Advertisement

ಹುಣಿಸೆ ಮರದ ಹೋಟೆಲ್‌ಗೆ ಮಸಾಲದೋಸೆ ತಿನ್ನೋಕೆ ಬನ್ನಿ

12:30 AM Dec 31, 2018 | |

ಬರಪೀಡಿತ ಪ್ರದೇಶ ಎಂದೇ ಹೆಸರಾದ ಶಿರಾ ತಾಲೂಕು ಐತಿಹಾಸಿಕ ಕೋಟೆ, ಮಲ್ಲಿಕ್‌ ರೆಹಾನ್‌ ದರ್ಗಾ, ಪ್ರಸಿದ್ಧ ದೇಗುಲಗಳನ್ನು ಹೊಂದಿರುವ ತಾಣ. ಅಲ್ಲದೆ, ಕರಾವಳಿ ಹಾಗೂ ಉತ್ತರ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಎರಡು ರಾಷ್ಟ್ರೀಯ ಹೆದ್ದಾರಿಗಳನ್ನೂ ಈ ಊರು ಹೊಂದಿದೆ. ಇಂತಹ ಹಿನ್ನೆಲೆಯ ಊರಿಗೆ 30 ವರ್ಷಗಳ ಹಿಂದೆ ಕುಂದಾಪುರದಿಂದ ಬಂದ ಆನಂದ್‌ ಶೆಟ್ಟಿ ಅವರು ಶಿವಪ್ರಸಾದ್‌ ಎಂಬ ಹೋಟೆಲ್‌ ಪ್ರಾರಂಭಿಸಿ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ಒದಗಿಸುತ್ತಿದ್ದಾರೆ.

Advertisement

ಮೊದಲಿಗೆ ಅಶೋಕ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಆನಂದ್‌ ಶೆಟ್ಟಿಯವರು, ಕೆಲ ವರ್ಷಗಳ ನಂತರ ಶಿರಾದ ಬಾಲಾಜಿ ನಗರದ ಎಂಟ್ರೆನ್ಸ್‌ನಲ್ಲಿ ಪುಟ್ಟ ಕ್ಯಾಂಟೀನ್‌ ಪ್ರಾರಂಭಿಸಿದರು. ಇವರಿಗೆ ಪತ್ನಿ ಲಲಿತಮ್ಮ ಬೆನ್ನೆಲುಬಾಗಿ ನಿಂತಿದ್ದರು. ತದ ನಂತರ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲಿ “ಶಿವಪ್ರಸಾದ್‌’ ಎಂಬ ಹೋಟೆಲ್‌ ಪ್ರಾರಂಭಿಸಿದರು. ಆನಂದ್‌ರ ಹಿರಿಯ ಪುತ್ರ ಮೋಹನ್‌ದಾಸ್‌ ಈಗ ಹೋಟೆಲ್‌ ನೋಡಿಕೊಳ್ಳುತ್ತಿದ್ದಾರೆ. ಇವರಿಗೆ ಪತ್ನಿ ಗುಣವತಿ ಸಾಥ್‌ ನೀಡುತ್ತಾರೆ. ತಮ್ಮ ಭಾಸ್ಕರ್‌ ಜ್ಯೂಸ್‌ ಸೆಂಟರ್‌ ನಡೆಸುತ್ತಿದ್ದಾರೆ.

 ಉತ್ತರ ಕರ್ನಾಟಕಕ್ಕೂ ಪರಿಚಯ: 
 ಈ ಹೋಟೆಲ್‌ ಪಕ್ಕದಲ್ಲಿ ದೊಡ್ಡ ಹುಣಿಸೆ ಮರವಿದ್ದ ಕಾರಣ ಜನ ಈಗಲೂ ಹುಣಿಸೆ ಮರದ ಹೋಟೆಲ್‌ ಎಂದೇ ಕರೆಯುತ್ತಾರೆ. ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲಿದ್ದ ಹೋಟೆಲ್‌ ಇದ್ದಿದ್ದರಿಂದ ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಬರುತ್ತಿದ್ದ ಬಹುತೇಕ ಪ್ರಾಯಾಣಿಕರು, ಪ್ರವಾಸಿಗರು ತಿಂಡಿ, ಊಟಕ್ಕೆ ಇಲ್ಲಿಗೆ ಬರುತ್ತಿದ್ದರು. ಹೀಗಾಗಿ ಶಿರಾ ಎಂದಾಕ್ಷಣ ಶಿವಪ್ರಸಾದ್‌ ಹೋಟೆಲ್‌ ನೆನಪು ಮಾಡಿಕೊಳ್ಳುತ್ತಾರೆ.

ದೋಸೆ, ಏಲಕ್ಕಿ ಟೀ, ಫಿಲ್ಟರ್‌ ಕಾಫಿ ವಿಶೇಷ: 
ಈ ಹೋಟೆಲ್‌ನ ವಿಶೇಷ ಅಂದ್ರೆ 30 ರೂ.ಗೆ ಸಿಗುವ ಗರಿಗರಿಯಾದ ಮಸಾಲೆ, ಸೆಟ್‌ ಹಾಗೂ ಸೆಟ್‌ ದೋಸೆ, ಇದನ್ನು ಶೇಂಗಾ ಚಟ್ನಿಯೊಂದಿಗೆ ಸವಿದು, 5 ರೂ. ಕೊಟ್ರೆ ಶುಂಠಿ ಏಲಕ್ಕಿ ಮಿಶ್ರಣ ಮಾಡಿದ ಟೀ, ಫಿಲ್ಟರ್‌ ಕಾಫಿ ಸಿಗುತ್ತದೆ.

ಪ್ರತಿದಿನ ಒಂದೊಂದು ರೈಸ್‌ಬಾತ್‌:
ಈ ಹೋಟೆಲ್‌ನಲ್ಲಿ ಬೇಳೆ, ಟೊಮೆಟೋ, ಮಂತ್ಯೆ, ಕ್ಯಾಪ್ಸಿಕಂ ಬಾತ್‌, ಫ‌ಲಾವ್‌ ಹೀಗೆ ಪ್ರತಿದಿನ ಒಂದೊಂದು ರೈಸ್‌ ಬಾತ್‌ ಮಾಡಲಾಗುತ್ತದೆ. ಯಾವುದೇ ತೆಗೆದುಕೊಂಡ್ರೂ ದರ 25 ರೂ., ಇನ್ನು 30 ರೂ.ಗೆ ಇಡ್ಲಿ ವಡೆ ಸಿಗುತ್ತೆ.

Advertisement

40 ರೂ.ಗೆ ಊಟ:
ಮಧ್ಯಾಹ್ನ 12ರ ನಂತರ ಊಟ ಸಿಗುತ್ತದೆ. 25 ರೂ.ಗೆ ಅನ್ನ, ಸಾಂಬಾರು, ಮಜ್ಜಿಗೆ, ರಸಂ, ಹಪ್ಪಳ, ಉಪ್ಪಿನಕಾಯಿ, 40 ರೂ.ಗೆ ಚಪಾತಿ ಅಥವಾ ಪೂರಿ ಇರುವ ಫ‌ುಲ್‌ ಊಟ ಸಿಗುತ್ತದೆ. ಗ್ರಾಹಕರ ಬೇಡಿಕೆ ಹಿನ್ನೆಲೆಯಲ್ಲಿ ಫ‌ೂಟ್‌ ಜ್ಯೂಸ್‌ ಕೂಡ ಪ್ರಾರಂಭಿಸಲಾಗಿದೆ. 

ಫಿಲ್ಟರ್‌ ನೀರು ಬಳಕೆ:
ಹೋಟೆಲ್‌ನಲ್ಲಿ ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳುವ ಮೋಹನ್‌ದಾಸ್‌, ಗ್ರಾಹಕರಿಗೆ ಕುಡಿಯುವುದಕ್ಕಷ್ಟೇ ಅಲ್ಲ, ಅಡುಗೆಗೆ, ಬಳಕೆಗೂ ಫಿಲ್ಟರ್‌ ನೀರು ಬಳಸುತ್ತೇವೆ ಎನ್ನುತ್ತಾರೆ. ಈ ಮೊದಲು ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ನಮ್ಮ ಹೋಟೆಲ್‌ನ ಮುಂದೆಯೇ ನಿಲ್ಲುತ್ತಿದ್ದವು. ಟ್ರಾಫಿಕ್‌ ಸಮಸ್ಯೆಯಿಂದ ಈಗ ಬಸ್‌ಗಳನ್ನು ನಿಲ್ಲಿಸುತ್ತಿಲ್ಲ. ಹಳ್ಳಿಯ ಜನರೇ ಹೋಟೆಲ್‌ಗೆ ಬರುವ ಕಾರಣ, ಕಡಿಮೆ ದುಡ್ಡಲ್ಲಿ ಗುಣಮಟ್ಟದ ಉಪಾಹಾರ ನೀಡಲು ಆದ್ಯತೆ ನೀಡಿದ್ದೇನೆ ಹೇಳುತ್ತಾರೆ.
 
ಹೋಟೆಲ್‌ ಸಮಯ:
ಬೆಳಗ್ಗೆ 6 ಗಂಟೆಯಿಂದ ರಾತ್ರಿ 8.30ರವರೆಗೆ ತೆರೆದಿರುತ್ತದೆ. ಭಾನುವಾರ 10 ಗಂಟೆ ನಂತರ ರಜೆ.

ಹೋಟೆಲ್‌ ಎಲ್ಲಿದೆ?: 
ಶಿರಾದ ತಾಲೂಕು ಸರ್ಕಾರಿ ಆಸ್ಪತ್ರೆ ಎದುರು, ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲಿದೆ.

ಭೋಗೇಶ ಆರ್‌. ಮೇಲುಕುಂಟೆ

Advertisement

Udayavani is now on Telegram. Click here to join our channel and stay updated with the latest news.

Next