Advertisement

ದೋಖಾ ಕಂಪನಿ ನಂಬಿ ಬೀದಿಗೆ ಬಂದರು

01:27 PM Mar 15, 2018 | |

ಬೆಂಗಳೂರು: “ಸ್ವಂತದ್ದೊಂದು ನಿವೇಶನ ಖರೀದಿಸುವ ಆಸೆಯಿತ್ತು. ಹೀಗಾಗಿ, ಬರುವ ಸಂಬಳದಲ್ಲಿ ಆದಷ್ಟು ಹಣ ಉಳಿಸಿ ಲಕ್ಷಾಂತರ ರೂ. ಕೂಡಿಟ್ಟಿದ್ದೆ. ಹೆಚ್ಚಿನ ಲಾಭಾಂಶ ನೀಡುತ್ತಾರೆ ಎಂಬ ಸ್ನೇಹಿತನ ಮಾತು ನಂಬಿ ವಿಕ್ರಂ ಇನ್‌
ವೆಸ್ಟ್‌ಮೆಂಟ್‌ ಕಂಪನಿಗೆ ಒಂದಲ್ಲ ಎರಡಲ್ಲ 19 ಲಕ್ಷ ರೂ. ಕಟ್ಟಿಬಿಟ್ಟೆ. ಈಗ ಬದುಕು ಬೀದಿ ಪಾಲಾಯ್ತು’ ಹೀಗೆ, ನೋವು ತೋಡಿಕೊಳ್ಳುತ್ತಲೇ ಕಣ್ಣೀರು ಸುರಿಸುತ್ತಾ “ಉದಯವಾಣಿ’ ಜೊತೆ ಮಾತಿಗಿಳಿದವರು ಪ್ರಶಾಂತ್‌ (ಹೆಸರು ಬದಲಿಸಲಾಗಿದೆ). “15 ವರ್ಷಗಳಿಂದ ಪ್ಲಾಸ್ಟಿಕ್‌ ತಯಾರಿಕೆ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಹೆಚ್ಚೇನೂ ಸಂಬಳ ಬರೋದಿಲ್ಲ. ಬೆಂಗಳೂರಿನಲ್ಲಿ ಸ್ವಂತ ಮನೆ ಮಾಡುವ ಆಸೆಯಿತ್ತು. ಹೀಗಾಗಿ ಒಂದಷ್ಟು ಹಣ ಕೂಡಿಟ್ಟಿದ್ದೆ.

Advertisement

ನನ್ನ ಸಹೋದ್ಯೋಗಿ ಸ್ನೇಹಿತನೊಬ್ಬ, ಆರೋಪಿ ನರಸಿಂಹಮೂರ್ತಿ ಇದ್ದಾನಲ್ಲ ಅವನ ಸಂಬಂಧಿಕ. ಒಂದು ದಿನ, ಹೀಗೊಂದು ಕಂಪನಿಯಿದೆ. ನಾವು ಹೂಡಿದ ಹಣಕ್ಕೆ ದುಪ್ಪಟ್ಟು ಲಾಭಾಂಶ ನೀಡ್ತಾರೆ. ನಾನು ಹಣ ಇರಿಸಿದ್ದೀನಿ. ಲಾಭ ಬಂದಿದೆ ಎಂದು ಕೆಲ ದಾಖಲೆಗಳನ್ನು ತೋರಿಸಿದ.’

“ಬಳಿಕ ಪರಿಚಯವಾದ ನರಸಿಂಹ ಮೂರ್ತಿ, ವಿವಿಧ ಸ್ಕೀಂ ಬಗ್ಗೆ ಹೇಳಿದ. ಕೆಲವರಿಗೆ ಹೆಚ್ಚು ಲಾಭ ಕೊಟ್ಟ ಬಗ್ಗೆ ಖಾತರಿಯೂ ಆಯ್ತು. ಹೀಗಾಗಿ, ಕೂಡಿಟ್ಟಿದ್ದ ಹಣದ ಜತೆ ಸಾಲ ಮಾಡಿ, ಒಂದು ವರ್ಷದ ಹಿಂದೆ 19 ಲಕ್ಷ ರೂ. ಹೂಡಿಕೆ ಮಾಡಿದ್ದೆ. ಮೊನ್ನೆ ಈ ಆರೋಪಿಗಳು ಬ್ಲೇಡ್‌ ಕಂಪನಿ ಮಾಡಿದ್ದಾರೆ ಎಂದು ತಿಳಿದ ಕೂಡಲೇ ಎದೆ ಒಡೆದುಹೋಯ್ತು. ಸುಖವಾಗಿದ್ದ ಬದುಕಿಗೆ ಚಪ್ಪಡಿ ಕಲ್ಲು ಎಳೆದುಬಿಟ್ಟಿದ್ದಾರೆ ವಂಚಕರು,’ ಎಂದು ಅಳುತ್ತಲೇ ಕುಸಿದುಬಿಟ್ಟರು. ಮತ್ತೆ ಸಾವರಿಸಿಕೊಳ್ಳುತ್ತ “ನೋಡೋಣ, ಭಗವಂತ ಇದ್ದಾನಲ್ಲ. ಪೊಲೀಸರು, ಈ ದೇಶದ ಕಾನೂನಿನ ಮೇಲೆ ನಂಬಿಕೆಯಿದೆ. ಹಣ ಕೊಡಿಸಿದರೆ ಸಾಕು,’ ಎಂದು ಆಶಾಭಾವನೆಯ ನಿಟ್ಟುಸಿರುಬಿಟ್ಟರು.

ಸಬೂಬು ಹೇಳುತ್ತಿದ್ದರು: ಕಳೆದ ಒಂದು ವರ್ಷದಿಂದ ಹಣ ಸರಿಯಾಗಿ ನೀಡುತ್ತಿರಲಿಲ್ಲ. ಕೇಳಿದರೆ, ಏನಾದರೂ ಒಂದು
ಸಬೂಬು ಹೇಳುತ್ತಿದ್ದರು. ಇತ್ತೀಚೆಗೆ ಪತ್ರಿಕೆ ಹಾಗೂ ಟಿವಿಗಳಲ್ಲಿ ವಂಚನೆ ಬಗ್ಗೆ ತಿಳಿದಾಗಲೇ ನಾವು ಮೋಸ ಹೋಗಿರುವುದು ಗೊತ್ತಾಯಿತು. ಯಾರನ್ನು ನಂಬಬೇಕೋ ಗೊತ್ತಾಗುವುದಿಲ್ಲ. ಜನ ಹೀಗೆ ಮಾಡಬಾರದು,’ ಎಂದು ಹಿರಿ ಜೀವ ರಂಗನಾಥ್‌ ಮಾತು ಮುಗಿಸಿಬಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next