Advertisement

ಮದುವೆಗೂ ಬಂತು ಯೂನಿಫಾರ್ಮ್

01:13 PM Nov 16, 2018 | |

ಫ್ಯಾಷನ್‌ ಪ್ರಪಂಚವೇ ಒಂದು ರೋಚಕ. ಇಲ್ಲಿ ವೈವಿಧ್ಯಮಯ ಹೊಸತನಗಳದ್ದೇ ಕಾರುಬಾರು. ಟ್ರೆಂಡ್‌ ಬದಲಾವಣೆ ಎಂಬುದು ನಿಮಿಷಗಳ ವಿಚಾರವಿಲ್ಲಿ. ಮದುವೆ ಸೀಸನ್‌, ಇತರ ಶುಭ ಸಮಾರಂಭಗಳಲ್ಲಂತೂ ಫ್ಯಾಷನ್‌ ಎಂಬುದು ದಿರಿಸಿನಿಂದ ಹಿಡಿದು ಸೌಂದರ್ಯವರ್ಧನೆಯ ಪ್ರತಿಯೊಂದು ವಿಚಾರದಲ್ಲಿಯೂ ಮುಖ್ಯ ಪಾತ್ರ ವಹಿಸುತ್ತದೆ.

Advertisement

ಈ ಫ್ಯಾಷನ್‌ ಲೋಕವು ಸೌಂದರ್ಯವರ್ಧಿಸುವುದಾದರೆ ಅದನ್ನು ನೆಚ್ಚಿಕೊಳ್ಳುವುದು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಆದದ್ದು ಆಗಲಿ; ಇಲ್ಲೂ ಒಂದು ಕೈ ನೋಡೇ ಬಿಡೋಣ ಎಂದು ಹೊರಡುವ ಯುವ ಜಮಾನವೇ ಈಗಿನದು. ಹಾಗಿರುವಾಗ ಹೊಸ ಫ್ಯಾಷನ್‌ಗಳತ್ತ ಸೆಳೆತ ಸಾಮಾನ್ಯವೇ.

ಯೂನಿಫಾರ್ಮ್ ಟ್ರೆಂಡ್‌
ಈಗೀಗ ಮದುವೆಗಳಲ್ಲಿ ಯೂನಿಫಾರ್ಮ್  ಧರಿಸುವಿಕೆ ಹೊಸ ಟ್ರೆಂಡ್‌. ವರನ ಸ್ನೇಹಿತರು, ವಧುವಿನ ಸ್ನೇಹಿತೆಯರು ಏಕರೀತಿಯ ಪ್ಯಾಂಟ್‌, ಶರ್ಟ್‌, ಸೀರೆ ತೊಟ್ಟು ಸ್ನೇಹಿತರ ಮದುವೆಗಳಲ್ಲಿ ಮಿಂಚುವುದು ಈಗೀಗ ಹೆಚ್ಚುತ್ತಿದೆ. ಮದುವೆಗೆ ಜೀನ್ಸ್‌ ಪ್ಯಾಂಟ್‌ ತೊಟ್ಟೇ ತೆರಳಬೇಕು ಎಂಬ ಕಾಲವೆಲ್ಲ ಹೋಗಿದೆ. ಯೂನಿಫಾರ್ಮ್ ಧರಿಸಿ ಮದುವೆ ಮಂಟಪದಲ್ಲಿ ನರ್ತಿಸಲು ಪಂಚೆ-ಶರ್ಟ್‌ ಚೆಂದ ಎನ್ನುವಷ್ಟರ ಮಟ್ಟಿಗೆ ಆಧುನಿಕ ಕಾಲದ ಹುಡುಗರ ಮನಃಸ್ಥಿತಿ ಬದಲಾಗಿದೆ. ಬಿಳಿ ಪಂಚೆ ಜತೆಗೆ ಒಂದೇ ಬಣ್ಣದ ಶರ್ಟ್‌ ಧರಿಸಿ ಮದುವೆ ಮಂಟಪಕ್ಕೆ ಬಂದು ಸ್ನೇಹಿತನ ಮದುವೆಗೆ ಶುಭ ಹಾರೈಸುವುದು ಈಗ ಮಾಮೂಲಿ. ಹುಡುಗಿಯ ಸ್ನೇಹಿತೆಯರೂ ಅಷ್ಟೇ. ಏಕರೀತಿಯ ಸೀರೆ ತೊಟ್ಟು ಶೋಭಿಸುವುದು ಈಗ ಟ್ರೆಂಡ್‌.

ಆಕರ್ಷಕ ದಿರಿಸು
ಒಂದು ಕಾಲದಲ್ಲಿ ಪಂಚೆ ಉಡುವುದೆಂದರೆ ಕೇವಲ ವಯಸ್ಸಾದವರಿಗೆ ಮಾತ್ರ ಎಂಬಂತಿತ್ತು. ಆದರೀಗ ವಯಸ್ಸಿನ ಹುಡುಗರಿಗೂ ಪಂಚೆ ಪ್ರಿಯವಾಗುತ್ತಿದೆ. ಹಾಗಾಗಿ ಕ್ರಮೇಣ ಪಂಚೆಯೂ ಫ್ಯಾಷನ್‌ ಲೋಕಕ್ಕೆ ಕಾಲಿಟ್ಟಿದೆ. ಅದೂ ಶುಭ ಸಮಾರಂಭಗಳ ಸಮವಸ್ತ್ರದ ಮಾದರಿಯಲ್ಲಿ. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲೆಲ್ಲ ಪಂಚೆ ಉಡಬೇಕೆಂದು ಹಿರಿಯರು ಹೇಳಿದಾಗ ಮೂಗು ಮುರಿಯುತ್ತಿದ್ದ ಯುವಕರು, ಯಾವಾಗಿಂದ ಅದೇ ಪಂಚೆ ಫ್ಯಾಷನ್ನಾಗಿ ಲಗ್ಗೆ ಇಟ್ಟಿತೋ ಅಂದಿನಿಂದ ಅದನ್ನು ಪ್ರೀತಿಯಿಂದಲೇ ಬರಮಾಡಿಕೊಂಡರು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ ತಾನೇ? ಪಂಚೆಯುಟ್ಟು ಯೂನಿಫಾರ್ಮ್ ಮಾದರಿಯ ಶರ್ಟ್‌ ಧರಿಸುವುದು ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಎಲ್ಲರೂ ಒಂದೇ ರೀತಿಯ ವಸ್ತ್ರ ಧರಿಸುವುದರಿಂದ ಶುಭ ಸಮಾರಂಭಗಳಲ್ಲಿ ತೆಗೆದ ಫೋಟೋಗಳೂ ನೆನಪನ್ನು ಅಚ್ಚಳಿಯದೆ ಉಳಿಸುತ್ತವೆ. ಇದೊಂದು ಮರೆಯಲಾಗದ ಸಂದರ್ಭ ಎಂದರೂ ತಪ್ಪಾಗದು. ಅದಕ್ಕಾಗಿಯೇ ಇತ್ತೀಚೆಗೆ ಪಂಚೆ ಯುವಜಮಾನಕ್ಕೆ ಹೊಸ ಪಂಚ್‌ ನೀಡುತ್ತಿದೆ.

ಮಕ್ಕಳಿಗೂ ಪಂಚೆ
ವಿಶೇಷವೆಂದರೆ, ಕೇವಲ ಯುವ ಜಮಾನವನ್ನೇ ಈ ಪಂಚೆಯ ಫ್ಯಾಷನ್‌ ಬಡಿದೆಬ್ಬಿಸಿದ್ದಲ್ಲ. ಚೋಟುದ್ದ ಮಕ್ಕಳಿಗೂ ಕಚ್ಚೆ ಮಾದರಿಯ ಪಂಚೆಯೇ ಈಗ ಫ್ಯಾಷನ್‌. ಮಕ್ಕಳೂ ಪಂಚೆಯುಟ್ಟು ಮೆರೆಯುವುದು ಮದುವೆ ಕಾರ್ಯಗಳಲ್ಲಿ ಈಗೀಗ ಮಾಮೂಲಿ ಎಂಬಂತಾಗಿದೆ. ವಿವಿಧ ಮಾದರಿಯ ಮಕ್ಕಳ ಕಚ್ಚೆ ಪಂಚೆಗಳು ಕುರ್ತಾದೊಂದಿಗೆ ಲಭ್ಯವಿದ್ದು, ಇವು ಮಕ್ಕಳ ಅಂದ ಹೆಚ್ಚಿಸಲು ಸಹಕಾರಿಯಾಗುತ್ತವೆ. 

Advertisement

ಹುಚ್ಚೆಬ್ಬಿಸುವ ಫ್ಯಾಷನ್‌
ಒಬ್ಬರು ಹೊಸ ಟ್ರೆಂಡ್‌ ಶುರುಮಾಡಿದರಾಯಿತು. ಅದೇ ಫ್ಯಾಷನ್‌ ಹೆಸರಿನಲ್ಲಿ ಸಾಂಕ್ರಾಮಿಕವಾಗಿ ಹರಡುತ್ತದೆ. ಒಂದಷ್ಟು ಕಾಲ ಆ ಫ್ಯಾಷನ್‌ ಯುವ ಸಮೂಹವನ್ನು ಹುಚ್ಚೆಬ್ಬಿಸುತ್ತದೆ. ತಾನೂ ಧರಿಸಿ ನೋಡಬೇಕೆಂಬ ಆಸೆ ಹುಟ್ಟಿಸುತ್ತದೆ. ಜತೆಗೆ ಧರಿಸಿ ಖುಷಿ ಪಡಿಸಲು ಕಾರಣವಾಗುತ್ತದೆ. ಆ ಸಾಲಿನಲ್ಲಿ ಹೊಸ ಸೇರ್ಪಡೆ ಮದುವೆಯಂತಹ ಶುಭ ಸಮಾರಂಭಗಳಲ್ಲಿ ಯೂನಿಫಾರ್ಮ್ ಧರಿಸಿ ಗಮನ ಸೆಳೆಯುವುದು.

ಧನ್ಯಾ ಬಾಳೆಕಜೆ 

Advertisement

Udayavani is now on Telegram. Click here to join our channel and stay updated with the latest news.

Next