ಕಟಪಾಡಿ: ಆನ್‌ಲೈನ್ ವಂಚಕರೆಲ್ಲ ಹಿಂದಿ, ಆಂಗ್ಲ ಭಾಷೆಯಲ್ಲಿ ವ್ಯವಹರಿಸುತ್ತಾರೆ; ಹಾಗಾಗಿ ಅಂತಹ ಕರೆ ಬಂದರೆ ಕನ್ನಡದಲ್ಲಿ ಉತ್ತರಿಸಿದರೆ ವಂಚನೆಯಿಂದ ಪಾರಾಗಬಹುದು ಎಂಬ ನಂಬಿಕೆ ಈಗ ಹುಸಿಯಾಗುತ್ತಿದೆ. ಕಟ
ಪಾಡಿಯ ವ್ಯಕ್ತಿಯೊಬ್ಬರಿಗೆ ಕನ್ನಡದಲ್ಲೇ ಕರೆ ಮಾಡಿದ ವ್ಯಕ್ತಿಯೊಬ್ಬ ವಂಚಿಸಲು ಯತ್ನಿಸಿದ ಘಟನೆ ನಡೆದಿದೆ.
ಕಟಪಾಡಿಯ ಕಟ್ಟಡ ಸಾಮಗ್ರಿ ಸಾಗಾಟ ಲಾರಿ ಟೆಂಪೋ ಮಾಲಕರ ಸಂಘದ ಅಧ್ಯಕ್ಷ ಚಂದ್ರ ಪೂಜಾರಿ ಅವರಿಗೆ ವಕೀಲನೆಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬನಿಂದ ಕರೆ ಬಂದಿದ್ದು, “ನಿಮ್ಮ ಸಾಲದ ಕಂತು ಬಾಕಿ ಇದ್ದು, ಕೇಸ್ ಆಗಿದೆ. ಕೋರ್ಟ್‌ಗೆ ಹಾಜರಾಗಬೇಕು’ ಎಂದು ದರ್ಪದಿಂದ ಮಾತನಾಡಿ ಸಾಲದ ಕಂತನ್ನು ಗೂಗಲ್ ಪೇ ಮೂಲಕ ಭರಿಸುವಂತೆ ಒತ್ತಡ ಹಾಕಿದ್ದಾನೆ. ಕರೆ ಬಂದಿರುವ ನಂಬರ್ 8792701216 ಆಗಿದ್ದು ಟ್ರೂ ಕಾಲರ್‌ನಲ್ಲಿ ನಾಗ ಆರ್. ಎಂದು ಹೆಸರು ಬರುತ್ತದೆ.
“ಏ ಚಂದ್ರ ಕೂಡಲೇ ಕೋರ್ಟ್‌ಗೆ ಬಾ. ಎಷ್ಟು ಹೊತ್ತಿನಲ್ಲಿ ಬರುತ್ತೀ..’ ಎಂದು ದಬ್ಟಾಳಿಕೆಯಿಂದ ಮಾತಿಗಿಳಿದ ವ್ಯಕ್ತಿಯು ಸಾಲ ಕೊಟ್ಟ ಮ್ಯಾನೇಜರ್ ಅವರೊಂದಿಗೂ ಮಾತನಾಡುವಂತೆ ಹೇಳಿ ಇನ್ನೊಬ್ಬನಿಗೆ ಫೋನನ್ನು ಹಸ್ತಾಂತರಿದ್ದಾನೆ. ಮ್ಯಾನೇಜರ್ ಎನ್ನುವ ವ್ಯಕ್ತಿ ಮಾತನಾಡಿ, “ತಾಂತ್ರಿಕ ಸಮಸ್ಯೆ ಇರುವುದರಿಂದ ಸಾಲದ ಕಂತು ಅಟೋ ಮ್ಯಾಟಿಕ್ ಆಗಿ ನಿಮ್ಮ ಖಾತೆಯಿಂದ ಪಾವತಿ ಆಗುತ್ತಿಲ್ಲ. ಕೂಡಲೇ ಗೂಗಲ್ ಪೇ ಮೂಲಕ ಪಾವತಿ ಮಾಡಿ’ ಎಂದು ಆತನೂ ಒತ್ತಡ ಹೇರಿದ. ಇದು ವಂಚಕರ ಕರೆಯೆಂದು ಅರಿತ ಚಂದ್ರ ಪೂಜಾರಿ ಅವರು, “ನನ್ನ ಸಾಲದ ಕಂತು ಬಾಕಿ ಇಲ್ಲ. ಹಾಗೂ ಬಾಕಿ ಇದ್ದಲ್ಲಿ ಕಚೇರಿಗೇ ಬಂದು ಪಾವತಿಸುತ್ತೇನೆ. ನಿಮ್ಮ ಕಚೇರಿ ಉಡುಪಿಯಲ್ಲಿ ಎಲ್ಲಿದೆ?’ ಎಂದು ಕೇಳಿದಾಗ ತಡವರಿಸಿದ ವ್ಯಕ್ತಿಯು “ಲೊಕೇಷನ್ ಕಳಿಸುತ್ತೇನೆ’ ಎಂದು ಹೇಳಿ ಕರೆ ಕಡಿತ ಮಾಡಿದ್ದ.
ಬಳಿಕ ವಾಹನ ಸಾಲ ನೀಡಿದ್ದ ಆರ್ಥಿಕ ಸಂಸ್ಥೆಗೆ ಕರೆ ಮಾಡಿ ವಿಚಾರಿಸಿದಾಗ, !ಅಂತಹ ಯಾವುದೇ ಕರೆ ನಮ್ಮ ಕಚೇರಿಯಿಂದ ಮಾಡಿಲ್ಲ. ನಿಮ್ಮ ಸಾಲದ ಯಾವುದೇ ಕಂತು ಬಾಕಿ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಚಂದ್ರ ಅವರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ಒಂದು ವೇಳೆ ನಾನು ಅವರ ಒತ್ತಡಕ್ಕೆ ಮಣಿದು ಗೂಗಲ್ ಮೂಲಕ ಪಾವತಿಸಿದ್ದಲ್ಲಿ ವಂಚನೆಗೊಳಗಾಗುತ್ತಿದ್ದೆ. ಆದರೆ ಎಲ್ಲೆಡೆ ಇಂತಹ ವಂಚನೆ ಜಾಲಗಳು ಬೇರೆ ಬೇರೆ ಮಾದರಿಯಲ್ಲಿ ವಂಚಿಸಿ ಹಣ ದೋಚುತ್ತಿರುವ ಬಗ್ಗೆ ಉದಯವಾಣಿ ಪತ್ರಿಕೆಯೂ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರಿಂದ ನಾನೂ ಕೂಡ ಜಾಗೃತನಾಗಿಯೇ ಇದ್ದೆ. ಆದ ಕಾರಣ ಹಣ ಕಳೆದುಕೊಳ್ಳಲಿಲ್ಲ ಎಂದು ಚಂದ್ರ ತಿಳಿಸಿದ್ದಾರೆ.