ಸೇಡಂ: ನ್ಯಾಯಾಲಯದ ಆದೇಶವನ್ನು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಗೌರವಿಸಬೇಕು ಎಂದು ಸಿಪಿಐ ಆನಂದರಾವ ಹೇಳಿದರು.
ಹಿಜಾಬ್ ಕುರಿತ ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕರೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಭಾರತದಲ್ಲಿ ಸರ್ವ ಧರ್ಮ ಸಮನ್ವಯತೆ ಕಾಪಾಡಿಕೊಂಡು ಬರಲಾಗಿದೆ. ಈಗ ಹಿಜಾಬ್ ವಿವಾದದಿಂದ ಯಾವುದೇ ಧಕ್ಕೆಯಾಗಬಾರದು ಮತ್ತು ಕಾನೂನನ್ನು ಪ್ರತಿಯೊಬ್ಬರೂ ಪಾಲಿಸುವಂತಾಗಬೇಕು. ನ್ಯಾಯಾಲಯದ ಆದೇಶ ಪ್ರತಿಯೊಬ್ಬರೂ ತಲೆಬಾಗಬೇಕು ಎಂದು ಹೇಳಿದರು.
ಪಿಎಸ್‌ಐ ಸೋಮಲಿಂಗ ಒಡೆಯರ್ ಮಾತನಾಡಿ, ಕಾನೂನಿಗೆ ಧಕ್ಕೆ ಬಂದರೆ ಯಾರೂ ಸಹ ಸುಮ್ಮನಿರಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಕಾನೂನು ಪಾಲನೆ ಪ್ರತಿಯೊಬ್ಬರ ಹೊಣೆಯಾಗಿದ್ದು, ನ್ಯಾಯಾಲಯದ ಆದೇಶ ಮೀರಿದವರು ಶಿಕ್ಷೆ ಎದುರಿಸಬೇಕಾಗುತ್ತಿದೆ ಎಂದು ಎಚ್ಚರಿಸಿದರು.
ಕೋಲಿ ಸಮಾಜದ ಮುಖಂಡ ಆಶೋಕ ದಂಡೋತಿ, ಟಿಪ್ಪು ಸುಲ್ತಾನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶೇಖ್ ಆದಮ್ ಮಾತನಾಡಿದರು. ಮೌನೇಶ ಆಡಕಿ, ಮೈನೋದ್ದಿನ್ ಕಾಳಗಿ, ದಿಲಶಾದ ನಿರ್ನಾವಿ ಇತರರು ಈ ವೇಳೆ ಹಾಜರಿದ್ದರು.