ಮಂಗಳೂರು: ಸಾರ್ವಜನಿಕ ಸೇವೆ ಒದಗಿಸುವ ಅಥವಾ ಹೆಚ್ಚು ಜನ ಸೇರುವ ಎಲ್ಲ ಸರಕಾರಿ ಮತ್ತು ಖಾಸಗಿ ಸಂಘ ಸಂಸ್ಥೆಗಳು, ಅಂಗಡಿಮುಂಗಟ್ಟುಕಟ್ಟಡಗಳಲ್ಲಿ ಸಿಸಿ ಕೆಮರಾ ಅಳವಡಿಕೆಯನ್ನು ಕಡ್ಡಾಯಗೊಳಿಸುವ ಕರ್ನಾಟಕ ರಾಜ್ಯ ಸಾರ್ವಜನಿಕ ಸುರಕ್ಷಾ ಕಾಯ್ದೆಯನ್ನು ರಾಜ್ಯ ಸರಕಾರ ಜಾರಿಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇಂತಹ ಎಲ್ಲ ಸ್ಥಳಗಳಲ್ಲಿ ಸಿಸಿ ಕೆಮರಾ ಸ್ಥಾಪಿಸುವುದು ಅನಿವಾರ್ಯವಾಗಲಿದೆ. ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ರವಿವಾರ ನಡೆದ ದಲಿತರ ಕುಂದು ಕೊರತೆ ಮಾಸಿಕ ಸಭೆಯಲ್ಲಿ ಡಿಸಿಪಿ ಹನುಮಂತರಾಯ ಅವರು ಈ ಕುರಿತು ಮಾಹಿತಿ ನೀಡಿದರು.
ಈ ಕಾಯ್ದೆಗೆ ಸಂಬಂಧಿಸಿದ ನಿಯಮ ಮತ್ತು ರೂಪುರೇಷೆಗಳನ್ನು ತಯಾರಿಸಲಾಗಿದ್ದು, ಅನುಷ್ಠಾನಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ರಾಜ್ಯ ಪತ್ರದಲ್ಲಿ ಅಧಿಸೂಚನೆ ಶೀಘ್ರ ಪ್ರಕಟವಾಗುವ ಮೂಲಕ ಶೀಘ್ರ ಅಧಿಕೃತವಾಗಿ ಜಾರಿಗೊಳ್ಳುವ ನಿರೀಕ್ಷೆಇದೆ ಎಂದರು. ಈ ಕಾಯ್ದೆಯ ಪ್ರಕಾರ ಸಾರ್ವಜನಿಕ ಸೇವೆ ಒದಗಿಸುವ ಪ್ರತಿಯೊಂದು ಕಟ್ಟಡದಲ್ಲೂ ಸಿಸಿ ಕೆಮರಾ ಇರಲೇ ಬೇಕು. ಎಷ್ಟು ಸಿಸಿ ಕೆಮರಾ ಬೇಕು, ಅದರ ಸಾಮರ್ಥ್ಯ ಎಷ್ಟಿರಬೇಕು ಇತ್ಯಾದಿ ಎಂಬ ಎಲ್ಲ ಅಂಶಗಳ ಬಗ್ಗೆ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ ಎಂದರು.
ಸಿಸಿ ಕೆಮರಾ ಅಳವಡಿಸದಿದ್ದರೆ, ಅಂತಹ ಕಟ್ಟಡಗಳಿಗೆ ನೋಟಿಸ್ ನೀಡುವುದು, ಬಳಿಕ ದಂಡ ವಿಧಿಸುವುದು, ದಂಡ ಶುಲ್ಕ ಪಾವತಿಸದಿದ್ದರೆ ಸ್ಥಳೀಯಾಡಳಿತಕ್ಕೆ ಸೂಚಿಸಿ ಲೈಸನ್ಸ್ ರದ್ದತಿ ಅಥವಾ ಸೊತ್ತು ಮುಟ್ಟುಗೋಲು ಹಾಕುವ ಕ್ರಮ ಕೈಗೊಳ್ಳಲು ಅವಕಾಶ ಇದೆ. ಈ ಬಗ್ಗೆ ಪೊಲೀಸ್ ಇಲಾಖೆಗೆ ಅಧಿಕಾರ ನೀಡಲಾಗಿದೆ. ಸಿಸಿ ಕೆಮರಾ ಅಳವಡಿಸಲಾಗಿದೆಯೇ ಇಲ್ಲವೇ ಎನ್ನುವುದನ್ನು ಖಾತರಿ ಪಡಿಸಲು ಪೊಲೀಸರು ಸ್ಥಳೀಯ ಆಡಳಿತದ ಸಹಭಾಗಿತ್ವದಲ್ಲಿ ತಪಾಸಣೆ ನಡೆಸಲು ಕಾಯ್ದೆಯಲ್ಲಿ ಅವಕಾಶ ಇದೆ. ವಾಣಿಜ್ಯ ಮಳಿಗೆಗಳು ಅಥವಾ ವ್ಯಾಪಾರಿಗಳ ಸಂಘಗಳು ತಮ್ಮ ಕಟ್ಟಡದಲ್ಲಿರುವ ವರ್ತಕ ಪ್ರತಿನಿಧಿಗಳನ್ನು ಒಳಗೊಂಡ ಸೆಕ್ಟೋರಲ್ ಸಮಿತಿಯನ್ನು ರಚಿಸಿಕೊಳ್ಳಲು ಕಾಯ್ದೆಯಲ್ಲಿ ಅವಕಾಶವಿದೆ. ಪ್ರತೀ ಸಂಸ್ಥೆಗಳು ಅಥವಾ ಅಸೋಸಿಯೇಶನ್‌ಗಳು ಸಿಸಿ ಕೆಮರಾ ನಿರ್ವಹಣೆಗೆ ನುರಿತ ಸಿಬಂದಿಯನ್ನು ನೇಮಿಸಬೇಕಾಗುತ್ತದೆ. ಸಿಸಿ ಕೆಮರಾ ಪರಿಶೀಲನೆಗೆ ಪೊಲೀಸ್ ಕಮಿಷನರ್ ಅಥವಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಿಶೇಷ ಘಟಕವನ್ನು ಸ್ಥಾಪಿಸ ಬೇಕಾಗುತ್ತದೆ. ಪೊಲೀಸ್ ಕಮಿಷನರ್ ನೇತೃತ್ವದಲ್ಲಿ ಮೇಲ್ವಿಚಾರಣ ಸಮಿತಿಯನ್ನು ರಚಿಸಲಾಗುತ್ತದೆ. ಕಟ್ಟಡದ ಮಾಲಕರು ಅಥವಾ ವ್ಯವಸ್ಥಾಪಕರು ಕಾಲ ಕಾಲಕ್ಕೆ ಕಟ್ಟಡದಲ್ಲಿ ಸಾರ್ವಜನಿಕರಿಗೆ ಒದಗಿಸಿದ ಸುರಕ್ಷತೆ ಬಗ್ಗೆ ವರದಿಯನ್ನು ಸಲ್ಲಿಸ ಬೇಕಾಗಿದೆ.