಯಗೊಂಡ ಕೂಲಿಕಾರರಿಗೆ ಚಿಕಿತ್ಸೆ ಕೊಡಿಸುವ ವ್ಯವಸ್ಥೆಯಿದ್ದು, ಪ್ರತಿಯೊಬ್ಬ ಕೂಲಿಕಾರರು ಈ ಸೌಕರ್ಯದ ಸದುಪಯೋಗ ಪಡೆಯಬೇಕು ಎಂದರು.
ಕಳೆದ ನಾಲ್ಕು ವಾರಗಳಿಂದ ಕಾಮಗಾರಿ ಪ್ರಗತಿಯಲ್ಲಿದ್ದು, 70 ಮಹಿಳೆಯರು ಹಾಗೂ ಇಬ್ಬರು ಪುರುಷ ಕೂಲಿಕಾರರು ಕೆಲಸ ನಿರ್ವಹಿಸುತ್ತಿದ್ದಾರೆ. ಗ್ರಾಪಂ ಬಿಲ್ ಕಲೆಕ್ಟರ್ ಕಂ ಕ್ಲರ್ಕ್ ವಿನಾಯಕ್ ನಾಯ್ಕ, ಡಿಇಒ ಯೋಗೇಶ್ ನಾಯ್ಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.