Advertisement

ಪರೀಕ್ಷಾ ಕೇಂದ್ರದಲ್ಲಿ ಕ್ಯಾಮೆರಾ ಕಣ್ಗಾವಲು

06:05 AM Jan 16, 2018 | Team Udayavani |

ಬೆಂಗಳೂರು: ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಮತ್ತು ಕೊಠಡಿ ಮೇಲ್ವಿಚಾರಕರ ಮೇಲೆ ನಿಗಾ ಇಡಲು ಇದೇ ಮೊದಲ ಬಾರಿಗೆ ಎಲ್ಲಾ ಪರೀಕ್ಷಾ ಕೇಂದ್ರದಲ್ಲೂ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗುತ್ತಿದೆ.

Advertisement

ಉತ್ತರ ಕರ್ನಾಟಕ ಕೆಲವು ಜಿಲ್ಲೆಗಳು ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಒಂದಿಲ್ಲೊಂದು ರೀತಿಯ ಅಕ್ರಮ ಎಸಗಿ ಡಿಬಾರ್‌ ಆಗುವ ವಿದ್ಯಾರ್ಥಿಗಳ ಸಂಖ್ಯೆ ಇದ್ದೇ ಇರುತ್ತದೆ.

ಕೆಲವು ಕೇಂದ್ರದಲ್ಲಿ ಪರೀಕ್ಷಾ ಮೇಲ್ವಿಚಾರಕರೇ ವಿದ್ಯಾರ್ಥಿಗಳಿಗೆ ನಕಲು ಮಾಡಲು ಅವಕಾಶ ನೀಡುತ್ತಾರೆ. ಕೆಲವೆಡೆ ಹೊರಗಿನಿಂದ ಬಂದು ಕಿಟಕಿ ಮೂಲಕ ಚೀಟಿ, ಪುಸ್ತಕ ಹಾಗೂ ಮೊಬೈನ್‌ನಲ್ಲಿ ಮಾಹಿತಿ ನೀಡಿದ ನಿದರ್ಶನವೂ ಇದೆ.
ಇದಕ್ಕೆಲ್ಲ ಕಡಿವಾಣ ಹಾಕುವ ನಿಟ್ಟಿನಲ್ಲಿ ಎಲ್ಲಾ ಕೇಂದ್ರಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಇದು ಚುನಾವಣಾ ವರ್ಷ. ಮೇನಲ್ಲಿ ಚುನಾವಣೆ ನಡೆಯುವುದರಿಂದ ಮಾರ್ಚ್‌/ ಏಪ್ರಿಲ್‌ನಲ್ಲೇ ಎರಡೂ ಪರೀಕ್ಷೆ
ಮುಗಿಯುತ್ತದೆ. ಪರೀಕ್ಷಾ ಅಕ್ರಮ ಮತ್ತು ನಕಲು ಹೆಚ್ಚಾದರೆ, ಚುನಾವಣೆ ಫ‌ಲಿತಾಂಶದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿಯೇ ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆಯದಂತೆ ಎಚ್ಚರ ವಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪರೀಕ್ಷಾ ಅಕ್ರಮ ಅಥವಾ ಪ್ರಶ್ನೆಪತ್ರಿಕೆ ಸೋರಿಕೆಯಾದಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಹಾಗೂ ಪೋಷಕರಲ್ಲಿ ಭಯ
ಆರಂಭವಾಗುತ್ತದೆ. ರಾಜ್ಯ ವಿಧಾನಸಭೆ ಚುನಾವಣೆಗೂ ಪೂರ್ವದಲ್ಲೇ ಎಸ್ಸೆಸ್ಸೆಲ್ಸಿ ಮತ್ತು ಪಿಯು ಫ‌ಲಿತಾಂಶ
ಪ್ರಕಟಿಸುವುದರಿಂದ ಫ‌ಲಿತಾಂಶದ ಪ್ರಮಾಣ ಎಷ್ಟಿದೆ ಎಂಬುದು ಬಹಳ ಮುಖ್ಯವಾಗಲಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸುಮಾರು 3300 ಪರೀಕ್ಷಾ ಕೇಂದ್ರಗಳನ್ನು ನಿಗದಿ ಪಡಿಸಿದ್ದು, ಅದರಲ್ಲಿ 1,390 ಕೇಂದ್ರಗಳಲ್ಲಿ ಈಗಾಗಲೇ ಸಿಸಿ ಕ್ಯಾಮೆರಾ ಅಳವಡಿಕೆ ಪೂರ್ಣಗೊಂಡಿದೆ. ಉಳಿದ ಕೇಂದ್ರಗಳಿಗೆ ಸಿಸಿ ಕ್ಯಾಮೆರಾ ಅಳವಡಿಸುವ ಪ್ರಕ್ರಿಯೆಡೆಯುತ್ತಿದೆ. ಹಾಗೆಯೇ ದ್ವಿತೀಯ ಪಿಯುವಾರ್ಷಿಕ ಪರೀಕ್ಷೆಗೆ ಸಾವಿರಕ್ಕೂ ಅಧಿಕ ಕೇಂದ್ರಗಳನ್ನು ಗುರುತಿಸಿದ್ದು, ಬಹುತೇಕ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಉಳಿದ ಕೆಲವು ಕೇಂದ್ರಗಳಿಗೆ ಅಳವಡಿಸಲಾಗುತ್ತಿದೆ. ಫೆಬ್ರವರಿ ಅಂತ್ಯದೊಳಗೆ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿ ಕ್ಯಾಮೆರಾ ಇರಲಿದೆ. ಸಿಸಿ ಕ್ಯಾಮೆರಾದ ರಕ್ಷಣೆ ಹಾಗೂ ನಿರ್ವಹಣೆಗೆ ಬೇಕಾದ ಮುನ್ನೆಚ್ಚರಿಕೆ ಕ್ರಮವನ್ನು ಇಲಾಖೆ ಹಾಗೂ ಆಯಾ ಸಂಸ್ಥೆಯ ಮೂಲಕ ತೆಗೆದುಕೊಳ್ಳಲಾಗಿದೆ ಎಂದು ಪಿಯು ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಉದಯವಾಣಿಗೆ ಮಾಹಿತಿ ನೀಡಿದರು.

Advertisement

ಈ ಹಿಂದಿನ ವರ್ಷಗಳಲ್ಲಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪರೀಕ್ಷಾ ಕೇಂದ್ರದಲ್ಲಿ ಮಾತ್ರ ಸಿಸಿ ಕ್ಯಾಮೆರಾ ಅವಳಡಿಸಲಾಗಿತ್ತು. ಅದರ ಜತೆಗೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸುವ ವಿದ್ಯಾರ್ಥಿಗಳ ವಿಡಿಯೋ ರೆಕಾರ್ಡಿಂಗ್‌ ಕೂಡ ಮಾಡಲಾಗಿತ್ತು. ಪರೀಕ್ಷಾ ಅಕ್ರಮಗಳು ಅತಿ ಹೆಚ್ಚು ನಡೆಯುವ ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ಸಂಚಾರಿ ಜಾಗೃತ ದಳ ರಚನೆ ಮಾಡಲಾಗುತ್ತದೆ.

ದ್ವಿತೀಯ ಪಿಯು ಪರೀಕ್ಷೆ ನಡೆಯುವ ಎಲ್ಲಾ ಕೇಂದ್ರಗಳಿಗೂ ಸಿಸಿ ಕ್ಯಾಮರಾ ಅಳವಡಿಸಲು ಕಳೆದ ವರ್ಷವೇ ಪ್ರಯತ್ನಿಸಿದ್ದೆವು. ಆದರೆ, ಸಾಧ್ಯವಾಗಿಲ್ಲ.ಈ ವರ್ಷ ಎಲ್ಲಾ ಕೇಂದ್ರಗಳಿಗೂ ಸಿಸಿ ಕ್ಯಾಮೆರಾ ಅಳವಡಿಸಿ, ವಿದ್ಯಾರ್ಥಿಗಳು ಹಾಗೂ ಮೇಲ್ವಿಚಾರಕರ ಮೇಲೆ ನಿಗಾ ವಹಿಸಲಿದ್ದೇವೆ.
– ಸಿ.ಶಿಖಾ, ಪಿಯು ಇಲಾಖೆ ನಿರ್ದೇಶಕಿ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆಯದಂತೆ ಎಲ್ಲಾ ರೀತಿಯ ಕ್ರಮ ತೆಗೆದುಕೊಂಡಿದ್ದೇವೆ. ಪರೀಕ್ಷಾ ಕೇಂದ್ರಗಳಿಗೆ ಸಿಸಿ ಕ್ಯಾಮೆರಾ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ.ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ.
–  ವಿ.ಸುಮಂಗಳಾ, ನಿರ್ದೇಶಕಿ,
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ

Advertisement

Udayavani is now on Telegram. Click here to join our channel and stay updated with the latest news.

Next