ಮುಂಬಯಿ: ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಗೆ ಮುಂಬಯಿ ಸ್ಥಳೀಯ ನ್ಯಾಯಾಲಯ ಒಂದೂವರೆ ವರ್ಷದ ಜೈಲು ಶಿಕ್ಷೆಯನ್ನು ವಿಧಿಸಿದೆ.
ಯಾವುದೇ ಸಂಬಂಧ ಹೊಂದಿಲ್ಲದಿದ್ದರೂ ಹುಡುಗಿಯನ್ನು ಪುರುಷರು ʼಐಟಂʼ ಕರೆದು ಸಂಬೋಧಿಸುವುದು ಸರಿಯಲ್ಲ. ಇದು ಅವಹೇಳನಕಾರಿಯಾಗಿದ್ದು, ಲೈಂಗಿಕವಾಗಿ ಆಕೆಯನ್ನು ಅವಮಾನ ಮಾಡಿದಂತಾಗುತ್ತದೆ ಎಂದು ಕೋರ್ಟ್ ಹೇಳಿದೆ.
ಘಟನೆ ಹಿನ್ನೆಲೆ: 2015 ಜುಲೈ 14 ರಂದು 15 ವರ್ಷದ ಬಾಲಕಿ ಶಾಲೆಗೆ ಹೋಗಿ ವಾಪಾಸ್ ಬರುವ ವೇಳೆ ಅಬ್ರಾರ್ ನೂರ್ ಮೊಹಮ್ಮದ್ ಖಾನ್ಬಾ ಮತ್ತು ಆತನ ಸ್ನೇಹಿತರು ಬಾಕಿಯ ದಾರಿಗೆ ಅಡ್ಡಗಟ್ಟಿ ‘ಕ್ಯಾ ಐಟಂ ಕಿದರ್ ಜಾ ರಹೀ ಹೋ’ ( ಏನು ಐಟಂ ಎಲ್ಲಿಗೆ ಹೋಗುತ್ತಿದ್ದೀಯಾ) ಎಂದು ಕೇಳಿ ಆಕೆಯ ಕೂದಲು ಎಳೆದು ಅಸಭ್ಯವಾಗಿ ವರ್ತಿಸಿದ್ದಾರೆ.
ಘಟನೆಯ ಬಳಿಕ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ನೀಡಿದ ಬಳಿಕ ಆರೋಪಿ ನೂರ್ ಮೊಹಮ್ಮದ್ ಖಾನ್, ಅವಳು ನನ್ನ ಸ್ನೇಹಿತೆ, ಅವಳೊಂದಿಗೆ ಸ್ನೇಹ ಮಾಡಬಾರದೆಂದು ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿದ್ದಾನೆ ಆದರೆ ಇದಕ್ಕೆ ಪೂರಕವಾದ ಸಾಕ್ಷಿ ಆತನ ಬಳಿಯಿರಲಿಲ್ಲ.
ಹುಡುಗಿಯರನ್ನು ರಸ್ತೆಯಲ್ಲಿ ಅನುಚಿತವಾಗಿ ನಡೆಸಿಕೊಳ್ಳುವವರು, ಆಕೆಗೆ ಶೋಷಣೆ ನೀಡುವವರಿಗೆ ಈ ಪ್ರಕರಣದ ಮೂಲಕ ಶಿಕ್ಷೆಯನ್ನು ವಿಧಿಸಬೇಕು. ಆ ಮೂಲಕ ಸಮಾಜಕ್ಕೊಂದು ಸಂದೇಶ ಸಾರಬೇಕೆಂದು ದೂರುದಾರರು ನ್ಯಾಯಾಧೀಶರನ್ನು ಮನವಿ ಮಾಡಿದ್ದರು.
ವಾದ ಪ್ರತಿವಾದ ಮುಗಿದ ಬಳಿ ಅ.20 ರಂದು ಸೆಕ್ಷನ್ 354 ರ ಅಡಿಯಲ್ಲಿ ಹಾಗೂ ಫೋಕ್ಸೋ ಕಾಯ್ದೆಯಡಿ ಬೋರಿವಲಿ ನ್ಯಾಯಾಲಯದ ನ್ಯಾಯಾಧೀಶ ಎಸ್.ಜೆ ಅನ್ಸಾರಿ ಅಪರಾಧವೆಸಗಿದ ವ್ಯಕ್ತಿಗೆ 18 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ.