ಬೆಂಗಳೂರು: ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ಭಾರತೀಯ ಭದ್ರತಾ ಪಡೆಗಳ ಮೇಲೆ ನಡೆಸಿದ ಆತ್ಮಾಹುತಿ ದಾಳಿಯನ್ನು ಖಂಡಿಸಿ ಮತ್ತು ಪಾಕ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಫೆ.19ರಂದು ಕನ್ನಡ ಒಕ್ಕೂಟ
“ಕರ್ನಾಟಕ ಬಂದ್’ಗೆ ಕರೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, ಯೋಧರ ಮೇಲೆ ನಡೆದಿರುವ ದಾಳಿಯನ್ನು ಇಡೀ ದೇಶವೇ ಒಕ್ಕೊರಲಿನಿಂದ ಖಂಡಿಸಿದೆ. ಈ ದಾಳಿಯ ಹಿಂದೆ ಪಾಕ್ ಉಗ್ರರ ಕೈವಾಡವಿದ್ದು, ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಪಾಕಿಸ್ತಾನದ ವಿರುದ್ಧ ಯುದ್ಧ ಸಾರುವಂತೆ ಒತ್ತಾಯಿಸಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ ಎಂದು ಹೇಳಿದರು.
ಬಂದ್‌ಗೆ ಕನ್ನಡ ಪರ ಸಂಘಟನೆಗಳ ಜತೆಗೆ ಕೆಎಸ್‌ಆರ್‌ಟಿಸಿ ಕಾರ್ಮಿಕರ ಒಕ್ಕೂಟ ಕೂಡ ಬೆಂಬಲ ನೀಡಿದ್ದು, ಅಂದು ರಾಜ್ಯದಾದ್ಯಂತ ಬಸ್‌ಗಳ ಸಂಚಾರ ಇರುವುದಿಲ್ಲ. ಜತೆಗೆ, ಬಿಎಂಟಿಸಿ ಬಸ್‌ಗಳು ಕೂಡ ರಸ್ತೆಗಿಳಿಯುವುದಿಲ್ಲ. ಈ ಹಿನ್ನೆಲೆಯಲ್ಲಿ ಶಾಂತಿಯುತ ಬಂದ್‌ಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಆ್ಯಂಬುಲೆನ್ಸ್ ಜತೆಗೆ ಔಷಧಿ, ಹಾಲು ವಿತರಣೆಗೆ ವಿನಾಯ್ತಿ ನೀಡಲಾಗಿದೆ. ಬಂದ್ ದಿನದಂದು ಆಯಾ ಜಿಲ್ಲಾಧಿಕಾರಿಗಳ ಕಚೇರಿಗಳಿಗೆ ಪಾಕ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಲಾಗುವುದು. ಖಾಸಗಿ ಶಿಕ್ಷಣ ಸಂಸ್ಥೆಗಳು, ಹೋಟೆಲ್ ಮತ್ತು ಪೆಟ್ರೋಲ್ ಬಂಕ್ ಮಾಲೀಕರು, ಐಟಿ -ಬಿಟಿ ಸಂಸ್ಥೆಗಳು ಸಹಕಾರ ನೀಡಬೇಕು ಎಂದರು.
ಈಗಾಗಲೇ ಒಕ್ಕೂಟ, ಕನ್ನಡ ನೆಲ-ಜಲ ಮತ್ತು ಭಾಷೆಯ ಉಳಿವಿಗಾಗಿ ಬಂದ್‌ಗೆ ಕರೆ ನೀಡಿದೆ. ಅದೇ ರೀತಿಯಲ್ಲಿ ಈಗ ಭಾರತೀಯ ಸೈನಿಕರ ಸಾವಿಗೆ ಕಾರಣರಾಗಿರುವ ಪಾಕ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಶಾಂತಿಯುತ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದ್ದು ಅಹಿತಕರ ಘಟನೆಗಳು ನಡೆದರೆ ಒಕ್ಕೂಟ ಹೊಣೆಗಾರನಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಒಕ್ಕೂಟದ ಸಂಚಾಲಕ ಮತ್ತು ಚಿತ್ರ ನಿರ್ಮಾಪಕ ಸಾರಾ ಗೋವಿಂದು ಮಾತನಾಡಿ, ಗುಪ್ತಚರ ಇಲಾಖೆಯ ವೈಫಲ್ಯ ಈ ಘಟನೆಯಲ್ಲಿ ಎದ್ದು ಕಾಣುತ್ತಿದೆ. ಭಾರತೀಯ ಸೈನಿಕರ ಸಾವಿಗೆ ಕಾರಣರಾದವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಸ್ವಾಗತಿಸುವುದಾಗಿ ತಿಳಿಸಿದರು.
ಅಮೆರಿಕ ಸೇರಿದಂತೆ ಹಲವು ದೇಶಗಳು ಈ ಘಟನೆಯನ್ನು ಖಂಡಿಸಿ ಭಾರತದ ಬೆಂಬಲಕ್ಕೆ ನಿಂತಿವೆ. ಆದರೆ, ಚೀನಾ ಸೇರಿದಂತೆ ಗಲ್ಫ್ ರಾಷ್ಟ್ರಗಳು ಯಾವುದೇ ರೀತಿಯ ಹೇಳಿಕೆ ನೀಡಿಲ್ಲ. ಆ ಹಿನ್ನೆಲೆಯಲ್ಲಿ ಚೀನಾ ವಸ್ತುಗಳನ್ನು ಭಾರತೀಯರು ಬಹಿಷ್ಕರಿಸಬೇಕು ಎಂದರು. ಕನ್ನಡ ಪರ ಹೋರಾಟಗಾರ ಕೆ.ಆರ್.ಕುಮಾರ್, ಮಾಯಾಣ್ಣ, ತಿಮ್ಮೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.